ನಿಸರ್ಗ ಸೌಂದರ್ಯ : ಮೈಮರೆಯದಿರಿ

ನಿಸರ್ಗ ಸೌಂದರ್ಯ : ಮೈಮರೆಯದಿರಿ

ಮಳೆಗಾಲ ಆರಂಭವಾದೊಡನೆ ಪಶ್ಚಿಮ ಘಟ್ಟ ಸಹಿತ ವಿವಿಧ ಬೆಟ್ಟ -ಗುಡ್ಡಗಳಲ್ಲಿ ಹರಿಯುವ ನದಿ, ಹಳ್ಳ, ತೊರೆಗಳಿಂದ ನೀರು ಧುಮ್ಮಿಕ್ಕುತ್ತಿರುತ್ತದೆ. ಘಾಟಿ ಪ್ರದೇಶಗಳಲ್ಲಂತೂ ಇಂತಹ ಹತ್ತು ಹಲವು ಜಲಪಾತಗಳು, ಝರಿಗಳು, ಅಬ್ಬಿಗಳು ನಿಸರ್ಗಪ್ರಿಯರು ಮತ್ತು ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತವೆ.

ಈಗ ರಾಜ್ಯದಲ್ಲಿ ನೈಋತ್ಯ ಮಾರುತಗಳು ತೀವ್ರತೆಯನ್ನು ಪಡೆದುಕೊಂಡಿದ್ದು, ರಾಜ್ಯದೆಲ್ಲೆಡೆ ಮಳೆಯ ಅಬ್ಬರ ಬಿರುಸಾಗಿಯೇ ಸಾಗಿದೆ. ಬಹುತೇಕ ಹಳ್ಳ ಕೊಳ್ಳ ತೊರೆ, ಹೊಳೆ, ನದಿಗಳು ಮೈದುಂಬಿ ಹರಿಯುತ್ತಿವೆ. ಸಹಜವಾಗಿಯೇ ಇದು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಈ ತಾಣಗಳತ್ತ ಪ್ರವಾಸಿಗರು, ಚಾರಣಿಗರು ಮತ್ತು ನಿಸರ್ಗಪ್ರಿಯರು ದಾಂಗುಡಿ ಇಡಲಾರಂಭಿಸಿದ್ದಾರೆ. ಮಳೆಗಾಲ ಆರಂಭವಾಗಿ ತಿಂಗಳು ಕಳೆದಿದೆಯಷ್ಟೇ. ಆದರೆ ಈ ಅವಧಿಯಲ್ಲಿಯೇ ಇಂತಹ ನಿಸರ್ಗ ರಮಣೀಯ ತಾಣಗಳಲ್ಲಿ ಘನಘೋರ ದುರಂತಗಳು ಸಂಭವಿಸಿವೆ. ಬಹುತೇಕ ಅನಾಹುತಗಳು ಪ್ರವಾಸಿಗರ ಅಜಾಗರೂಕತೆ, ದುಸ್ಸಾಹಸ, ಸೆಲ್ಫೀ, ರೀಲ್ಸ್ ಗೀಳು ಮತ್ತು ಅರಿವಿನ ಕೊರತೆಯಿಂದಾಗಿ ಘಟಿಸಿವೆ. ಝರಿ, ಜಲಪಾತಗಳು ಇರುವ ಪ್ರದೇಶದ ದಾರಿ ಕೂಡ ಅಪಾಯಕಾರಿಯಾಗಿರುತ್ತದೆ. ಹೆಚ್ಚಿನ ಕಡೆ ಬಂಡೆಕಲ್ಲುಗಳಿದ್ದು ಅವುಗಳ ಮೇಲೆ ನೀರು ಬಿದ್ದು ಅದು ಜಾರುತ್ತಿರುವುದರಿಂದ ಅಲ್ಲಿ ನಡೆಯುವುದು ಸುಲಭ ಸಾಧ್ಯವಲ್ಲ. ಇಲ್ಲಿ ಸ್ವಲ್ಪವೇ ಆಯ ತಪ್ಪಿದರೂ ಅಪಾಯ ಖಚಿತ. ಇಂತಹ ಪ್ರದೇಶಗಳಿಗೆ ಯಾರ ಎಚ್ಚರಿಕೆಯನ್ನೂ ಪರಿಗಣಿಸದೆ ಸಾಗುವ ಪ್ರವಾಸಿಗರು ತಮ್ಮ ಕಣ್ಣೆದುರೇ ಕುಟುಂಬದ ಸದಸ್ಯರನ್ನೋ, ಸ್ನೇಹಿತರನ್ನೋ ಕಳೆದುಕೊಂಡು ದುಃಖತಪ್ತರಾಗಿ ಈ ತಾಣಗಳಿಂದ ವಾಪಾಸಾಗುವ ಸನ್ನಿವೇಶವನ್ನು ತಾವೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇಂತಹ ದುರಂತಗಳು ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ, ಮಹಾರಾಷ್ಟ್ರ ಸಹಿತ ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿತ್ಯ ಸಂಭವಿಸುತ್ತಲೇ ಇದೆ. ಇದು ನಿಜಕ್ಕೂ ದುರದೃಷ್ಟಕರ ವಿದ್ಯಮಾನವಾಗಿದ್ದು ಪ್ರಜ್ಞಾವಂತ ಜನತೆ ಈ ದಿಸೆಯಲ್ಲಿ ಒಂದಿಷ್ಟು ವಿವೇಚನೆಯಿಂದ ವರ್ತಿಸಬೇಕಾಗಿರುವುದು ಇಂದಿನ ತುರ್ತು. ವಿಹಾರಾರ್ಥವಾಗಿಯೋ, ನಿಸರ್ಗದ ಸೌಂದರ್ಯವನ್ನು ಸವಿಯಲೋ ಅಥವಾ ಚಾರಣದ ದೃಷ್ಟಿಯಿಂದಲೋ ಈ ಪ್ರದೇಶಗಳತ್ತ ನಮ್ಮ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ತೆರಳಿ, ಅಲ್ಲಿ ದುರಂತ ನಡೆದು ನಮ್ಮ ಸದಸ್ಯರನ್ನು ಕಳೆದುಕೊಳ್ಳುವಂತಹ ಅತ್ಯಂತ ಶೋಕಮಯ ಸನ್ನಿವೇಶ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕಾದುದು ಪ್ರವಾಸಿಗರ ಹೊಣೆಗಾರಿಕೆ.

ಈ ಜಲಪಾತ-ಝರಿಗಳ ಸುತ್ತಮುತ್ತಲಿನ ಪ್ರದೇಶ, ಇಲ್ಲಿಗೆ ಸಾಗುವ ರಸ್ತೆಯ ಇಕ್ಕೆಲಗಳು ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳ ಸ್ವಚ್ಛತೆಯನ್ನು ಹಾಳುಗೆಡವಬಾರದು. ಇದರಿಂದ ಆ ಪ್ರದೇಶದ ಜೀವ ಸಂಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಕನಿಷ್ಟ ಜ್ಞಾನವನ್ನು ಪ್ರವಾಸಿಗರು ಹೊಂದಿರಲೇಬೇಕು. ಇನ್ನು ಇಂತಹ ಸ್ಥಳಗಳಲ್ಲಿ ಸರಕಾರದ ಸಂಬಂಧಿತ ಇಲಾಖೆಗಳು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕಾಗಿದೆ. ಈ ಪ್ರದೇಶಗಳ ಬಗೆಗೆ ಸಮಗ್ರ ಮಾಹಿತಿ ಮತ್ತು ಪ್ರವಾಸಿಗರು ಪಾಲಿಸಲೇಬೇಕಾದ ನಿಯಮಾವಳಿಗಳ ಬಗೆಗೂ ಅಲ್ಲಿ ಫಲಕಗಳನ್ನು ಅಳವಡಿಸಬೇಕು. ಪ್ರವಾಸಿಗರು ಹೆಚ್ಚಿರುವ ಸ್ಥಳಗಳಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಿಸಿ, ಪ್ರವಾಸಿಗರ ಮೇಲೆ ನಿಗಾ ಇರಿಸುವ ಕಾರ್ಯವಾಗಬೇಕು. ಅಷ್ಟು ಮಾತ್ರವಲ್ಲದೆ ಸೂಚನೆಯನ್ನು ಮೀರುವ ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಕಠಿನ ಕ್ರಮವನ್ನು ಜಾರಿಗೆ ತರಬೇಕು. ಇನ್ನು ದುರ್ಗಮ ಹಾದಿ ಮತ್ತು ಪ್ರವಾಸಿಗರ ಸಂಖ್ಯೆ ವಿರಳವಾಗಿರುವ ನಿಸರ್ಗ ರಮಣೀಯ ಸ್ಥಳಗಳಲ್ಲಿ ವಹಿಸಬೇಕಾದ ಎಚ್ಚರಿಕೆಯ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರಕೃತಿಗೆ ವಿರುದ್ಧವಾಗಿ ವರ್ತಿಸುವ ದುಸ್ಸಾಹಸಕ್ಕಿಳಿಯದೆ, ಸ್ವಯಂ ಜಾಗೃತಿ ವಹಿಸಿದ್ದೇ ಆದಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಬಹುದು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೨-೦೭-೨೦೨೪

ಚಿತ್ರ ಕೃಪೆ: ಇಂಟರ್ನೆಟ್ ತಾಣ