ನೀನೇ ಎಲ್ಲಾ, ಅಯೋಧ್ಯಾ ರಾಮ ಲಲ್ಲಾ…!!

ನೀನೇ ಎಲ್ಲಾ, ಅಯೋಧ್ಯಾ ರಾಮ ಲಲ್ಲಾ…!!

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಹುಟ್ಟಿದ ಪುಣ್ಯ ಭೂಮಿ ಅಯೋಧ್ಯಾದಲ್ಲಿ ಇಂದು (ಜನವರಿ ೨೨) ರಾಮಲಲ್ಲಾ ಅರ್ಥಾತ್ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಟೆಯ ಕಾರ್ಯಕ್ರಮ ಬಹಳ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನಡೆದಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಿದರು. ಪ್ರಜಾಪ್ರಭುತ್ವ ದೇಶವೊಂದರ ಪ್ರಧಾನಿ ಆ ದೇಶದ ಸಾಮಾನ್ಯರಲ್ಲಿ ಸಾಮಾನ್ಯವಾಗಿರುವ ನಾಗರಿಕನ ಪ್ರತಿನಿಧಿಯಾಗಿರುತ್ತಾನೆ. ಪ್ರಧಾನಿ ಜೊತೆ, ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದರ ಸರಸಂಘಚಾಲಕರಾದ ಡಾ. ಮೋಹನ್ ರಾವ್ ಭಾಗವತ್, ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇವರ ಅಧ್ಯಕ್ಷರಾದ ಶ್ರೀ ಮಹಂತ ನೃತ್ಯಗೋಪಾಲ್ ದಾಸ್ ಇವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಟೆಯ ಶುಭಸಂದರ್ಭದಲ್ಲಿ ಹಾಜರಿದ್ದರು.

ರಾಮನ ಹುಟ್ಟೂರಿನಲ್ಲಿ ಬಾಲರಾಮನ ಈ ಮೂರ್ತಿಯ ಪ್ರತಿಷ್ಟೆಗೆ ಹಿಂದೂಗಳು ಸುಮಾರು ೫೦೦ಕ್ಕೂ ಹೆಚ್ಚು ವರ್ಷ ಕಾಯಬೇಕಾಯಿತು. ಆದರೆ ತಡವಾದರೂ ಸರಿಯಾದ ಸಮಯದಲ್ಲಿ ಈ ಶುಭ ಕಾರ್ಯಕ್ರಮ ನಡೆದದ್ದು ಸರ್ವ ಭಾರತೀಯರ, ಅದರಲ್ಲೂ ಹಿಂದೂಗಳ ಸಂಭ್ರಮಕ್ಕೆ ಕಾರಣವಾಗಿದೆ. ದಾಳಿಕೋರ ಮುಸ್ಲಿಂ ರಾಜರು ಭಾರತಕ್ಕೆ ದಂಡೆತ್ತಿ ಬಂದ ಸಂದರ್ಭದಲ್ಲಿ ಇಡೀ ದೇಶ ಹಿಂದೂ ದೇಶವಾಗಿಯೇ ಇತ್ತು. ಆ ಕಾರಣದಿಂದಲೇ ಹಿಂದೂಸ್ತಾನ ಎಂಬ ಹೆಸರು ನಮ್ಮ ಭಾರತ ದೇಶಕ್ಕಿದೆ. ವಿವಿಧ ರಾಜಕೀಯ ಕಾರಣಗಳಿಂದ ಹಲವರಿಗೆ ಹಿಂದೂಸ್ತಾನ ಎಂದು ಕರೆಯಲು ಸಂಕೋಚ, ನಾಚಿಕೆಯಾಗುತ್ತದೆ. ಆದರೆ ನೆನಪಿರಲಿ ಈಗಲೂ ಪಾಕಿಸ್ತಾನ, ಬಾಂಗ್ಲಾದೇಶದಂತಹ ಮುಸ್ಲಿಂ ರಾಷ್ಟ್ರಗಳು ಭಾರತವನ್ನು ಕರೆಯುವುದು ‘ಹಿಂದೂಸ್ತಾನ’ ಎಂದೇ. ಆದರೆ ನಮ್ಮ ದೇಶದಲ್ಲಿ ಮಾತ್ರ ‘ಇಂಡಿಯಾ’ ಎಂದು ಕರೆಯುವುದೇ ನಮ್ಮ ಹೆಮ್ಮೆಯ ಪ್ರತೀಕ ಎಂದು ನಂಬಿಕೊಂಡವರಿದ್ದಾರೆ. ೧೫೨೮ರಲ್ಲಿ ಭಾರತದಲ್ಲಿ ಮೊದಲ ಮೊಘಲ್ ದೊರೆ ಬಾಬರ್ ನ ಆಜ್ಞೆಯ ಮೇರೆಗೆ ಅಯೋಧ್ಯೆಗೆ ದಂಡೆತ್ತಿ ಬಂದ ಆತನ ಸೇನಾ ಮುಖ್ಯಸ್ಥ ಮೀರ್ ಬಾಕಿ ಆ ಕಾಲದಲ್ಲಿ ಅಲ್ಲಿದ್ದ ರಾಮ ಮಂದಿರವನ್ನು ಧ್ವಂಸಗೊಳಿಸಿ ೧೫೨೯ರಲ್ಲಿ ಮಸೀದಿಯೊಂದನ್ನು ನಿರ್ಮಾಣ ಮಾಡಿದ. ತನ್ನ ಒಡೆಯನ ಮೇಲಿನ ನಿಷ್ಟೆಯನ್ನು ತೋರಿಸಲು ಆತ ಈ ಮಸೀದಿಗೆ ಬಾಬರ್ ಮಸೀದಿ ಎಂದು ಹೆಸರಿಟ್ಟ. ಕ್ರಮೇಣ ಹಿಂದೂಗಳಿಗೆ ತಮ್ಮ ಆರಾಧ್ಯ ದೇವ ರಾಮನಿಗೆ ಆತನ ಜನ್ಮ ಸ್ಥಾನದಲ್ಲೇ ಮಂದಿರ ಭಾಗ್ಯವಿಲ್ಲ ಎನ್ನುವ ಕೊರತೆ ಎದ್ದು ಕಾಣತೊಡಗಿ (ಸುಮಾರು ೩೦೦ ವರ್ಷಗಳ ಬಳಿಕ) ೧೮೫೩ರಲ್ಲಿ ನಿರ್ಮೋಹಿ ಅಖಾಡಾದವರು ಬಾಬರಿ ಮಸೀದಿಯ ಸ್ವಲ್ಬ ಭಾಗವನ್ನು ಆಕ್ರಮಿಸಿ ಅದರಲ್ಲಿ ಮಂದಿರ ಕಟ್ಟುವ ಪ್ರಯತ್ನ ಮಾಡಿದ್ದರು. ಆದರೆ ಅದನ್ನು ಅನುಮತಿ ಸಿಗಲಿಲ್ಲ. ೧೮೫೫ರಲ್ಲಿ ಸ್ಥಳೀಯ ಆಡಳಿತ ಹಿಂದೂಗಳಿಗೆ ಮತ್ತು ಮುಸ್ಲಿಮರಿಗೆ ಜಮೀನನ್ನು ವಿಭಜಿಸಿ ಹಂಚಿಕೆ ಮಾಡಿತು. ಆದರೆ ಆ ಸಮಯದಲ್ಲಿ ಅವಧ್ ನ ನವಾಬ ರಚನೆ ಮಾಡಿದ್ದ ಸಮಿತಿಯೊಂದು ಬಾಬರಿ ಮಸೀದಿಯು ಮಂದಿರವನ್ನು ಕೆಡವಿ ನಿರ್ಮಾಣ ಮಾಡಿದ್ದಲ್ಲ ಎನ್ನುವ ತೀರ್ಪು ನೀಡಿತ್ತು. ೧೮೮೫ರಲ್ಲಿ ಈ ಸಂಬಂಧಿ ಕಾನೂನು ಹೋರಾಟಗಳು ಪ್ರಾರಂಭವಾದವು. ಶತಮಾನಗಳ ಕಾಲ ನಡೆದ ಈ ಹೋರಾಟವು ಸ್ವಾತಂತ್ರ್ಯದ ಬಳಿಕ ಇನ್ನಷ್ಟು ಕಾವು ಪಡೆಯಲಾರಂಭಿಸಿತು. ೧೯೫೦ರಲ್ಲಿ ಫೈಜಾಬಾದ್ ನ್ಯಾಯಾಲಯದಲ್ಲಿ ರಾಮ ಲಲ್ಲಾನ ಪೂಜೆಗೆ ಅನುಮತಿ ನೀಡಬೇಕು ಎಂದು ಅರ್ಜಿಗಳು ಸಲ್ಲಿಕೆಯಾಗಿದ್ದವು. ಕೋರ್ಟ್ ಈ ಅರ್ಜಿಯನ್ನು ಮಾನ್ಯ ಮಾಡಿ ಪೂಜೆಗೆ ಅನುಮತಿ ನೀಡಿತು. ಆದರೆ ಮಸೀದಿಯ ಒಳ ಆವರಣ ಪ್ರವೇಶಿಸದಂತೆ ಬೀಗ ಹಾಕಲು ಆದೇಶ ಮಾಡಿತ್ತು. 

೧೯೮೪ರಲ್ಲಿ ವಿಶ್ವ ಹಿಂದೂ ಪರಿಷತ್ ರಾಮಜನ್ಮ ಭೂಮಿ ಆಂದೋಲನವನ್ನು ಹುಟ್ಟು ಹಾಕಿತ್ತು. ಅಂದು ಇದರ ಅಧ್ಯಕ್ಷರಾಗಿದ್ದವರು ಬಿಜೆಪಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಅವರು. ಇವರ ಹೋರಾಟ, ರಥಯಾತ್ರೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ೧೯೮೬ರಲ್ಲಿ ಮಸೀದಿಯ ಒಳಾಂಗಣಕ್ಕೆ ಹೋಗದಂತೆ ಗೇಟ್ ಗೆ ಹಾಕಿದ್ದ ಬೀಗವನ್ನು ತೆಗೆಯಬೇಕೆಂದು ಫೈಜಾಬಾದ್ ನ್ಯಾಯಾಲಯ ಆದೇಶ ನೀಡಿತು. ೧೯೮೯ರಲ್ಲಿ ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಮಂದಿರದ ಭೂಮಿ ಪೂಜೆಗೆ ಅನುಮತಿ ನೀಡಿದ್ದರು. ಮಂದಿರದ ನಿರ್ಮಾಣಕ್ಕಾಗಿ ಇಟ್ಟಿಗೆಗಳನ್ನು ಸಂಗ್ರಹಿಸುವ ಕಾರ್ಯ ದೇಶದಾದ್ಯಂತ ಪ್ರಾರಂಭವಾಯಿತು. ೧೯೯೨ರ ಡಿಸೆಂಬರ್ ೬ರಂದು ಮಸೀದಿಯನ್ನು ಕರಸೇವಕರು ಧ್ವಂಸ ಮಾಡಿದರು. ಇದೊಂದು ಘಟನೆ ದೇಶ ವಿದೇಶಗಳಲ್ಲಿ ಸಂಚಲನವನ್ನುಂಟು ಮಾಡಿತು. ಸುಮಾರು ಎರಡು ಸಾವಿರ ಮಂದಿ ಕರಸೇವಕರು ತಮ್ಮ ಪ್ರಾಣವನ್ನು ತೆತ್ತರು. 

೨೦೦೨ರಲ್ಲಿ ಅಲಹಾಬಾದ್ ಹೈಕೋರ್ಟ್ ನಿರ್ದೇಶನದಂತೆ ಭಾರತೀಯ ಪುರಾತತ್ವ ಇಲಾಖೆ ವಿವಾದಿತ ಸ್ಥಳದಲ್ಲಿ ಉತ್ಖನನ ನಡೆಸಿತು. ಅವರಿಗೆ ಹಿಂದಿನ ದೇಗುಲದ್ದು ಎನ್ನಲಾಗುವ ಹಲವಾರು ಪುರಾವೆಗಳು ಉತ್ಖನನ ಸಮಯದಲ್ಲಿ ಸಿಕ್ಕವು. ನಂತರದ ದಿನಗಳಲ್ಲಿ ಹಲವಾರು ಬಾರಿ ಅಯೋಧ್ಯಾ ತೀರ್ಪುಗಳು ಪ್ರಕಟವಾಗಿ ಉಭಯ ಕಡೆಯವರ ಅಸಮಧಾನಕ್ಕೂ ಕಾರಣವಾಯಿತು. ಕಡೆಗೆ ಸುಪ್ರೀಂ ಕೋರ್ಟ್ ೨೦೧೯ರ ನವೆಂಬರ್ ೧೯ರಂದು ತನ್ನ ಐತಿಹಾಸಿಕ ತೀರ್ಪನ್ನು ನೀಡಿತು. ಅದರಂತೆ ವಿವಾದಿತ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ಮಂದಿರ ಇತ್ತು ಎಂಬ ಕುರುಹುಗಳು ಸಿಕ್ಕಿರುವುದರಿಂದ ಅಲ್ಲಿಯೇ ಮಂದಿರ ನಿರ್ಮಾಣ ಮಾಡಬೇಕು. ಮಸೀದಿ ನಿರ್ಮಾಣಕ್ಕಾಗಿ ಅಯೋಧೆಯಲ್ಲೇ ೫ ಎಕರೆ ಭೂಮಿ ನೀಡಬೇಕು ಎನ್ನುವ ತೀರ್ಪು ಬಂತು. ತೀರ್ಪಿನ ಬಳಿಕ ರಾಮಮಂದಿರದ ಕಾರ್ಯಗಳು ಚುರುಕು ಪಡೆದವು. ೨೦೨೦ರಲ್ಲಿ ನರೇಂದ್ರ ಮೋದಿಯವರು ಭೂಮಿ ಪೂಜೆ ನಡೆಸಿದರು. ನಾಲ್ಕು ವರ್ಷ ಭರದಿಂದ ಸಾಗಿದ ಮಂದಿರ ನಿರ್ಮಾಣವು ಈಗ ಭಾಗಶಃ ಮುಗಿದು ಬಾಲ ರಾಮನ ಪ್ರಾಣ ಪ್ರತಿಷ್ಟೆಯಾಗಿದೆ. ಗರ್ಭಗುಡಿ ನಿರ್ಮಾಣ ಕಾರ್ಯವು ಪೂರ್ಣವಾಗಿದೆ. ಅಂತಸ್ತುಗಳ ನಿರ್ಮಾಣ ಕಾರ್ಯ ಚಾಲನೆಯಲ್ಲಿದೆ.

ರಾಮ ಮಂದಿರ ವಿವಾದ ನ್ಯಾಯಾಲಯದಲ್ಲಿದ್ದಾಗ ವಿವಾದಿತ ಸ್ಥಳದಲ್ಲಿ ರಾಮನ ಪುಟ್ಟದಾದ ವಿಗ್ರಹವಿತ್ತು. ಅದನ್ನು ಪುಟ್ಟ ಟೆಂಟ್ ನಲ್ಲಿ ಪೂಜೆ ಮಾಡುತ್ತಿದ್ದರು. ಆ ವಿಗ್ರಹದ ಗಾತ್ರ ಸುಮಾರು ಆರು ಇಂಚು ಮಾತ್ರ. ಹೊಸ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾದಾಗ ಹೊಸ ಮೂರ್ತಿ ನಿರ್ಮಾಣದ ಅಗತ್ಯತೆ ಕಂಡು ಬಂತು. ಅದಕ್ಕಾಗಿ ಮೂರು ಮಂದಿ ಶಿಲ್ಪಿಗಳನ್ನು ದೇಶದ ವಿವಿಧ ಕಡೆಗಳಿಂದ ಸಂದರ್ಶನ ನಡೆಸಿ ಆಯ್ಕೆ ಮಾಡಿದ್ದರು. ಕರ್ನಾಟಕದ ಸುಯೋಗವೆಂದರೆ ಈ ಮೂರು ಶಿಲ್ಪಿಗಳಲ್ಲಿ ಇಬ್ಬರು ಕರ್ನಾಟಕದವರೇ. 

ಮೈಸೂರಿನ ಅರುಣ್ ಯೋಗಿರಾಜ್, ಉತ್ತರ ಕರ್ನಾಟಕದ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ. ಇದರಲ್ಲಿ ಅರುಣ್ ಮತ್ತು ಗಣೇಶ್ ಭಟ್ ಇವರು ಕಪ್ಪು ಶಿಲೆಯಲ್ಲಿ ವಿಗ್ರಹವನ್ನು ಕೆತ್ತಿದ್ದರೆ, ಸತ್ಯನಾರಾಯಣ ಪಾಂಡೆಯವರು ಅಮೃತಶಿಲೆಯಲ್ಲಿ ವಿಗ್ರಹ ನಿರ್ಮಾಣ ಮಾಡಿದ್ದರು. ಅಂತಿಮವಾಗಿ ಅರುಣ್ ಯೋಗಿರಾಜ್ ಅವರ ಶಿಲ್ಪವು ಪ್ರಾಣಪ್ರತಿಷ್ಟೆಗೆ ಆಯ್ಕೆಯಾಗಿದೆ. ಇದಕ್ಕೆ ಬಳಸಿದ್ದು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯ ಕೃಷ್ಣ ಶಿಲೆ. ಹೀಗೆ ಅಯೋಧ್ಯೆಯ ರಾಮಮಂದಿರದಲ್ಲಿ ಕರ್ನಾಟಕದ ಛಾಪು ನಿರಂತರ ಬೆಳಗಲಿದೆ. 

ರಾಮಲಲ್ಲಾನ ವಿಗ್ರಹದ ವಿಶೇಷತೆಯನ್ನು ನೋಡುವುದಾದರೆ ವಿಗ್ರಹವು ೫೧ ಇಂಚು ಎತ್ತರವಿದೆ. ಬಾಲರಾಮ ಕಮಲದ ಪೀಠದ ಮೇಲೆ ನಿಂತುಕೊಂಡಿದ್ದರೆ, ಈ ಪೀಠದ ಕೆಳಗೆ ಮತ್ತೊಂದು ಪೀಠವಿದೆ. ಎರಡೂ ಕಾಲುಗಳಿಗೆ ವಸ್ತ್ರಾಲಂಕಾರ ಇದೆ. ಸೊಂಟಕ್ಕೆ ಆಭರಣಗಳನ್ನು ತೊಡಿಸಿದಂತೆ ಕೆತ್ತಲಾಗಿದೆ. ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿಸುವಂತೆ ಮೂರ್ತಿಯನ್ನು ಕೆತ್ತಲಾಗಿದೆ. ಪ್ರಾಣ ಪ್ರತಿಷ್ಟೆಯ ಸಮಯದಲ್ಲಿ ಇದರಲ್ಲಿ ಬಂಗಾರದ ಬಿಲ್ಲು ಬಾಣವನ್ನು ಇರಿಸಲಾಗಿದೆ. ಮುಖದಲ್ಲಿ ಬಾಲಕಳೆ, ನಸುನಗುವಿದ್ದು ಬಹಳ ಸುಂದರವಾಗಿ ಕಾಣಿಸುತ್ತಿದೆ. ಮೂರ್ತಿಯ ಸುತ್ತ ಪ್ರಭಾವಳಿ ಇದೆ. ಪ್ರಭಾವಳಿಯ ಕೆಳ ಎಡಭಾಗದಲ್ಲಿ ಹನುಮಂತನ ಕೆತ್ತನೆ ಮತ್ತು ದಶಾವತಾರದ ರಚನೆಗಳಿವೆ. ಕೆಳ ಬಲಬದಿಯಲ್ಲಿ ವಿಷ್ಣುವಿನ ವಾಹನ ಗರುಡನ ರಚನೆಯಿದೆ. ಅಯೋಧ್ಯೆಯ ರಾಮ ಕಾರಸೇವಕಪುರಂನಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸುಮಾರು ಏಳು ತಿಂಗಳು ದಿನಕ್ಕೆ ೧೦ರಿಂದ ೧೨ ಗಂಟೆ ಅಖಂಡ ವೃತದಂತೆ ಕೆಲಸ ಮಾಡಿ ಈ ರಾಮಲಲ್ಲಾನನ್ನು ತಯಾರು ಮಾಡಿದ್ದಾರೆ. ಈ ವಿಗ್ರಹವನ್ನು ನೋಡುವಾಗ ಐದು ವರ್ಷದ ಬಾಲಕ ಬಿಲ್ಲು ಬಾಣ ಹಿಡಿದುಕೊಂಡು ನಿಂತಿರುವಂತೆ ಭಾಸವಾಗುತ್ತದೆ. 

ಮುಖ್ಯ ವಿಗ್ರಹವಾಗಿ ಆಯ್ಕೆಯಾಗದೇ ಇದ್ದರೂ ಉಳಿದ ಎರಡು ಮೂರ್ತಿಗಳೂ ಅಯೋಧ್ಯಾ ರಾಮಮಂದಿರದಲ್ಲಿ ಸೂಕ್ತ ಸ್ಥಾನದಲ್ಲಿ ಇರಲಿವೆ. ಹಳೆಯ ಪುಟ್ಟ ರಾಮಲಲ್ಲಾನ ವಿಗ್ರಹವೂ ಗರ್ಭಗುಡಿಯಲ್ಲಿ ಮುಖ್ಯ ವಿಗ್ರಹದ ಎದುರುಬದಿ ಇರಲಿದೆ. ಕೊನೆಗೂ ಸುಮಾರು ಐದು ನೂರು ವರ್ಷಗಳ ಹಾಗೂ ನೂರಕ್ಕೂ ಹೆಚ್ಚು ಕಾಲದ ಕಾನೂನು ಹೋರಾಟದ ಬಳಿಕ ಬಾಲರಾಮ ತನ್ನ ಸುಸಜ್ಜಿತ ಮಂದಿರಕ್ಕೆ ಮರಳಿದ್ದಾನೆ. ಇದರಿಂದ ಭಾರತದಲ್ಲೂ ರಾಮರಾಜ್ಯದ ಹೊಸ ಶಕೆ ಆರಂಭವಾಗಲಿ ಎನ್ನುವುದು ಎಲ್ಲಾ ಹಿಂದೂಗಳ ಮನದಾಳದ ಆಶಯ.

ಚಿತ್ರ ಕೃಪೆ: ಅಂತರ್ಜಾಲ ತಾಣ