ನೀನಿರುವ ನನ್ನೊಳಗೆ

ನೀನಿರುವ ನನ್ನೊಳಗೆ

ಕವನ

ನೀನಿರುವ ನನ್ನೊಳಗೆ

ಏನಿದೆಯೋ ಕಾಣೆನೆ

ನಾನಿರುವ ನನ್ನೊಳಗೆ

ನೀನಿರುವೆ ಹರಿಯೆ

 

ಬಂಧನದ ಸುಖದೊಳಗೆ

ಬಂಧಿಪುದು ಸರಿಯೆ

ಬಂದೆರಗಿದಂತ ಕನಸೆ

ಬಂದಿರದ ನನಸೊಳಗೆ

 

ಒಲವಿನಲಿ ಸುಖವಿಲ್ಲ

ಒಲವಿನೊಳು ಬಲವಿಲ್ಲ

ಒಲವಾಳ ಗೆಲುವಿಲ್ಲ

ಒಲವೊಳಗೆ ಭವವಿಲ್ಲ

 

ತನುವೊಳಗೆ ನೀ ಬೆರೆತು

ಮನಸೊಳಗೆ ನೀ ನೆಲೆಸು

ನೀನೆನ್ನ ಪೊರೆಯುತಲು

ನಾನಿನ್ನ ಸೇರುವೆನು

***

ಗಝಲ್

ಕೀಳದಿರಿ ಹೂವುಗಳ ಗಿಡದಲಿರುವವರೆಗೆ ಹೀಗೆ

ಕೇಳದಿರಿ ಬಂಧುಗಳು ಮರೆಯಾಗುವವರೆಗೆ ಹೀಗೆ

 

ಚಿತ್ರಪಟದೊಳಗೆ ರೇಖೆಗಳೆಲ್ಲ ಮಾಸುವವರೆಗೆ ಹೀಗೆ

ಚೈತ್ರವಿಲ್ಲದ ಮೋಹದೊಳು ಸೋಲಾಗುವವರೆಗೆ ಹೀಗೆ

 

ಮಾತೆಲ್ಲವೂ ಚಿಂತನೆಯೊಳು ಕತೆಯಾಗುವವರೆಗೆ ಹೀಗೆ

ಮಾತಿನೊಳಗಿನ ಮುತ್ತು ಒಡೆದು ಹೋಗುವವರೆಗೆ ಹೀಗೆ

 

ಬಸಿರೊಳಗೆ ಮಗುವೊಂದು ಕುಳಿತಿರುವವರೆಗೆ ಹೀಗೆ

ಬಿಸಿಯಾದ ಹೃದಯದೊಳು ಸವಿಯಿರುವವರೆಗೆ ಹೀಗೆ

 

ಕನಸೆಲ್ಲವು ಮಗದೊಮ್ಮೆ ಸೋರುವವರೆಗೆ ಹೀಗೆ

ಈಶನ ಬದುಕೆಲ್ಲವೂ ಮುಗಿಯುವವರೆಗೆ ಹೀಗೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್