ನಿಸರ್ಗ ನೀ ಸಗ್ಗ
ಪಶು- ಪಕ್ಷಿ- ಪ್ರಾಣಿಗಳ ಕಾಡು
ಅದುವೇ ಅದರ ವಾಸದ ಬೀಡು
ಸಾಗುತ್ತಿರಲಿ ಬಾಳು ನಿರಂತರವಾಗಿ
ತಡೆ ಇರದಿರಲಿ ಅದರ ಸಂಚಾರವಲ್ಲಿ.
ಹಕ್ಕಿ- ಪಕ್ಕಿ ತಿಂದುಗುಳಿದ ಹಣ್ಣಿನ ಬೀಜ
ಮೊಳೆತು ಸಸಿಯಾಗಿ,ಮರವಾದದ್ದು ನಿಜ
ಋತುವಲ್ಲಿ ನಿಸರ್ಗಕ್ಕೆ ಸುರಿದ ವರ್ಷಧಾರೆ
ಬೆಚ್ಚಗೆ ಹಿಡಿದಪ್ಪಿ ಆಸರೆಯನಿತ್ತಳು ಧರೆ
ಬೀಜವೊಂದು ಸಹಸ್ರ,ಸಹಸ್ರ ಮರವಾಗಿ
ಪ್ರಾಣಿ ಸಂಕುಲಕೆ ಉಣಿಸು,ನೆರಳಾಗಿ
ಬಾಳಿ ಬದುಕಿ,ಕುಲ ಬೆಳೆಸಲು ಮನೆಯಾಗಿ
ನಿಸರ್ಗ ನಿರ್ಮಿಸಿದ ಶಾಂತಿ ವಲಯವಾಗಿ.
ನೀನು ಬೆಳಸದ ನಿನ್ನದಲ್ಲದ ಕಾಡು..
ಹೇ! ಮಾನವ ನಿನಗೇಕೆ ಅದರ ಪಾಡು
ದೇವರು ಕೊಟ್ಟಿಹನು ನಿನಗೆ ನಿನ್ನ ಬದುಕು
ವೃಕ್ಷ ಸಂಕುಲ ಉಳಿಸಿ,ಬೆಳಸು ನಿನ್ನ ಕುಲಕು.
ಉಸಿರನಿತ್ತ ಹಸಿರು ಕಡಿಯದಿರದರ ಉಸಿರು
ಅತಿಯಾಸೆಗೆ ಎಂದೂ ನೀ ಹೋಗದಿರು
ಪಶು,ಪಕ್ಷಿಗಳಿದ್ದರೇ ಕಾಡು- ಇರದಿರೆ ಸುಡುಗಾಡು
ನೀನೂ ಬದುಕು- ಎಲ್ಲರನ್ನು ಬಾಳಲು ಬಿಡು.
ಕಾಡಿದ್ದರೆ ನಾಡು- ಕಾಡಿದ್ದರೆ ಮಳೆಯು
ಮಳೆ ಇದ್ದರೆ ಸಮೃದ್ಧಿ,ಸುಖ ಶಾಂತಿಯು
ಬುದ್ಧಿವಂತ ಮನುಜನೇ ಇದ ನೀ ಹಾಡು
ನಿಸರ್ಗಕ್ಕೆ ಹೊಸ ಶೋಭೆ ಬರುವುದು ನೋಡು.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.