ನಿಸರ್ಗದ ಅದ್ಭುತ ತಾಣ ಈ ಯಾಣ !




ಯಾಣ ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ. ಇದು ಕುಮಟಾ ತಾಲೂಕು ಉತ್ತರ ಕನ್ನಡ ಜಿಲ್ಲೆಗೆ ಸೇರಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಇದು ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದ ನೈಸರ್ಗಿಕ ವಿಸ್ಮಯವಾಗಿದ್ದು, ಪ್ರವಾಸದ ನೈಜ ಅನುಭವವನ್ನು ಪಡೆಯಬಹುದಾದ ಪ್ರಾಕೃತಿಕ - ಧಾರ್ಮಿಕ ಪ್ರವಾಸಿ ಕೇಂದ್ರವಾಗಿದೆ.
ಯಾಣದ ಪ್ರಮುಖವಾದ ಆಕರ್ಷಣೆ ಎಂದರೆ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ. ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು 120 ಮೀಟರ್ ಎತ್ತರವಿದೆ. ಮೋಹಿನಿ ಶಿಖರವು 90 ಮೀಟರ್ ಎತ್ತರವಿದೆ. ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ 120 ಮೀಟರ್ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕಪ್ಪು ಪರದೆಯಂತೆ ಬೃಹದಾಕಾರದ ಶಿಲಾ ರೂಪವಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ. ಈ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವರಲಿಂಗ ಎರಡು ಮೀಟರ್ ಎತ್ತರವಿದೆ. ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ.
ಭೈರವೇಶ್ವರ ಶಿಖರ: ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವುದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಯ ಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ. (ಚಿತ್ರ 2)
ಮೋಹಿನಿ ಶಿಖರ: ಯಾಣದ ಈ ಎರಡು ಶಿಖರಗಳು ಏಕಶಿಲೆಯಿಂದ ಉತ್ಪತ್ತಿಯಾಗಿವೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶವು ಹಳ್ಳ, ದಿಣ್ಣೆಗಳಿಂದ ಮತ್ತು ದಟ್ಟವಾದ ಅರಣ್ಯಗಳಿಂದ ಆವರಿಸಿಕೊಂಡಿದೆ. ಈ ಪ್ರದೇಶ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದೆ. ಮೊದಲನೆ ಶಿಖರವಾದ ಭೈರವೇಶ್ವರ ಶಿಖರವು 3 ಮೀಟರ್ ತಳದಿಂದ ಇದ್ದು ಗುಹೆಯಿಂದ ವ್ಯಾಪಿಸಿಕೊಂಡಿದೆ. ಈ ಗುಹೆಯಲ್ಲಿ ಚಂಡಿಕಾ ದೇವಿಯ ಕಂಚಿನ ಮೂರ್ತಿ ಇದೆ. ಈ ಶಿಖರದ ಮತ್ತೊಂದು ತುದಿಯಲ್ಲಿ ಚಂಡಿ ಹೊಳೆ ಹರಿಯುತ್ತದೆ. ಈ ನದಿ ಮುಂದೆ ಉಪ್ಪಿನ ಪಟ್ಟಣ ಎಂಬ ಹಳ್ಳಿಯಲ್ಲಿ ಅಘನಾಶಿನಿ ನದಿಯನ್ನು ಸಂಧಿಸುತ್ತದೆ. ಈ ಸಂಗಮವನ್ನು ಇಲ್ಲಿನ ಸ್ಥಳೀಯರು ಗಂಗೋದ್ಭವ ಎಂದು ಕರೆಯುತ್ತಾರೆ. ಇಲ್ಲಿಂದ ಸರಿಯಾಗಿ ಸುಮಾರು 12ಕಿ.ಮೀ ದೂರದಲ್ಲಿ ನೈಸರ್ಗಿಕವಾಗಿ ರಚಿತವಾಗಿರುವ ವಿಭೂತಿ ಪಾಲ್ಸ್ ಜಲಪಾತ ಇದೆ. ಈ ಜಲಪಾತವು 150 ಅಡಿ ಎತ್ತರ ಇದೆ. (ಚಿತ್ರ 3)
ಯಾಣದ ಜಲಧಾರೆ: ಹಿಂದೂ ಧರ್ಮದ ಪುರಾಣದ ಪ್ರಕಾರ ಈ ಸ್ಥಳವು ರಾಕ್ಷಸ ಭಸ್ಮಾಸುರನ ಅಸ್ತಿತ್ವವನ್ನು ಕೊನೆಗಾಣಿಸಿದ ಸ್ಥಳ. ಭಸ್ಮಾಸುರನು ಶಿವನಿಂದ ಒಂದು ಅಪರೂಪವಾದ ವರವನ್ನು ಪಡೆಯುತ್ತಾನೆ. ಆ ವರವೇನೆಂದರೆ ತಾನು (ಭಸ್ಮಾಸುರ) ಯಾರ ತಲೆಯ ಮೇಲೆ ಕೈ ಇಡುವೆನೋ ಅವರು ಸುಟ್ಟು ಭಸ್ಮವಾಗಬೇಕು. ಭಸ್ಮಾಸುರನು ತನಗೆ ದೂರೆತ ವರದ ಪರೀಕ್ಷೆ ನಡೆಸಲು ಸ್ವತಹ ಶಿವನ ತಲೆಯ ಮೇಲೆಯೆ ಕೈ ಇಡಲು ಮುಂದಾಗುತ್ತಾನೆ, ಇದನ್ನರಿತ ಪರಶಿವ ಭಸ್ಮಾಸುರನಿಂದ ತಪ್ಪಿಸಿಕೊಂಡು ಓಡಿಹೋಗುತ್ತಾನೆ. ಇದರೊಂದಿಗೆ ಭಸ್ಮಾಸುರನು ಶಿವನನ್ನು ಬಿಡದೆ ಹಿಂಬಾಲಿಸುತ್ತಾನೆ. ಭಸ್ಮಾಸುರನಿಂದ ತಪ್ಪಿಸಿಕೊಂಡ ಶಿವ ನೇರವಾಗಿ ವಿಷ್ಣುವನ್ನು ಭೇಟಿಯಾಗುತ್ತಾನೆ. ಭೇಟಿಯಾಗಿ ನಡೆದ ವಿಷಯ ತಿಳಿಸಿ ವಿಷ್ಣುವಿನ ಸಹಾಯ ಬೇಡುತ್ತಾನೆ. ವಿಷ್ಣುವು ಸಹಾಯ ಮಾಡಲು ಒಪ್ಪಿ ಸುಂದರ ಕನ್ಯೆಯ ರೂಪತಾಳುತ್ತಾನೆ. ಆ ಸುಂದರ ಕನ್ಯೆಯ ಹೆಸರೇ ಮೋಹಿನಿ, ಮೋಹಿನಿ ರೂಪ ತಾಳಿದ ವಿಷ್ಣುವು ಭಸ್ಮಾಸುರನನ್ನು ತನ್ನ ಸ್ಪುರದ್ರೂಪ ಸೌಂದರ್ಯದಿಂದ ಮೋಹಿತಗೂಳಿಸುತ್ತಾನೆ. ಮೋಹಿನಿಯ ಸೌಂದರ್ಯಕ್ಕೆ ಮೋಹಗೊಂಡ ಭಸ್ಮಾಸುರ ಮೋಹಿನಿಗೆ ತಾನು ನಿನ್ನನ್ನು ವರಿಸುವುದಾಗಿ ಹೇಳುತ್ತಾನೆ. ಆಗ ಮೋಹಿನಿಯು ನೀನು ನನ್ನನ್ನು ವರಿಸಬೇಕಾದರೆ ಕೆಲವು ಷರತ್ತುಗಳು ಇವೆ ಎಂದು ಹೇಳುತ್ತಾಳೆ. ಆಗ ಭಸ್ಮಾಸುರ ನಿನ್ನ ಷರತ್ತುಗಳು ಏನೇ ಇದ್ದರೂ ನನ್ನ ಒಪ್ಪಿಗೆ ಇದೆ ಎಂದು ಹೇಳುತ್ತಾನೆ. ಆಗ ಮೋಹಿನಿ ಭಸ್ಮಾಸುರನಿಗೆ "ನಾನು ನರ್ತಿಸಿದ ಹಾಗೆಯೆ ನರ್ತಿಸಬೇಕು" ಎಂದು ಹೇಳುತ್ತಾಳೆ. ಅದಕ್ಕೆ ಭಸ್ಮಾಸುರ ಒಪ್ಪಿಗೆ ಸೂಚಿಸುತ್ತಾನೆ. ಮೋಹಿನಿ ನರ್ತಿಸುತ್ತಾ ನರ್ತಿಸುತ್ತಾ ಒಂದು ಸಾರಿ ತಲೆಯ ಮೇಲೆ ಕೈ ಇಡುತ್ತಾಳೆ. ಆಗ ಮೋಹಿನಿಯ ಮೋಹದ ಬಲೆಯಲ್ಲಿ ಹಾಗೂ ನೃತ್ಯದ ಗುಂಗಿನಲ್ಲಿ ಭಸ್ಮಾಸುರ ತನಗರಿವಿಲ್ಲದೆ ತನ್ನ ಕೈಯನ್ನು ತನ್ನ ತಲೆಯ ಮೇಲೆ ಕೈ ಇಟ್ಟು ಬಿಡುತ್ತಾನೆ. ತಕ್ಷಣ ಭಸ್ಮಾಸುರ ಭಸ್ಮವಾಗಿ ಹೋಗುತ್ತಾನೆ. ಅಂದು ನಡೆದ ಆ ಘಟನೆಯ ಸ್ಥಳವೇ ಯಾಣ.
ಈ ಸಮಯದಲ್ಲಿ ಉದ್ಭವಿಸಿದ ಬೆಂಕಿ ಬಹಳ ತೀವ್ರವಾಗಿದ್ದರಿಂದ, ಈ ಪ್ರದೇಶದಲ್ಲಿ ಬಂಡೆಗಳ ರಚನೆಯಾಯಿತು ಎಂಬುದು ನಂಬಿಕೆ ಮತ್ತು ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಘಟನೆಯಿಂದ ನಡೆದ ಬೂದಿ (ಭಸ್ಮ) ಕಂಡು ಬರುತ್ತದೆ. ನಂತರದ ದಿನಗಳಲ್ಲಿ ಜನರು ದೊಡ್ಡದಿರುವ ಶಿಖರವನ್ನು ಭೈರವೇಶ್ವರ ಶಿಖರ (ಶಿವ) ಎಂದೂ, ಸ್ವಲ್ಪ ಚಿಕ್ಕದಾದ ಶಿಖರವನ್ನು ಮೋಹಿನಿ ಶಿಖರ (ಮೋಹಿನಿ / ವಿಷ್ಣು ) ಎಂದೂ ಕರೆದರು. ನಂತರ ಇಲ್ಲಿ ಪಾರ್ವತಿಯ ವಿಗ್ರಹವನ್ನು ಸಹ ಸ್ಥಾಪಿಸಲಾಯಿತು. ಮತ್ತು ಇಲ್ಲಿ ಹಲವಾರು ಗುಹೆಗಳು ಇವೆ ಮತ್ತು ಇಲ್ಲೆ ಹತ್ತಿರದಲ್ಲಿ ಗಣೇಶ ದೇವಾಲಯವೂ ಇದೆ. ಇಲ್ಲಿನ ನೆಲವು ಕಪ್ಪು ಮಣ್ಣಿನಿಂದ ಕೂಡಿದೆ.
ಮಹಾಶಿವರಾತ್ರಿ ಹಬ್ಬವು ಇಲ್ಲಿ 10 ದಿನಗಳ ಕಾಲ ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ನಡೆಯುತ್ತದೆ. ಇನ್ನೊಂದು ಗಾದೆಮಾತು ಸಹ ಇದೆ ಅದೇನೆಂದರೆ, "ಸೊಕ್ಕಿದ್ದವನು ಯಾಣಕ್ಕೆ ಹೋಗುತ್ತಾನೆ ; ರೊಕ್ಕಿದ್ದವನು ಗೋಕರ್ಣಕ್ಕೆ ಹೋಗುತ್ತಾನೆ"
ಇಲ್ಲಿನ ಸ್ಥಳೀಯರು ಈ ಪ್ರದೇಶವನ್ನು ರಾಷ್ಟ್ರೀಯ ನೈಸರ್ಗಿಕ ಪಾರಂಪರಿಕ ತಾಣ ಎಂದು ಕರೆಯುತ್ತಾರೆ. ಈ ಪ್ರದೇಶ ಉತ್ತರಕನ್ನಡದ ಐತಿಹಾಸಿಕ ಪ್ರಮುಖ ಪ್ರವಾಸಿಕೇಂದ್ರವಾಗಿದೆ. ಈ ಸ್ಥಳವು ಸಹ್ಯಾದ್ರಿ ಪರ್ವತದ ಜೀವ ವೈವಿಧ್ಯದ ಪ್ರೇಕ್ಷಣೀಯ ಸ್ಥಳ ಎನ್ನಬಹುದಾಗಿದೆ. ಹಾಗಾಗಿ ಈ ಪ್ರದೇಶವು ಜೀವವೈವಿಧ್ಯ ಸಂರಕ್ಷಣೆಗೆ ಒಳಪಡುತ್ತದೆ ಎಂದು ಸೂಚಿಸಲ್ಪಟ್ಟಿದೆ.
ಹೋಗುವುದು ಹೀಗೆ : ಈ ನಿಸರ್ಗದ ಮಡಿಲು ಕುಮಟಾದಿಂದ 30 ಕಿ.ಮೀ, ಶಿರಸಿಯಿಂದ 60 ಕಿ.ಮೀ, ಕಾರವಾರದಿಂದ 90 ಕಿ.ಮೀ, ಅಂಕೋಲಾದಿಂದ 68 ಕಿ.ಮೀ ದೂರದಲ್ಲಿದೆ. ಯಾಣ ಗ್ರಾಮವು ರಾಷ್ಟ್ರೀಯ ಹೆದ್ದಾರಿ 66 ಸಂರ್ಪಕಿಸುತ್ತದೆ ಮತ್ತು ಇಲ್ಲಿಂದ ಯಾಣದ ಪ್ರಯಾಣ ಸುಮಾರು 20 ಕಿ. ಮೀ ಆಗುತ್ತದೆ. ಕುಮಟಾ ರೈಲು ನಿಲ್ದಾಣದಿಂದಲೂ ಇಲ್ಲಿಗೆ ಪ್ರವಾಸಕ್ಕೆ ಬರಲು ಅನುಕೂಲವಾಗಿದೆ ಅಲ್ಲದೆ ಮಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 230 ಕಿ. ಮೀಟರ್ ಆಗುತ್ತದೆ.
ಹಲವಾರು ಚಲನಚಿತ್ರಗಳಲ್ಲಿ ಇಲ್ಲಿನ ದೃಶ್ಯ ವೈಭವವನ್ನು ಕಂಡಿರಬಹುದು. ಅದರಲ್ಲೂ ಶಿವರಾಜ್ ಕುಮಾರ್ ಮತ್ತು ರಮೇಶ್ ಅರವಿಂದ್ ಹಾಗೂ ಪ್ರೇಮ ನಟನೆಯ 'ನಮ್ಮೂರ ಮಂದಾರ ಹೂವೆ' ಚಲನಚಿತ್ರದಲ್ಲಿ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. "ಈ ಭೂಮಿಯ ವಿಸ್ಮಯ ಎಂಬಂತೆ, ಪ್ರಾಕೃತಿಕ ವೈಭವದೊಂದಿಗೆ ಧಾರ್ಮಿಕತೆಯ ಸುಯೋಗ ಇಲ್ಲಿ ನಮ್ಮೆಲ್ಲರನ್ನು ಬೆರಗುಗೊಳಿಸುತ್ತದೆ".
ಚಿತ್ರ - ಬರಹ : ರಮೇಶ ನಾಯ್ಕ, ಉಪ್ಪುಂದ