ನೀರಿಂಗಿಸೋಣ, ನಿಮ್ಮ ಮನದಲ್ಲೊಂದಿಷ್ಟು ಜಾಗ ಕೊಡಿ!
ಎಪ್ರಿಲ್ ೨೨, ೨೦೧೬ ಮಂಗಳೂರಿನ ಚರಿತ್ರೆಯಲ್ಲಿ ಮರೆಯಬಾರದ ದಿನ. “ಎರಡು ದಿನಕ್ಕೊಮ್ಮೆ ಮನೆಬಳಕೆಗೆ ನೀರು ಸರಬರಾಜು” ಎಂಬ ನಿಯಮವನ್ನು ಮಂಗಳೂರು ಮಹಾನಗರಪಾಲಿಕೆ ಜ್ಯಾರಿಗೊಳಿಸಿದ ದಿನ ಅದು. ಅನಂತರ ಪರಿಸ್ಥಿತಿ ಬಿಗಡಾಯಿಸಿ, ಮೇ ೧ರಿಂದ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಿದ್ದೂ ಮರೆಯಬಾರದ ಸಂಗತಿ.
ಬಹುಶಃ ಮಂಗಳೂರಿನಲ್ಲಿ ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿ ಇಂತಹ ನಿಯಮ ಜ್ಯಾರಿಯಾಗಿದೆ. ಎಲ್ಲವನ್ನೂ ಬೇಗಬೇಗನೇ ಮರೆತು ಬಿಡುವ ಕಾಲಮಾನ ಇದು. ಮಳೆಗಾಲ ಶುರುವಾದಾಗ ನಾವು ಇದನ್ನೂ ಮರೆತು ಬಿಡುತ್ತೇವೆ. ಆದ್ದರಿಂದ, ಮರೆಯುವ ಮುನ್ನ ಒಂದೆರಡು ಪಾಠ ಕಲಿಯೋಣ.
ಯಾಕೆ ಹೀಗಾಯಿತು? ಜಗತ್ತಿನಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಪ್ರದೇಶಗಳಲ್ಲೊಂದು ಮಂಗಳೂರು. ಇಲ್ಲಿ ಜೂನ್ನಲ್ಲಿ ಮಳೆ ಶುರುವಾದರೆ ಮತ್ತೆ ನಾಲ್ಕು ತಿಂಗಳು ಮಳೆಗಾಲ. ಇಲ್ಲಿನ ವಾರ್ಷಿಕ ಸರಾಸರಿ ಮಳೆ ಬರೋಬ್ಬರಿ ೩೭೯೭ ಮಿಮಿ (೧೪೯ ಇಂಚು). ಇದು ಕರ್ನಾಟಕದ ವಾರ್ಷಿಕ ಸರಾಸರಿ ಮಳೆಯ ನಾಲ್ಕು ಪಟ್ಟು! ಇಷ್ಟು ಮಳೆ ಬೀಳುವ ಊರಿನಲ್ಲಿ ಯಾಕೆ ಹೀಗಾಯಿತು?
ಇದಕ್ಕೆ ಕಾರಣಗಳು ಹಲವು. ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮವನ್ನು ಮಂಗಳೂರು ಕೂಡ ಅನುಭವಿಸುತ್ತಿದೆ. ಆದರೆ, ಭರ್ಜರಿ ಮಳೆ ಬೀಳುವ ಮಂಗಳೂರಿನಲ್ಲಿ ಹೀಗಾಗಬಾರದಿತ್ತು. ಇಂದಿನ ಪರಿಸ್ಥಿತಿಗೆ ನೇರ ಕಾರಣಗಳು ಎರಡು: ಮೊದಲನೆಯದು ನೀರಿನ ದುರ್ಬಳಕೆ. ನಗರದಲ್ಲಿ ಒಂದು ಸುತ್ತು ಸುತ್ತಾಡಿದರೆ ಗೊತ್ತಾಗುತ್ತದೆ – ಮಹಾನಗರಪಾಲಿಕೆ ಒದಗಿಸುವ ನಳ್ಳಿನೀರಿನಿಂದ ಮನೆಯಂಗಳವನ್ನು ಮತ್ತು ಕಾರುಗಳನ್ನು ಆಗಾಗ ತೊಳೆಯುವವರು ಎಷ್ಟು ಜನರಿದ್ದಾರೆ ಎಂದು. ಇಂತಹ ನೀರಿನ ದುರ್ಬಳಕೆ ನಿಯಂತ್ರಿಸಲು ಒಂದೇ ದಾರಿ: ನಿತ್ಯಬಳಕೆಯ ಮಿತಿಗಿಂತ ಜಾಸ್ತಿ ನೀರು ಬಳಸುವವರಿಗೆ ನೀರಿಗೆ ಅಧಿಕ ದರ ವಿಧಿಸುವುದು.
ಎರಡನೆಯ ಕಾರಣ: ನೀರು ಒದಗಿಸುವುದು ಮಹಾನಗರಪಾಲಿಕೆಯ ಜವಾಬ್ದಾರಿ ಎನ್ನುತ್ತಾ ಬಹುಪಾಲು ನಗರವಾಸಿಗಳು ಮಳೆನೀರು ಕೊಯ್ಲಿನ ತಮ್ಮ ಜವಾಬ್ದಾರಿ ನಿರ್ವಹಿಸದಿರುವುದು. ಯಾಕೆಂದರೆ, ಮಂಗಳೂರಿನ ಪ್ರತಿಯೊಂದು ಮನೆಯಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡಿಕೊಂಡರೆ ವರುಷವಿಡೀ ಮನೆಬಳಕೆಗೆ ಆ ನೀರೇ ಸಾಕು. ಹಾಗಾದಾಗ, ಮನೆಬಳಕೆಗೆ ನೀರಿನ ಸಮಸ್ಯೆಯೇ ಇರುವುದಿಲ್ಲ.
ನಮ್ಮ ಮನೆ ಚಾವಣಿ ಮತ್ತು ಮನೆಯಂಗಳದಲ್ಲಿ ಎಷ್ಟು ಮಳೆನೀರು ಬೀಳುತ್ತದೆಂದು ಸುಲಭವಾಗಿ ಲೆಕ್ಕ ಹಾಕಬಹುದು. ಒಂದು ಚದರ ಮೀಟರ್ ಜಾಗದ ಮೇಲೆ ಒಂದು ಮಿಲಿಮೀಟರ್ ಮಳೆ ಸುರಿದರೆ, ಸಿಗುವ ನೀರು ಒಂದು ಲೀಟರ್. ಅಂದರೆ, ನಮ್ಮ ಊರಿನ ವಾರ್ಷಿಕ ಸರಾಸರಿ ಮಳೆ ಎಷ್ಟು ಮಿಮೀ ಇದೆಯೂ, ಅಷ್ಟು ಲೀಟರ್ ನೀರು ನಮ್ಮ ಪ್ರತಿ ಚ.ಮೀ. ಜಾಗದ ಮೇಲೆ ಸುರಿಯುತ್ತದೆ. ಈ ಸೂತ್ರ ಬಳಸಿದರೆ, ೧೫೦ ಚ.ಮೀ. ಚಾವಣಿಯ ಮೇಲೆ ಒಂದು ವರುಷದಲ್ಲಿ ಸುರಿಯುವ ಮಳೆ ೧೫೦ * ೪೦೦೦ ಅಂದರೆ ಆರು ಲಕ್ಷ ಲೀಟರು. (ನಿಮ್ಮ ಮನೆ ಸೈಟಿನ ಮೇಲೆ ಒಂದು ವರುಷದಲ್ಲಿ ಸುರಿಯುವ ಮಳೆ ನೀರು ಎಷ್ಟು? ನೀವೇ ಲೆಕ್ಕ ಮಾಡಿ. ನಿಮಗೊಂದು ಸೂಚನೆ: ಒಂದು ಸೆಂಟ್ಸ್ ಅಂದರೆ ೪೦ ಚ.ಮೀ.)
ಒಬ್ಬರಿಗೆ ದಿನಕ್ಕೆ ಸುಮಾರು ೧೦೦ ಲೀಟರ್ ನೀರು ಬೇಕು. ಅದರಂತೆ, ೫ ಜನರ ಕುಟುಂಬಕ್ಕೆ ವರ್ಷಕ್ಕೆ ೧,೮೨,೫೦೦ ಲೀಟರ್ ನೀರು ಬೇಕು. ಅಂದರೆ ಕರಾವಳಿಯಲ್ಲಿ ಮನೆ ಚಾವಣಿ ಮೇಲೆ ಬೀಳುವ ಮಳೆ ಪ್ರಮಾಣವೇ ಕುಟುಂಬದ ವಾರ್ಷಿಕ ಅವಶ್ಯಕತೆಗಿಂತ ಮೂರು ಪಟ್ಟು ಜಾಸ್ತಿ. ಹಾಗಾಗಿ ದಕ್ಷಿಣ ಕನ್ನಡದವರ ನೀರ ಸಮಸ್ಯೆಗೆ ಪರಿಹಾರ ಅವರ ಕೈಯಲ್ಲೇ ಇದೆ. ಭೂಮಿ ಪುಕ್ಕಟೆಯಾಗಿ ನೀಡುವ ಮಳೆ ನೀರನ್ನು ಅವರು ಭೂಮಿಯಲ್ಲಿ ಇಂಗಿಸಿದರಾಯಿತು ಅಥವಾ ಕೊಯ್ಲು ಮಾಡಿ ಸಂಗ್ರಹಿಸಿದರಾಯಿತು.
ಮಂಗಳೂರಿನಲ್ಲಿ ಹಾಗೂ ದಕ್ಷಿಣಕನ್ನಡದಲ್ಲಿ ಮಳೆನೀರ ಕೊಯ್ಲು ಮಾಡಿರುವ ಹಲವರಿದ್ದಾರೆ. ಅವರಲ್ಲೊಬ್ಬರು ಮಂಗಳೂರಿನ ಖಾಸಗಿ ಪಶುವೈದ್ಯ ಡಾ. ಮನೋಹರ ಉಪಾಧ್ಯ. ಅವರು ೨೦೦೧ರಿಂದ ಮರೋಳಿಯ ತಮ್ಮ ಮನೆಯ ೧,೬೦೦ ಚದರಡಿ ಚಾವಣಿಗೆ ಬೀಳುವ ಮಳೆನೀರನ್ನು ಕೊಯ್ಲು ಮಾಡಿ, ಪಕ್ಕದಲ್ಲಿರುವ ಬಾವಿಗೆ ಇಳಿಸುತ್ತಿದ್ದಾರೆ. ಇಂಥವರು ಮಾಡಿರುವ ಮಳೆನೀರಿನ ಕೊಯ್ಲಿನ ವ್ಯವಸ್ಥೆಗೆ ಕೆಲವೇ ಸಾವಿರ ರೂಪಾಯಿಗಳ ವೆಚ್ಚ. ಅದನ್ನೇ ಸುಧಾರಿಸಿ, ನಮ್ಮನಮ್ಮ ಮನೆ ಹಾಗೂ ಸೈಟಿನ ಪರಿಸ್ಥಿತಿಗೆ ಹೊಂದುವಂತೆ ಸ್ವಲ್ಪ ಬದಲಾಯಿಸಿಕೊಂಡು ಅಳವಡಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಿದೆ.
ಜೊತೆಗೆ, ದಕ್ಷಿಣಕನ್ನಡದ ಎಲ್ಲ ೧೫೦ ಪದವಿಪೂರ್ವ ಕಾಲೇಜುಗಳಲ್ಲಿ ಮಳೆನೀರಿನ ಕೊಯ್ಲು ಮಾಡಬಹುದು. ಆ ಕಾಲೇಜುಗಳಲ್ಲಿ ಮಳೆನೀರಿನ ಕೊಯ್ಲು ಮಾಡುವ ಮತ್ತು ನೀರಿಂಗಿಸುವ ರಚನೆಗಳನ್ನು ನಿರ್ಮಿಸಬಹುದು. ಆ ಕಾಲೇಜುಗಳ ೩೦,೦೦೦ ವಿದ್ಯಾರ್ಥಿಗಳು ಅವನ್ನು ಕಣ್ಣಾರೆ ಕಂಡು, ಜಲಜಾಗೃತಿಯ ಸಂದೇಶವನ್ನು ೩೦,೦೦೦ ಮನೆಗಳಿಗೆ ತಲಪಿಸುತ್ತಾರೆಂದು ನಿರೀಕ್ಷಿಸಬಹುದು. ಸುರತ್ಕಲಿನ ಗೋವಿಂದದಾಸ ಕಾಲೇಜಿನಲ್ಲಿ ೨೦೦೯ರ ಮಳೆಗಾಲದಿಂದ ಪ್ರತಿವರುಷ ೪.೫ ಲಕ್ಷ ಲೀಟರ್ ಮಳೆನೀರಿನ ಕೊಯ್ಲು ಮಾಡುತ್ತಿದ್ದಾರೆ. ಅಲ್ಲಿನ ವ್ಯವಸ್ಥೆಗೆ ರೂ.೪೫,೦೦೦ ವೆಚ್ಚವಾಗಿತ್ತು.
ಅದಕ್ಕಾಗಿಯೇ ವಿನಂತಿ: ನೀರಿಂಗಿಸುವ ಆಲೋಚನೆ ಮನದಾಳಕ್ಕೆ ಇಳಿಯಲಿಕ್ಕಾಗಿ ನಿಮ್ಮ ಮನದಲ್ಲೊಂದಿಷ್ಟು ಜಾಗ ಕೊಡಿ.