ನೀರನ್ನು ಕುದಿಸುವ ಸರಿಯಾದ ವಿಧಾನ

ನೀರನ್ನು ಕುದಿಸುವ ಸರಿಯಾದ ವಿಧಾನ

ಕುದಿಸಿ ಆರಿಸಿದ ಅಥವಾ ಕುಡಿಯುವಷ್ಟು ಹದಕ್ಕೆ ಬಿಸಿಯಾಗಿರುವ ನೀರನ್ನೇ ಕುಡಿಯಬೇಕು ಎನ್ನುತ್ತಾರೆ. ಮೊದಲೆಲ್ಲಾ ಸೌದೆಯ ಒಲೆ ಇರುವಾಗ ಒಂದು ಪಾತ್ರೆಯಲ್ಲಿ ನೀರು ನಿರಂತರವಾಗಿ ಕುದಿಯುತ್ತಾ ಇರುತ್ತಿತ್ತು. ಈಗ ಕಟ್ಟಿಗೆ ಒಲೆಗಳು ಹೋಗಿ ಗ್ಯಾಸ್ ಒಲೆಗಳು ಬಂದಿವೆ. ನಿರಂತರವಾಗಿ ನೀರನ್ನು ಕುದಿಸುವುದೂ ಕಷ್ಟ ಸಾಧ್ಯವಾಗಿದೆ. ಆದರೆ ನಾವು ನೀರನ್ನು ಕುದಿಸುವಾಗ ಎಷ್ಟು ಕುದಿಸಬೇಕು ಎನ್ನುವುದು ಬಹಳ ಪ್ರಮುಖವಾದ ವಿಷಯ. ಈಗ ನೀರನ್ನು ಕುದಿಸಲು ಎಲೆಕ್ಟ್ರಿಕ್ ವಾಟರ್ ಹೀಟರ್ ಗಳು, ನೀರನ್ನು ಶುದ್ಧಗೊಳಿಸುವ ಯಂತ್ರಗಳೆಲ್ಲಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೂ ನಮಗೆ ಆಪ್ತವಾದ ವಿಧಾನ ನೀರನ್ನು ಕುದಿಸಿ ಕುಡಿಯುವುದು.

ವೈದ್ಯರೂ ಲೇಖಕರೂ ಆದ ಡಾ. ನಾ ಸೋಮೇಶ್ವರ ಅವರ ಪ್ರಕಾರ “ಸುರಕ್ಷಿತವಾದ ನೀರು ದೊರೆಯದ ಸಂದರ್ಭದಲ್ಲಿ ನೀರನ್ನು ಶೋಧಿಸಿ, ಕುದಿಸಿ, ಆರಿಸಿ ಕುಡಿಯುವುದು ಅತ್ಯಂತ ಪರಿಣಾಮಕಾರಿಯಾದ ವಿಧಾನ. ಕುದಿಸಿದ ನೀರು ಶತಪ್ರತಿಶತ ಸುರಕ್ಷಿತವಾಗಿರಬೇಕಾದರೆ, ಕುದಿಸುವ ವಿಧಾನವು ಕ್ರಮಬದ್ಧವಾಗಿರುವುದು ಬಹು ಮುಖ್ಯ. ಸಾಮಾನ್ಯವಾಗಿ ನೀರು ಬಿಸಿಯಾದ ಕೂಡಲೇ, ಕುದಿಸುವುದನ್ನು ಕೆಲವರು ನಿಲ್ಲಿಸುವುದುಂಟು. ಇದು ತಪ್ಪು. ನೀರು ಕುದಿಯಲು ಆರಂಭವಾದಾಗ ಗುಳ್ಳೆಗಳು ಬರುತ್ತವೆ. ಗುಳ್ಳೆಗಳು ಕಾಣಿಸಿದ ಕ್ಷಣದಿಂದ ಹಿಡಿದು ೨೦ ನಿಮಿಷಗಳವರೆಗೆ ನೀರನ್ನು ಕುದಿಸುವುದು ಅಪೇಕ್ಷಣೀಯ. ಆಗ ಮಾತ್ರ ನೀರಿನಲ್ಲಿರುವ ಕಾಮಾಲೆ (ಜಾಂಡಿಸ್) ವೈರಸ್, ಹೈಪಟೈಟಿಸ್-ಎ ನಾಶವಾಗುತ್ತದೆ. ಇದಕ್ಕಿಂತ ಕಡಿಮೆಯ ಕಾಲ ಕುದಿಸಿದರೆ, ಉಳಿದೆಲ್ಲಾ ರೋಗಕಾರಕಗಳು ನಾಶವಾದರೂ ಕಾಮಾಲೆ ವೈರಸ್ ಮಾತ್ರ ನಾಶವಾಗುವುದಿಲ್ಲ. ಈ ಕಾರಣಕ್ಕಾಗಿ ಮೇಲೆ ಹೇಳಿದಷ್ಟು ಅವಧಿಗೆ ನೀರನ್ನು ಕುದಿಸಬೇಕು.

ಕುದಿಸಿ ಆರಿಸಿದ ನೀರನ್ನು ಕುಡಿಯುವಾಗ, ನೀರನ್ನು ಕುಡಿಯುವಂತೆ ಅನಿಸದೇ ಬರೇ ಸಪ್ಪೆ ಸ್ವಾದ ಕಂಡು ಬರುವುದು ಸಹಜ ಅಲ್ಲವೇ? ಈ ನೀರಿನ ರುಚಿಯೂ ಭಿನ್ನವಾಗಿರುತ್ತದೆ. ಎಷ್ಟು ನೀರು ಕುಡಿದರೂ ದಾಹ ಕಡಿಮೆಯಾಗುವುದಿಲ್ಲ ಎಂದು ಅನಿಸುತ್ತದೆ. ಮಕ್ಕಳೂ ಈ ನೀರನ್ನು ಕುಡಿಯಲು ಇಷ್ಟ ಪಡುವುದಿಲ್ಲ. ಈ ಸಮಸ್ಯೆಗೆ ಒಂದು ಸುಲಭ ಪರಿಹಾರವಿದೆ. ನೀರನ್ನು ಕುದಿಸಿದ ಮೇಲೆ, ಪಾತ್ರೆಯ ಬಾಯಿಯ ಮೇಲೆ ಒಂದು ತೆಳುವಾದ ಶುದ್ಧ ಬಟ್ಟೆಯನ್ನು ಮುಚ್ಚಿ ೨೪ ಗಂಟೆಗಳ ಕಾಲ ಬಿಡಿ. ಆನಂತರ ನೀರನ್ನು ಕುಡಿಯಿರಿ. ನೀರಿಗೆ ಅದರ ಮೂಲ ರುಚಿಯು ಮರಳಿ ಬಂದಿರುತ್ತದೆ.”

ನೀರನ್ನು ಕುದಿಸಿ, ಆರಿಸಿದ ಬಳಿಕ ಮಣ್ಣಿನ ಮಡಕೆಯಲ್ಲಿ ತುಂಬಿಸಿಟ್ಟರೆ ಬೇಸಿಗೆಯಲ್ಲೂ ನೀರು ಸಹಜವಾಗಿ ತಂಪಾಗಿರುತ್ತದೆ. ಫ್ರಿಡ್ಜ್ ನ ತಂಪಾದ ನೀರನ್ನು ನಿರಂತರ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಒಳ್ಳೆಯದಲ್ಲ. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಬಹಳ ಉತ್ತಮ. ಬೇಸಿಗೆ ಕಾಲದಲ್ಲೂ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿರಿ. ದೇಹಕ್ಕೆ ಅಗತ್ಯವಾಗಿ ಬೇಕಾಗುವಷ್ಟು ನೀರನ್ನು ಕುಡಿಯುತ್ತಿರಿ. ಆರೋಗ್ಯಕ್ಕೆ ಇದು ಬಹಳ ಉತ್ತಮ. ನೀರಿನ ಪ್ರಮಾಣ ದೇಹದಲ್ಲಿ ಕಡಿಮೆಯಾದರೆ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರುತ್ತವೆ. 

(ಮಾಹಿತಿ ಕೃಪೆ: ‘ಸೂತ್ರ’ ಪತ್ರಿಕೆ)