ನೀರು ಜೀವಜಲ, ತೀರ್ಥದಂತೆ ಬಳಸೋಣ
ಮಂಗಳೂರಿನ ಜನರಿಗೆ ಮೇ 2023ರಿಂದ ನೀರಿನ ರೇಷನಿಂಗ್ ಶುರುವಾಗಿತ್ತು. ಅಂದರೆ, ಎರಡು ದಿನಕ್ಕೊಮ್ಮೆ ಕುಡಿನೀರು ಸರಬರಾಜು. ಎತ್ತರದ ಪ್ರದೇಶಗಳಿಗೆ ನೀರು ಹತ್ತದಿರುವ ಕಾರಣ, ಅಲ್ಲಿಗೆ ಟ್ಯಾಂಕರುಗಳಲ್ಲಿ ನೀರು ಒದಗಣೆ. ಮುಂಗಾರು ಮಳೆ ಬರುವ ತನಕ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ. ಹಿಂದಿನ ಕೆಲವು ವರುಷಗಳಲ್ಲಿಯೂ ನೀರಿನ ಕೊರತೆ ತೀವ್ರವಾಗಿ, ನೀರಿನ ರೇಷನಿಂಗ್ ಜ್ಯಾರಿಯಾಗಿತ್ತು. ಅರುವತ್ತು ಕಿಮೀ ದೂರದ ಉಡುಪಿಯ ನೀರಿನ ಮೂಲವಾದ ಜಲಾಶಯದಲ್ಲಿಯೂ ಕೆಲವೇ ದಿನಗಳಿಗಾಗುವಷ್ಟೇ ನೀರುಳಿದಿದೆ.
2024ರ ಬೇಸಗೆಯಲ್ಲಿಯೂ ಮಂಗಳೂರು ಮತ್ತು ಉಡುಪಿಯಲ್ಲಿ ನಾಗರಿಕರಿಗೆ ನೀರಿನ ಲಭ್ಯತೆ ಆತಂಕಕಾರಿಯಾಗಿಯೇ ಮುಂದುವರಿದಿದೆ.
ಜಗತ್ತಿನ ಹಲವು ನಗರಗಳಲ್ಲಿ ಇದೇ ಪರಿಸ್ಥಿತಿ. ಉದಾಹರಣೆಗೆ ದಕ್ಷಿಣ ಆಫ್ರಿಕಾದ ದಕ್ಷಿಣದ ಮಹಾನಗರ ಕೇಪ್-ಟೌನ್. ಅಲ್ಲಿ 2015ರಿಂದ 2017 ಅವಧಿಯಲ್ಲಿ ಮೂರು ವರುಷಗಳ ಸತತ ಬರಗಾಲದಿಂದಾಗಿ ನಗರಕ್ಕೆ ನೀರು ಪೂರೈಸುವ ಜಲಾಶಯಗಳು ಬತ್ತಿ ಹೋದವು. ಅಲ್ಲಿನ ಆಡಳಿತ ನೀರಿನ ಕಠಿಣ ರೇಷನಿಂಗ್ ಜ್ಯಾರಿಗೆ ತಂದಿತು; ಅಂದರೆ ಒಬ್ಬ ವ್ಯಕ್ತಿಗೆ ದಿನಕ್ಕೆ ಕೇವಲ 50 ಲೀಟರ್ ನೀರು ಲಭ್ಯ. (ಒಬ್ಬ ವ್ಯಕ್ತಿಗೆ ದಿನಕ್ಕೆ ಕನಿಷ್ಠ 120 ಲೀಟರ್ ನೀರು ಅಗತ್ಯ.) ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಕೊನೆಗೆ, ಅಲ್ಲಿನ ಆಡಳಿತ ನಗರದಲ್ಲಿ “ಡೇ ಜೀರೋ” (ಅಂದರೆ ಶೂನ್ಯಜಲ ದಿನ) ಘೋಷಿಸುವ ದಾರುಣ ಸಮಯ ಹತ್ತಿರವಾಯಿತು. ಅನಂತರ, ಬಿರುಸಿನ ಪ್ರಚಾರ ಕಾರ್ಯಕ್ರಮಗಳಿಂದ ನಾಗರಿಕರಲ್ಲಿ ಜಲಜಾಗೃತಿ ಮೂಡಿಸಿ ಪರಿಸ್ಥಿತಿಯನ್ನು ನಿಭಾಯಿಸಲಾಯಿತು.
ಇಂತಹ ಭೀಕರ ಜಲಕ್ಷಾಮದಿಂದ ಜನರು ಪಾಠ ಕಲಿತರೇ? “ಇಲ್ಲ" ಎನ್ನುತ್ತದೆ “ನೇಚರ್ ಸಸ್ಟೇನಬಿಲಿಟಿ" ಎಂಬ ಜರ್ನಲಿನಲ್ಲಿ 10 ಎಪ್ರಿಲ್ 2023ರಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿ. ಅದರ ಅನುಸಾರ, ಆ ನಗರದಲ್ಲಿ ಈಜುಗೊಳಗಳು ಮತ್ತು ಹುಲ್ಲುಗಾವಲುಗಳಿಗಾಗಿ ಹಾಗೂ ಕಾರುಗಳನ್ನು ತೊಳೆಯಲಿಕ್ಕಾಗಿ ಮಾಡಿದ ನೀರಿನ ದುಂದು ವೆಚ್ಚ ಅಲ್ಲಿನ ಜಲಸಂಕಟಕ್ಕೆ ಮುಖ್ಯ ಕಾರಣ.
ನಮ್ಮ ದೇಶದಲ್ಲಿಯೂ ಇದೇ ಪರಿಸ್ಥಿತಿ. ನಗರಗಳಲ್ಲಿ ಹೆಚ್ಚೆಚ್ಚು ಈಜುಗೊಳಗಳು ಮತ್ತು ಹುಲ್ಲುಗಾವಲುಗಳ ನಿರ್ಮಾಣ. ಮನೆಯಂಗಳವನ್ನು ಹಾಗೂ ಕಾರುಗಳನ್ನು ಫಳಫಳ ಹೊಳೆಯುವಂತೆ ನೀರಿನಿಂದ ತೊಳೆಯುವ ಅಭ್ಯಾಸ. ಇವೆಲ್ಲದಕ್ಕೆ ನೀರು ಎಲ್ಲಿಂದ ಬರುತ್ತದೆ? ಎಂಬ ಯೋಚನೆ ಯಾರಿಗೂ ಇದ್ದಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೊಂದು ಸಮಸ್ಯೆ. ಆಯಾ ಪ್ರದೇಶದಲ್ಲಿ ಬೀಳುವ ಮಳೆಗೆ ಸೂಕ್ತವಾದ ಬೆಳೆ ಬೆಳೆಯುವ ಪರಿಪಾಠ ಬದಲಾಗಿದೆ. ಹೆಚ್ಚಿನ ಲಾಭಕ್ಕಾಗಿ ರೊಕ್ಕದ ಬೆಳೆಗಳನ್ನು ಬೆಳೆಯುವ ಪರಿಪಾಠ ಹಬ್ಬುತ್ತಿದೆ. ಅವಕ್ಕೆ ನೀರಿಗಾಗಿ ಬೋರ್-ವೆಲ್‌ಗಳನ್ನು ಕೊರೆಸುವ ಚಾಳಿ ಇಸವಿ 2000ದಿಂದೀಚೆಗೆ ಬಲವಾಗಿದೆ. ಇದರಿಂದಾಗಿ, ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಅಂತರ್ಜಲವನ್ನು ಮೇಲೆತ್ತುವ ದೇಶ ನಮ್ಮದಾಗಿದೆ. ಕೋಲಾರ ಜಿಲ್ಲೆಯಲ್ಲಿ 1,500 ಅಡಿ ಆಳಕ್ಕೆ ಭೂಮಿಯನ್ನು ಕೊರೆದರೂ ನೀರು ಸಿಗದ ಪರಿಸ್ಥಿತಿ! ಅಂತರ್ಜಲ ಎಂಬುದು ಮುಂದಿನ ತಲೆಮಾರುಗಳಿಗಾಗಿ ಪ್ರಕೃತಿ ಜೋಪಾನವಾಗಿಟ್ಟ ನೀರು ಎಂಬ ವಿವೇಕವೇ ಇಲ್ಲವಾಗಿದೆ.
ಹೀಗಿರುವಾಗ, “ನೀರೆಂಬುದು ಜೀವಜಲ” ಎಂಬ ಪ್ರಾಥಮಿಕ ಪಾಠದಿಂದ ಜಲಜಾಗೃತಿ ಶುರು ಮಾಡಬೇಕಾಗಿದೆ. ನಮ್ಮ ನೆಲದಲ್ಲಿ ಬೀಳುವ ಬಹುಪಾಲು ಮಳೆನೀರಿನ ಕೊಯ್ಲು ಮಾಡಲು ಹೆಚ್ಚೆಚ್ಚು ಜನರು ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಒಂದೊಂದು ಲೋಟ ನೀರನ್ನೂ ಅಪವ್ಯಯ ಮಾಡದೆ ಬಳಸಲು ಕಲಿಯಬೇಕಾಗಿದೆ. ನೀರಿನ ದುರುಪಯೋಗ ಮತ್ತು ದುಂದುವೆಚ್ಚವನ್ನು ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳಿಂದ ಪ್ರತಿಬಂಧಿಸಬೇಕಾಗಿದೆ. ಬೋರ್-ವೆಲ್ ಕೊರೆದು ಅಂತರ್ಜಲವೆಂಬ ನಿಧಿಗೆ ಕನ್ನ ಹಾಕುವುದನ್ನು ನಿಷೇಧಿಸಲೇ ಬೇಕಾಗಿದೆ. ಇಲ್ಲವಾದರೆ, ನಮ್ಮ ಮುಂದಿನ ತಲೆಮಾರಿನವರು ಅವರಿಗೆ "ನೀರಿಲ್ಲದಂತೆ" ಮಾಡಿದ ನಮ್ಮ ತಲೆಮಾರಿನವರಿಗೆ ಶಾಪ ಹಾಕುವ ದಿನ ಬಂದೇ ಬರುತ್ತದೆ, ಅಲ್ಲವೇ?
ಹಾಗಾಗಬಾರದು ಎಂದಾದರೆ, ಒಂದೊಂದು ತೊಟ್ಟು ನೀರನ್ನೂ ಎಚ್ಚರದಿಂದ ಬಳಸೋಣ. ಹಾಗೆ ಬಳಸುವ ಕಲೆಯನ್ನು ಮಕ್ಕಳಿಗೂ ಕಲಿಸೋಣ. ಇದಕ್ಕೊಂದು ಸುಲಭದ ದಾರಿ: ನೀರನ್ನು “ದೇವರ ತೀರ್ಥ”ದಂತೆ ಬಳಸುವುದು. ದೇವರ ತೀರ್ಥ ಪವಿತ್ರ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದ ತೀರ್ಥವನ್ನು ಯಾರೂ ಹಾಳು ಮಾಡುವುದಿಲ್ಲ. ಭಕ್ತಿಯಿಂದ ತೀರ್ಥ ಕುಡಿದು, ತಲೆಗೂ ಪ್ರೋಕ್ಷಿಸಿಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ, ಪ್ರತಿಯೊಂದು ತೊಟ್ಟು ನೀರೂ ದೇವರ ತೀರ್ಥವೇ ಆಗಿದೆ. ಈ ಎಚ್ಚರ ನಮ್ಮಲ್ಲಿ ಮೂಡಿದರೆ, ನೀರಿನ ದುರುಪಯೋಗ ಮತ್ತು ದುಂದುವೆಚ್ಚ ನಿಲ್ಲಬಹುದು, ಅಲ್ಲವೇ?