ನಿಸಾರ್ ಸತ್ತ ಸುದ್ದಿ
ನಿಸಾರ್ ಸತ್ತ ಸುದ್ದಿ,
ಮೀಡಿಯಾಗಳಲ್ಲಿ
ಬ್ರೇಕಿಂಗ್ ನ್ಯೂಸ್ ಆಗಿ
ತೇಲಿ ಬಂದಾಗ,
ವಿಶ್ವದೆಲ್ಲೆಡೆ ಪಾಂಡೆಮಿಕ್ ಭೀತಿ,
ದೇಶದೆಲ್ಲೆಡೆ ಲಾಕ್ಡೌನ್ ನೀತಿ!.
ಮೀಡಿಯಾಗಳ
ಕರೋನಾ ಸುದ್ದಿಯ
‘ನಿತ್ಯೋತ್ಸವ’ದಲ್ಲಿ,
'ರಾಮನ್ ಸತ್ತ ಸುದ್ದಿ'ಯನ್ನು
ಕವಿತೆಯಾಗಿಸಿದ ಕವಿಯ ಸಾವು,
ಒಂದು ಬ್ರೇಕಿಂಗ್ ನ್ಯೂಸ್ ಬೈಟ್!
ಎಷ್ಟೋ ವಾರ್ತಾ ವಾಚಕರಿಗೆ
ಅವರ ಬಗ್ಗೆ ಅರಿವಿಲ್ಲ,
ವಾಹಿನಿಗಳ ಮುಖ್ಯಸ್ಥರಿಗೆ
ಅವರ ಸಾಹಿತ್ಯ ಕೃಷಿಯ ತಿಳಿವಿಲ್ಲ,
ಒಂದು ವಿಶೇಷ ಕಾರ್ಯಕ್ರಮ ಇಲ್ಲ.
ಅವರ ಸಾಹಿತ್ಯದ ಮಹತ್ವ
ಇಂದಿನ ಪೀಳಿಗೆಗೆ ತಲುಪಲಿಲ್ಲ!
‘ಕುರಿಗಳು ಸಾರ್ ಕುರಿಗಳು’
ಸೋಶಿಯಲ್ ಮೀಡಿಯಾಗಳಲ್ಲಿ
ಕವನ ವಾಚನಗಳ ವಿಡಿಯೋಗಳು
ಹಂಚಿಕೆ ಆದವು,
ಆಪ್ತರ, ಒಡನಾಡಿಗಳ
ಅನುಭವ ಹಂಚಿಕೆ ಆಯಿತು.
ಜನಪ್ರಿಯ ಕವಿ,
‘ನೆನದವರ ಮನದಲ್ಲಿ’ ಇನ್ನು
ಉಳಿದಿರುವುದಕ್ಕೆ ಸಾಕ್ಷಿ ಆಯಿತು!
‘ಇದು ಬರಿ ಬೆಡಗಲ್ಲೊ ಅಣ್ಣ’!!
ಮಾರನೆಯ ಬೆಳಿಗ್ಗೆ
ಮನೆಯಂಗಳದ ರಂಗೋಲಿ ನೋಡಿ,
‘ರಂಗೋಲಿ ಮತ್ತು ನಾನು’
ನೆನಪಾದ ಹೊತ್ತಿನಲ್ಲಿ,
ಬಂದ ನ್ಯೂಸ್ ಪೇಪರಿನಲ್ಲೂ,
ಕರೋನಾ ಸುದ್ದಿ ಸಂತೆಯಲ್ಲಿ
‘ನಿಮ್ಮೊಡನಿದ್ದೂ ನಿಮ್ಮಂತಾಗದೆ’,
‘ನಾನೆಂಬ ಪರಕೀಯ’!
ಒಂದು ತಿಂಗಳ ನಂತರದ ಸಂಜೆ,
“ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ…”,
“ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ….”
‘ಸಂಜೆ ಐದರ ಮಳೆ’ ಬಿರುಸಾಗಿ
‘ಮನಸು ಗಾಂಧಿ ಬಜಾರು’!