ನೀರುಳಿಸುವ ಪಾಠ ಮನೆಯಲ್ಲೇ ಶುರುವಾಗಲಿ

ನೀರುಳಿಸುವ ಪಾಠ ಮನೆಯಲ್ಲೇ ಶುರುವಾಗಲಿ

ಹೈದರಾಬಾದಿಗೆ ಹೋಗಿದ್ದಾಗ, ಮಹಾನಗರದ ಕೇಂದ್ರ ಭಾಗದಲ್ಲಿದ್ದ ಹೋಟೆಲಿನಲ್ಲಿ ತಂಗಿದ್ದೆ. ಅಲ್ಲಿಯ ಬಾತ್‍ರೂಂನ ಬೇಸಿನ್‍ನ ಮೇಲ್ಗಡೆ ಗೋಡೆಯಲ್ಲಿ ದೊಡ್ಡ ಕನ್ನಡಿ. ಅದರ ಪಕ್ಕದಲ್ಲಿ ಕಣ್ಣಿಗೆ ರಾಚುವಂತೆ ಒಂದು ಭಿತ್ತಿಪತ್ರ.

ಆ ಭಿತ್ತಿಪತ್ರದಲ್ಲಿದ್ದ ಮಾಹಿತಿ: "ನೀರು ಬೆಲೆ ಕಟ್ಟಲಾಗದ ಸಂಪತ್ತು. ಅದನ್ನು ಉಳಿಸೋಣ. ದಯವಿಟ್ಟು ಸಹಕರಿಸಿ. ಅದಕ್ಕಾಗಿ ನೀವೇನು ಮಾಡಬಹುದು?
೧)  ಹಲ್ಲುಜ್ಜುವಾಗ: ಮಗ್‍ನಲ್ಲಿ ನೀರು ತುಂಬಿಸಿಕೊಂಡು ಹಲ್ಲುಜ್ಜಿ. ಅರ್ಧ ಲೀಟರ್ ನೀರು ಸಾಕು. ಇದರ ಬದಲಾಗಿ ನಳ (ಟ್ಯಾಪ್) ತೆರೆದಿಟ್ಟರೆ, ೫ ನಿಮಿಷಗಳಲ್ಲಿ ೪೫ ಲೀಟರ್ ನೀರು ಹಾಳು.
೨)  ಮುಖ ಮತ್ತು ಕೈ ತೊಳೆಯುವಾಗ: ಬಕೆಟಿನಲ್ಲಿ ನೀರು ತುಂಬಿಸಿ, ಆ ನೀರನ್ನು ಮಗ್‍ನಿಂದ ಎತ್ತಿಕೊಂಡು ತೊಳೆಯಿರಿ. ಅರ್ಧ ಲೀಟರ್ ನೀರು ಸಾಕಾಗುತ್ತದೆ. ಇದರ ಬದಲಾಗಿ, ನಳ ತೆರೆದಿಟ್ಟರೆ, ಎರಡೇ ನಿಮಿಷಗಳಲ್ಲಿ ೧೮ ಲೀಟರ್ ನೀರು ಖಾಲಿ.
೩) ಗಡ್ಡ ತೆಗೆಯುವಾಗ:  ಮಗ್‍ನಲ್ಲಿ ನೀರು ತುಂಬಿಟ್ಟು ಬಳಸಿದರೆ, ಕಾಲು ಅಥವಾ ಅರ್ಧ ಲೀಟರ್ ನೀರು ಸಾಕು. ಇದರ ಬದಲಾಗಿ, ನಳ ತೆರೆದಿಟ್ಟರೆ, ೫ ನಿಮಿಷಗಳಲ್ಲಿ ೪೫ ಲೀ.ನೀರು ಹಾಳು.
೪) ಷವರ್‍ನಿಂದ ಸ್ನಾನ ಮಾಡುವಾಗ: ಮೈ ಒದ್ದೆ ಮಾಡಿಕೊಂಡು, ನಳದ ನೀರು ನಿಲ್ಲಿಸಿ, ಸೋಪು ಹಚ್ಚಿಕೊಂಡು, ಅನಂತರ ನಳದ ನೀರಿನಿಂದ ಮೈ ತೊಳೆದುಕೊಂಡರೆ ೨೦ ಲೀಟರ್ ನೀರು ಸಾಕು. ಇದರ ಬದಲಾಗಿ, ಷವರ್‍ನಿಂದ ಅಷ್ಟು ಹೊತ್ತೂ ನೀರು ಸುರಿಯುತ್ತಿದ್ದರೆ, ೧೦ ನಿಮಿಷಗಳಲ್ಲಿ ೧೦೦ ಲೀಟರ್ ನೀರು ಖಾಲಿ.
೫) ಟಬ್‍ನಲ್ಲಿ ಸ್ನಾನ: ಇದರ ಬದಲಾಗಿ ಷವರ್‍ನಿಂದ ಸ್ನಾನ ಮಾಡುವಿರಾ? ಯಾಕೆಂದರೆ, ಒಮ್ಮೆ ಟಬ್ ಭರ್ತಿ ಮಾಡಲು ೧೧೦ ಲೀಟರ್ ನೀರು ಬೇಕು. ಎರಡು ಸಲ ಭರ್ತಿ ಮಾಡಬೇಕಾದರೆ ೨೨೦ ಲೀಟರ್ ನೀರು ಅಗತ್ಯ.
೬) ನೀರು ಲೀಕ್ ಆಗುತ್ತಿದ್ದರೆ....... ತಕ್ಷಣ ನಮಗೆ ತಿಳಿಸಿ. ಅದನ್ನು ಹಾಗೇ ಬಿಟ್ಟರೆ ಎಂತಹ ನಷ್ಟ ಗೊತ್ತೇ? ಹನಿಹನಿ ನೀರು ನಿಧಾನವಾಗಿ ಬೀಳುತ್ತಿದ್ದರೆ, ಒಂದು ದಿನಕ್ಕೆ ೪೦೦ ಲೀಟರ್ ನೀರು ಹಾಳು, ಅದೇ ಹನಿಹನಿ ನೀರು ವೇಗವಾಗಿ ಬೀಳುತ್ತಿದ್ದರೆ, ದಿನಕ್ಕೆ ೩,೦೦೦ ಲೀಟರ್ ನೀರು ಹಾಳು."

ಈ ನೀರುಳಿಸುವ ಪಾಠ ನಮ್ಮ ಕಣ್ಣು ತಪ್ಪಲು ಸಾಧ್ಯವೇ ಇಲ್ಲ. ಯಾಕೆಂದರೆ ಬಾತ್‍ರೂಂನ ಕನ್ನಡಿಯೆದುರು ನಿಂತಾಗೆಲ್ಲ ಅದು ನಮ್ಮ ಕಣ್ಣು ಕುಕ್ಕುತ್ತದೆ. ಹತ್ತರಲ್ಲಿ ಒಬ್ಬರು ಈ ಸಲಹೆಗಳನ್ನು ಅನುಸರಿಸಿದರೂ ಸಾಕು, ೩೦೦ ರೂಂಗಳಿರುವ ಆ ಹೋಟೆಲಿನಲ್ಲಿ ಭಾರೀ ನೀರಿನ ಉಳಿತಾಯ.

ಒಂದು ಹೋಟೆಲಿನಲ್ಲಿಯೇ ಗ್ರಾಹಕರಿಗೆ ಈ ರೀತಿ ನೀರಿನ ಪಾಠ ಕಲಿಸುತ್ತಿರುವಾಗ, ನಮ್ಮ ಮನೆಗಳಲ್ಲಿ ಮಕ್ಕಳಿಗೆ ಎಷ್ಟೆಲ್ಲ ನೀರಿನ ಪಾಠ ಕಲಿಸಲು ಸಾಧ್ಯವಿದೆ, ಅಲ್ಲವೇ?

ಹೇಗೆ ಮಾತಾಡಬೇಕು? ಹೇಗೆ ಊಟ ಮಾಡಬೇಕು? ಹೇಗೆ ಉಡುಪು ಹಾಕಿಕೊಳ್ಳಬೇಕು? ಎಂಬುದನ್ನೆಲ್ಲ ಅಪ್ಪಅಮ್ಮ ಮಕ್ಕಳಿಗೆ ಮುತುವರ್ಜಿಯಿಂದ ಕಲಿಸುತ್ತಾರೆ.  ಅಷ್ಟೇ ಮುತುವರ್ಜಿಯಿಂದ ನೀರಿನ ಮಿತಬಳಕೆಯನ್ನೂ ಕಲಿಸಿದರೆ ಸಾಕು. ಬಾಲ್ಯದಲ್ಲಿ ಅಪ್ಪ ಅಮ್ಮನಿಂದ ಕಲಿತದ್ದು ಕೊನೆ ತನಕ ಉಳಿಯುತ್ತದೆ, ಅಲ್ಲವೇ?

ಮುಖ ತೊಳೆಯುವಾಗ, ಕೈ ತೊಳೆಯುವಾಗ ಮತ್ತು ಸ್ನಾನ ಮಾಡುವಾಗ ಕೆಲವರಿಗೆ ನಳ ತೆರೆದಿಡುವ ಅಭ್ಯಾಸ, ಅಪ್ಪ ಅಮ್ಮನಿಗೆ ಈ ಅಭ್ಯಾಸ ಇದ್ದರೆ, ಮಕ್ಕಳೂ ಅದನ್ನೇ ಕಲಿಯುತ್ತಾರೆ. ತಮ್ಮ ಜೀವನವಿಡೀ ನೀರು ಪೋಲು ಮಾಡುತ್ತಾರೆ, ಅಲ್ಲವೇ?

ಮೊದಲಾಗಿ, ನಮ್ಮ ನೀರಿನ ಬಳಕೆಯ ಅಭ್ಯಾಸ ಸರಿಪಡಿಸಿಕೊಳ್ಳೋಣ. ಆಗ ನಮ್ಮ ಮಕ್ಕಳಿಗೂ ನೀರಿನ ಮಿತಬಳಕೆ ಕಲಿಸಲು ಸುಲಭ. ಈ ರೀತಿಯಲ್ಲಿ ನೀರುಳಿಸುವ ಪಾಠ ನಮ್ಮನಮ್ಮ ಮನೆಯಲ್ಲೇ ಶುರುವಾಗಲಿ.