ನೀರಿನೊಳಗೆ ಪೆಂಗ್ವಿನ್ ಹೇಗೆ ನೋಡುತ್ತದೆ?

ನೀರಿನೊಳಗೆ ಪೆಂಗ್ವಿನ್ ಹೇಗೆ ನೋಡುತ್ತದೆ?

ಈಗಾಗಲೇ ನಾವು ಪೆಂಗ್ವಿನ್ ಪಕ್ಷಿಗಳ ಬಗ್ಗೆ ಸಂಪದದಲ್ಲಿ ತಿಳಿದುಕೊಂಡಿದ್ದೇವೆ. ಪೆಂಗ್ವಿನ್ ಪಕ್ಷಿಗಳ ವೇಗದ ಈಜಿನ ಬಗ್ಗೆ ಸಮಗ್ರ ಮಾಹಿತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಸಲ ನಾವು ಸಮುದ್ರದಾಳದಲ್ಲಿ ಪೆಂಗ್ವಿನ್ ಪಕ್ಷಿಗಳು ಹೇಗೆ ನೋಡುತ್ತವೆ? ಎಂಬ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ವಿಭಿನ್ನ ಹಾಗೂ ಸುಂದರ ಪಕ್ಷಿಗಳಲ್ಲಿ ಒಂದಾದ ಪೆಂಗ್ವಿನ್ ಅಂಟಾರ್ಟಿಕಾ ಪ್ರದೇಶದಲ್ಲಿನ ಮಂಜು ಆವೃತ್ತ ಪ್ರದೇಶದಲ್ಲಿ ವಾಸಿಸುತ್ತವೆ. ಸಮುದ್ರದಲ್ಲಿ ಈಜುವ ಸಮಯದಲ್ಲಿ ಇವುಗಳು ಸುಮಾರು ೫೦೦ ಮೀಟರ್ ಆಳದವರೆಗೂ ಹೋಗುತ್ತವೆ. ೧೫ ನಿಮಿಷಕ್ಕೂ ಅಧಿಕ ಸಮಯ ನೀರಿನ ಒಳಗೆ ಈಜಾಡಬಲ್ಲುದು. ಹಾಗಾದರೆ ಪೆಂಗ್ವಿನ್ ನೀರಿನ ಒಳಗೆ ತಮ್ಮ ದೇಹದ ಉಷ್ಣಾಂಶವನ್ನು ಹೇಗೆ ಕಾಪಾಡಿಕೊಳ್ಳುತ್ತದೆ? ಇದೊಂದು ವಿಸ್ಮಯ ಪ್ರಕ್ರಿಯೆ. 

ಸಾಧಾರಣವಾಗಿ ಪೆಂಗ್ವಿನ್ ಶರೀರದ ಉಷ್ಣಾಂಶವು ೩೮ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಇವುಗಳು ಸಮುದ್ರದ ಒಳಗೆ ಈಜುವಾಗ ಅವುಗಳ ಶರೀರದ ಉಷ್ಣಾಂಶವು ೧೧ ಡಿಗ್ರಿಗೆ ಇಳಿದು ಬಿಡುತ್ತದೆ. ಈ ಕಾರಣದಿಂದ ಪೆಂಗ್ವಿನ್ ಜೀವಕ್ಕೆ ಅಪಾಯವಾಗುವುದಿಲ್ಲವೇ? ಎಂಬ ಸಂಶಯ ನಿಮ್ಮನ್ನು ಕಾಡುತ್ತಿರಬಹುದು.ಪೆಂಗ್ವಿನ್ ಗಳ ಶರೀರದ ಒಳಗಿನ ಜಾಲಕಣಗಳೆಲ್ಲವೂ ತಮ್ಮ ತಮ್ಮ ಜೀವನ ಚರ್ಯೆಗಳ ವೇಗವನ್ನು ಕಡಿಮೆ ಮಾಡುತ್ತವೆ. ಅಂದರೆ ಅವಕ್ಕೆ ಅಗತ್ಯವಾದ ಆಮ್ಲಜನಕದ ಉಪಯೋಗದ ವೇಗವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಅವುಗಳಿಗೆ ಅಗತ್ಯವಾದ ಆಮ್ಲಜನಕ ಸಹ ಗಣನೀಯ ಪ್ರಮಾಣದಲ್ಲಿ ಕಮ್ಮಿಯಾಗುತ್ತದೆ. ಈ ಕಾರಣದಿಂದಾಗಿ ಅವುಗಳು ಸಮುದ್ರಕ್ಕೆ ಜಿಗಿಯುವ ಮೊದಲು ಒಳಕ್ಕೆ ಎಳೆದುಕೊಂಡ ಆಮ್ಲಜನಕದ ಪರಿಣಾಮವಾಗಿ ನೀರಿನೊಳಗೆ ೧೫ ನಿಮಿಷ ಕಳೆಯಬಲ್ಲುವು. ನೀರಿನಿಂದ ಆಮ್ಲಜನಕ ಪಡೆದುಕೊಳ್ಳುವ ಸಾಮರ್ಥ್ಯ ಪೆಂಗ್ವಿನ್ ಗಳಿಗೆ ಇರುವುದಿಲ್ಲ. 

ಅಂಟಾರ್ಟಿಕಾ ಪ್ರದೇಶದಲ್ಲಿ ದಟ್ಟವಾದ ಮಂಜು ಇರುತ್ತದೆ. ಕೆಲವೊಮ್ಮೆ ತೀವ್ರ ಬಿಸಿಲೂ ಇರುತ್ತದೆ. ಈ ರೀತಿಯ ತೀವ್ರ ಬೆಳಕು ಹಾಗೂ ಸಮುದ್ರದ ಆಳದಲ್ಲಿರುವ ಕಮ್ಮಿ ಬೆಳಕಿಗೆ ಪೆಂಗ್ವಿನ್ ತಮ್ಮ ಕಣ್ಣಿನ ದೃಷ್ಟಿಯನ್ನು ಹೊಂದಿಸಿ ಕೊಳ್ಳಬೇಕಾಗುತ್ತದೆ. ಹೇಗೆ ಎನ್ನುವುದನ್ನು ನೋಡೋಣ. ಮಂಜುಗೆಡ್ಡೆಗಳಿಗೆ ಬಿಸಿಲು ಬಿದ್ದಾಗ ಅದು ತೀವ್ರವಾದ ಕಣ್ಣುಕೋರೈಸುವ ಬೆಳಕನ್ನು ಬೀರುತ್ತದೆ. ಇದರಿಂದ ತಮ್ಮ ಕಣ್ಣುಗಳನ್ನು ರಕ್ಷಿಸಲು ಅನುಕೂಲವಾಗುವಂತೆ ಪೆಂಗ್ವಿನ್ ಪಕ್ಷಿಗಳ ಕಣ್ಣುಗಳ ರಚನೆಯಾಗಿದೆ.

ಗಾತ್ರದಲ್ಲಿ ದೊಡ್ದದಾದ ಕಿಂಗ್ ಪೆಂಗ್ವಿನ್ ಗಳು ಸಮುದ್ರದಾಳಕ್ಕೆ ಸುಮಾರು ೫೦೦ ಮೀಟರ್ ಗೂ ಕೆಳಗೆ ಹೋಗುತ್ತವೆ. ಅಲ್ಲಿ ಬೆಳಕಿನ ಪ್ರಮಾಣ ತುಂಬಾನೇ ಕಮ್ಮಿ ಇರುತ್ತದೆ. ಈ ರೀತಿಯ ಮಂದ ಬೆಳಕಿನಲ್ಲೂ ಪೆಂಗ್ವಿನ್ ಗಳು ಚೆನ್ನಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತವೆ. ಅದೇ ಪೆಂಗ್ವಿನ್ ನೀರಿನಿಂದ ಹೊರಗೆ ಬಂದ ಬಳಿಕ ತೀವ್ರ ಬೆಳಕಿನಲ್ಲೂ ಚೆನ್ನಾಗಿ ನೋಡುತ್ತದೆ. ಇದರ ರಹಸ್ಯ ಅದರ ಕಣ್ಣಿನ ಒಳಗಿನ ವಿನ್ಯಾಸ. 

ನೆಲದ ಮೇಲಿರುವಾಗ ಪೆಂಗ್ವಿನ್ ಗಳ ಕಣ್ಣಿನ ಪಾಪೆಗಳು ಗುಂಡು ಸೂಜಿಯ ಮೊನೆಯಷ್ಟು ಚಿಕ್ಕದಾಗಿರುತ್ತದೆ. ಇದರಿಂದ ಅಧಿಕ ಬೆಳಕಿನ ಕಾಂತಿಯಿಂದ ಕಣ್ಣನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಪೆಂಗ್ವಿನ್ ಗಳು ನೀರಿಗೆ ಧುಮುಕಿದಾಗ ಅವುಗಳ ಕಣ್ಣಿನ ಪಾಪೆಗಳು ಕೂಡಲೇ ಒಂದರ್ಧ ಅಂಗುಲದಷ್ಟು ಅಗಲವಾಗಿ ಹಿಗ್ಗುತ್ತವೆ. ನೆಲದ ಮೇಲೆ ಇರುವುದಕ್ಕಿಂತಲೂ ಆ ಕಣ್ಣು ಪಾಪೆಗಳ ವಿಸ್ತೀರ್ಣವು ಸುಮಾರು ೩೦೦ಪಟ್ಟು ಏರಿಕೆಯಾಗುತ್ತದೆ. ಅಂದರೆ ನೆಲದ ಮೇಲಿರುವುದಕ್ಕಿಂತಲೂ ಈಗ ೩೦೦ ಪಟ್ಟುಗಳಷ್ಟು ಬೆಳಕು ಅವುಗಳ ಕಣ್ಣುಗಳೊಳಗೆ ಸೇರುತ್ತದೆಂದು ಅರ್ಥ. ಈ ಕಾರಣದಿಂದಾಗಿಯೇ ಪೆಂಗ್ವಿನ್ ಗಳು ಸಮುದ್ರದಾಳದಲ್ಲಿರುವ ಮಂದ ಬೆಳಕಿನಲ್ಲೂ ಚೆನ್ನಾಗಿ ನೋಡುತ್ತವೆ. 

ಇದೇ ಸೂತ್ರವನ್ನು ನಮ್ಮ ಕಣ್ಣುಗಳೂ ಅನುಸರಿಸುತ್ತವೆ. ನೀವು ಬಿಸಿಲಿನಲ್ಲಿ ಸುತ್ತಾಡುವಾಗ ನಿಮ್ಮ ಕಣ್ಣಿನ ಪಾಪೆಗಳು ಸಣ್ಣದಾಗಿರುತ್ತವೆ. ಅದೇ ಬಿಸಿಲಿನಿಂದ ಮನೆಯೊಳಗೆ ಅಥವಾ ಸಿನೆಮಾ ಟಾಕೀಸಿನೊಳಗೆ (ಮಂದ ಬೆಳಕಿರುವ ಸ್ಥಳಗಳು) ಹೋದರೆ ನಿಮಗೆ ಕೂಡಲೇ ಏನೂ ಕಾಣಿಸುವುದಿಲ್ಲ. ನಂತರ ನಿಧಾನವಾಗಿ ಎಲ್ಲವೂ ಸ್ಪಷ್ಟವಾಗಿ ಕಾಣಿಸಲು ಪ್ರಾರಂಭಿಸುತ್ತವೆ. ಬಿಸಿಲಲ್ಲಿರುವಾಗ ಕಿರಿದಾಗಿದ್ದ ಪಾಪೆಗಳು ಕಮ್ಮಿ ಬೆಳಕಿನ ಪ್ರದೇಶಕ್ಕೆ ಬಂದಾಗ ಹಿಗ್ಗಿಕೊಳ್ಳಲು ಅಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ನಮಗೆ ತಕ್ಷಣಕ್ಕೆ ಏನೂ ಕಾಣಿಸುವುದಿಲ್ಲ. ಪಾಪೆಯ ಗಾತ್ರ ಹಿಗ್ಗಿದಂತೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಲಾರಂಭಿಸುತ್ತದೆ. ಪರಿಸರದ ಬೆಳಕಿನ ಪ್ರಮಾಣದ ಮೇಲೆ ನಮ್ಮ ಕಣ್ಣಿನ ಪಾಪೆಗಳ ಹಿಗ್ಗುವಿಕೆ-ಕುಗ್ಗುವಿಕೆ ನಡೆಯುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ