ನೀರಿಗೆ ವಿಷ: ಕಾರ್ಖಾನೆ ಮುಚ್ಚಿಸಿದ ಹಳ್ಳಿಗರು

ನೀರಿಗೆ ವಿಷ: ಕಾರ್ಖಾನೆ ಮುಚ್ಚಿಸಿದ ಹಳ್ಳಿಗರು

ಒಂದು ಹಳ್ಳಿ. ಅಲ್ಲಿ ಸುಮಾರು ಸಾವಿರ ಕುಟುಂಬಗಳು. ನೆಮ್ಮದಿಯ ಬದುಕು. ಆಹಾರದ ಬೆಳೆಗಳು, ತರಕಾರಿಗಳು, ಹಣ್ಣುಗಳನ್ನು ಬೆಳೆಸಿಕೊಂಡು, ದನಕರುಗಳನ್ನು ಸಾಕಿಕೊಂಡು ಅಲ್ಲಿಯ ಜನ ತಮ್ಮ ಪಾಡಿಗೆ ತಾವಿದ್ದಾರೆ.

ಆಗ, ಆ ಹಳ್ಳಿಯ ಪಕ್ಕದಲ್ಲೊಂದು ಕಾರ್ಖಾನೆ ತಲೆಯೆತ್ತುತ್ತದೆ. ಭಾರೀ ಉತ್ಪಾದನೆ. ಬಿರುಸಿನ ಚಟುವಟಿಕೆ. ಜೊತೆಯಲ್ಲೇ ಕಾರ್ಖಾನೆಯಿಂದ ಹೊರಬರುವ ವಿಷಮಯ ತ್ಯಾಜ್ಯಗಳು. ಅವುಗಳಿಂದ ಪರಿಸರ ಮಾಲಿನ್ಯ. ಬಾವಿಗಳ ನೀರಿಗೂ ಕಾರ್ಖಾನೆಯ ವಿಷ ಸೇರಿಕೊಳ್ಳುತ್ತದೆ. ಇದರಿಂದಾಗಿ ಮಕ್ಕಳೂ ಬಲಿ. ಹಳ್ಳಿಯ ಜನರಿಂದ ಪ್ರತಿಭಟನೆ. ಅಧಿಕಾರಿಗಳಿಗೆ ದೂರು. ಸರಕಾರಕ್ಕೆ ಮನವಿ ಸಲ್ಲಿಕೆ. ತಮ್ಮ ನೆಮ್ಮದಿಯ ಬಾಳಿಗೆ ಕೊಳ್ಳಿಯಿಟ್ಟ ಕಾರ್ಖಾನೆ ಮುಚ್ಚಿಸಬೇಕೆಂದು ಪರಿಪರಿಯಾಗಿ ವಿನಂತಿ. ಆದರೆ ಅಧಿಕಾರಶಾಹಿ ಮತ್ತು ಸರಕಾರದಿಂದ ಜನರ ಸಂಕಟಕ್ಕೆ ಸ್ಪಂದನವಿಲ್ಲ. ಹಳ್ಳಿಗರ ಉಗ್ರ ಪ್ರತಿಭಟನೆಗೂ ದಿವ್ಯ ನಿರ್ಲಕ್ಷ್ಯ.

ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ೨೦೦೫ನೇ ಇಸವಿಯ ಮೊದಲ ದಿನ ಇದೇ ಸನ್ನಿವೇಶ. ಅಲ್ಲಿಯ ವರೆಗೆ ಸಹಿಸಿಕೊಂಡಿದ್ದ ಹಳ್ಳಿಗರ ರೊಚ್ಚಿನ ಸ್ಫೋಟ. ಒಟ್ಟಾಗಿ ಹೋಗಿ ತಮ್ಮ ಜೀವಕ್ಕೆ ಕುತ್ತಾದ ಕಾರ್ಖಾನೆಯ ಧ್ವಂಸ. ಅದು ಕೊಲ್ಲಾಪುರ ಜಿಲ್ಲೆಯ ಚಿಪ್ರಿ ಹಳ್ಳಿ. ಸುಮಾರು ೨,೦೦೦ ಮಹಿಳೆಯರ ಸಹಿತ ೪,೦೦೦ ಹಳ್ಳಿಗರು ದಂಡೆತ್ತಿ ಬಂದಾಗ ನುಚ್ಚುನೂರಾದದ್ದು ಸ್ಟಾರ್ ಓಕ್ಸೊಚೆಮ್ ಪ್ರೈವೇಟ್ ಲಿಮಿಟೆಡ್ ಎಂಬ ಓಕ್ಸಾಲಿಕ್ ಆಮ್ಲದ ಕಾರ್ಖಾನೆ.

ಆ ದಿನ ಚಿಪ್ರಿಯ ಹಳ್ಳಿಗರು ಸುಟ್ಟು ಹಾಕಿದ್ದು ಕಾರ್ಖಾನೆಯ ೨೨ ವ್ಯಾನುಗಳು ಮತ್ತು ಕಾರುಗಳನ್ನು. ಹಲವಾರು ಕಂಪ್ಯೂಟರುಗಳು ಚೂರುಚೂರು. ಹಳ್ಳಿಗರ ರೋಷಕ್ಕೆ ಗುರಿಯಾದ ಕಾರ್ಖಾನೆಗೆ ಆದ ಸೊತ್ತು ನಷ್ಟ ೫೦೦ ಕೋಟಿ ರೂಪಾಯಿ. ಅಷ್ಟರಲ್ಲಿ ಅಲ್ಲಿಗೆ ಧಾವಿಸಿ ಬಂದ ಪೊಲೀಸರು ಕೆಲವು ಹಳ್ಳಿಗರನ್ನು ಬಂಧಿಸಲು ಮುಂದಾದರು. ಆದರೆ, ಹಳ್ಳಿಯ ಜನರ ಸಾಮೂಹಿಕ ಪ್ರತಿಭಟನೆಯ ಬಿರುಸು ನೋಡಿ ಬೆಚ್ಚಿ ಬಿದ್ದ ಪೊಲೀಸರು ತೆಪ್ಪಗೆ ಹಿಂತಿರುಗಿದರು.

ಮರುದಿನ ಸ್ಟಾರ್ ಓಕ್ಸೊಚೆಮ್ ಮಾಲೀಕನನ್ನು ಕಾರ್ಖಾನೆ ಮುಚ್ಚಿಸಲು ಬಲವಂತವಾಗಿ ಒಪ್ಪಿಸಿದರು ಚಿಪ್ರಿಯ ಹಳ್ಳಿಗರು.

ಇದೆಲ್ಲ ಶುರುವಾದದ್ದು ೧೯೯೮ರಲ್ಲಿ. ಆರಂಭದಿಂದಲೇ ಅಂತರ್ಜಲವನ್ನು ವಿಷಮಯವಾಗಿಸುತ್ತಿದ್ದ ಈ ಕಾರ್ಖಾನೆ ಹಳ್ಳಿಗರಿಂದ ಪ್ರಬಲ ಪ್ರತಿಭಟನೆ ಎದುರಿಸಿತ್ತು. ಇದರ ಪರಿಣಾಮವಾಗಿ ಮಹಾರಾಷ್ಟ್ರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ (ಮಾನಿಮ) ೨೦೦೨ರಲ್ಲಿ ಕಾರ್ಖಾನೆಯನ್ನು ಮುಚ್ಚಿಸಿತು. ಅದಾಗಿ ಒಂದೇ ತಿಂಗಳಿನಲ್ಲಿ, ಪರಿಸರ ಮಾಲಿನ್ಯ ಮಾಡದಂತೆ ಕೆಲವು ನಿಬಂಧನೆಗಳನ್ನು ವಿಧಿಸಿದ ನಂತರ, ಕಾರ್ಖಾನೆ ಪುನರಾರಂಭ! ಆದರೆ, ಕಾರ್ಖಾನೆ ಆ ನಿಬಂಧನೆಗಳನ್ನು ಪಾಲಿಸಲೇ ಇಲ್ಲ ಎನ್ನುತ್ತಾರೆ ಚಿಪ್ರಿಯ ಹಳ್ಳಿಗರು.

೨ ಜನವರಿ ೨೦೦೪ರಂದು ಜನಪ್ರತಿನಿಧಿಗಳೊಂದಿಗೆ ಸ್ಟಾರ್ ಓಕ್ಸೊಚೆಮ್‌ನ ಮಾಲೀಕ ಸಂಜಯ ಗೊಡಾವತ್ ಅವರ ಸಭೆ. ಅವತ್ತು ಸಂಜೆ ಹಳ್ಳಿಯ ಚೌಕದಲ್ಲಿ ಜಮಾಯಿಸಿದ ಹಳ್ಳಿಗರಿಂದ ಭಾರಿ ಪ್ರತಿಭಟನೆ. ಆದರೂ ಅಂತರ್ಜಲಕ್ಕೆ ವಿಷ ಸುರಿಯುವುದನ್ನು ಕಾರ್ಖಾನೆ ನಿಲ್ಲಿಸಲಿಲ್ಲ.

ಅನಂತರ ವರುಷವಿಡೀ ಹಳ್ಳಿಗರ ಅಸಮಾಧಾನ ಒಳಗೊಳಗೇ ಕುದಿಯುತ್ತಿತ್ತು. ಅವರ ಆಕ್ರೋಶ ವ್ಯಕ್ತವಾದದ್ದು ೩೦ ಡಿಸೆಂಬರ ೨೦೦೪ರಂದು - ಅನಿಲ್ ಚೌಗಲೆ ಮತ್ತು ಅಣ್ಣಾ ಪವಾರ್ ಎಂಬ ಹಳ್ಳಿಯ ಇಬ್ಬರು ಯುವಕರು ಕಾರ್ಖಾನೆಯ ವಿರುದ್ಧ ಅಮರಣಾಂತ ಉಪವಾಸ ಆರಂಭಿಸಿದಾಗ. ಅದೇ ಹಳ್ಳಿಯವನಾದ ಕಾರ್ಖಾನೆಯ ಮಾಲೀಕ ಸಂಜಯ ಮತ್ತು ಜನಪ್ರತಿನಿಧಿಗಳು ಯುವಕರ ಬಳಿ ಹೋಗಿ ಉಪವಾಸ ಸತ್ಯಾಗ್ರಹ ನಿಲ್ಲಿಸಬೇಕೆಂದು ವಿನಂತಿಸಿದರು. ಆಗ, ಕಾರ್ಖಾನೆಯನ್ನು ಸದ್ಯದಲ್ಲೇ ಮುಚ್ಚಲಾಗುವುದೆಂದು ಮಾಲೀಕರಿಂದ ಘೋಷಣೆ.

"ನೀರಿನ ಸೆಲೆಗಳ ಮಾಲಿನ್ಯ ತಡೆಯಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯನ್ನು ಹಳ್ಳಿಗರು ಮತ್ತೆಮತ್ತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ನೀರಿನ ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳಬೇಕಾಗಿತ್ತು. ಅವರೊಂದಿಗೆ ಮತ್ತು ಸಂಜಯನ ಕುಟುಂಬದವರೊಂದಿಗೆ ನಾವು ಮಾತನಾಡಿದೆವು. ಜನರ ಅಸಹನೆ ಹೆಚ್ಚುತ್ತಿದೆ ಎಂದು ಎಚ್ಚರಿಸಿದೆವು” ಎನ್ನುತ್ತಾರೆ ಲೋಕಸಭಾ ಸದಸ್ಯೆ ನಿವೇದಿತಾ ಮಾನೆ, ಶಾಸಕ ರಾಜು ಶೆಟ್ಟಿ ಮತ್ತು ಮಾಜಿ ಶಾಸಕ ಎಸ್.ಆರ್. ಪಾಟೀಲ್.

೭ ಜುಲಾಯಿ ೨೦೦೪ರಂದು ವಾಂತಿ ಮತ್ತು ಭೇದಿ ಆಗಿ ಆ ಹಳ್ಳಿಯ ಇಬ್ಬರು ಮಕ್ಕಳ ಸಾವು. ಅವರ ಸಾವಿಗೆ ಕಾರ್ಖಾನೆ ತ್ಯಾಜ್ಯದಿಂದಾಗಿ ವಿಷಮಯವಾದ ನೀರೇ ಕಾರಣವೆಂದು ಹಳ್ಳಿಗರ ಅಭಿಪ್ರಾಯ. ಆಗಲೇ ಕಾರ್ಖಾನೆಯ ವಿರುದ್ಧ ಜನರ ಆಕ್ರೋಶ ಬುಗಿಲೆದ್ದಿತ್ತು. ಆ ಸಂದರ್ಭದಲ್ಲಿ ರಾಜ್ಯ ಮಾನಿಮ ಅಧಿಕಾರಿಗಳು ೧೫ ಬಾವಿ ಮತ್ತು ಕೊಳವೆಬಾವಿಗಳಿಂದ ನೀರಿನ ಸ್ಯಾಂಪಲುಗಳನ್ನು ಸಂಗ್ರಹಿಸಿದರು. ಪರೀಕ್ಷಿಸಿದಾಗ, ಅವೆಲ್ಲವೂ ಕುಡಿಯಲು ಅಯೋಗ್ಯ ಎಂದು ಖಚಿತವಾಯಿತು. ಆದ್ದರಿಂದ ೧೫ ಆಗಸ್ಟ್ ೨೦೦೪ರಂದು ಸ್ಟಾರ್ ಓಕ್ಸೊಚೆಮ್ ಕಾರ್ಖಾನೆ ಮುಚ್ಚಬೇಕೆಂದು ಹಳ್ಳಿಗರು ನಿರ್ಧರಿಸಿದರು.

ಅನಂತರ, ೧೮ ನವಂಬರ್ ೨೦೦೪ರಂದು ಚಿಪ್ರಿಯಲ್ಲಿ ಜರಗಿದ ಗ್ರಾಮಸಭೆಯಲ್ಲಿ ಆ ಕಾರ್ಖಾನೆಯ (೩೧-೧೨-೨೦೦೪ರಂದು ಕೊನೆಗೊಳ್ಳಲಿದ್ದ) ಪರವಾನಗಿಯನ್ನು ನವೀಕರಿಸಬಾರದು ಎಂದು ಹಳ್ಳಿಗಳ ನಿರ್ಧಾರ. ರಾಜ್ಯ ಮಾನಿಮ ಅಧ್ಯಕ್ಷರಿಗೆ ಪತ್ರ ಬರೆದು ಕಾರ್ಖಾನೆ ಮುಚ್ಚಲೇಬೇಕೆಂದು ಒತ್ತಾಯ.

ರಾಜ್ಯ ಮನಿಮ ಕೊಲ್ಲಾಪುರ ಕಚೇರಿಯ ಅಧಿಕಾರಿ ಎಸ್.ಆರ್. ಪಾಟಿ ತಿಳಿಸುವ ಮಾಹಿತಿ: ಸ್ಟಾರ್ ಓಕ್ಸೊಚೆಮ್‌ಗೆ ೨೮ ನವಂಬರ್ ೨೦೦೪ರಂದೇ “ಕಾರಣ ಕೇಳುವ ನೊಟೀಸ್” ನೀಡಿದ್ದೆವು. ನಂತರ ೧ ಜನವರಿ ೨೦೦೫ರಂದು ಕಾರ್ಖಾನೆ ಮುಚ್ಚಬೇಕೆಂದು ಆದೇಶ ನೀಡಿದ್ದೆವು.

ಕಾರ್ಖಾನೆ ಯಾರದಾದರೇನಂತೆ? ಅದು ನೀರನ್ನೇ ವಿಷಮಯವಾಗಿಸಿ ಮೃತ್ಯುರೂಪಿಯಾದಾಗ ಅದನ್ನು ಮುಚ್ಚಲೇ ಬೇಕು, ಅಲ್ಲವೇ? ಹೆಚ್ಚೆಚ್ಚು ಕಾರ್ಖಾನೆಗಳು ಪ್ರಾಕೃತಿಕ ಸಂಪನ್ಮೂಲಗಳನ್ನು ಕಬಳಿಸುತ್ತ ತೀವ್ರ ಪರಿಸರ ಮಾಲಿನ್ಯ ಮಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ, ಈ ಪ್ರಕರಣದಿಂದ ನಾವೆಲ್ಲರೂ ಕಲಿಯಬೇಕಾದ ಪಾಠಗಳು ಹಲವು, ಅಲ್ಲವೇ?

(ಸಾಂದರ್ಭಿಕ ಫೋಟೋ)