ನೀರಿಂಗಿಸಿದರೆ ಸಾಲದು, ಮಣ್ಣಿನ ಸಾವಯವಾಂಶ ಹೆಚ್ಚಿಸಬೇಕು

ನೀರಿಂಗಿಸಿದರೆ ಸಾಲದು, ಮಣ್ಣಿನ ಸಾವಯವಾಂಶ ಹೆಚ್ಚಿಸಬೇಕು

ಚಿಕ್ಕಮಗಳೂರಿನಿಂದ ಕೆ.ಬಿದರೆಗೆ ಬಸ್ಸಿನಲ್ಲಿ ಎರಡೂವರೆ ಗಂಟೆಗಳ ಪ್ರಯಾಣ. ಕಡೂರಿನಲ್ಲಿ ಬಸ್ ಬದಲಾಯಿಸಿ ಅಂದು ಕೆ.ಬಿದರೆ ತಲಪಿದಾಗ ಬಿಸಿಲೇರುತ್ತಿತ್ತು. ಹಿರಿಯರಾದ ಟಿ.ಬಿ. ಕುಮಾರಪ್ಪ ನಮಗಾಗಿ ಕಾದಿದ್ದರು.

ಅಲ್ಲಿ ಕುಮಾರಪ್ಪನವರದು ೨೭ ಎಕ್ರೆಗಳ ತೆಂಗಿನ ತೋಟ. ೩೫ ವರುಷಗಳ ಮುನ್ನ ಅವರು ಅಲ್ಲಿ ತೋಟ ಮಾಡಿದಾಗ ಕೊರೆಸಿದ್ದು ಒಂದೇ ಕೊಳವೆಬಾವಿ. ಅದರಲ್ಲಿ ೧೦೦ ಅಡಿ ಆಳದಲ್ಲೇ ಸೊಂಪಾಗಿ ನೀರು ಸಿಕ್ಕಿತ್ತು. ಆದರೆ ೨೦೦೦ ವರುಷದಿಂದೀಚೆಗೆ ಅದರಲ್ಲಿ ನೀರು ಕಡಿಮೆ ಆಗ್ತಾ ಬಂದು, ೨೦೦೪ರಲ್ಲಿ ಕೇವಲ ೨ ಇಂಚು ನೀರು ಸಿಗತೊಡಗಿತು. ಹಾಗಾಗಿ ಆ ಅವಧಿಯಲ್ಲಿ ಇನ್ನೂ ಏಳು ಕೊಳವೆಬಾವಿ ಕೊರೆಸಿದರು. ಇವುಗಳಲ್ಲಿ ನೀರು ಸಿಗಬೇಕಾದರೆ ೨೦೦ ಅಡಿಗೂ ಅಧಿಕ ಆಳ ಕೊರೆಸಬೇಕಾಯಿತು. ಇಷ್ಟು ಆಳಕ್ಕೆ ಕೊರೆಸಿದರೂ ಆ ಏಳು ಕೊಳವೆಬಾವಿಗಳಲ್ಲಿ ಸಿಗುತ್ತಿರೋದು ಕೇವಲ ೧ರಿಂದ ೨ ಇಂಚು ನೀರು. ಇವನ್ನೆಲ್ಲ ಒಂದಕ್ಕೊಂದು ಜೋಡಿಸಿಕೊಂಡು ತೋಟಕ್ಕೆ ನೀರು ಹಾಯಿಸುವ ವ್ಯವಸ್ಠೆ ಮಾಡಿಕೊಂಡಿದ್ದಾರೆ. ಅದೇನಿದ್ದರೂ ಅಂತರ್ಜಲ ಮಟ್ಟ ಕುಸಿದಿರುವಾಗಲೂ ಕುಮಾರಪ್ಪನವರ ೧೭೦೦ ತೆಂಗಿನ ಮರಗಳು ಹಸುರುಹಸುರಾಗಿದ್ದು ವಾರ್ಷಿಕ ೩ ಲಕ್ಷ ತೆಂಗಿನಕಾಯಿಗಳ ಇಳುವರಿ ನೀಡುತ್ತಿವೆ. ಇದಕ್ಕೇನು ಕಾರಣ?

ಕಡೂರಿನಿಂದ ಕುಮಾರಪ್ಪನವರ ತೋಟಕ್ಕೆ ಹೋಗುವಾಗ ಹಾದಿಯುದ್ದಕ್ಕೂ ಅಕ್ಕಪಕ್ಕದ ತೆಂಗಿನ ತೋಟಗಳನ್ನು ಗಮನಿಸುತ್ತಿದ್ದೆ. ಬಹುಪಾಲು ತೋಟಗಳಲ್ಲಿ ತೆಂಗಿನಮರಗಳು ನೀರಿಲ್ಲದೆ ಒಣಗಿದ್ದವು. ನುಸಿಪೀಡೆಯ ಹೊಡೆತವಂತೂ ಎದ್ದು ಕಾಣುತ್ತಿತ್ತು. ಆ ತೋಟಗಳಿಗೆ ಹೋಲಿಸಿದಾಗ ಅವೇ ಸಮಸ್ಯೆಗಳಿದ್ದರೂ ಕುಮಾರಪ್ಪನವರ ತೋಟದ ತೆಂಗಿನಮರಗಳು ಚೆನ್ನಾಗಿದ್ದವು.

ಇದಕ್ಕೆ ಕಾರಣ ಏನು? ಎಂದು ನಾನು ಕೇಳಿದಾಗ ಹಿರಿಯರಾದ ಕುಮಾರಪ್ಪನವರು ನನ್ನನ್ನು ಮನೆಯ ಹಿಂಭಾಗಕ್ಕೆ ಕರೆದೊಯ್ದರು. ಅಲ್ಲಿ ತೆಂಗಿನ ಸಿಪ್ಪೆಯ ಹುಡಿ ತುಂಬಿದ್ದ ಒಂದು ಹೊಂಡ. ಅದರ ಉದ್ದ ೨೦ ಅಡಿ, ಅಗಲ ೧೦ ಅಡಿ. ಅದರ ಮೇಲ್ಭಾಗದ ಪದರವನ್ನೆತ್ತಿ ತೋರಿಸುತ್ತ ಕುಮಾರಪ್ಪ ಹೇಳಿದರು, "ಕಾರಣ ಇಲ್ಲಿದೆ ನೋಡಿ." ಅಲ್ಲಿ ಕಂಡದ್ದು ರಾಶಿರಾಶಿ ಎರೆಹುಳಗಳು.

"ಈ ಆಸ್ಟ್ರೇಲಿಯನ್ ಜಾತಿಯ ಎರೆಹುಳಗಳೇ ಕಾರಣ. ಎರೆಹುಳ ಗೊಬ್ಬರದ ಹೊಂಡಕ್ಕೆ ತೆಂಗಿನ ಸಿಪ್ಪೆಹುಡಿ, ಕಸಕಡ್ಡಿ ಹಾಕ್ತಾ ಇರ್ತೇವೆ. ಅದಕ್ಕೆ ಗೋಬರ್‍ಗ್ಯಾಸ್ ಪ್ಲಾಂಟಿನ ಸ್ಲರಿ ಬಿಡ್ತಾ ಇರ್ತೇವೆ. ಈ ಎರೆಹುಳಗಳು ಅವೆಲ್ಲ ತಿಂದು ಗೊಬ್ಬರ ಮಾಡ್ತವೆ. ತಿಂಗಳು ತಿಂಗಳೂ ಹೊಂಡದಿಂದ ಗೊಬ್ಬರ ತೆಗೆದು ತೋಟಕ್ಕೆ ಹಾಕ್ತೇವೆ. ಇಡೀ ತೋಟಕ್ಕೆ ಈ ಹೊಂಡದ ಗೊಬ್ಬರ ಸಾಕಾಗ್ತದೆ. ಅಷ್ಟೇ ಅಲ್ಲ, ಹೊಂಡದಲ್ಲಿ ಎರೆಹುಳ ಮರಿಗಳು ಆಗ್ತಾ ಇರ್ತವೆ. ಅವನ್ನು ತೋಟದಲ್ಲಿ ತೆಂಗಿನ ಮರಗಳ ಬುಡಕ್ಕೆ ಹಾಕ್ತೇವೆ. ಅವು ಅಲ್ಲೇ ಬೆಳೀತಾವೆ. ಆ ಮರಗಳ ಬುಡಕ್ಕೆ ತೆಂಗಿನ ಸೋಗೆ, ಕಸಕಡ್ಡಿ, ತೆಂಗಿನಸಿಪ್ಪೆ ಹುಡಿ ಇದೆಲ್ಲ ಹಾಕ್ತೀವಲ್ಲ; ಎರೆಹುಳಗಳು ಅವನ್ನೆಲ್ಲ ಅಲ್ಲೇ ಗೊಬ್ಬರ ಮಾಡ್ತವೆ. ನಮ್ಮ ತೆಂಗಿನಮರಗಳ ಬುಡಕ್ಕೆ ಎರೆಹುಳ ಮತ್ತು ಎರೆಹುಳ ಗೊಬ್ಬರ ಮಾತ್ರ ಹಾಕೋದು. ಬೇರೆ ಯಾವುದೇ ರಾಸಾಯನಿಕ ಗೊಬ್ಬರ ಹಾಕೋದಿಲ್ಲ. ಯಾಕಂದ್ರೆ ಅದು ಎರೆಹುಳಗಳಿಗೆ ವಿಷ ಆಗ್ತದೆ. ಅದಲ್ದೆ, ನಮ್ ತೋಟದಲ್ಲಿ ಎತ್ತು ಅಥವಾ ಟ್ರಾಕ್ಟರ್ ಓಡಿಸಿ ಉಳುಮೆ ಮಾಡೋದಿಲ್ಲ. ನಮ್ಮಲ್ಲಿ ಉಳುಮೆ ಏನಿದ್ರೂನೂ ಎರೆಹುಳಗಳಿಂದಲೇ. ಅದಕ್ಕೇ ನನ್ನ ತೆಂಗಿನ ಮರಗಳು ಚೆನ್ನಾಗಿವೆ" ಎಂದು ವಿವರಿಸಿದರು ಕುಮಾರಪ್ಪ.

ಇದು ಎಲ್ಲ ಕೃಷಿಕರೂ ಗಮನಿಸಬೇಕಾದ ಅಂಶ: ಕೇವಲ ಮಳೆನೀರಿಂಗಿಸಿದರೆ ಸಾಲದು, ಮಣ್ಣಿನ ಸಾವಯವಾಂಶ ಹೆಚ್ಚಿಸಬೇಕು. ಅದರಿಂದಾಗಿ ಮಣ್ಣಿನ ತೇವಾಂಶ ಹಿಡಿದಿಡುವ ಗುಣ ಹೆಚ್ಚುತ್ತದೆ.
ಆಗ ಕಡಿಮೆ ನೀರುಣಿಸಿ ಹೆಚ್ಚು ಫಸಲು ಪಡೆಯಲು ಸಾಧ್ಯವಾಗುತ್ತದೆ.

Comments