ನೀರಜಾ ಭಾನೋಟ್
ಗಗನದಿ ಹಾರಿದೆ ಚೆಲುವೆ ನೀ ಅಂದು
ನೋವ ತೊರೆದು ಕೆಲಸದಿ ಮುಂದು
ಎದುರಾದೆ ಪಯಣಿಗರ ನಗು ಮೊಗದಿ
ಪಯಣದಿ ಅರಿಯದ ವಿಧಿ ಜಗದಿ.
ಕರಾಚಿ ಕಾದಿತ್ತಂದು ಕರಾಳತೆ ಹೊತ್ತು
ಮುಸುಕಲಿ ಅಡಗಿತ್ತು ಸಾವಿನ ಆ ತುತ್ತು
ಮೃಗಗಳು ಎರಗಲು ನಡುಗಿದ ಹೃದಯ
ಸಲುಹಿದೆ ನಲುಗಿದ ಹಲವು ಎದೆಯ.
ಕಾದಿತ್ತು ಬೇಟೆಗೆ ನಾಲ್ಕು ಕೋವಿಗಳು
ಗುರಿಯಾಗಿಸಿ ನಿನ್ನವರ ಹಲವು ನಾಳೆಗಳು
ಬರೆದಿತ್ತು ವಿಧಿ ನೀ ಅರಿಯದ ಹಾಳೆಯಲಿ
ತೋರಲು ಜಗಕೆ ತರುಣಿಯ ಛಲವ ಧೈರ್ಯದಲಿ.
ಹದಿನೇಳು ಗಂಟೆಯ ಸತತ ವನವಾಸ
ಬಲಿಯಾದವು ಜೀವ ಕೋವಿಗಿಲ್ಲ ಉಪವಾಸ
ಒಡೆದಿತ್ತು ಮೃಗಗಳ ತಾಳ್ಮೆಯ ಕೆಟ್ಟೆ
ಅರಿತು ತೆರೆದೆ ತೆರೆಯ ನವ ಬದುಕ ಕೊಟ್ಟೆ.
ಹಲವರ ಬದುಕಿಸಿ ನೀ ಗೆಲುವಾಗಿಬಿಟ್ಟೆ
ಕತ್ತಲಲಿ ಮರೆಯಾಗಿ ನೀಡಿದೆ ಕನಸ ಬಟ್ಟೆ
ಜಗ ಮರೆಯದು ನಿನ್ನ ಆ ಹೆಸರು
ಗಗನದಿ ಹಾರುವ ಬಣ್ಣದ ಚಿಟ್ಟೆಯ ಉಸಿರು !
ಟಿಪ್ಪಣಿ - ಪ್ಯಾನ್ ಅಮೆರಿಕನ್ ಕ್ಲಿಪ್ಪರ್-೭೩ ವಿಮಾನದ ಗಗನ ಸಖಿಯರ ಮುಖ್ಯಸ್ಥೆಯಾಗಿದ್ದ ಭಾರತೀಯ ವೀರ ಮಹಿಳೆ, ನೀರಜಾ (ನೀರ್ಜಾ) ಭಾನೋಟ್ ವಿಮಾನಯಾನದ ಇತಿಹಾಸದಲ್ಲಿ ಒಂದು ಮರೆಯಲಾರದ ವಿಕ್ರಮವನ್ನು ಸ್ಥಾಪಿಸಿದ್ದರು. ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಬಂಧಿತವಾಗಿದ್ದ ಪ್ಯಾನ್ ಅಮೆರಿಕನ್ ವಿಮಾನದ ಪರಿಚಾರಿಕೆಯಾಗಿದ್ದ ನೀರಜಾರವರ ಹಣೆಗೆ ಗುಂಡಿಟ್ಟು ನಿಂತಿದ್ದ ೪ ಜನ ಭಯೋತ್ಪಾದಕರಿಂದ ೩೦೦ ಕ್ಕೂ ಅಧಿಕಮಂದಿ ಪ್ರಯಾಣಿಕರಿಗೆ ಪುನರ್ಜನ್ಮ ಕೊಟ್ಟು ತಮ್ಮ ಜೀವವನ್ನೇ ಅರ್ಪಿಸಿದ 'ನೀರಜಾ ಭಾನೋಟ್', ತಮ್ಮ ೨೪ ನೇ ವರ್ಷದ ಹುಟ್ಟುಹಬ್ಬದಂದು ಈ ಶೌರ್ಯದ ಕಾರ್ಯವೆಸಗಿ ಅಮರರಾದರು.
-ನಿರಂಜನ ಕೇಶವ ನಾಯಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ