ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ
’ಕವಿಕುಮಾರಸಂಭವ’ವಾದ ಮೇಲೆ ನಾಮಕರಣವೂ ’ನಾಮಕರಣೋತ್ಸವ’ ಎಂಬ ಕವಿತೆಯೊಂದಿಗೆ ನೆರವೇರಿತು.
’ಚಕ್ರಾಧಿಪತ್ಯಗಳನಾಳ್ವವರಿಗೇನಿಹುದೆ
ಕವಿಯ ಸಂತೋಷದೊಳಗೊಂದು ಬಿಂದು?’
ಎಂಬ ಸಾಲುಗಳು ಕುಮಾರಸಂಭವ ಹಾಗೂ ಕುಮಾರನಿಗೆ ನಾಮಕರಣ ನಡೆಯುತ್ತಿರುವುದರಿಂದ ಸಂತುಷ್ಟಗೊಂಡಿರುವ ಕವಿಗೆ ಚಕ್ರವರ್ತಿಗಳ ಸುಖ ತನ್ನ ಸಾಗರದಷ್ಟು ಸುಖದ ಮುಂದೆ ಒಂದು ಹನಿ ಎಂಬಂತೆ ಭಾಸವಾಗುತ್ತಿದೆ. ಮುಂದುವರೆದು,
ವಿದ್ಯೆ ಕೀರ್ತಿಗಳೊಂದುಗೂಡಿದಂದದೊಳಿಂದು
ಲೋಕಕೈತಂದಿಹನು ಪೂರ್ಣ-ಇಂದು!
ಎನ್ನುತ್ತಾರೆ. ಕವಿಗೆ ವಿದ್ಯೆ ಇದೆ. ಆದರೆ ಕೀರ್ತಿ! ಅದೂ ಇತ್ತು. ಆದರೆ ಅದನ್ನು ’ಕೀರ್ತಿ ಶನಿ ತೊಲಗಾಚೆ’ ಎಂದು ದೂರಮಾಡಿಬಿಟ್ಟಿದ್ದಾರೆ! ವಿದ್ಯೆ ಕೀರ್ತಿ ಎರಡು ಸಮ್ಮಿಳಿತಗೊಂಡಂತಹ ರೂಪದಲ್ಲಿ ಪೂರ್ಣ-ಇಂದು (ಪೂರ್ಣಚಂದ್ರ) ಬಂದುಬಿಟ್ಟಿದ್ದಾನೆ. ಆತ ಬಂದುದು ಸಂದವರ ಪುಣ್ಯವೋ? ಬಂದವರ ಪುಣ್ಯವೋ? ಅನ್ನಿಸಿಬಿಟ್ಟಿದೆ ಕವಿಗೆ! ಯಾವ ತಂದೆ-ತಾಯಿಯರಿಗೇ ಆಗಲಿ ಮಕ್ಕಳ ಮುಖಾಂತರ ಬರುವ ಕೀರ್ತಿ ಅಚ್ಚುಮೆಚ್ಚು!
ನಂತರದ ಅನೇಕ ಕವಿತೆಗಳಲ್ಲಿ ತಮ್ಮ ಕಂದ, ಬಾಲಕ ತೇಜಸ್ವಿಯ ಆಟಪಾಠಗಳನ್ನು, ಅವುಗಳಿಂದ ಕವಿಗಾಗುತ್ತಿದ್ದ ಸಂತೋಷವನ್ನು, ಅದರಿಂದ ಅವರು ಅನುಭವಿಸುತ್ತಿದ್ದ ದಿವ್ಯಾನಂದವನ್ನು ಕುವೆಂಪು ಕಟ್ಟಿಕೊಟ್ಟಿದ್ದಾರೆ. ’ತನಯನಿಗೆ’ ಎಂಬ ಕವಿತೆಯಲ್ಲಿ ತೇಜಸ್ವಿಗೆ ಸೂರ್ಯೋದಯದ ಚೆಲುವನ್ನು ಕವಿ ಪರಿಚಯ ಮಾಡಿಕೊಡುವುದು ಹೀಗೆ.
ಮೂಡಿ ಬಂದಾ ಉದಯರವಿ ನೂಡು ಕಂದಾ!
ಬಿಸಿಲ ನೆವದಲಿ ಶಿವನ ಕೃಪೆಯ ತಂದ!
ಹಬ್ಬುತಿದೆ ಜಗಕೆಲ್ಲ ಹೊಂಬೆಳಕಿನಾನಂದ:
ಏನು ಚಂದಾ ಲೋಕವಿದು ಏನು ಚಂದ!
ಮುಂದುವರೆದು ಸೂರ್ಯೋದಯದ ವರ್ಣವೈಭವವನ್ನು, ಸೂರ್ಯೋದಯದ ನಂತರ ಚೈತನ್ಯಮಯವಾಗುವ ಜಗತ್ತನ್ನೂ, ಹಕ್ಕಿಗಳ ಹಾಡನ್ನೂ ಮಗುವಿಗೆ ಕೇಳು ಕಂದಾ ಎಂದು ಹೇಳುವ ಬಗೆ ಹೀಗಿದೆ.
ಓಕುಳಿಯನಾಡುತಿದೆ ಕೆನೆಮುಗಿಲ ಲೋಕದಲಿ
ನಿನ್ನ ಕೆನ್ನೆಯ ಕೆಂಪು: ಕಾಣು, ಕಂದಾ!
ಜೋಗುಳವನುಲಿಯುತಿದೆ ಹಕ್ಕಿಗಳ ಹಾಡಿನಲಿ
ನಿನ್ನ ಸವಿಗೊರಲಿಂಪು: ಕೇಳು, ಕಂದಾ!
ಕವಿಗೆ ಇಷ್ಟೆಲ್ಲಾ ಆನಂದವನ್ನುಣ್ಣಿಸುತ್ತಿರುವ ಕಂದನಿಗೆ ಕೊನೆಗೆ ಕವಿಯಿಂದ ಬಂದ ಶುಭ ಹಾರೈಕೆ ಏನು ಗೊತ್ತೇ?
ವಿಶ್ವವೆಲ್ಲಾ ಸೇರಿ ವಿಶ್ವಾಸದಲಿ ಕೋರಿ
ಪಡೆದಂದವೀಯೊಡಲ ಚಂದ, ಕಂದಾ.
ವಿಶ್ವಾತ್ಮವನೆ ಸಾರಿ, ವಿಶ್ವದೊಲವನೆ ತೋರಿ,
ವಿಶ್ವದಾನಂದವಾಗೆನ್ನ ಕಂದಾ!
ತನ್ನ ಕಂದ ವಿಶ್ವದ ಆನಂದವಾಗಬೇಕು ಎನ್ನುವ ಹಾರೈಕೆ-ಆಶೀರ್ವಾದಕ್ಕಿಂತ ಹೆಚ್ಚಿನದೇನು ಬೇಕು?
’ತನುಜಾತನಹುದಾತ್ಮಜಾತನುಂ’ ಎಂಬುದೊಂದು ಕವಿತೆಯಿದೆ. ದಂಪತಿಗಳ ಶರೀರದಿಂದ ಹುಟ್ಟಿದ ಮಗು ಎನ್ನುವುದಕ್ಕಿಂತ ಅವರಿಬ್ಬರ ಆತ್ಮದಿಂದ ಹುಟ್ಟಿದ ಮಗು ಎಂಬುದನ್ನು ಅದ್ಭುತವಾಗಿ ಕವಿ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ
ಬರಿಯ ತನುಜಾತನಲ್ಲಹುದಾತ್ಮಜಾತನುಂ.
ಮೆಯ್ಯ ಭೋಗಕೆ ಮನದ ಯೋಗದ ಮುಡಿಪನಿತ್ತು
ನಮ್ಮಾಶೆ ಬಿಜಯಗೈಸಿದೆ ನಿನ್ನನೀ ಜಗಕೆ
ಪೆತ್ತು. ತನುವಿನ ಭೀಮತೆಗೆ ಮನದ ಭೂಮತೆಯೆ
ಕಾರಣಂ. ಕಾಯ ಕಾಂತಿಗೆ ತಾಯಿ ತಂದೆಯರ
ಮೆಯ್ಯ ತೇಜಂ ಮಾತ್ರಮಲ್ತಾತ್ಮದೋಜಮುಂ
ಕಾರಣಂ.
ಇದೊಂದು ಅದ್ಭುತವಾದ ಹಾಗೂ ಭವ್ಯವಾದ ಪರಿಕಲ್ಪನೆ. ತಾಯಿ-ತಂದೆ ಮತ್ತು ಮಗುವಿನ ಸಂಬಂಧವನ್ನು ಆಧ್ಯಾತ್ಮಿಕವಾಗಿ ಕವಿ ಕಂಡಿರುವ ಹಾಗೂ ಅದನ್ನು ಸರಳವಾಗಿ ಸಹೃದಯರಿಗೆ ಮನಗಾಣಿಸಿರುವ ಪರಿ ಅನನ್ಯವಾಗಿದೆ. ಗಂಡು ಹೆಣ್ಣಿನ ಪರಸ್ಪರ ಆಕರ್ಷಣೆ, ಭೋಗ ಇವುಗಳ ಜೊತೆಗೆ ಮನದ ಯೋಗದ ಮುಡಿಪನ್ನು ಕಟ್ಟುವುದರ ಹಂಬಲದ ಮೂರ್ತರೂಪವೇ ಮಗು! ಶರೀರದ ಸೌಂದರ್ಯಕ್ಕೆ ಮನಸ್ಸಿನ ಭೂಮತೆಯೇ ಕಾರಣ! ಮಗುವಿನ ಶರೀರದ ತೇಜಸ್ಸಿಗೆ, ತಾಯಿ ತಂದೆಯರ ಶರೀರದ ತೇಜಸ್ಸು ಮಾತ್ರ ಕಾರಣವಲ್ಲ; ಆತ್ಮದ ತೇಜಸ್ಸೂ ಕಾರಣ! ಕವಿತೆಯಲ್ಲಿ, ಕವಿಗೆ ತನ್ನ ಮಗನು ತನುಜಾತನು ಅನ್ನುವುದಕ್ಕಿಂತ ಆತ್ಮಜಾತನು ಎಂಬುದರಲ್ಲೇ ಹೆಚ್ಚು ಒಲುಮೆ. ಅದಕ್ಕೆ ಕವಿ ಕಂಡುಕೊಂಡ ಕಾರಣಗಳು ಸಕಾರಣಗಳೇ ಆಗಿವೆ.
ಕವಿಯ ಬೃಹದಾಲೋಚನಾ ಸಾರಂ,
ಕವಿಕಲ್ಪನೆಯ ಮಹಾ ಭೂಮ ಭಾವಂಗಳುಂ,
ಕವಿ ಶರೀರದ ನಾಳದಲಿ ಹರಿವ ನೆತ್ತರೊಳ್
ತೇಲುತಿಹ ಸಹ್ಯಾದ್ರಿ ಪರ್ವತಾರಣ್ಯಮುಂ,
ಕವಿ ಸವಿದ ಸೂರ್ಯ ಚಂದ್ರೋದಯಸ್ತಾದಿಗಳ
ಜಾಜ್ವಲ್ಯ ಸೌಂದರ್ಯಮುಂ, ಜೀವ ದೇವರಂ
ಹುಟ್ಟು ಸಾವಂ ಸೃಷ್ಟಿಯುದ್ದೇಶಮಿತ್ಯಾದಿ
ಸಕಲಮಂ ಧ್ಯಾನಿಸಿ ಮಥಿಸಿ ಮುಟ್ಟಿಯನುಭವಿಸಿ
ಕಟ್ಟಿದ ಋಷಿಯ ’ದರ್ಶನ’ದ ರಸ ಮಹತ್ವಮುಂ,
ಪೃಥಿವಿ ಸಾಗರ ಗಗನಗಳನಪ್ಪಿ ಕವಿ ಪೀರ್ದ
ನೀಲ ಶ್ಯಾಮಲ ಭೀಮ ಮಹಿಮೆಯುಂ, ತತ್ತ್ವದಿಂ
ಕಾವ್ಯದಿಂ ವಿಜ್ಞಾನದಿಂದಂತೆ ಋಷಿಗಳಿಂ
ಕವಿಗಳಿಂದಾಚಾರ್ಯವರ್ಯದಿಂ ಪಡೆದಖಿಲ
ಸುಜ್ಞಾನ ಕೃಪೆಯುಂ ನೆರಪಿ ಪಡೆದಿಹವು ನಿನ್ನ
ವ್ಯಕ್ತಿತ್ವಮಂ: ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ,
ತೇಜಸ್ವಿ: ತನುಜಾತನಹುದಾತ್ಮಜಾತನುಂ!
ಕವಿ ತನಗೆ ಲಭಿಸಿದ ದರ್ಶನದಿಂದ, ತಾನು ಪಡೆದಿದ್ದು ಕೇವಲ ಮಗುವಲ್ಲ; ಒಂದು ವ್ಯಕ್ತಿತ್ವವನ್ನೇ ಪಡೆದಿದ್ದೇನೆ ಎಂಬ ಭಾವ ಸ್ಫುರಿಸಿದೆ. ಎಲ್ಲಾ ತಾಯಿ ತಂದೆಯರಿಗೆ ತಮ್ಮ ತಮ್ಮ ಮಗುವನ್ನು ಕಂಡಾಗ, ಅದರ ಆಟಪಾಠಗಳನ್ನು ನೋಡಿದಾಗ ಯಾವುದೋ ಒಂದು ಕ್ಷಣದಲ್ಲಿ ಅಲೌಖಿಕವಾದ ಆನಂದ ಲಭ್ಯವಾಗುತ್ತದೆ. ಆದರೆ ಅದು ಆ ಕ್ಷಣಕ್ಕೆ ಕಾಣುತ್ತದೆ; ಮರೆಯಾಗುತ್ತದೆ! ದರ್ಶನಕಾರನಾದ ಕವಿ ಮಾತ್ರ ಅಂತಹ ಅನುಭವವನ್ನು ಕಲಾರೂಪದಲ್ಲಿ ಅಭಿವ್ಯಕ್ತಿಗೊಳಿಸಬಲ್ಲ.
’ಅಮೃತಕಾಗಿ’ ಎನ್ನುವ ಕವಿತೆಯಲ್ಲಿ ಅಳುತ್ತಿರುವ ಮಗು
ಹಸಿವಾಗುತಿದೆ ಅಮ್ಮಾ,
ಹಾಲನೂಡಮ್ಮಾ:
ಎಂದು ಕೇಳುತ್ತಿರುವಂತೆ ಕವಿಗೆ ಭಾಸವಾಗುತ್ತದೆ.
ನಿನಗರಿದೆ ನನ್ನ ನೆಲೆ?
ನಿನಗರಿದೆ ನನ್ನ ಬೆಲೆ?
ಶಿಶುವಾನು ಶಿವನ ಕಳೆ;
ಕವಿ ಕಲೆಯ ಕೀರ್ತಿ ಬೆಳೆ;
ಒಲುಮೆ ಹಣ್ಣಾಗಿ,
ಅಮೃತದ ಕುಮಾರನಾಂ
ಜನಿಸಿಹೆನಮೃತಕಾಗಿ!
ಎಂದು ಕೇಳುತ್ತಿರುವಂತೆ ಕವಿಗೆ ಮನಸ್ಸಿಗೆ ಗೋಚರಿಸುತ್ತದೆ! ಮಗು ತೇಜಸ್ವಿಯನ್ನು ಕವಿ ’ಕುಣಿಯುತ ಬಾ, ಕಂದಯ್ಯ’ ಎಂದು ಆಟವಾಡಿಸುವಾಗ, ವಿಶೇಷವಾಗಿ ನವಿಲು, ಜಿಂಕೆಮರಿ, ಹಕ್ಕಿ, ಹಕ್ಕಿಗಳ ಹಾಡು ಮೊದಲಾದವನ್ನು ಮಗುವನ್ನಾಡಿಸುತ್ತಲೇ ಮಗುವಿಗೆ ಪರಿಚಯ ಮಾಡಿಸುವ ತಂದೆಯಾಗಿ ಕುವೆಂಪು ಕಾಣುತ್ತಾರೆ.
’ಕಂದನ ಮೈ’ ಕವಿತೆಯಲ್ಲೂ ಮಗುವಿನಿಂದುಂಟಾದ ದಿವ್ಯಾನಂದವನ್ನು ಕಟ್ಟಿ ಕೊಟ್ಟಿದ್ದಾರೆ.
ದೇವರ ಹರಕೆಯ ಬಾನಿಂ ಭೂಮಿಗೆ
ನೀಡಿದ ಕೈ ಈ ಕಂದನ ಮೈ!
ಈ ಮುದ್ದೀ ಸೊಗಸೀ ಪೆಂಪಿಂಪಂ
ಮಾಡಬಲ್ಲುದೇನನ್ಯರ ಕೈ?
ದೇವರ ಹರಕೆಗೆ ಕೈ ಬಂದು, ಆಕಾಶದಿಂದ ಭುಮಿಗೆ ಚಾಚಿರುವಂತೆ ಮಗು ತೇಜಸ್ವಿ ಕವಿಗೆ ಕಂಡಿದೆ. ಅದರ ಒಂದು ಸ್ಪರ್ಷ ಬೇರೆಯಾರಿಂದಲೂ ಸಿಗದಂತಹ ಅನುಭವವನ್ನು ನೀಡುತ್ತದೆ. ಮುಂದೆ ಮಗು ತೇಜಸ್ವಿಯ ವರ್ಣನೆ ಬರುತ್ತದೆ.
ನೋಡಾ, ತುಂಬು ಸರೋವರವೀ ಕಣ್:
ಆಕಾಶದ ಶಿವನಂ ಪ್ರತಿಫಲಿಸಿ
ಅತ್ತಿಂದಿತ್ತಲ್ ಇತ್ತಿಂದತ್ತಲ್
ಚಲಿಸುತ್ತಿವೆ ಸಾಗರಗಳ ಸಂಚಲಿಸಿ!
ಅಣ್ಣನ ಕಾಲಿದು ಪುಣ್ಯದ ಕಾಲು:
ಮೇರುಪರ್ವತವನೇರಿದ ಕಾಲು;
ದೇವಗಂಗೆಯೊಳೀಜಿದ ಕಾಲು;
ಹೊನ್ನಿನ ಹುಡಿಯಲಿ, ಹಾಲ್ಕೆನೆ ಕೆಸರಲಿ
ಸಿಂಗರಗೊಂಡಿವೆ ಈ ಕಾಲು!
ಕನ್ನಡಿ ಹಿಡಿದಿದೆ ಬ್ರಹ್ಮಾಂಡಕೆ ಈ
ಕಂದನ ಮುಖದರ್ಪಣ ಕಾಣಾ!
ಸೂರ್ಯ ಚಂದ್ರರಲೆಯುತ್ತಿಹರಲ್ಲಿ;
ಉರಿದಿವೆ ತಾರಾ ಕೋಟಿಗಳಲ್ಲಿ;
ಹೊಳೆ ತೊರೆ ಹರಿದಿವೆ; ಮುನ್ನೀರ್ ಮೊರೆದಿವೆ;
ಪರ್ವತ, ಕಾನನ, ಖಗಮೃಗ ಮೆರೆದಿವೆ;
ಸೃಷ್ಟಿಯೊಳೇನೇನಿಹುದೋ ಎಲ್ಲಾ
ಈ ಮುಖದೊಳೆ ಕವಿ ಕಾಣಲು ಬಲ್ಲ:
ನಿನಗೂ ಕಾಣುವ ಕಣ್ಣಿದ್ದರೆ ಕಾಣಾ,
ಬರೆದುದನೋದುವ ಬಲ್ಜಾಣಾ!
Comments
ಉ: ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ