ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಬರಹ

ಇತ್ತೀಚೆಗೆ ತರಹೇವಾರಿ ಪರಿಸರ ಮಾಲಿನ್ಯಗಳು (ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಕೊಡುಗೆಗಳೇ) ನಮ್ಮ ಬುಡ ಅಲ್ಲಾಡಿಸುವ ಮಟ್ಟಿಗೆ ಬೆಳೆದಿವೆ. ಈ ಸಾಲಿಗೆ ‘ಔಷಧ ಮಾಲಿನ್ಯ’ ಸಹ ಸೇರ್ಪಡೆಗೊಂಡು ನಮ್ಮ ಬದುಕಿಗೆ-ಸಾವಿಗೆ ಇದ್ದ ಅಂತರವನ್ನು ಕಡಿಮೆಗೊಳಿಸುತ್ತಿದೆ ಎಂದು ಅಭಿಪ್ರಾಯ ಪಡುತ್ತಾರೆ ಜಾಗೃತಿ ಸಂಸ್ಥೆಯ ಸಂಯೋಜಕಿ ಶ್ರೀಮತಿ ಶಾರದಾ ಗೋಪಾಲ ದಾಬಡೆ.

ಈ ಹಿನ್ನೆಲೆಯಲ್ಲಿ ಔಷಧಿಗಳು, ಅವುಗಳ ಬಳಕೆ ಹಾಗು ಉಂಟಾಗಬಹುದಾದ ವ್ಯತಿರಿಕ್ತ ಪರಿಣಾಮಗಳ ಕುರಿತು ಗಂಭೀರವಾಗಿ ಆಲೋಚನೆ ನಡೆಸಬೇಕಾದ ಅನಿವಾರ್ಯತೆ ಇಂದು ಸೃಷ್ಠಿಯಾಗಿದೆ. ಅಂತಾರಾಷ್ಟ್ರೀಯ ಔಷಧ ಕಂಪೆನಿಗಳು ತಮ್ಮ ವಾಣಿಜ್ಜಿಕ ಲಾಭಾಂಶ ಗಮನದಲ್ಲಿ ಇಟ್ಟುಕೊಂಡು ತಮ್ಮ ಸಾಮಾಜಿಕ ಜವಾಬ್ದಾರಿಗಳಿಗೆ ತಿಲಾಂಜಲಿ ನೀಡಿ ಈ ಕಾರ್ಯಕ್ಕೆ ಇಳಿದಿವೆ. ಈ ಅನಿಯಂತ್ರಿತ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ವೈದ್ಯ ವಿಜ್ನಾನಿ ಡಾ.ಸ.ಜ.ನಾಗಲೋಟಿಮಠ ಹೇಳಿದ್ದರು.."If precautions are more costlier than the cure, better I choose the disease!" ಎಂದಿದ್ದರು. ಬಹುಶ: ಈ ರೋಗನಿದಾನ ಶಾಸ್ತ್ರಜ್ನರ ಮಾತು ನಮ್ಮ ಕಣ್ಣು ತೆರೆಸಿಲ್ಲ.

ಈ ಹಂತದಲ್ಲಿ, ತಲೆ ತಲಾಂತರದಿಂದ ಬಂದ, ಗುರು-ಶಿಷ್ಯ ಪರಂಪರೆಯ ಪಾರಂಪರಿಕ ಆರೋಗ್ಯ ಜ್ನಾನವನ್ನು ಬಲ್ಲವರಿಂದ ಅರಿತು, ವ್ಯತಿರಿಕ್ತ ಪರಿಣಾಮ ಬೀರದ ಈ ಔಷಧೀಯ ಪದ್ಧತಿಗಳನ್ನು ಪೋಷಿಸಬೇಕಿದೆ. ‘ಯೋಗ್ಯ ಪರಂಪರೆ’ ಎಂದು ಬಿಂಬಿಸಲ್ಪಡುವ ಯೋಗ, ಆಯುರ್ವೇದ, ಹೋಮಿಯೋಪಥಿ, ಸಿದ್ಧ ಹಾಗು ಯುನಾನಿ ಮೊದಲಾದ ಭಾರತೀಯ ವೈದ್ಯಕೀಯ ಪದ್ಧತಿ ‘ಆಯುಷ್’ ಉಲ್ಲೇಖಿತ ಅಥವಾ ಪ್ರಚಲಿತ ವೈದ್ಯಕೀಯ ಪದ್ಧತಿಗಳೊಂದಿಗೆ ತುಲನಾತ್ಮಕ ಅಧ್ಯಯನ ಮಾಡಿ, ಆ ಪರಂಪರಾಗತ ಜ್ನಾನ, ಪದ್ಧತಿ ಹಾಗು ಪ್ರಯೋಗಿಸುವ ಪದ್ಧತಿಗಳನ್ನು ಹಾಗು ಪ್ರಯೋಗ ರೀತಿಗಳನ್ನು ಗುರುತಿಸಿ ಮೌಲ್ಯದಾಖಲೀಕರಣ ಹಾಗು ಕ್ರೊಢೀಕರಣದ ಔಚಿತ್ಯತೆ ಇಂದು ಒದಗಿ ಬಂದಿದೆ.

ಔಷಧೀಯ ಕ್ಷೇತ್ರದಲ್ಲಿ ಪಾಶ್ಚಿಮಾತ್ಯ/ದೇಸಿ ಕಂಪನಿಗಳ ದಬ್ಬಾಳಿಕೆಯ ಸನ್ನಿವೇಶದಲ್ಲಿ ಪರಂಪರಾಗತ ವೈದ್ಯಕೀಯ ಪದ್ಧತಿ ಉಳಿಸಿ, ಬೆಳೆಸುವ ಅವಶ್ಯಕತೆ ಇದೆ. ಸಮುದಾಯ ಸಹಭಾಗಿತ್ವದ ಸಂಸ್ಥೆಗಳಾದ (ಉದಾಹರಣೆಗೆ ನಾಟಿ ವೈದ್ಯ ಪರಿಷತ್ತು, ಮನೆ ಅಂಗಳದಲ್ಲಿ ಔಷಧೀಯ ಸಸ್ಯ ಬೆಳೆಸುವ ಮಹಿಳಾ ಸ್ವ-ಸಹಾಯ ಸಂಘಗಳು) ಹಾಗು ಪೂರಕವಾಗಿರುವ ಸ್ವಸಹಾಯ ಸಂಘಗಳು ಈ ಪರಂಪರೆ ಉಳಿಸಿ-ಬೆಳೆಸಲು ಕಾರ್ಯ ಪ್ರವೃತ್ತವಾಗಿದ್ದು ಅವುಗಳಿಗೆ ಬಲ ನೀಡುವ ವ್ಯವಸ್ಥೆ ರೂಪುಗೊಳ್ಳಬೇಕಿದೆ. ತಮ್ಮ ಕಡು ಬಡತನದಲ್ಲಿಯೂ ಸೇವಾವೃತಿಯಾಗಿ ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ನಾಟಿ ವೈದ್ಯರಿಗೆ ಹಾಗು ಅವರ ಅವಲಂಬಿತರಿಗೆ ಅರ್ಥಿಕ ಸ್ವಾವಲಂಬನೆ ಹೊಂದುವಂತೆ ಯೋಜನೆ ರೂಪುಗೊಳ್ಳಬೇಕಿದೆ.

ಯುನಾನಿ ವೈದ್ಯಕೀಯ ಪದ್ಧತಿಯಲ್ಲಿ ನಕಲಿ ವೈದ್ಯರ ಹಾವಳಿ ಇದ್ದಂತೆ, ಪಾರಂಪರಿಕ ಅಥವಾ ನಾಟಿ ವೈದ್ಯಕೀಯ ಪದ್ಧತಿಯಲ್ಲಿಯೂ ನಕಲಿ ವೈದ್ಯರುಗಳಿದ್ದಾರೆ. ‘ವಿಷಕ್ಕೆ ವೈದ್ಯ’ ಎನಿಸುವ ಬದಲು ‘ವಿಷ ವೈದ್ಯ’ ಎನಿಸಿದ್ದಾರೆ. ಈ ಸಂಧಿಗ್ಢ ಪರಿಸ್ಥಿಯಲ್ಲಿ ಯೋಗ್ಯ ನಾಟಿ ವೈದ್ಯರನ್ನು ಗುರುತಿಸುವ ಕೆಲಸವಾಗಬೇಕಿದೆ. ನಾಟಿ ವೈದ್ಯರು ಪ್ರಯೋಗಿಸುತ್ತ, ಉಪಯೋಗಿಸುತ್ತ ಬಂದ ಔಷಧೀಯ ಪದ್ಧತಿಯ ಮೌಲ್ಯ ಹಾಗು ತೂಕಬದ್ಧತೆ ಕುರಿತು ಗುಣಾತ್ಮಕ ಸಂಶೋಧನೆ ನಡೆಸುವ ಅವಶ್ಯಕತೆ ಇದೆ. ನೈಸರ್ಗಿಕವಾಗಿ ಲಭ್ಯವಾಗುವ ಗಿಡ-ಮೂಲಿಕೆಗಳ ಆಯ್ಕೆ ಹಾಗು ಸಂಗ್ರಹದಲ್ಲಿ ಅವರು ಪಾಲಿಸಿಕೊಂಡು ಬರುತ್ತಿರುವ ವಿಶೇಷ ಆಚಾರ ಪದ್ಧತಿಗಳ ವೈಜ್ನಾನಿಕ ವಿಶ್ಲೇಷಣೆ ಆಗಬೇಕಿದೆ.

ನಾಟಿ ವೈದ್ಯರು ಸಾಮಾನ್ಯವಾಗಿ ದೂರವರ್ತಿ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಆಯುರ್ವೇದ, ಹೋಮಿಯೋಪಥಿ, ಸಿದ್ಧ, ಪಂಚಕರ್ಮ, ಯೋಗ ಮೊದಲಾದ ಎಲ್ಲ ಪದ್ಧತಿಗಳನ್ನು ರೋಗ ಗುಣಪಡಿಸುವಲ್ಲಿ ಬಳಸುತ್ತಾರೆ. ಚಿಕಿತ್ಸೆ ಹಂತದಲ್ಲಿ ರೋಗ ಶಮನಗೊಳ್ಳಲೇ ಬೇಕು. ಹಾಗಾಗದಿದ್ದರೆ ಅಂತಿಮವಾಗಿ ಶಹರದ ಯೂನಾನಿ ವೈದ್ಯರಲ್ಲಿ ರೋಗಿಯನ್ನು ಚಿಕಿತ್ಸೆಗಾಗಿ ಕಳುಹಿಸುತಾರೆ. ಮೊಲತ: ನಾಟಿ ವೈದ್ಯರು ಅನುಭವ ವೈದ್ಯರು. ಅಳಲೆಕಾಯಿ ಪಂಡಿತರೂ ಹೌದು. ಸ್ಥಳೀಯರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗಗನ ಕುಸುಮವಾದ ಸಂದರ್ಭದಲ್ಲಿ ಈ ಸಂಚಾರಿ ನಾಟಿ ವೈದ್ಯರು ಸುತ್ತಲಿನ ಹತ್ತಾರು ಹಳ್ಳಿಗಳಿಗೆ ವೈದ್ಯ ನಾರಾಯಣರು.

ಈ ನಾಟಿ ವೈದ್ಯರುಗಳು ಸ್ಥಳೀಯರೇ ಆಗಿರುವುದರಿಂದ ಅಲ್ಲಿಯ ಎಲ್ಲ ರೀತಿಯ ರೋಗಗಳಿಗೆ ‘ರಾಮಬಾಣ’ ಸಿದ್ಧವಿದೆ. ಮಳೆಗಾಲ, ಛಳಿಗಾಲ, ಬೇಸಿಗೆಕಾಲ ಹೀಗೆ ರುತುಮಾನಗಳಿಗೆ ಸಂಬಂಧಿಸಿದ ರೋಗಗಳಿಗೆ ಇವರು ಸಮರ್ಥವಾಗಿ ಚಿಕಿತ್ಸೆ ನೀಡಬಲ್ಲರು. ಇ ನಿಟ್ಟಿನಲ್ಲಿ ಅವರ ಮನೆಗೆಲಸ ಶ್ಲಾಘನೀಯ. ಜೊತೆಗೆ ಮಹಿಳೆಯರ ಅನೇಕ ಆರೋಗ್ಯ ಸಂಬಂಧಿ ಸಮಸ್ಯಗಳಿಗೂ ಈ ವೈದ್ಯರು ಪರಿಹಾರ ಸೂಚಿಸಬಲ್ಲರು. ನಾಟಿ ವೈದ್ಯರಲ್ಲಿ ನೈಸರ್ಗಿಕ ಹೆರಿಗೆಗಾಗಿ ಗುರುತಿಸಲ್ಪಡುವ ಸೂಲಗಿತ್ತಿಯರು (ಮಹಿಳಾ ನಾಟಿ ವೈದ್ಯ) ಇದ್ದಾರೆ. ತಕ್ಕ ಮಟ್ಟಿಗೆ ಬಾಣಂತಿಯರಿಗೆ ಹಾಗು ಮಗುವಿಗೆ ಪ್ರಸವಪೂರ್ವ ಹಾಗು ಪ್ರಸವದ ನಂತರದ ಪರಿಣಾಮಕಾರಿ ಚಿಕಿತ್ಸೆಗಳನ್ನು, ಬಾಧೆ ಶಮನಗೊಳಿಸಬಲ್ಲ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದಾರೆ.

ಕಾಡು-ಮೇಡಿನ ಪ್ರದೇಶಗಳಲ್ಲಿ ವಿಷಕಾರಿ ಹಾವು, ಚೇಳುಗಳು ಸೇರಿದಂತೆ ಕೀಟಗಳ ಕಡಿತದಿಂದ ಬಳಲುವವರ ಸಂಖ್ಯೆ ಹೆಚ್ಚು. ಹಾಗಾಗಿ ಇಲ್ಲಿನ ವಿಷ ವೈದ್ಯರು ಕಂಡುಕೊಂಡಿರುವ ನಂಜು ಏರದಂತೆ ತಡೆಗಟ್ಟುವ ಔಷಧೀಯ ಸಸ್ಯಗಳ ವಿಶಿಷ್ಠ ಔಷಧ ವಿಸ್ಮಯ ಹುಟ್ಟಿಸುತ್ತದೆ. ಈ ಎಲ್ಲ ಅಂಶಗಳಿಗೆ ಮಿಗಿಲಾಗಿ ಉತ್ತರಕನ್ನಡ ಜಿಲ್ಲೆಯ ಹಳಿಯಾಳ, ದಾಂಡೇಲಿ ಹಾಗು ಅಂಬಿಕಾನಗರದ ಮುಕ್ಕಾಲು ಪ್ರತಿಶತ ಹಳ್ಳಿಗಳಲ್ಲಿ ಕೇವಲ ವಯೋ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ವಾಸಿಸುತ್ತಿದ್ದಾರೆ. ತೋಳ್ಬಲವುಳ್ಳ ಪುರುಷರು, ಯುವಕರು ದುಡಿಮೆ ಆಶ್ರಯಿಸಿ ಹಲವಾರು ರಾಜ್ಯಗಳಿಗೆ ವಲಸೆ ಹೋಗಿರುವುದರಿಂದ, ಹೋಗುತ್ತಿರುವುದರಿಂದ ಹಣಕಾಸಿನ ಸ್ಥಿತಿಗತಿ ಅಷ್ಟೇನೂ ಸಮಾಧಾನಕರವಾಗಿಲ್ಲ.

ಆದರೆ, ವಿಶೇಷವಾಗಿ ಅವರಂತೆ ಈ ನಾಟಿ ವೈದ್ಯರಿಂದ ಯವುದೇ ಆರ್ಥಿಕ ದಬಾಳಿಕೆ ಇಲ್ಲ. ಹಣವಿರಲಿ, ಇಲ್ಲದಿರಲಿ ದಿನದ ೨೪ ತಾಸು ರೋಗಿಗಳಿಗೆ ಸೇವೆ ಲಭ್ಯ. ಹಾಗಾಗಿ ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಸ್ಥಳೀಯ ಆರೋಗ್ಯ ಪರಂಪರೆಗಳಾದ ಮನೆ ಮದ್ದು, ನಾಟಿ ವೈದ್ಯಕೀಯ ಪದ್ಧತಿ ಮಹತ್ವದ ಪಾತ್ರ ವಹಿಸುತ್ತವೆ. ಮೇಲಾಗಿ ವೈದ್ಯರು, ಔಷಧಗಳು ಹಾಗು ಚಿಕಿತ್ಸೆಗಳ ಸರಳ ಲಭ್ಯತೆ, ವೈದ್ಯರಲ್ಲಿ ನಂಬಿಕೆ, ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ, ನಮ್ಮ ಈ ಪಾರಂಪರಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳನ್ನು ಬದುಕಿಸಿವೆ. ಹಾಗಾದರೆ ಈ ಪದ್ಧತಿಗಳಲ್ಲಿ ಶಕ್ತಿ ಇದೆ ಎಂದಾಯಿತು. ರೋಗಗಳನ್ನು ಶಮನಗೊಳಿಸಬಲ್ಲ ಗುಣಗಳಿವೆ. ಕೊನಪಕ್ಷ ತಾತ್ಕಾಲಿಕ ಉಪಶಮನವಾದರು ಲಭ್ಯವಿದೆ ಎಂದಿಟ್ಟುಕೊಳ್ಳೋಣ. ಈ ಕುರಿತಂತೆ ಅಧ್ಯಯನ ಅವಶ್ಯ.

ಉದಾಹರಣೆಗೆ ನೋಡಿ:

*ಖಿಜಾನೆಲ್ಲಿ- Kizhanelli (Phyllanthus Amarus): ಈ ಔಷಧೀಯ ಸಸ್ಯ ದಕ್ಶಿಣ ಭಾರತದ ಪ್ರಸಿದ್ಧ ಔಷಧೀಯ ಸಸ್ಯ. ಕಳೆದ ನಾಲ್ಕು ಶತಮಾನಗಳಿಂದ ಭಾರತೀಯ ಪಾರಂಪರಿಕ ವೈದ್ಯರು ಕಾಮಾಲೆ ಹಾಗು ಹ್ಯಾಪಿಟಿಟಿಸ್-ಬಿ ರೋಗಗಳನ್ನು ಶಮನಗೊಳಿಸಲು ಬಳಸುತ್ತ ಬಂದಿದ್ದಾರೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಡಾ.ಭರೂಚ್ ಬ್ಲಂಬರ್ಗ್ ಖಿಜಾನೆಲ್ಲಿಯ ಔಷಧೀಯ ಗುಣ ಹಿಂಡಿ ತೆಗೆದು ಸಂಶೋಧನೆ ನಡೆಸಿದ್ದಾಗಿ ಘೋಷಿಸಿ ಹ್ಯಾಪಿಟಿಟಿಸ್ ಬಿ-ಹಾಗು ಸಿ ರೋಗಗಳನ್ನು ಗುಣಪಡಿಸಬಲ್ಲುದು ಎಂದು ಸಾಬೀತು ಪಡಿಸಿ ಪೇಟೆಂಟ್ ಪಡೆದುಕೊಂಡಿದ್ದಾರೆ!

*ಬೇವು- Neem (Azadirachta Indica): ಭಾರತದಲ್ಲಿ ತಲೆ ತಲಾಂತರಗಳಿಂದ ಬಂದ ಬೇವಿನ ಎಲೆಗಳಿಂದ ತಯಾರಿಸಲಾದ ಕೇಕ್’ ಗಳನ್ನು ಕೀಟನಾಶಕವಾಗಿ ಬಳಸಲಾಗುತ್ತದೆ. ಈ ಬೇವಿನ ಎಲೆಗಳಲ್ಲಿರುವ ಕ್ರಿಯಾಶೀಲ ರಸಾಯನ ‘ಅಝಾಡಿರಿಕ್ಟಿನ್’ ಅಸ್ಥಿರವಾದದ್ದ್ದು. ಹಾಗಾಗಿ ಬೇವಿನ ಕೇಕ್ ಗಳು ಕಡಿಮೆ ಜೀವಿತಾವಧಿ ಹೊಂದಿವೆ. ಇದನ್ನು ಮನಗಂಡ ಪಾಶ್ಚಿಮಾತ್ಯ ಕಂಪನಿಯೊಂದು ಬೇವಿನ ಕುರಿತಾದ ಮೂಲಭೂತ ಮಾಹಿತಿಯನ್ನು ಹೆಕ್ಕಿಕೊಂಡು ಬೇವಿನಲ್ಲಿ ಕೀಟ ನಾಶಕ ಗುಣಗಳಿವೆ ಎಂಬ ವಿಷಯದ ಮೇಲೆ ಪ್ರಯೋಗಾಲಯ ಅಧ್ಯಯನ ಕೈಗೊಂಡು ಅಸ್ಥಿರವಾಗಿದ್ದ ‘ಅಝಾಡಿರಿಕ್ಟಿನ್’ ಕ್ರಿಯಾಶೀಲ ರಸಾಯನವನ್ನು ಸುಸ್ಥಿರಗೊಳಿಸಿ ಬೇವಿನ ಕೇಕ್ ಗಳನ್ನು ಬಹುಕಾಲ ಬಾಳಿಕೆ ಬರುವಂತೆ ಮಾಡಿತು. ಈ ಸುಸ್ಥಿರಗೊಳಿಸುವ ಪ್ರಕ್ರಿಯೆಗೆ ಆ ಪಾಶ್ಚಿಮಾತ್ಯ ಕಂಪೆನಿ ಪೇಟೆಂಟ್ ಪಡೆದಿದೆ!

*ಪಿಪ್ಪಲಿ- Pippali (Piper lon gum) ಭಾರತೀಯ ಖಾದ್ಯ-ಪೇಯಗಳಲ್ಲಿ ಪ್ರಮುಖವಾದ ಸ್ಥಾನ ಕರಿ ಮೆಣಸಿಗೆ. ಜೊತೆಗೆ ಪಿಪ್ಪಲಿಯನ್ನು ಭಾರತೀಯರು ಔಷಧೀಯ ಸಸ್ಯವಾಗಿ ನೂರಾರು ಔಷಧಗಳ ತಯಾರಿಕೆಯಲ್ಲಿ ತಲೆತಲಾಂತರದಿಂದ ಬಳಸುತ್ತ ಬಂದಿದ್ದಾರೆ. ತನ್ನ ಔಷಧೀಯ ಗುಣ ಹಾಗು ಯಾವುದೇ ಪರಿಸರಕ್ಕ್ಕೆ ಹೊಂದಿಕೊಂಡು ಕೂಡಲೇ ಬೆಳೆದು ಬಿಡಬಲ್ಲ ಪಿಪ್ಪಲಿ ಭಾರತದ ಎಲ್ಲ ಪಾರಂಪರಿಕ ವೈದ್ಯಕೀಯ ಸಂಹಿತೆಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭಾರತದ ಸಿ.ಎಸ್.ಅಯ್.ಆರ್. ಇನಸ್ಟಿಟ್ಯೂಟ್ ಪಿಪ್ಪಲಿಯ ಒಂದು ಔಷಧೀಯ ಅಂಶ ಪ್ರತ್ಯೇಕಿಸಿ ಪೇಟೇಂಟ್ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂಬುದು ಸಮಾಧಾನದ ಸಂಗತಿ.

*ಅರಿಷಿಣ- Turmeric(Curium Longa): ಅರಿಷಿಣದ ನಂಜು ನಿವಾರಕ ಗುಣ ಹಾಗು ಗಾಯಗಳನ್ನು ಗುಣ ಪಡಿಸುವಲ್ಲಿ ಅದಕ್ಕಿರುವ ಔಷಧೀಯ ಅಂಶಗಳ ಅರಿವು ನಮ್ಮ ಪೂರ್ವಜರಿಗೆ ಶತಮಾನದಷ್ಟು ಹಳೆಯದು. ಔಷಧೀಯ ಸಸ್ಯವಾಗಿ ಬಳಕೆ ಇನ್ನೂ ಹಳೆಯದು. ಆದರೆ ಅಮೇರಿಕೆಯಲ್ಲಿ ಅರಿಷಿಣದಲ್ಲಿರುವ ಗಾಯ ಗುಣಪಡಿಸುವ ಗುಣಗಳನ್ನು/ ಅಂಷಗಳನ್ನು ಕಂಡು ಹಿಡಿದಿದ್ದಾಗಿ ಘೋಷಿಸಿ ‘ಪೇಟೆಂಟ್’ಗಾಗಿ ಅರ್ಜಿ ಸಲ್ಲಿಸಲಾಗಿತ್ತು. ವಿಷಯ ಅರಿತ ಭಾರತ ಸರಕಾರ ಹಾಗು ಸಿ.ಎಸ್.ಅಯ್.ಆರ್. ಇನಸ್ಟಿಟ್ಯೂಟ್ ತಮ್ಮ ವಾದ ಮಂಡಿಸಿ ಅಮೇರಿಕೆಯ ಔಷಧ ಕಂಪೆನಿಗೆ ಪೇಟೆಂಟ್ ದೊರಕದಂತೆ ಕ್ರಮ ಸಕಾಲಿಕವಾಗಿ ತೆಗೆದುಕೊಂಡವು.

ಇತ್ತೀಚೆಗೆ ಪೇಟೆಂಟ್ ದೊರಕಿಸಿಕೊಳ್ಳುವ ಕುರಿತಂತೆ ವಾಣಿಜ್ಜಿಕ ಸಂಸ್ಥೆಗಳು, ಭಾರತೀಯ ಹಾಗು ಪಾಶ್ಚಿಮಾತ್ಯ ಸಂಶೋಧಕರು ಜೊತೆಗೆ ಪೇಟೆಂಟ್ ಪ್ರಕ್ರಿಯೆಯ ಸುತ್ತ ಹಬ್ಬಿರುವ ಹಲವಾರು ವಿವಾದಗಳು ಬೆಳಕಿಗೆ ಬರುತ್ತಿವೆ. ಪೇಟೆಂಟ್ ಪಡೆಯಲು ಈ ಕೆಳಗಿನ ಹಲವು ವಿಧದಲ್ಲಿ ಹಕ್ಕು ಸಾಧಿಸಬಹುದು.

*ತಯಾರಿ ವಿಧಾನಗಳ ಮೇಲೆ(The process of preperation)
*ಅಂತಿಮವಾಗಿ ಹೊರ ಬಂದ ಉತ್ಪನ್ನ(The Final Product brought out)
*ಬಳಕೆಯ ವಿಧಾನಗಳ ಮೇಲೆ (Application aspect)
ಭಾರತದ ವತಿಯಿಂದ ‘ಪೇಟೆಂಟ್’ ಪ್ರಕ್ರಿಯೆ ಕುರಿತಂತೆ ವಿವಾದ ಹಾಗು ವಿರೋಧಗಳು ಹುಟ್ಟಿಕೊಳ್ಳಲು ಕಾರಣ ಇಂದಿಗೂ ಜೀವಿ-ವೈವಿಧ್ಯ ಒಡಂಬಡಿಕೆ ಕಲಂ (೮)(ಜೆ) Article (8)(J) of the Convention of Biological Divarsity `CBD' ಅನುಷ್ಠಾನಗೊಳ್ಳದಿರುವುದು. ನಮ್ಮ ದೇಶ ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ‘ಪೇಟೆಂಟ್’ ಪ್ರಕ್ರಿಯೆ ಕುರಿತಂತೆ ಪ್ರಬಲ ವಾದ ಮಂಡಿಸಲು ೨ ಬಹುಮುಖ್ಯ ಕಾರಣಗಳಿವೆ.

ಕಾರಣ ೧: ಔಷಧೀಯ ಸಸ್ಯಗಳು ಹಾಗು ಅವುಗಳ ಬಳಕೆ ಕುರಿತಂತೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಶೋಧನೆ ಕೈಗೊಳ್ಳುವುದಾದರೆ, ಸಂಶೋಧನೆಗಳು ಜೈವಿಕ ಸಂಪನ್ಮೂಲ ಆಧರಿಸಿ ಅಥವಾ ಸಾಂಪ್ರದಾಯಿಕ/ ಪಾರಂಪರಿಕ ಗಾವಟಿ ಜ್ನಾನ ಆಧರಿಸಿ ಆಗಿರಬಹುದು. ಸಂಬಂಧಪಟ್ಟವರಿಗೆ ತಿಳಿಸಿ, ಮಾಹಿತಿ ನೀಡಿ, ಒಪ್ಪಿಗೆ ಪಡೆದು ಆ ವಿಷಯಕ್ಕೆ ಸಂಬಂಧಿಸಿದ ದೇಶ, ಸಮುದಾಯ ಅಥವಾ ವ್ಯಕ್ತಿಗೂ ತಿಳಿಸಿ ಪರವಾನಿಗೆ ಪಡೆಯಬೇಕು.

ಕಾರಣ ೨: ಸ್ವದೇಶದಲ್ಲಿ ಸಂಶೋಧನೆ ನಡೆಸಿ, ಪಡೆದುಕೊಂಡ ಮಾಹಿತಿ ಅಥವಾ ಸಂಪನ್ಮೂಲಗಳಿಂದ ವ್ಯಾಪಾರಿ ಲಾಭವುಳ್ಳ ಫಲಿತಾಂಶ ಅಥವಾ ಉತ್ಪನ್ನ ಪಡೆದುಕೊಂಡಲ್ಲಿ ಅಂತಹ ಲಾಭಾಂಶವನ್ನು ಸಂಬಂಧಪಟ್ಟವರಿಗೆ ನೀಡುವ ಪ್ರಕ್ರಿಯೆ ಪಾಲಿಸಬೇಕು. ಆ ಉತ್ಪನ್ನ ಸಾಂಪ್ರದಾಯಿಕ ಬಳಕೆಯಂತೆ ಬಹುವ್ಯಾಪಿತ್ವ ಹೊಂದಿದಲ್ಲಿ ಇದನ್ನು ಕಡ್ಡಾಯಗೊಳಿಸಬೇಕು.

ಸ್ತಳೀಯ ಜನರ ಜ್ನಾನ ಬಳಸಿ ಸಮುದಾಯದ ಆರೋಗ್ಯ ಕಾಪಾಡುವುದು ಮುಖ್ಯ. ಈ ನಿಟ್ಟಿನಲ್ಲಿ ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನ- ಎಫ್.ಆರ್.ಎಲ್.ಎಚ್.ಟಿ. ದಕ್ಷಿಣ ಭಾರತದ ೧೩ ಸ್ಥಳಗಳಲ್ಲಿ ಸ್ಥಳೀಯ ಆರೋಗ್ಯ/ಸ್ವಾಸ್ಥ್ಯ ಸಂಪ್ರದಾಯಗಳನ್ನು ಪುನರುಜ್ಜೀವಿತ ಗೊಳಿಸುವಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆ. ಸಮುದಾಯ ಆಧಾರಿತ ಅತ್ಯುತ್ತಮ ಸ್ವಯಂ ಸೇವಾ ಸಂಸ್ಥೆಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಧಾರವಾಡದ ಖ್ಯಾತ ಪರಿಸರವಾದಿ ಮುಕುಂದ ಮೈಗೂರ್ ನೇತೃತ್ವದಲ್ಲಿ ಕ್ರಿಯಾಶೀಲ ಗೆಳೆಯರು ಸ್ವಯಂ ಸೇವಾ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಹಲವಾರು ತಾಲ್ಲೂಕುಗಳಲ್ಲಿ ಸ್ಥಳೀಯ ಸ್ವಾಸ್ಥ್ಯ ಸಂಪ್ರದಾಯಗಳನ್ನು ಪುನರುಜ್ಜೀವಿತ ಗೊಳಿಸುವ ಕೆಲಸ ಮಾಡುತ್ತಿದೆ.

ಈ ಯೋಜನೆಯ ಅಡಿಯಲ್ಲಿ ಔಷಧೀಯ ಪದ್ಧತಿಗಳು, ಸಸ್ಯಗಳು, ಚಿಕಿತ್ಸಾ ವಿಧಾನ, ಪರಿಣಾಮಗಳ ದಾಖಲೀಸುವಿಕೆ, ವಿಶಿಷ್ಠ ರೀತಿಯಲ್ಲಿ ನಡೆದಿದೆ. ಸ್ಥಳೀಯ ನಾಟಿ ವೈದ್ಯರು, ವಿಷ ವೈದ್ಯರು ಹೆಸರಾಂತ ಆಯುರ್ವೇದ, ಯುನಾನಿ, ಸಿದ್ಧ, ಟಿಬೇಟಾನ್ ಸೇರಿದಂತೆ ಆಧುನಿಕ ವೈದ್ಯಕೀಯ ಪದ್ಧತಿಯ ವೈದ್ಯರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮೌಲ್ಯವರ್ಧನೆ ಹಾಗು ಮೌಲ್ಯೀಕರಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಈ ಗಾಗಲೇ ಈ ಯೋಜನೆ ವಿಶಿಷ್ಠವಾದ, ಚಮತ್ಕಾರಿಕ ಸ್ಥಳೀಯ ಸ್ವಾಸ್ಥ್ಯ್ ಪ್ರಯೋಗಗಳನ್ನು ಬೆಳಕಿಗೆ ತಂದಿದ್ದು ಶೀಘ್ಹ್ರವೇ ಉನ್ನತೀಕರಿಸಬೇಕಾದ ಅನಿವಾರ್ಯತೆ ಇದೆ.

********************************************************

*ಕೃಷಿ ಮಾಧ್ಯಮ ಕೇಂದ್ರ (ಕಾಮ್), ಧಾರವಾಡದ ಫೆಲೊಷಿಪ್ ಅಡಿಯಲ್ಲಿ ನಾನು ಎಫ್.ಆರ್.ಎಲ್.ಎಚ್.ಟಿ. ನಿಯೋಜಿತ ಪ್ರಾಚಾರ್ಯ ಅನ್ವೇಶಕ ಶ್ರೀ ಮುಕುಂದ ಮೈಗೂರ್ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಅಧ್ಯಯನದ ಪ್ರೌಢ ಪ್ರಬಂಧದ ಕೆಲ ತುಣುಕುಗಳು ಸಂಪದಿಗರಿಗಾಗಿ. ಅವರ ಬೆಂಬಲದಿಂದ ನಾಟಿ ವೈದ್ಯರ ಬದುಕನ್ನು ಹಸನುಗೊಳಿಸುವ ಅಳಿಲು ಪ್ರಯತ್ನವಾಗಿ ಈ ಲೇಖನ.