ನಿಸ್ವಾರ್ಥ ಹೃದಯಗಳ ಆತ್ಮಸಾಕ್ಷಿಯ ಪ್ರತಿಬಿಂಬ...

ನಿಸ್ವಾರ್ಥ ಹೃದಯಗಳ ಆತ್ಮಸಾಕ್ಷಿಯ ಪ್ರತಿಬಿಂಬ...

ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು, ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ ಮನೋಭಾವ ಧಾರವಾಹಿ ಸಿನಿಮಾ ಕಥೆ ಕಾದಂಬರಿಗಳಿಂದ  ಜನರಿಗೆ ವರ್ಗಾಯಿಸಲ್ಪಟ್ಟಿದೆ.

ನಾಜೂಕಿನ ವಂಚನೆಯನ್ನು, ಕಾನೂನಿನ ನೆರಳಲ್ಲಿ ಅಪರಾಧವನ್ನು, ಅಮಾಯಕರಿಗೆ ಹಿಂಸೆಯನ್ನು ಕೊಡುವ ಉಪಾಯಗಳನ್ನು ನ್ಯಾಯಾಲಯಗಳು ಜನರಿಗೆ ವರ್ಗಾಯಿಸಿವೆ. ಕಲೆಗಳಿಂದ ಜನಪ್ರಿಯತೆಯನ್ನು, ಜನಪ್ರಿಯತೆಯಿಂದ ಸನ್ಮಾನಗಳನ್ನು, ಸನ್ಮಾನಗಳಿಂದ ಪ್ರಶಸ್ತಿಗಳನ್ನು, ಪ್ರಶಸ್ತಿಗಳಿಂದ ಅಧಿಕಾರವನ್ನು, ಅಧಿಕಾರದಿಂದ ಹಣವನ್ನು ಪಡೆಯುವ ಮಾರ್ಗಗಳನ್ನು ಅಕ್ಷರ ಜ್ಞಾನ ಜನರಿಗೆ ವರ್ಗಾಯಿಸಿದೆ. ತಪ್ಪುಗಳನ್ನು ಸರಿ ಎಂದು, ಸರಿಯನ್ನು ತಪ್ಪೆಂದು, ನಿಜವನ್ನು ಸುಳ್ಳೆಂದು, ಸುಳ್ಳನ್ನು ನಿಜವೆಂದು, ವಾಸ್ತವವನ್ನು ಭ್ರಮೆ ಎಂದು ಭ್ರಮೆಯನ್ನು ವಾಸ್ತವ ಎಂದು ನಿರೂಪಿಸುವ ಕಲೆಗಾರಿಕೆ ಸಮೂಹ ಸಂಪರ್ಕ ಮಾಧ್ಯಮಗಳಿಂದ ಜನರಿಗೆ ವರ್ಗಾಯಿಸಲ್ಪಟ್ಟಿದೆ.

ಕಪಟ ಭಕ್ತಿಯಿಂದ, ಆಡಂಬರ ಪ್ರದರ್ಶನದ ಪೂಜೆಗಳಿಂದ ದೇವರನ್ನೇ ವಂಚಿಸುವ, ದೇವರಿಗೆ ಲಂಚ ಕೊಡುವ ಮನೋಭಾವ ಮಂದಿರ ಮಸೀದಿ ಚರ್ಚುಗಳ ಮುಖ್ಯಸ್ಥರಿಂದ ಜನರಿಗೆ ವರ್ಗಾಯಿಸಲ್ಪಟ್ಟಿದೆ. ಪಾಶ್ಚಾತ್ಯ ಸಂಸ್ಕೃತಿಗಳ ನಾಗರಿಕ ಪ್ರಜ್ಞೆಯನ್ನು ಮರೆಮಾಚಿ ಅವರ ಊಟ ಬಟ್ಟೆ ಕುಡಿತ ಜೂಜು ಅನೈತಿಕ ಸಂಬಂಧಗಳು ದುಂದು ವೆಚ್ಚ ಮುಂತಾದ ಬಾಹ್ಯ ನಡವಳಿಕೆಗಳು ಮಾತ್ರ ಮಾಧ್ಯಮಗಳ ಮುಖಾಂತರ ಜನರಿಗೆ ವರ್ಗಾಯಿಸಲ್ಪಟ್ಟಿದೆ.

ಹೀಗೆ ವರ್ಗಾಯಿಸಲ್ಪಟ್ಟ ಮನಸ್ಥಿತಿ ಇಡೀ ವ್ಯವಸ್ಥೆಯ ಮೂಲದ್ರವ್ಯವನ್ನೇ ನುಂಗಿ ಮೌಲ್ಯಗಳ ಅಧಃಪತನ ಹೊಂದಿ ಕೇವಲ ಮುಖವಾಡಗಳ ವ್ಯಾವಹಾರಿಕ ಜೀವನವೇ ನಮ್ಮ ಸಮಾಜವಾಗಿದೆ. ಇದನ್ನು ಬದಲಿಸುವುದೇ ನಮ್ಮೆಲ್ಲರ ಮೊದಲ ಆಧ್ಯತೆಯಾಗಿರಲಿ. ಏಕೆಂದರೆ....

ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ,

ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ,

ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ,

ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ,

ಸಮಾನತೆಯನ್ನು ಮೂಡಿಸಲಾಗದ ಚರ್ಚೆ,

ಅಮಾನವೀಯತೆಯನ್ನು ದಿಕ್ಕರಿಸಲಾಗದ ಕವಿತೆ,

ಪರಿಸರ ನಾಶವನ್ನು ತಡೆಯಲಾಗದ ಕಥೆ,

ಭ್ರಷ್ಟತೆಯನ್ನು ಹೋಗಲಾಡಿಸಲಾಗದ ಅಂಕಣಗಳು,

ಸಂಬಂಧಗಳನ್ನು ಬೆಸೆಯಲಾಗದ ಕಾದಂಬರಿ,

ವಿಷವಿಕ್ಕುವ ಜನರನ್ನು ಗುರುತಿಸಲಾಗದ ಅಕ್ಷರಗಳು,

ಪ್ರೀತಿಯನ್ನು ಪ್ರೀತಿಸಲಾಗದ ಮನಸ್ಸುಗಳು,

ಮೌಲ್ಯಗಳನ್ನು ನಾಶ ಮಾಡುವ ಪದಗಳು,

ಇತರರ ಮನ ನೋಯಿಸುವ ವಾಕ್ಯಗಳು, 

ಕಷ್ಠಗಳನ್ನು ನಿವಾರಿಸಲಾಗದ ಪ್ರವಚನಗಳು,

ದುಷ್ಟತನವನ್ನು ಮೆಟ್ಟಿ ನಿಲ್ಲದ ಭಾಷಣಗಳು,

ಭ್ರಮೆಗಳನ್ನು ಸೃಷ್ಡಿ ಮಾಡುವ ಹರಿಕಥೆಗಳು,

ಅವಾಸ್ತವಿಕ ಆದರ್ಶಗಳನ್ನು ತುಂಬುವ ಗ್ರಂಥಗಳು,

ಮನಸ್ಸಿನ ದುಗುಡವನ್ನು ಕಡಿಮೆ ಮಾಡಲಾಗದ ಜ್ಞಾನ,

ಭಾವನೆಗಳನ್ನು ನಿಯಂತ್ರಿಸಲಾಗದ ಭಕ್ತಿ,

ಇವು ನಿಮ್ಮ ಅಭಿವ್ಯಕ್ತಿಯ ಮಾಧ್ಯಮಗಳಾದರು,

ಅದನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಿದ್ದರು,

ಅದು ಕೇವಲ ನಿಮ್ಮ ಬುದ್ದಿಯ ಪ್ರದರ್ಶನ, 

ಸ್ವಾರ್ಥದ ಪ್ರತಿಬಿಂಬ, ಅಹಂನ ತೋರ್ಪಡೆ, 

ಅಂತರಾಳದ ಅಸಹಿಷ್ಣುತೆಯ ಪ್ರಕಟಣೆ,

ಪ್ರಶಸ್ತಿ, ಬಿರುದು ಬಾವಲಿಗಳ ಆಸೆ ಅಷ್ಟೆ.

ಮೇಲೆ ಹೇಳಿದ ಎಲ್ಲವೂ ವ್ಯಕ್ತಿಯ, ಸಮಾಜದ, ದೇಶದ, ವಿಶ್ವದ, ಜೀವಪರ ಹಿತದೃಷ್ಟಿ ಹೊಂದಿದ್ದರೆ ಅದು ನಿಜಕ್ಕೂ, ನಿಸ್ವಾರ್ಥ ಹೃದಯಗಳ ಆತ್ಮಸಾಕ್ಷಿಯ ಪ್ರತಿಬಿಂಬ. ಅದು ಸಾಧ್ಯವಾದದ್ದೇ ಆದರೆ, ನಿಮ್ಮ ವ್ಯಕ್ತಿತ್ವ, ಉತ್ಕೃಷ್ಟತ ಮಟ್ಟದಲ್ಲಿದೆ ಎಂದೇ ಅರ್ಥ. ಅದನ್ನು ಸಾಧ್ಯವಾಗಿಸುವ ಪ್ರಯತ್ನ ನಮ್ಮೆಲ್ಲರದಾಗಲಿ ಎಂದು ಆಶಿಸುತ್ತಾ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 209 ನೆಯ ದಿನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿಯೇ ವಾಸ್ತವ್ಯದ ಸಮಯದಲ್ಲಿ ಬರೆದ ಲೇಖನ. 

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ