ನಿಸರ್ಗದ ಪುಟ್ಟ ಕೌತುಕ ‘ಕಿರು ಮಿಂಚುಳ್ಳಿ’ಯ ಮಣ್ಣಿನ ಮನೆ ನೋಡಿದ್ದೀರಾ?

ನಿಸರ್ಗದ ಪುಟ್ಟ ಕೌತುಕ ‘ಕಿರು ಮಿಂಚುಳ್ಳಿ’ಯ ಮಣ್ಣಿನ ಮನೆ ನೋಡಿದ್ದೀರಾ?

ಬರಹ

ಕಿತ್ತೂರು ಸಮೀಪದ ಕೆಂಪನಕಟ್ಟೆ ಕೆರೆಯಲ್ಲಿ ತಪ್ಪಿಸ್ಸಿಗೆ ಕುಳಿತಿದ್ದ ಕಿರು ಮಿಂಚುಳ್ಳಿ.

 

ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್ಷಿಯೊಂದು ಮನೆ ಕಟ್ಟಿಕೊಂಡಿದ್ದು ಗಮನಿಸಿದ್ದೀರಾ?

ನಮ್ಮ ಊರು ಧಾರವಾಡದ ಹೊರವಲಯದಲ್ಲಿ ಕೆಲ ದಶಕಗಳ ಹಿಂದೆ ಗಣಿಗಾರಿಕೆ ನಡೆಸಲಾಗುತ್ತಿತ್ತು. ಹಾಗೆ ಗಣಿಗಾರಿಕೆ ನಡೆಸಿ, ನಿರ್ಮಿತವಾದ ಹೊಂಡಗಳಲ್ಲಿ ಇತ್ತೀಚಿನ ಮಳೆಯಿಂದಾಗಿ ಚಿಕ್ಕ ಕೆರೆಗಳು ನಿರ್ಮಾಣಗೊಂಡಿವೆ. ಇಲ್ಲಿ ದನಗಾಹಿಗಳು ನಿತ್ಯ ತಮ್ಮ ಜಾನುವಾರುಗಳ ಮೈ ತೊಳೆಯಲು ಆಗಮಿಸುವುದರಿಂದ ಈ ಪಕ್ಷಿ ಗಣಿಯ ಇಕ್ಕೆಲಗಳ ಗೋಡೆಯಂತಹ ಮಣ್ಣಿನಲ್ಲಿ ಅತ್ಯಂತ ಎತ್ತರದಲ್ಲಿ ತನ್ನ ಗೂಡು ಮಾಡಿಕೊಂಡಿದ್ದನ್ನು ನಾನು ಗಮನಿಸಿದ್ದೇನೆ. ಕೆಲವೊಮ್ಮೆ ವಿದ್ಯುತ್ ತಂತಿಯ ಮೇಲೂ ಬೇಟೆಗಾಗಿ ಕಾಯ್ದು ಕುಳಿತು ಈ ಹಕ್ಕಿ ಗಮನ ಸೆಳೆಯುತ್ತದೆ.    

ಅತ್ಯಂತ ಚುರುಕಾದ, ಮಿರಿ ಮಿರಿ ಮಿಂಚುವ ನೀಲಿ ಮೈಬಣ್ಣ ಹೊಂದಿದ ಗುಬ್ಬಚ್ಚಿ ಗಾತ್ರದ ಈ ಹಕ್ಕಿಗೆ ‘ಕಿರು ಮಿಂಚುಳ್ಳಿ’- ‘Small Blue Kingfisher’ ಎಂದು ಕರೆಯುತ್ತಾರೆ. ಮೊನ್ನೆ ಛಾಯಾಪತ್ರಕರ್ತ-ಮಿತ್ರ ಜೆ.ಜಿ.ರಾಜ್ ಅವರೊಂದಿಗೆ ಧಾರವಾಡದಿಂದ ಮುಕುಟಖಾನ್ ಹುಬ್ಬಳ್ಳಿ (ಎಂ.ಕೆ. ಹುಬ್ಬಳ್ಳಿ ಸಕ್ಕರೆ ನಾಡು ಕೂಡ ಹೌದು.) ವರೆಗೆ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಕೆರೆಗಳ ಸ್ಥಿತಿ-ಗತಿ, ಬದುಕು-ಬವಣೆ ಗುರುತಿಸಲು ತೆರಳಿದ್ದೆವು. ಆಗ ಈ ಅಪರೂಪದ ಮಿತ್ರ ಮೀನು ಬೇಟೆಗಾರನಾಗಿ ನಮ್ಮ ಕಣ್ಣಿಗೆ ಕಂಡ. ಐತಿಹಾಸಿಕ ಮಹತ್ವದ ಕಿತ್ತೂರು ಸಮೀಪದ ‘ಕೆಂಪಗೇರಿ ಕಟ್ಟೆ’ ಕೆರೆಯಲ್ಲಿ ಈ ‘ಕಿರು ಮಿಂಚುಳ್ಳಿ’ ಕಿತ್ತೂರಿನ ಮೀನುಗಾರ ಶಿವಪ್ಪ ಅವರೊಂದಿಗೆ ಮೀನು ಬೇಟೆಯಲ್ಲಿ ತೊಡಗಿದ್ದ.

 

ಹಸಿರು ಹಿನ್ನೀರಿನಲ್ಲಿ ಸ್ಮಾಲ್  ಬ್ಲೂ ಕಿಂಗಫಿಷರ್ ಮಿರಿ ಮಿರಿ ಮಿಂಚಿದ್ದು ಹೀಗೆ.

 

ಬಿಳಿ ಮಿಂಚುಳ್ಳಿ (ಪೈಡ್ ಕಿಂಗಫಿಷರ್), ಗದ್ದೆ ಮಿಂಚುಳ್ಳಿ (ವೈಟ್ ಬ್ರೆಸ್ಟೆಡ್ ಕಿಂಗಫಿಷರ್), ಹೆಮ್ಮಿಂಚುಳ್ಳಿ (ಸ್ಟ್ರೋಕ್ ಬಿಲ್ಡ್ ಕಿಂಗಫಿಷರ್) ಇವುಗಳಲ್ಲಿ ನಾವು ಕೆಂಪಗೇರಿ ಕಟ್ಟೆಯಲ್ಲಿ ಕಂಡ ಕಿರು ಮಿಂಚುಳ್ಳಿ (ಸ್ಮಾಲ್ ಬ್ಲೂ ಕಿಂಗಫಿಷರ್) ಅತ್ಯಂತ ಉಜ್ವಲ ವರ್ಣದ ಆಕರ್ಷಕ ಹಕ್ಕಿ. ಕುತ್ತಿಗೆ ಮತ್ತು ಹೊಟ್ಟೆಗೆ ಹೊಂಬಣ್ಣದ ಚೆಲುವು. ಬಲವಾದ ನೀಲಿ ಮಿಶ್ರಿತ ಕಪ್ಪು ಬಣ್ಣದ ಉದ್ದ ಕೊಕ್ಕು, ಚೋಟುದ್ದ ಕಾಲುಗಳು ಮಿಂಚುಳ್ಳಿಯ ದುಂಡನೆಯ ಆಕೃತಿಗೆ ಮೆರಗು ತೊಡಿಸಿವೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಭರ್ಮಾಗಳಲ್ಲಿ ಕಾಣಸಿಗುವ ಕಿರು ಮಿಂಚುಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳಿಲ್ಲ. ಮಾರ್ಚ್ ನಿಂದ ಜೂನ್ ತಿಂಗಳುಗಳಲ್ಲಿ ಹೊಳೆ-ಹಳ್ಳಗಳ ಕಡಿದಾದ ದಂಡೆಗಳಲ್ಲಿ ನೆಲಕ್ಕೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಕಟ್ಟುತ್ತವೆ. ಸುಮಾರು ೫೦ ಸೆಂ.ಮೀ. ಉದ್ದದ ಈ ಮಣ್ಣಿನ ಪೊಟರೆಯಲ್ಲಿ ೫ ರಿಂದ ೭ ಮೊಟ್ಟೆಗಳನ್ನು ಹೆಣ್ಣು ಮಿಂಚುಳ್ಳಿ ಹಾಕುತ್ತದೆ. ಮೊಟ್ಟೆಗಳು ಶುಭ್ರ ಬಣ್ಣದ, ಮಿರಿ ಮಿರಿ ಮಿಂಚುವ ಗೋಲಿಯಂತೆ ದುಂಡಗಿರುತ್ತವೆ. ಮೊಟ್ಟೆ ಇರುವ ಗೂಡಿನ ಜಾಗ ಮಾತ್ರ ಅಗಲವಾಗಿದ್ದು, ತಾಯಿ-ತಂದೆ ಹಕ್ಕಿ ಜೋಡಿಯಾಗಿ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲು ಅನುವಾಗುವಂತೆ ಇರುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಜೋಡಿಯಾಗಿ ಕಾಣುವ ಕಿರು ಮಿಂಚುಳ್ಳಿ, ಬಹುತೇಕ ಒಂಟಿಯಾಗಿಯೇ ಇರಲು, ಬೇಟೆಯಾಡಲು ಬಯಸುತ್ತದೆ.

ಮಿತ್ರ ರಾಜ್, ಕಲ್ಲು ಬಂಡೆಯ ಮೇಲೆ ನಿಶ್ಚಲವಾಗಿ ಕುಳಿತಿದ್ದ ಮಿಂಚುಳ್ಳಿ ಮಹಾಶಯನನ್ನು ದೂರದಿಂದಲೇ ಗುರುತಿಸಿದರು. ದೂರದಿಂದ ಕೆಲ ಫೋಟೊ ಕ್ಲಿಕ್ಕಿಸಿದ ಮೇಲೆ ಮತ್ತೂ ಹತ್ತು ಹೆಜ್ಜೆಯಷ್ಟು ಹತ್ತಿರ ನಮ್ಮ ರಾಜ್ ಹೋದರೂ ಕಿಂಚಿತ್ತೂ ಹೆದರದೇ ಕ್ಯಾಮೆರಾಕ್ಕೆ ಮಿಂಚುಳ್ಳಿ ಪೋಜು ನೀಡಿದ ರೀತಿ ನನ್ನಲ್ಲಿ ಬೆರಗು ಹುಟ್ಟಿಸಿತು. ದೂರದಿಂದಲೇ ನಾನು ‘ಲೆನ್ಸ್ ಬಳಸಿ ಸ್ವಾಮಿ..ಅಷ್ಟು ಸಮೀಪ ಹೋಗಬಾಡ್ರೀ..ಹಾರಿ ಹೋದ್ರ ಮುಗೀತು ಕಥೆ’ಎಂದು ಎಚ್ಚರಿಸುತ್ತಿದ್ದೆ. ಮಿತ್ರ ಜೆ.ಜಿ.ರಾಜ್ ನನ್ನ ಮಾತಿಗೆ ಕಿವಿ ಗೊಡದೇ ‘ನಾ ಅವಗ ಪಬ್ಲಿಸಿಟಿ ಕೊಡಸಾಕ ಹೊಂಟೇನಿ ಅಂತ ಗೊತ್ತೈತಿ’ ಅನ್ನುವ ಹಾಗೆ ಮುಂಗೈ ಜೋರಿನಿಂದ ಮೈಮೇಲೇರಿ ಹೋಗಿ ಫೊಟೋ ಕ್ಲಿಕ್ಕಿಸಿದರು. ಆತ ತಪಸ್ಸಿಗೆ ಕುಳಿತಂತೆ ಯಾವುದೋ ಅಮೂರ್ತದಲ್ಲಿ ದೃಷ್ಟಿ ನೆಟ್ಟುಕೊಂಡು, ಸಂಸಾರ ತಾಪತ್ರಯಕ್ಕೆ ಪರಿಹಾರ ಹುಡುಕುತ್ತ ಮೈ ಮರೆತಂತೆ ನನಗೆ ಭಾಸವಾಯಿತು! ಆದರೆ ಕುಳಿತಲ್ಲೇ ಪದೇ ಪದೇ ತನ್ನ ಕುತ್ತಿಗೆಯನ್ನು ಮತ್ತು ಬಾಲವನ್ನು ಮೇಲೆ-ಕೆಳಕ್ಕೆ ನಿಕ್ಕುಳಿಸುವುದು ಅವನ ಹವ್ಯಾಸವಾಗಿ ನನಗೆ ಕಂಡಿತು. ಈ ಮಧ್ಯೆ ಆಗಾಗ ನೆಲದ ಮೇಲೆ ಹಾಗೂ ನೀರಿನ ಮೇಲೂ ಅತ್ಯಂತ ಕೆಳ ಮಟ್ಟದಲ್ಲಿ ಹಾರಿ ತನ್ನ ಬೇಟೆಯ ಕೌಶಲ್ಯಗಳನ್ನು ಪ್ರದರ್ಶಿಸಿ ಬೆರಗು ಹುಟ್ಟಿಸಿದ. ಯುದ್ಧ ವಿಮಾನದ ಥಳಕು-ಬಳುಕು, ವಯ್ಯಾರ, ಚಾಕಚಕ್ಯತೆ ಅವನಲ್ಲಿ ಮನೆ ಮಾಡಿತ್ತು.

ಕಿರು ಮಿಂಚುಳ್ಳಿ ಮೋರಂಗಿ ಮೀನನ್ನು ಕಬಳಿಸಿದ ಖುಷಿಯಲ್ಲಿ.

 

ನಾನು ಎಣಿಸುತ್ತಿದ್ದಂತೆ ಏಕಾಏಕಿ ಹಾರಿಯೇ ಬಿಟ್ಟ! ಹಾರಿದ ದಿಕ್ಕಿನಲ್ಲಿಯೇ ಸ್ಪೀಡಾಗಿ ‘ಟೇಕ್ ಆಫ್’ಆಗಿ, ರಾಕೆಟ್ ನಂತೆ ನೀರಿನಲ್ಲಿ ಡೈವ್ ಹೊಡೆದ. ತತ್ ಪರಿಣಾಮವಾಗಿ ನೀರಿನಲ್ಲಿ ಅಲೆಯ ಉಂಗುರುಗಳೆದ್ದ ದೂರ ದೂರಕೆ ತೇಲಿದವು. ಕ್ಷಣ ಮಾತ್ರದಲ್ಲಿ ನೀರಿನಿಂದ ನಭಕ್ಕೆ ಚಿಮ್ಮಿ ಅತ್ಯಂತ ಎತ್ತರದಲ್ಲಿ ಹೆಲಿಕಾಪ್ಟರ್ ನಂತೆ ಜೋರಾಗಿ ರೆಕ್ಕೆ ಬಡಿಯುತ್ತ ನಿಶ್ಚಲವಾಗಿ ನಿಂತ. ಹೀಗೆ ರಭಸವಾಗಿ ರೆಕ್ಕೆ ಬಡಿಯುವುದರಿಂದ ಗರಿಗಳಿಗೆ ಸಿಲುಕಿದ್ದ ನೀರ ಹನಿಗಳನ್ನು ಜಾರಿಸಿಕೊಂಡಂತಾಯಿತು; ರೆಕ್ಕೆಗಳನ್ನೂ ಒಣಗಿಸಿಕೊಂಡಂತಾಯಿತು! ಎಂದು ನಾನು ಎಣಿಸಿದ್ದೆ. ಆದರೆ ನನ್ನ ಲೆಕ್ಕ ತಪ್ಪಿ ಅದೇ ಸ್ಪೀಡಿನಲ್ಲಿ ತಲೆ ಕೆಳಗೆ ಮಾಡಿ `Nose Dive' ಹೊಡೆದ! ಈ ಬಾರಿ ಆತನ ಪ್ರಯತ್ನ ಹುಸಿ ಹೋಗಲಿಲ್ಲ. ಮೋರಂಗಿ ಮೀನು ಆತನ ಕೊಕ್ಕಿನಲ್ಲಿ ಬಂಧಿಯಾಗಿತ್ತು. ‘ರೊಂಯ್..’ಎಂದು ಒಂದೇ ನೆಗೆತಕ್ಕೆ ನಮ್ಮ ರಾಜ್ ಸಾಹೇಬರ ಪಕ್ಕದ ಕಲ್ಲಿನ ಮೇಲೆ ಬಂದು ಕುಳಿತು, ಕೊಕ್ಕಿನಲ್ಲಿ ಬಂಧಿಯಾದ ಮೀನು ಭುಜಿಸಲು ಶುರು ಮಾಡಿದ. ಹಾಗೆ ಮಾಡುವ ಮೊದಲು ತಾನು ಕುಳಿತ ಕಲ್ಲು ಬಂಡೆಗೆ ಮೋರಂಗಿಯನ್ನು ಕುಕ್ಕಿ ಕುಕ್ಕಿ ನಿರ್ಜೀವವಾಗಿಸಿದ.

ಆಗ ನೋಡಿ..ರಾಜ್ ಸಾಹೇಬರ ಫೊಟೋಗ್ರಫಿಗೆ ಕಳೆ ಬಂದಿದ್ದು! ಇವರು ಕೋನ ಬದಲಿಸಿದಂತೆ ಆತನೂ ಗೋಣು ಓರೆಯಾಗಿಸಿ ಪೋಜು ನೀಡಿ ಮೋರಂಗಿ ಮೀನನ್ನು ನುಂಗಿಬಿಟ್ಟ! ಮಧ್ಯದಲ್ಲಿ ತನ್ನ ಖುಷಿ ವ್ಯಕ್ತಪಡಿಸಲು ರೆಕ್ಕೆ ಅಗಲಿಸಿ ‘ಚೀ..ಚೀ..ಚೀ’ ಎಂದು ಕೂಗಿ ಆನಂದ ಪಟ್ಟ.

ಎರಡನೇ ಬಾರಿ ನಭಕ್ಕೆ ನೆಗೆದಾಗ ಇದೇ ಕ್ರಿಯೆ ಪುನರಾವರ್ತನೆಯಾದರೂ, ಆಗ ಕೊಕ್ಕಿನಲ್ಲಿ ಬಂಧಿಯಾದ ಮೀನನ್ನು ಆತ ಹೊತ್ತೊಯ್ದಿದ್ದು ತನ್ನ ಮಣ್ಣಿನ ಗೂಡಿಗೆ. ಅತ್ಯಂತ ಆಳವಾಗಿ, ಕತ್ತಲಿನ ಕೂಪದಂತೆ ಕಂಡ ಆ ಗೂಡಿನಲ್ಲಿ ಯಾರು ಯಾರು ಇದ್ದರೂ ಎಂಬುದು ಮಾತ್ರ ನಮಗೆ ನಿಗೂಢ. ನಾವೇನಾದರೂ ಹೆಚ್ಚು ಉತ್ಸುಕತೆ ತೋರಿದ್ದರೆ ದನಗಾಹಿ ಮಕ್ಕಳು ತಮ್ಮ ಕೈಯಲ್ಲಿನ ಬಡಿಗೆಯನ್ನು ಆ ಗೂಡಿನೊಳಗೆ ತೂರಿಸಿ, ಮನೆ ಅಸ್ತವ್ಯಸ್ಥಗೊಳಿಸಿ ಸತ್ಯಾನ್ವೇಷಣೆ ಮಾಡುತ್ತಿದ್ದರು! ಆ ಪರಿಯ ಸತ್ಯ ಹಾಗೂ ಅನ್ವೇಷಣೆ ನಮಗೆ ಬೇಕೂ ಇರಲಿಲ್ಲ.   

 

 

ಕಿರು ಮಿಂಚುಳ್ಳಿ ಬೇಟೆಯಾಡಿದ ಮೋರಂಗಿ ಮೀನನ್ನು ಕಬಳಿಸುಬ ಮೊದಲು.

 

ಆ ಪುಟ್ಟ ಜೀವಿಯಲ್ಲಿ ಭಗವಂತ ತುಂಬಿರುವ ಜೀವ ಚೈತನ್ಯ, ಚಾಲಕ ಶಕ್ತಿ, ಬದುಕಿನ ಪ್ರತಿ ಪ್ರೀತಿ, ಬದುಕುವ ಜೀವನೋತ್ಸಾಹ, ತನ್ನ ಸೌಂದರ್ಯದಿಂದ ಸುತ್ತಲಿನ ಪರಿಸರವನ್ನು ಖುಷಿಯಾಗಿರಿಸಿದ ಸಾರ್ಥ್ಯಕ್ಯ, ಪ್ರತಿ ಕ್ಷಣವನ್ನೂ ಆನಂದತುಂದಿಲನಾಗಿ ಬದುಕಿದ ಸಂತುಷ್ಠತೆ, ಜವಾಬ್ದಾರಿಯಿಂದ ತನ್ನ ಕುಟುಂಬ ಪೊರೆಯುವ ಮಾತೃ ವಾತ್ಸಲ್ಯ, ಮಕ್ಕಳನ್ನು ಲಾಲಿಸುವ-ಪಾಲಿಸುವ ಯಜಮಾನಿಕೆ...ಕಿರು ಮಿಂಚುಳ್ಳಿ ಪಕ್ಷಿಗಳ ಲೋಕದ ‘ನಾಗರಿಕ’ನಾಗಿ ನನಗೆ ಕಂಡ.