ನೀನಾರಿಗಾದೆಯೋ ಎಲೈ ಮಾನವಾ..? ಎನ್ನುತ್ತಿದೆ ಗಜಪಡೆ..!

ನೀನಾರಿಗಾದೆಯೋ ಎಲೈ ಮಾನವಾ..? ಎನ್ನುತ್ತಿದೆ ಗಜಪಡೆ..!

ಬರಹ

"ಇಲ್ಲಿ ಅಡಗಿದೆ ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ"

ಯಾವುದಪ್ಪ..ಅದು? ಎಂದು ಕುತೂಹಲದಿಂದ ನಾವು ಆ ಅಕ್ಷರಗಳನ್ನು ಕೆತ್ತಲಾದ ಪೆಟ್ಟಿಗೆಯ ಬಾಗಿಲು ತೆರೆದರೆ..
ಅಲ್ಲೊಂದು ಕನ್ನಡಿ. ಬಾಗಿಲು ತೆರೆದವನ/ಳ ಮುಖ ಅದರಲ್ಲಿ ಪ್ರತಿಬಿಂಬವಾಗಿ ಕಾಣುತ್ತದೆ! ಅರ್ಥಾತ್..ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಮನುಷ್ಯ!

ಮೈಸೂರಿನ ಜಗತ್ಪ್ರಸಿದ್ಧ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ಸ್ವಾಗತ ದ್ವಾರದಲ್ಲಿಯೇ ಈ ಪೆಟ್ಟಿಗೆಯನ್ನು ಇಡಲಾಗಿದೆ. ಅದು ಸ್ಪಷ್ಠವಾಗಿ ನಮ್ಮ ನಡವಳಿಕೆಗೆ ಕನ್ನಡಿ ಹಿಡಿಯುತ್ತದೆ.

"ನೀವು ನೋಡಲು ಕಾತರದಿಂದ ಬಂದಿರುವ ಅತ್ಯಂತ ಕ್ರೂರ ಪ್ರಾಣಿ ಈ ಮೃಗಾಲಯದ ಪಂಜರದೊಳಗಿಲ್ಲ..ಹೊರಗಿದೆ!" ಎಂಬ ದಿವ್ಯ ಸಂದೇಶವನ್ನು ಆ ಪೆಟ್ಟಿಗೆ ಸಾರುತ್ತದೆ.

ಒಂದು ಸಂಶೋಧನಾ ಪತ್ರಿಕೆಯ ಪ್ರಕಾರ ವರ್ಷವೊಂದರಲ್ಲಿ ಲಕ್ಷಾಂತರ ಗಿಡಗಳನ್ನು ಆಕಸ್ಮಿಕವಾಗಿ ಅಳಿಲುಗಳು ನಡುತ್ತವೆ! ಅಥವಾ ಹುಟ್ಟಿಸುತ್ತವೆ! ತಮ್ಮ ಬಾಯಿಯಲ್ಲಿ ನಿತ್ಯ ನೂರಾರು ಹಣ್ಣು, ಬೀಜಗಳನ್ನು ತಿನ್ನಲು ಹೆಕ್ಕುವ ಅವು, ನಂತರ ಆ ಹಣ್ಣುಗಳನ್ನು ಮತ್ತು ಬೀಜಗಳನ್ನು ಎಲ್ಲಿ ಬಚ್ಚಿಟ್ಟಿದ್ದೇವೆ ಎಂಬುದನ್ನೇ ಮರೆತು ಬಿಡುತ್ತವೆ. ಕಾಲಕ್ರಮೇಣ ಅಳಿಲಿನ ಲಾಲಾರಸದಲ್ಲಿ ಮಿಂದ ಬೀಜ/ ಹಣ್ಣು ಸುಪುಷ್ಠವಾಗಿ ಮೊಳಕೆ ಒಡೆದು ಗಿಡದ ವಂಶಾಭಿವೃದ್ಧಿಗೆ ಸಹಕಾರಿಯಗುತ್ತದೆ. ಹಾಗೆಯೇ ಅವು ಹಣ್ಣನ್ನು ತಿಂದು ಮಲದ ರೂಪದಲ್ಲಿ ಬಿಸುಟುವ ತ್ಯಾಜ್ಯದಲ್ಲಿಯೂ ಕೂಡ ಹೇರಳ ಬೀಜಗಳಿದ್ದು, ಆ ಸಮಗ್ರ ಗೊಬ್ಬರ ಲೇಪಿತ ಬೀಜಗಳು ಹುಲುಸಾಗಿ ಬೆಳೆದು ಕಾಡನ್ನು ಸಮೃದ್ಧಿ ಗೊಳಿಸುತ್ತವೆ.

ಆದರೆ ಈ ಮನುಷ್ಯ ಮಾತ್ರ..! ಯಾರಿಗೂ ಜೀವಿತ ಕಾಲದಲ್ಲಿ ಉಪಯೋಗಕ್ಕೆ ಬಾರದ ಕನಿಷ್ಟ ಪ್ರಾಣಿ. ಎಸ್.ಎಲ್.ಭೈರಪ್ಪ ಅವರ ತಬ್ಬಲಿಯು ನೀನಾದೆ ಮಗನೇ..ಕಾದಂಬರಿಯಲ್ಲಿ ಪುಣ್ಯಕೋಟಿ ಗೋವು ಕಾಳಿಂಗೇಗೌಡನನ್ನು ಸಾತ್ವಿಕವಾಗಿ ಪ್ರಶ್ನಿಸುವಂತೆ..

"ಹಾದಿ ಬೀದಿಯಲಿನ ಹುಲ್ಲು; ಕಸವನು
ಮೇಯ್ದು, ಮನೆಗೈಯ್ದು ನಾನಾಂಮೃತವನೀಯ್ವೆ
ಅದನ್ನುಂಡು ನನಗೆರೆಡು ಬಗೆವ ಮಾನವ..ಹೇಳು,
ನೀನಾರಿಗಾದೆಯೋ ಎಲೈ ಮಾನವಾ?"

ಮೈಸೂರು ಜಿಲ್ಲೆ ಕಬಿನಿ ನದಿ ನಾಲೆಯ ಕಪ್ಪುಸೋಗೆ ಗ್ರಾಮದ ಬಳಿ ೪ ಆನೆಗಳ ಸಾವಿಗೆ ಕಾರಣ ‘ಸೈನಾಯಿಡ್’ ಎಂಬುದು ತಿಳಿದಾಗಿನಿಂದ ನನ್ನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ಆ ‘ಸೈನಾಯಿಡ್ ವಿಷ’ವನ್ನು ರಾಗಿ ಮುದ್ದೆಯಲ್ಲಿ ಸೇರಿಸಿ ಆನೆಗಳಿಗೆ ತಿನ್ನಿಸಿರಬಹುದು ಎಂದು ಸರಕಾರ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೇಳಿರುವುದು ನಿದ್ದೆ ಗೆಡಿಸಿತು. ‘ಸೈನಾಯಿಡ್’ನ್ನು ರಾಗಿ ಮುದ್ದೆಯಲ್ಲಿ ಸೇರಿಸಿ ಆನೆಗಳು ಬರುವ ಕಡೆಯಲ್ಲಿ ಇಟ್ಟಿರಬಹುದು ಅದನ್ನು ತಿಂದು ಆನೆಗಳು ಸಾವನ್ನಪ್ಪಿರಬಹುದು’ ಎಂದು ಸರಕಾರಿ ವಕೀಲರು ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಮತ್ತು ನ್ಯಾಯಮೂರ್ತಿ ಸಭಾಹಿತ್ ನೇತೃತ್ವದ ವಿಭಾಗೀಯ ಪೀಠಕ್ಕೆ ತಿಳಿಸಿದ ಮೇಲೆ..ಹೈಕೋರ್ಟ್ ಸ್ವಯಂ ಪ್ರೇರಣೆಯಿಂದ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

‘ಸ್ಸೈನಾಯಿಡ್’ ತಿಂದ ಆನೆಗಳು ಸಂಕಟ ತಡೆದುಕೊಳ್ಳಲು ಸಾಧ್ಯವಾಗದೇ ನೀರು ಹುಡುಕಿಕೊಂಡು ಹೋಗಿವೆ. ಆ ವೇಳೆ ಕಬಿನಿ ನಾಲೆಯಲ್ಲಿ ನೀರು ಇರುವುದನ್ನು ಕಂಡು ಕುಡಿಯಲು ಇಳಿದಿವೆ. ನಾಲೆ ಆಳವಾಗಿರುವುದರಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಾಲೆಗೆ ಅಲ್ಲಲ್ಲಿ ನಿರ್ಮಿಸಿರುವ ಸೇತುವೆಗಳು ಆನೆಗಳಿಗೆ ತಾಗಿ ಮೈಮೇಲೆ ಗಾಯಗಳಾಗಿರಬಹುದು’ ಎಂದು ಸರಕಾರ ವಿವರಣೆ ನೀಡಿದೆ.

ಆದರೆ ನಿವೃತ್ತ ಅರಣ್ಯಾಧಿಕಾರಿ, ಆನೆಗಳ ಬಗ್ಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಸಿ.ಎಚ್.ಬಸವಪ್ಪನವರ್ ಅಭಿಪ್ರಾಯ
ಸರಕಾರದ ಹೇಳಿಕೆಗೆ ವ್ಯತಿರಿಕ್ತವಾಗಿದೆ. "ಸೈನಾಯಿಡ್ ಸೇವಿಸಿ ಮೃತಪಟ್ಟ ಆನೆಗಳನ್ನು ನಂತರ ಎಳೆದು ನಾಲೆಗೆ ದಬ್ಬಿರಬಹುದು. ಏಕೆಂದರೆ ಭಾರಿ ಕಾಯದ ಆನೆಗಳು ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತವೆ. ನಾಲೆ ಆಳವಾಗಿರುವುದರಿಂದ ಆನೆಗಳು ಯಾವುದೇ ಕಾರಣಕ್ಕೆ ಅದರಲ್ಲಿ ಇಳಿಯಲಾರವು.."

ಒಟ್ಟಾರೆ..ನಾವು ಈ ಆನೆಗಳ ವಾಸಸ್ಥಳಗಳನ್ನು ಅತಿಕ್ರಮಿಸಿದ್ದೆವೆಯೋ..ಅಥವಾ ಆನೆಗಳು ನಮ್ಮ ಆವಾಸ ಸ್ಥಾನಗಳನ್ನು ಅತಿಕ್ರಮಿಸಲು ಹವಣಿಸುತ್ತಿವೆಯೋ..! ಇದು ಇತ್ಯರ್ಥವಾಗಬೇಕಾದ ಪ್ರಶ್ನೆ. ನಾವು ಅರಣ್ಯವನ್ನು ಒತ್ತುವರಿ ಮಾಡಿಕೊಂಡು, ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿ ಕೊಂಡಿದ್ದು, ಪಟ್ಟಾ ಭೂಮಿಯನ್ನಾಗಿಸಿದ್ದು, ಅವುಗಳ ವಾಸಸ್ಥಳಗಳನ್ನು ಹಾಳು ಗೆಡವಿದ್ದು ಎಲ್ಲವೂ ನ್ಯಾಯಾಲಯದ ಗಮನಕ್ಕಿದೆ. ಆದರೆ ಸರಕಾರ, ಅರಣ್ಯ, ಕೃಷಿ ಇಲಾಖೆ, ಪೊಲೀಸ್ ಇವರಿಗೆ ಗಮನಕ್ಕೆ ಬಂದಿಲ್ಲ ಎಂಬುದು ಸೋಜಿಗ! ಇದು ಬಹುಶ: ಜಾಣಗುರುಡು ಅಥವಾ ಪರಸ್ಪರ ‘ಆಂತರಿಕ ಹಸ್ತಲಾಘವ’ ಇದ್ದಿರಬಹುದು.

ಪರಿಹಾರ ಬೇಕೋ? ಮತ್ತೆ ಇದೇ ಸಮಸ್ಯೆ ಮರುಕಳಿಸುವುದು ಬೇಕೋ.. ಸದ್ಯ ನಮ್ಮ ಮುಂದಿರುವ ಪ್ರಶ್ನೆ. ಹಾಗಾಗಿ, ಪರಿಹಾರ ಎಂದರೆ ಅರಣ್ಯ ಇಲಾಖೆ ಸಾರ್ವಜನಿಕರ ಸಹಭಾಗಿತ್ವ (ವನ್ಯಜೀವಿ ಗ್ರಾಮ ರಕ್ಷಣಾ ಪಡೆ) ತಯಾರು ಮಾಡಬೇಕು. ರೈತರು ಅಥವಾ ಹಳ್ಳಿಗರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕೃಷಿ ಕಾಯಕ ಕೈಗೊಳ್ಳದಂತೆ ಮನವೊಲಿಸಬೇಕು. ಗೋಮಾಳಗಳನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿದ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಜೊತೆಗೆ ಅರಣ್ಯದ ಆಯಕಟ್ಟಿನ ಸ್ಥಳಗಳಲ್ಲಿರುವ ಗ್ರಾಮಗಳನ್ನು ತೆರವುಗೊಳಿಸಿ ಅವರಿಗೆ ಯೋಗ್ಯ ಪುನರ್ವಸತಿ ಕಲ್ಪಿಸಬೇಕು. ಅರಣ್ಯದ ಒಳಗಡೆ ಕೃತಕವಾಗಿ ಹುಲ್ಲುಗಾವಲು, ಕುಡಿಯುವ ನೀರಿನ ಹೊಂಡಗಳನ್ನು ನಿರ್ಮಿಸುವತ್ತ ತುರ್ತಾಗಿ ಗಮನಹರಿಸಬೇಕು. ಸಾದ್ಯವಾಗದ ಪಕ್ಷದಲ್ಲಿ ಅರಣ್ಯದ ಅಂಚಿನಸುತ್ತ ಆನೆಗಳು ಖುಷಿಯಿಂದ ತಿನ್ನಲು ಬಯಸುವ ಬಿದಿರು, ನಾಲ್ಕಾರು ಜಾತಿಯ ಪೌಷ್ಠಿಕವಾದ ಹುಲ್ಲುಗಾವಲು, ಕಬ್ಬು ಹಾಗು ಕುಡಿಯುವ ನೀರಿನ ಹೊಂಡಗಳನ್ನು ನಿರ್ಮಿಸಿ ಸ್ಥಳೀಯರ ದೇಖ್-ರೇಖಿಯಲ್ಲಿ ಉಳಿಸಿ-ಬೆಳೆಸುವ ಪ್ರಯತ್ನಕ್ಕೆ ಮುನ್ನುಡಿ ಬರೆದರೆ ಆನೆಗಳ ನಿರಂತರ ಹನನಕ್ಕೆ ಕಡಿವಾಣ ಬೀಳುವ ಸಾಧ್ಯತೆ ಇದೆ.

ಆನೆಗಳು ಆಹಾರ ಹಾಗು ಕುಡಿಯಲು ನೀರು ಅರಸಿ ನಾಡಿಗೆ ಬರುತ್ತಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ನಾವೇ ಕಸಿದು ಕೊಂಡಿರುವ ಈ ಮೂಲಭೂತ ಅವಶ್ಯಕತೆಗಳನ್ನು ನಾವೇ ಮುಂದಾಗಿ ಅವುಗಳಿಗೆ ಒದಗಿಸಲು ಸಿದ್ಧರಾದರೆ ಒಮ್ಮೆ ನಾವು, ಮತ್ತೊಮ್ಮೆ ಅವು ಹೀಗೆ ಪ್ರಾಣ ಕಳೆದುಕೊಳ್ಳುವ ಈ ಮುಸುಕಿನ ಗುದ್ದಾಟಕ್ಕೆ ತೆರೆ ಬೀಳುವುದರಲ್ಲಿ ಸಂಶಯವಿಲ್ಲ. ನಾವು ಬುದ್ಧಿವಂತರು..ಅವು ಮೂಕ ಪ್ರಾಣಿಗಳು. ಮನುಷ್ಯನ ಯುಕ್ತಿ, ಉಪಾಯಗಳ ಮುಂದೆ ಯಾವ ಪ್ರಾಣಿ ಈಡಾದೀತು? ಹಾಗಾಗಿ ಮಾನವೀಯತೆಯ ಆಧಾರದ ಮೇಲೆ ಈ ಪ್ರಯತ್ನಕ್ಕೆ ನಾವು ಮುನ್ನುಡಿ ಬರೆಯಬೇಕಿದೆ.

ಉದಾಹರಣೆಗೆ ನೋಡಿ..೨ನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಥೈಲ್ಯಾಂಡ್ ನಲ್ಲಿ ಕ್ವಾಯಿ ನದಿಯ ಮೇಲೆ ಯುದ್ಧದ ಕೈದಿಗಳು ಸೇತುವೆಯನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲಿನ ಬೌದ್ಧ ಭಿಕ್ಕುಗಳು ಇಂದು ಆ ಕಾಡಿನ ಹುಲಿಗಳೊಂದಿಗೆ ಸಖ್ಯ ಬೆಳೆಸಿ ಅತ್ಯಂತ ಸೌಹಾರ್ದಯುತವಾಗಿ ಬದುಕು ಸವೆಸುತ್ತಿದ್ದಾರೆ. ಕೆಲವರು ತಮ್ಮ ಬೌದ್ಧ ಮಂದಿರಗಳಲ್ಲಿ ಸಾಕಿದ್ದಾರೆ ಕೂಡ. ಹುಲಿಗಳು ಮತ್ತು ಭಿಕ್ಕುಗಳ ಮಧ್ಯೆ ಸಂವಹನ ಕೂಡ ಇದೆ. ಕ್ವಾಯಿ ನದಿ ಹರಿಯುವ ಮಯನ್ಮಾರ್ ಕಾಡಿನಲ್ಲಿಯೂ ಕೂಡ ಚಿರತೆಗಳೊಂದಿಗೆ ಸೌಹಾರ್ದಯುತವಾಗಿ ಬದುಕುವ ಬುಡಕಟ್ಟು ಜನರಿದ್ದಾರೆ ಎಂದರೆ ನಂಬುತ್ತೀರಾ? ಸೋಜಿಗ ಎಂದರೆ ಕಂಚನಬುರಿಯಲ್ಲಿ ಹುಲಿಗಳು ಸಹ ಬೌದ್ಧ ಭಿಕ್ಕುಗಳಾಗಿವೆ..!

ಭಾರತದಲ್ಲಿ ನಾವು ಮನುಷ್ಯರು ಇಂದು ಕ್ರೂರ ಮೃಗಗಳಂತೆ ವರ್ತಿಸುತ್ತಿದ್ದೇವೆ. ಎಲ್ಲದಕ್ಕೂ ಪಾಶ್ಚಾತ್ಯ/ರ ಉದಾಹರಣೆಗಳನ್ನು ಕೊಡುವ ನಾವು ಇಂತಹ ಪಾಲಿಸಲು ಯೋಗ್ಯವಾದ ಹಾದಿಗಳನ್ನೇಕೆ ಪ್ರಚಾರಮಾಡುವುದಿಲ್ಲ? ಅಥವಾ ಅನುಕರಣಯೋಗ್ಯ ಎಂದು ಭಾವಿಸುವುದಿಲ್ಲ? ನಮಗೆ ಅನುಕೂಲವಾಗಬಲ್ಲ ವಿಷಯಗಳು ಮಾತ್ರ ಕಾನೂನಾಗಲಿ ಎಂಬ ಸ್ವಾರ್ಥಿಗಳು ನಾವು; ಯಾರ ಹಕ್ಕುಗಳನ್ನು ಕಸಿದುಕೊಂಡರೂ ಪರವಾಗಿಲ್ಲ!