ನೀಟ್ ಅನ್ಯಾಯ ಸರಿಪಡಿಸಿ

ನೀಟ್ ಅನ್ಯಾಯ ಸರಿಪಡಿಸಿ

ವೈದ್ಯರಾಗಬೇಕೆಂಬ ಕನಸಿನ ಬೆನ್ನೇರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್ ಯುಜಿ) ಬರೆದ ಅಭ್ಯರ್ಥಿಗಳಿಗೆ ಈ ವರ್ಷ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿ ಎ) ಆಘಾತ ಉಣಿಸಿದೆ. ಈ ಹಿಂದೆ ಸಾಕಷ್ಟು ಬಾರಿ ಪೇಪರ್ ಸೋರಿಕೆ ಮತ್ತು ಅಂಕ ನೀಡುವಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಮುನ್ನೆಲೆಗೆ ಬಂದಿದ್ದವು. ೨೦೨೪ರ ನೀಟ್ ಯುಜಿ ಪರೀಕ್ಷೆಯ ಫಲಿತಾಂಶಗಳು ಈ ಆರೋಪಗಳಿಗೆ ಪುಷ್ಟಿ ನೀಡಿದಂತಿರುವುದು ದುರಂತ.

ಪ್ರಸಕ್ತ ವರ್ಷದ ನೀಟ್ ಪರೀಕ್ಷೆಗೆ ದೇಶಾದ್ಯಂತ ೨೪ ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ ೭೨೦ಕ್ಕೆ ೭೨೦ ಅಂಕಗಳನ್ನು ಪಡೆದ ೭ ಅಭ್ಯರ್ಥಿಗಳಿದ್ದು, ನೀಟ್ ಮೇಲೆ ಅನುಮಾನ ಮೂಡಲು ಮೊದಲ ಕಾರಣ. ಕಾರಣ, ಕಳೆದ ೫ ವರ್ಷಗಳಲ್ಲಿ ಔಟ್ ಆಫ್ ಔಟ್ ಪಡೆದ ಟಾಪರ್ ಗಳ ಸಂಖ್ಯೆ ಕೇವಲ ೩. ಈ ಅನುಮಾನ ದಟ್ಟವಾಗಲು ಇನ್ನೊಂದು ಕಾರಣ, ಎಲ್ಲ ೭ ಟಾಪರ್ ಗಳೂ ನಿರ್ದಿಷ್ಟ ಕೋಚಿಂಗ್ ಸೆಂಟರ್ ಗೆ ಸಂಬಂಧಿಸಿದವರು ಎನ್ನುವುದು. ಕೃಪಾಂಕ ನೀಡುವ ಆಧಾರದ ಕುರಿತೇ ಪ್ರಶ್ನೆಗಳು ಎದ್ದಿದ್ದು, ನೀಟ್ ಪರೀಕ್ಷೆ ಪಾರದರ್ಶಕತೆ ಕೊರತೆ ಎದುರಿಸುತ್ತಿದೆ ಎಂಬ ಅಭಿಪ್ರಾಯ ಅಭ್ಯರ್ಥಿಗಳಿಗೆ ಮೂಡಿದೆ.

ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಏಕೈಕ ಉದ್ದೇಶದಿಂದ ಎನ್ ಟಿ ಎ ಸ್ಥಾಪಿಸಲಾಯಿತು. ಆದರೆ, ನೀಟ್ ಪರೀಕ್ಷೆಯಲ್ಲಿ ರಿಗ್ಗಿಂಗ್ ನಡೆದಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳನ್ನು ಉದ್ದೇಶಿಸಿ, ಎನ್ ಟಿ ಎ ಅಂಥ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಸ್ಪಷ್ಟನೆಗಳು ಅಷ್ಟೇನೂ ತೃಪ್ತಿಕರವಾಗಿಲ್ಲ. ಇದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸಿ, ಸುಪ್ರೀಂ ಕೋರ್ಟ್ ಗೆ ಕೂಡ ನೀಟ್ ನ ಪಾವಿತ್ರ್ಯತೆ ಬಗ್ಗೆ ಅನುಮಾನ ಸೂಚಿಸಿ, ಕೇಂದ್ರ ಸರಕಾರ ಮತ್ತು ಎನ್ ಟಿ ಎ ಯಿಂದ ಉತ್ತರ ಬಯಸಿರುವುದು ಅಚ್ಚರಿಯೇನಲ್ಲ.

ನೆಗೆಟಿವ್ ಮಾರ್ಕ್ಸ್ ಇದ್ದಾಗ್ಯೂ ೭೧೯, ೭೧೮ ಅಂಕ ಪಡೆಯಲು ಹೇಗೆ ಸಾಧ್ಯ? ಈ ಪರೀಕ್ಷಾ ವಿಧಾನದಲ್ಲಿ ಈ ಪ್ರಮಾಣದ ಅಂಕ ಪಡೆಯಲು ಸಾಧ್ಯವೇ ಇಲ್ಲ. ೧೫೬೩ ವಿದ್ಯಾರ್ಥಿಗಳಿಗೆ ಯಾವ ಆಧಾರದ ಮೇಲೆ ಕೃಪಾಂಕ ನೀಡಲಾಯಿತು? ಫಲಿತಾಂಶವನ್ನು ಭಾರೀ ನಿಗೂಢವೆಂಬಂತೆ ನಿಗದಿತ ದಿನಾಂಕಕ್ಕಿಂತ ೧೦ ದಿನ ಮುಂಚಿತವಾಗಿ, ಬಹಳ ತರಾತುರಿಯಲ್ಲಿ ಪ್ರಕಟಿಸಿದ್ದೇಕೆ? ಇಂಥ ಹತ್ತಾರು ಗೊಂದಲಗಳಿಗೆ ಸ್ಪಷ್ಟ ಉತ್ತರ ಅಗತ್ಯವಿದೆ. ಈ ಸಂಬಂಧ ಎನ್ ಟಿ ಎ ತಜ್ಞರ ಸಮಿತಿ ರಚಿಸಿದೆ. ಇದಷ್ಟೇ ಸಾಲದು, ಸರಕಾರವೂ ಪ್ರತ್ಯೇಕವಾಗಿ ತನಿಖೆ ನಡೆಸಿ, ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಅತಿ ತುರ್ತಾಗಿ ಮಾಡಬೇಕಿದೆ. ವಿಶ್ವಾಸಾರ್ಹ ತನಿಖೆಯಿಂದ ಮಾತ್ರವೇ ನೀಟ್ ಪರೀಕ್ಷಾ ವಿಧಾನದ ಮೇಲೆ ವಿಶ್ವಾಸ ಮೂಡಲು ಸಾಧ್ಯ. ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿ.

ವಿಶೇಷವಾಗಿ ತಮಿಳುನಾಡು ಸರಕಾರ ತಮಿಳು ಭಾಷಿಕ ಅಭ್ಯರ್ಥಿಗಳು ನೀಟ್ ನಿಂದ ನಿರಂತರ ಅನ್ಯಾಯಕ್ಕೊಳಗಾಗುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾಗ ಬಹುಶಃ ಇದು ಪ್ರಾದೇಶಿಕ ಪಕ್ಷವೊಂದರ ನಿರ್ದಿಷ್ಟ ರಾಜಕೀಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದಿರಬಹುದು ಎಂದು ಬಹುತೇಕರು ಭಾವಿಸಿದ್ದರು. ಆದರೆ ಈಗ ತಮಿಳುನಾಡಿನ ವಾದ ಸರಿಯಿದೆ ಎಂಬ ಅಭಿಪ್ರಾಯ ಮೂಡುತ್ತಿದೆ. ಕೇಂದ್ರ ಸರಕಾರ ಇಂಥಾ ಅನುಮಾನಗಳನ್ನು ಬಗೆಹರಿಸಬೇಕಿದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೩-೦೬-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ