ನೀರಿನ ಕೊರತೆಯ ಶಾಶ್ವತ ಪರಿಹಾರಕ್ಕೆ ಯೋಜನೆ ಅಗತ್ಯ...

ನೀರು ಜೀವ ಜಲ, ನೀರಿದ್ದರೆ ಜೀವ ಸೆಲೆ. ಕಾಲ ಕಳೆಯುತ್ತಾ ನಾವು ನೀರಿನ ಉಳಿವಿನ ಬಗ್ಗೆ ಸಮರ್ಪಕವಾದ ಯೋಚನೆ-ಯೋಜನೆಗಳನ್ನು ಹಾಕಿಕೊಂಡೇ ಇಲ್ಲ. ನೀರು ಇರುವಾಗ ಯಥೇಚ್ಛವಾಗಿ ನೀರನ್ನು ಪೋಲು ಮಾಡುತ್ತಾ ಬೇಸಿಗೆ ಕಾಲ ಬಂತು ಎಂದೊಡನೆಯೇ ನೀರಿಲ್ಲ ಎಂದು ಆಹಾಕಾರ ಮಾಡುತ್ತಾ ಇರುತ್ತೇವೆ. ನೀರಿನ ಮೂಲಗಳಾದ ನದಿ, ಕೆರೆ, ಬಾವಿಗಳು ಬತ್ತುತ್ತಾ ಬರುತ್ತಿವೆ. ವಾತಾವರಣ ದಿನಕಳೆದಂತೆ ಬಿಸಿಯಾಗುತ್ತಿದೆ. ಪರಿಸರ ನಾಶವಾಗುತ್ತಿದೆ. ಹಸಿರು ಕಮ್ಮಿಯಾಗುತ್ತಿದೆ. ಕೈಗಾರೀಕರಣ-ನಗರೀಕರಣ ಮೊದಲಾದ ವ್ಯವಸ್ಥೆಗಳಿಗೆ ವಿಪರೀತ ನೀರು ಪೋಲಾಗುತ್ತಿದೆ.
ಸುಮಾರು ೨೫ -೩೦ ವರ್ಷಕ್ಕೆ ಹಿಂದೆ ಕೆರೆ ತಪ್ಪಿದರೆ ಹೊಳೆ ಮಾತ್ರ ನೀರಾವರಿ ಮೂಲವಾಗಿದ್ದ ದಕ್ಷಿಣ ಕನ್ನಡ- ಮಲೆನಾಡು ಜಿಲ್ಲೆಯಲ್ಲೀಗ ಪ್ರತೀ ಹಳ್ಳಿಯಲ್ಲೂ, ದಿನಕ್ಕೆ ಸರಾಸರಿ ಒಂದರಂತೆ ಕೊಳೆವೆ ಬಾವಿ ಕೊರೆಯಲ್ಪಡುತ್ತಿದೆ. ಸ್ಥಳೀಯ ಪೆಟ್ರೋಲು ಪಂಪುಗಳಲ್ಲಿ ಎರಡು ಮೂರು ಡ್ರಿಲ್ಲಿಂಗ್ ಯಂತ್ರಗಳು ಡೀಸೆಲ್ ಹಾಕಿಸಲು, ಸರ್ವೀಸ್ ಮಾಡಲು ನಿಂತಿರುವುದು ದೃಶ್ಯಗಳು ಸಾಮಾನ್ಯವಾಗುತ್ತಿವೆ. ಬೋರ್ ಹಾಕಿಸುವುದು, ತಮ್ಮ ಅದೃಷ್ಟ ಪರೀಕ್ಷಿಸುವುದು ಆಗಿ ಬಿಟ್ಟಿದೆ. ಒಂದು ಬೋರ್ ಹೊಡೆಸಲು ಕನಿಷ್ಟ ೨-೩ ಲಕ್ಷ ರೂ. ಬೇಕು. ಪಂಪು ಹಾಕಿಸಲು ಮತ್ತೆ ೧ ಲಕ್ಷ. ಮೂರು -ನಾಲ್ಕು- ಹತ್ತು ಹೀಗೆ ಬೋರ್ ಹೊಡೆಸಿಯೂ ನೀರು ಕಾಣದವರಿದ್ದಾರೆ. ಈಗೀಗಂತೂ ನೀರು ತುಂಬಾ ಆಳಕ್ಕೆ ಹೋಗಿದೆ. ಏನೋ ಈ ಜಿಲ್ಲೆಗಳ ಕೃಷಿಕರ ಕುಟುಂಬದಲ್ಲಿ ಒಬ್ಬರಾದರೂ ಬೇರೆ ಉದ್ಯೋಗದಲ್ಲಿ, ಕಸುಬಿನಲ್ಲಿ ಇದ್ದುದರಿಂದ ಇಲ್ಲಿಯ ಜನ ತಮ್ಮ ನೀರಿನ ಋಣದ ಅದೃಷ್ಟ ಪರೀಕ್ಷಿಸುತ್ತಾ, ಕೈ ಖಾಲಿ ಮಾಡಿಕೊಂಡು ಹತಾಶರಾಗಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಇನ್ನೂ ಬಂದಿಲ್ಲ.
ವರ್ಷದ ಆರು ತಿಂಗಳು ಮಳೆ ಬರುವ, ಸಾಕಷ್ಟು ಹೊಳೆ- ಹಳ್ಳಗಳು ಹರಿದು ಹೋಗುವ ನಮ್ಮ ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡಿನಲ್ಲಿ ಈಗ ಬಯಲು ಸೀಮೆಯ ತರಹವೇ ನೀರಾವರಿಗೆ ಕೊಳವೆ ಬಾವಿಗಳೇ ಅಂತಿಮವಾಗಿ ಬಿಟ್ಟಿದೆ. ನೀರಿಲ್ಲವೇ ರಾತ್ರೆ ಬೆಳಗಾಗುವುದರೊಳಗೆ ಲಾರಿ ಬರುತ್ತದೆ, ಬಾವಿ ಕೊರೆದು ಮರುದಿನ ಪಂಪು ಇಳಿಸಿ ನೀರು ಮೇಲೆತ್ತಲಾಗುತ್ತದೆ. ನೀರಾವರಿ ಸಮಸ್ಯೆಗೆ ಉತ್ತರ ಕೊಳವೆ ಬಾವಿ ಮಾತ್ರ ಎಂಬಂತಾಗಿದೆ. ಇದು ಇಲ್ಲಿಗೆ ಅನಿವಾರ್ಯವೇ? ಖಂಡಿತವಾಗಿಯೂ ಅಲ್ಲ. ಇಲ್ಲಿನ ಭೂ ಪ್ರಕೃತಿಯನ್ನು ಸರಿಯಾಗಿ ಬಳಸಿಕೊಂಡರೆ ಇಲ್ಲಿಗೆ ಕೊಳವೆ ಬಾವಿಯೇ ಬೇಡ. ಪ್ರತೀ ಊರಿಗೆ ಒಂದರಂತೆಯಾದರೂ, ಹೊಳೆಗೆ ಹಳ್ಳಗಳಿಗೆ ಕಿಂಡಿ ಅಣೆಕಟ್ಟು, ಅಲ್ಲಿಂದ ನೀರೆತ್ತಿ ಎತ್ತರದ ಪ್ರದೇಶದಲ್ಲಿ ಸಂಗ್ರಹಿಸುವ ವ್ಯವಸ್ಥೆ ಇದ್ದರೆ, ಇಲ್ಲಿ ಹಾಲೀ ಇರುವ ಕೆರೆ ಬಾವಿಗಳು ಜಲ ಸಮೃದ್ಧವಾಗಬಲ್ಲವು. ಈ ಜಲಪಾತ್ರೆಗಳು ಮೊಗೆದಷ್ಟೂ ಮುಗಿಯದ ಜಲಮೂಲ ಕೊಡಬಲ್ಲವು. ಆದರೆ ಅದರ ಬದಲು ನಾವು ಕೊಳವೆ ಬಾವಿಗಳನ್ನೇ ಆಶ್ರಯಿಸುತಿದ್ದೇವೆ. ಸಾರ್ವಜನಿಕ ವ್ಯವಸ್ಥೆಗಳಾದ ಪಂಚಾಯತುಗಳು, ನಗರ ಸಭೆ, ಪಟ್ಟಣ ಪಂಚಾಯತು ಎಲವೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿ ತೋಡುತ್ತವೆ. ಅದಕ್ಕೆ ಪಂಪು, ವಿದ್ಯುತ್ ಸಂಪರ್ಕ ಕಲ್ಪಿಸುತ್ತವೆ. ಮೂರು ನಾಲ್ಕು ವರ್ಷ ನೀರು ಬಂದು ನಿಂತರೆ, ಮತ್ತೆ ಬೇರೆ ಬೇರೆ ತೋಡಲಾಗುತ್ತದೆ. ಬೇರೆಯೇ ಸಂಪರ್ಕ ಕಲ್ಪಿಸಿ ಪಂಪು ಹಾಕುತ್ತಾರೆ. ಒಬೊಬ್ಬ ನೀರಾವರಿ ಬಾವಿ (ಕೊಳವೆ), ವಿದ್ಯುತ್ ಸಂಪರ್ಕ, ಪಂಪು ಇತ್ಯಾದಿಗಳಿಗೆ ಮಾಡುವ ಎಲ್ಲಾ ಖರ್ಚು ಒಟ್ಟು ಸೇರಿದರೆ, ಊರಿನ ಹೊಳೆಗೆ ಉತ್ತಮ ಕಿಂಡಿ ಅಣೆಕಟ್ಟು ಕಟ್ಟಲು ಸಾಧ್ಯ. ಊರಿನಲ್ಲೊಂದು ಕಿಂಡಿ ಅಣೆಕಟ್ಟು ಇದ್ದರೆ, ಅಲ್ಲಿ ಸಂಗ್ರಹವಾಗುವ ನೀರು ಊರಿನ ಎಲ್ಲಾ ಕಡೆಗೂ ಹೀರುವಿಕೆಯ ಮೂಲಕ ಮಣ್ಣಿಗೆ ರೀ- ಚಾರ್ಜ್ ಆಗಿ ಊರಿಡೀ ನೀರ ಸಂಮೃದ್ಧಿ ಖಂಡಿತಾ. ಅನವಶ್ಯಕವಾಗಿ ಸಮುದ್ರ ಸೇರುವ ನೀರನ್ನು ನಾವೇ ಬಳಸಬಹುದು.
ಇಲ್ಲಿ ಕೊಳವೆ ಬಾವಿಗಳು ಹಿಂದಿನಂತೆ ಇಲ್ಲ. ಹಿಂದೆ ಸುಮಾರು ೯೦ ರ ದಶಕದಲ್ಲಿ ೨೦೦-೨೫೦ ಅಡಿಗೆ ಧಾರಾಳವಾಗಿ ನೀರು ದೊರೆಯುತ್ತಿದುದು ಈಗ ಸರಾಸರಿ ೬೦೦-೭೦೦ ಅಡಿಗೆ ತಲುಪಿದೆ. ಸಿಹಿ ನೀರು ಹೋಗಿ ಗಡಸು ನೀರು ಬರುತ್ತಿದೆ. ಇದ್ಯಾವುದೂ ನಮ್ಮ ಗಮನಕ್ಕೆ ಬಂದಂತಿಲ್ಲ. ಸಾಮಾನ್ಯವಾಗಿ ಈಗ ಕೊಳವೆ ಬಾವಿ ಪ್ರತೀ ಮನೆಗೆ ಒಂದರಂತೆ ಇದೆ. ಕೊಳವೆ ಬಾವಿ ನೀರಿಗೆ ದಾಸರಾಗುವುದು ಒಂದು ರೀತಿಯಲ್ಲಿ ನಮ್ಮ ಅವನತಿ ಎಂದೇ ಹೇಳಬೇಕು. ಎಲ್ಲರೂ ಭೂ ಗರ್ಭದ ಅಂತರ್ಜಲವನ್ನು ತೆಗೆಯುತ್ತಾ ಬಂದರೆ,ಅದು ಬರಿದಾಗಲಾರದೇ? ಖಂಡಿತವಾಗಿಯೂ ಆಗುತ್ತದೆ. ಅದು ಮುಗಿದು ಹೋಗುವ ಸಂಪನ್ಮೂಲ. ಸಹಸ್ರಾರು ವರ್ಷಗಳಿಂದ ಭೂ ಗರ್ಭದಲ್ಲಿ ಶೇಖರಣೆಯಾದ ನೀರಿನ ಮೂಲ ಕೇವಲ ೧೦-೨೦ ವರ್ಷಗಳಲ್ಲಿ ಎಷ್ಟು ಬರಿದಾಗಿದೆ. ಇನ್ನು ೧೦-೨೦ ವರ್ಷಗಳ ನಂತರ ಏನಾಗಬಹುದು? ಯೋಚಿಸಲೇ ಬೇಕಾದ ಸಂಗತಿ. ನಾವು ಉಳಿದ ಬಯಲು ಸೀಮೆಯ ಜನರಂತೆ ಅಲ್ಲ. ಅವರು ಕೃಷಿ ನೀರಾವರಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿ ಬೇಕಾದಷ್ಟನ್ನೇ ಬಳಕೆ ಮಾಡಿಕೊಳ್ಳುತ್ತಾರೆ. ನಮ್ಮಲ್ಲಿ ಹೆಚ್ಚಿನವರು ನೀರಿನ ಮಿತವ್ಯಯಕ್ಕೆ ಕೊಡುವ ಗಮನ ಸಾಲದು. ನೀರು - ವಿದ್ಯುತ್ ಇದ್ದರೆ ದಿನ ಪೂರ್ತಿ ನೀರಾವರಿ ಮಾಡಿ ನೆಲವನ್ನು ತೋಯಿಸುತ್ತೇವೆ.
ಏನು ಪರಿಹಾರ?: ನಮ್ಮ ಜನ ಪ್ರತಿನಿಧಿಗಳಿಗೆ ಊರಿಗೊಂದು ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿಕೊಡಿ ಎಂದು ಬೇಡಿಕೆ ಇಡಿ. ಯಾರಾದರೂ ಖಾಸಗಿಯಾಗಿ ಇಂತಹ ಯೋಜನೆಗಳನ್ನು ಮಾಡುವವರಿದ್ದರೆ ಅವರಿಗೆ ಪ್ರೋತ್ಸಾಹ ಕೊಡಿ. ಕರಾವಳಿ ಮಲೆನಾಡಿನ ಮಳೆ ಮತ್ತು ಇಲ್ಲಿನ ನೀರಿನ ಲಭ್ಯತೆ ಬಗ್ಗೆ ಉತ್ತಮ ಅಧ್ಯಯನ ಮಾಡಿ ಅದನ್ನು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಿ. ಪ್ರತೀ ಪಂಚಾಯತುಗಳೂ ತಮ್ಮ ಸಾರ್ವಜನಿಕ ಕುಡಿಯುವ ನೀರಿನ ಉದ್ದೇಶಕ್ಕೆ ಅಲ್ಲಲ್ಲಿ ಕೊಳವೆ ಬಾವಿ ತೊಡುವ ಬದಲಿಗೆ ಹೊಳೆ- ಹಳ್ಳಗಳಿಗೆ ಕಿಂಡಿ ಅಣೆಕಟ್ಟು ಕಟ್ಟಿ, ಅಲ್ಲಿಂದ ನೀರೆತ್ತಿ ಅದನ್ನು ಟಾಂಕಿಯಲ್ಲಿ ಸಂಗ್ರಹಿಸಬೇಕೆಂಬ ಒತ್ತಾಯವನ್ನು ಊರವರು ಮಾಡಬೇಕು. ಇದರ ಪ್ರಯೋಜನ ಇಡೀ ಸಮುದಾಯಕ್ಕೆ ಆಗುತ್ತದೆ. ಪಂಚಾಯತುಗಳು ಇಂತಹ ಯೋಜನೆಯನ್ನು ಮಾಡಿದರೆ ಭೂಮಿ ಹಸನಾಗುತ್ತದೆ. ಭೂಮಿ ಹಸನಾದರೆ ಬಡತನ ನಿವಾರಣೆಯಾಗುತ್ತದೆ. ಬಡತನ ನಿವಾರಣೆಯಾದರೆ ಹೊರೆ ಕಡಿಮೆಯಾಗುತ್ತದೆ. ಈಗಾಗಲೇ ನಮ್ಮಲ್ಲಿ ಕೆಲವು ಕಡೆ ಕಿಂಡಿ ಅಣೆಕಟ್ಟುಗಳಿದ್ದು ಅದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದೆ ಅದರ ಫಲ ಇಲ್ಲದಾಗಿದೆ. ಫಲಪ್ರದವಾಗಿ ಇಂತಹ ಯೋಜನೆಗಳು ಮುನ್ನಡೆಯಬೇಕಾದರೆ ಫಲಾನುಭವಿಗಳಿಗೇ ಅದರ ನಂತರದ ನಿರ್ವಹಣೆ ಜವಾಬ್ದಾರಿ ಕೊಡಬೇಕು. ಈಗೀಗ ಕೆಲವು ಪಂಚಾಯತುಗಳು ಆಸಕ್ತಿ ವಹಿಸಿ ಕೆರೆಗಳನ್ನು ಹೂಳೆತ್ತಿಸುವ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಇಂತಹ ಸಹಜ ನೀರಿನ ಮೂಲಗಳನ್ನು ರಕ್ಷಿಸಿ ಉಳಿಸುವ ಕೆಲಸವಾಗಬೇಕಿದೆ. ಬನ್ನಿ, ನೀರನ್ನು ಉಳಿಸುವ…
ಚಿತ್ರ: ರಾಧಾಕೃಷ್ಣ ಹೊಳ್ಳ