ನೀರು

ನೀರು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ನಾ. ಮೊಗಸಾಲೆ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೨೯೫.೦೦, ಮುದ್ರಣ: ೨೦೨೩

‘ನೀರು” ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು ವಿಶೇಷವಾಗುವುದೇ ಈ ಹೊಳವಿನಿಂದ. ಅವರ ಎಲ್ಲ ಸಾಮಾಜಿಕ ಪ್ರಯೋಗಗಳ ಉತ್ಪನ್ನವಾಗಿ ಸೀತಾಪುರ ಕಾಣಿಸಿಕೊಳ್ಳುತ್ತದೆ. ಪುರಾಣ, ಇತಿಹಾಸ ಪೂರ್ವ ಮತ್ತು ಪ್ರಸ್ತುತ ಭಾರತಗಳು ಅವರ ಸೀತಾಪುರವೆಂಬ ಬಿಂದುವಿನಲ್ಲಿ ಅಭಿಗಮಿಸುತ್ತವೆ. ಸೀತಾಪುರವು ತನ್ನ ರಕ್ತದಲ್ಲೇ ವಾಸ್ತವಪುರದ ಎಲ್ಲ ಸಮಸ್ಯೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಹೊತ್ತಿರುತ್ತದೆ. ಇದು ಬರೀ ಒಂದು ಆದರ್ಶ ಪುರದ ದರ್ಶನವಲ್ಲ. ಅಲ್ಲೇ ಅದು ಮಾಲ್ಗುಡಿಯಿಂದ ಬೇರೆಯಾಗುವುದು. ಸೀತಾಪುರಕ್ಕೆ ಬಿಳಿಯೆಷ್ಟಿದೆಯೊ ಕಪ್ಪೂ ಅಷ್ಟೇ ಇದೆ. ರಾಜಕೀಯ ಒತ್ತಡಗಳು, ಆರ್ಥಿಕ ಪ್ರಲೋಭನೆ, ನಗರ ವಲಸೆ ಮುಂತಾದ ಬಾಹ್ಯ ಆಕ್ರಮಣಗಳನ್ನು ಸಹಿಸಿಕೊಂಡೇ ಅದು ತನ್ನೊಳಗಿನ ವಿಕೃತಿಯನ್ನೂ ಸಹಿಸಬೇಕಿದೆ. ಈ ದೃಷ್ಟಿಯಿಂದ ನೋಡಿದಾಗ ‘ಒಂದು ಸಣ್ಣ ಊರಿನ ಸರಳ ಕತೆ’ ಆಧುನಿಕ ಜಗತ್ತಿನ ಅತಿ ಸಂಕೀರ್ಣ ಆಖ್ಯಾಯಿಕೆಯಾಗಿ ಮಾರ್ಪಾಡಾಗುತ್ತದೆ.

ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಎಂ. ಆರ್. ದತ್ತಾತ್ರಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ…

“ಕದನಗಳು ಬೀಜರೂಪದಲಿ ಬಾಲಿಶವೇ ಕತೆಯೊಂದರಲ್ಲಿ ಕಲ್ಪನೆಯ ಭಾಗವೆಷ್ಟು ಸ್ವಯಂ ಅನುಭವದ ಪ್ರಮಾಣವೆಷ್ಟು ಎನ್ನುವುದು ಒಂದು ಪ್ರಾಚೀನ ಪ್ರಶ್ನೆ. ಎಲ್ಲ ಕತೆಗಾರರನ್ನು ಎಲ್ಲ ಕಾಲದಲ್ಲಿ ಕಾಡುವಂಥದ್ದು. ಕತೆಯೊಂದರ ಪರಿಪ್ರೇಕ್ಷವೆ ಕಲ್ಪನೆಯದು. ಮೂಕಜ್ಜಿಯು ಕಾರಂತರ ಕಲ್ಪನೆಯ ಮೂಸೆಯಿಂದ ಕೋಲು ಹಿಡಿದು ಪಿಟಿಪಿಟಿ ಮಾಡುತ್ತ ಎದ್ದು ಬಂದವಳು. ಮಲೆಗಳಲ್ಲಿ ಮದುಮಗಳಿನ ಗುತ್ತಿ ಮತ್ತು ಅವನ ನಾಯಿ ಹುಲಿಯನ ಅಪೂರ್ವ ಪ್ರೇಮ ಘಟಿಸುವುದು ನಿಜ ಮೇಗರವಳ್ಳಿಯಲ್ಲಲ್ಲ, ಕುವೆಂಪು ಕಲ್ಪಿತ ಲೋಕದಲ್ಲಿ. ಚಿತ್ತಾಲರ ಶಿಕಾರಿಯಲ್ಲಿ, ಬೆಳಗಿನ ನಾಲ್ಕು ಗಂಟೆಗೆ ಎದ್ದು ಕೂತು ಟಿಪ್ಪಣಿ ಬರೆಯುತ್ತ ನನ್ನೆಲ್ಲ ಯಾತನೆಗಳಿಗೆ ಕಾರಣವೇನು ಎಂದು ತನ್ನದೇ ವೃತ್ತದಲ್ಲಿ ಗಿರಕಿ ಹೊಡೆಯುವ ನಾಗಪ್ಪ ನಿಜ ಮುಂಬೈಯವನಲ್ಲ, ಚಿತ್ತಾಲರ ಕಲ್ಪನೆಯ ಮುಂಬಯಿಯವನು. ಇಷ್ಟಾದರೂ, ಕಲ್ಪನೆಯಲ್ಲಿ ಅರಳುವ ಪಾತ್ರಗಳಿಗೆ ಕಥನಗಳಿಗೆ ಉರುವಲು ಒದಗಿಸುವುದು ಈ ಲೋಕವೇ. ನಾವು ನೀವೆಲ್ಲ ಬದುಕುವ ಭೌತಲೋಕವೇ. ಕತೆಗಾರನಿಗೆ ಈ ಲೋಕದ ಅನುಭವವು ದಟ್ಟವಾದಷ್ಟೂ ಕಥಾಲೋಕದ ಪಾತ್ರಗಳು ಗಟ್ಟಿಯಾಗುತ್ತ ಹೋಗುತ್ತವೆ. ತಮ್ಮ ವ್ಯಕ್ತಿತ್ವವನ್ನು ನಿರ್ಭಿಡೆಯಿಂದ ಪ್ರದರ್ಶಿಸುತ್ತವೆ. ನಾ. ಮೊಗಸಾಲೆಯವರ ‘ನೀರು’ ಕಾದಂಬರಿ ತನ್ನ ಅಸಲುತನದಿಂದ ವಿಶ್ವಾಸಾರ್ಹವೆನ್ನಿಸುವುದು ಈ ಕಾರಣಕ್ಕೆ, ಲೇಖಕರ ದಟ್ಟ ಅನುಭವವು ಕಥಾಲೋಕವನ್ನು ಹೊಕ್ಕು ಪಾತ್ರಗಳಾಗಿ ಸೃಷ್ಟಿಯಾಗುವುದಕ್ಕೆ. ವ್ಯಕ್ತಿ ಮತ್ತು ಪಾತ್ರಗಳ ನಡುವಿನ ಅಂತರವನ್ನು ಮರೆಸುವುದಕ್ಕೆ.

ಮೊಗಸಾಲೆಯವರ ಸೀತಾಪುರವು ಕಲ್ಪನೆಯದು. ಕಥಾಲೋಕಕ್ಕೆ ಸೇರಿದ್ದು. ಆದರೆ ಅದರ ಅಣುಅಣುವೂ ಲೇಖಕರು ಕಂಡು ಅನುಭವಿಸಿದ ಸಂಘರ್ಷದಲ್ಲಿ ಬದುಕಿ ಬಾಳಿದ ಈ ಲೋಕದ ವಾಸ್ತವಪುರಕ್ಕೆ ಸೇರಿದ್ದು. ಆರ್.ಕೆ. ನಾರಾಯಣರಿಗೆ ಮಾಲ್ಗುಡಿ ಇದ್ದಂತೆ ಮೊಗಸಾಲೆಯವರಿಗೆ ಸೀತಾಪುರ. ಹಾಗಾಗಿ, ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳು ಎಂದಿಗೂ ಅತಿಮಾನುಷವಾಗದೆ ತಮ್ಮ ನಿಜಲೋಕ ಮಾದರಿಗೆ ನಿಷ್ಠವಾಗಿರುತ್ತವೆ. ತಮ್ಮ ಗಡಿರೇಖೆಗಳನ್ನು ಸೊಗಸಾಗಿ ಗುರುತಿಸಿ ಕೊಂಡಿರುತ್ತವೆ. ತಮ್ಮ ಪರಿಧಿಯೊಳಗೆ ತಮ್ಮ ಶಕ್ತಿ ದೌರ್ಬಲ್ಯಗಳನ್ನು ಗುರುತಿಸಿಕೊಂಡು ಅದರಂತೆಯೇ ನಡೆಯುತ್ತವೆ. ಉದಾಹರಣೆಗೆ, ಈ ಕಾದಂಬರಿಯಲ್ಲಿ ಬರುವ ಇಬ್ಬರು ಸಹೋದರರಲ್ಲಿ ಅಣ್ಣ ಮಹಾಬಲಯ್ಯ ತನ್ನ ತೋಟ-ಮನೆಗೆ ಬರುವ ಕೆಲಸದಾಕೆಯೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿರುತ್ತಾನೆ.

ಅದು ಅವನ ತಮ್ಮ ಗೋವಿಂದಯ್ಯನಿಗೆ ತಿಳಿದಾಗ ಅವನು ಮೊದಲು ಮಾಡುವ ಕೆಲಸವೆಂದರೆ ಆಕೆಯನ್ನು ಏಕಾಂತದಲ್ಲಿ ಭೇಟಿಯಾಗಿ ತನ್ನೊಂದಿಗೂ ಸಂಬಂಧವಿಟ್ಟುಕೊಳ್ಳುವಂತೆ ಕೋರುವುದು. ಏಕೆಂದರೆ ಅಣ್ಣ ತಮ್ಮಂದಿರ ರಕ್ತವೊಂದೇ. ಬೆಳೆದ ಬಗೆಯೊಂದೇ. ನೈತಿಕ-ಅನೈತಿಕ ಚಿಂತನೆಗಳೆಲ್ಲವು ಒಂದೇ. ಇಬ್ಬರೂ ಸಂಸಾರಸ್ಥರಾದರೂ ಈ ಮೂರನೆ ಹೆಣ್ಣಿನ ವಿಚಾರಕ್ಕೆ ಬಂದಾಗ ಅವರ ವಿವೇಚನೆಗೆ ಬರುವುದು ತಮ್ಮ ದೇಹಸುಖ ಮಾತ್ರವೇ. ತಮ್ಮ ಪ್ರವೃತ್ತಿಗಳೇ ಆ ಪಾತ್ರಗಳ ಮಿತಿ. ಇದು ಈ ಲೋಕದ ಮಾದರಿ. ಈ ಲೋಕದ ಜೀವಿಗಳ ಮತ್ತು ಊರುಗಳ ಕತೆ. ಮೂಟೆ ಕಟ್ಟಿ ಲಾರಿಗೆ ತುಂಬಿ ಮತ್ತೆಲ್ಲಿಗೋ ಸಾಗಿಸಿದಂತೆ ಈ ಪಾತ್ರಗಳು ಕಾಂತಾವರವನ್ನು ಬಿಟ್ಟು ನೇರವಾಗಿ ಕಥಾಲೋಕವನ್ನು ಪ್ರವೇಶಿಸಿವೆ. ಹೀಗಾಗಿಯೇ, ವಾಸ್ತವಕ್ಕೆ ತೀರಾ ಹತ್ತಿರದಲ್ಲಿ ಸುಳಿದಾಡುವ ಪಾತ್ರಗಳು ನಾ. ಮೊಗಸಾಲೆ ಯವರದ್ದು. ಅವರ ಪಾಲಿಗೆ ಕಥಾಲೋಕದ ತಾತ್ವಿಕ ಭೂಮಿಕೆ ನಿಜಲೋಕಕ್ಕೆ ಸೇರಿದ್ದು. ಅವರು ಪಾತ್ರಗಳನ್ನು ವಿಶೇಷವಾಗಿ ಸಿದ್ಧ ಮಾಡಬೇಕಿಲ್ಲ. ಅವುಗಳಿಗೆ ಪೋಷಾಕು ತೊಡಿಸಬೇಕಿಲ್ಲ. ಮೇಕಪ್ಪು ಮಾಡಬೇಕಿಲ್ಲ. ಗೆಜ್ಜೆ ಕಿರೀಟ ಕತ್ತಿ ಗುರಾಣಿ ಭುಜಕೀರ್ತಿಗಳನ್ನು ಹೇರಬೇಕಿಲ್ಲ. ಹಾಗೆ ಮಾಡುವುದರಲ್ಲಿ ಕತೆಗಾರರಾಗಿ ಅವರಿಗೆ ಆಸಕ್ತಿಯೂ ಇದ್ದಂತಿಲ್ಲ. ಪಾತ್ರಗಳು ನಿಜಲೋಕದ ಮಾನವ ಪ್ರವೃತ್ತಿಗಳನ್ನು ಪ್ರತಿಫಲಿಸಿದರೆ ಸಾಕು ಎನ್ನುವ ಮನೋಭಾವ ಮೊಗಸಾಲೆಯವರದ್ದು. ಸರಳವಾದಾಗ ಮಾತ್ರ ಸಹಜವೂ ಆಗಬಹುದು ಎನ್ನುವ ಮನೋಧರ್ಮವನ್ನು ಪ್ರಮಾಣೀಕರಿಸುವಲ್ಲಿ ನಾ. ಮೊಗಸಾಲೆಯವರು ಬಹಳ ಹಿಂದೆಯೇ ಯಶಸ್ವಿಯಾಗಿದ್ದಾರೆ. ಈ ಕಾದಂಬರಿಯು ಅದಕ್ಕೆ ಮತ್ತೊಂದು ನಿದರ್ಶನ.

ಸಹೋದರರ ಅರ್ಥರಹಿತ ದ್ವೇಷವು ಮನಃಶಾಸ್ತ್ರದ ದೃಷ್ಟಿಯಿಂದ ವಿಶೇಷವಾದರೂ ಈ ಕಾದಂಬರಿಯ ಸಾರ್ಥಕತೆಯಿರುವುದು ಅದನ್ನು ಚಿತ್ರಿಸುವುದರಲ್ಲಲ್ಲ. ಬದಲಿಗೆ, ಸಂಕುಚಿತ ಅರ್ಥದಲ್ಲಿ ಪ್ರಾರಂಭವಾಗುವ ಕದನವು ವಿಸ್ತಾರವಾಗುತ್ತ ಸಾಗಿ ನೀರಿನಲ್ಲೇಳುವ ಉಂಗುರದ ಅಲೆಗಳಂತೆ ಹರಡುತ್ತ ಇಡೀ ಊರಿನ ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳಲ್ಲಿ ತನ್ನ ಪಾತ್ರವನ್ನು ವಹಿಸುವುದರಲ್ಲಿ ಕಾಣುತ್ತದೆ. ಎಲ್ಲ ಕದನಗಳ ಬೀಜಾರ್ಥಗಳು ಬಾಲಿಶವಾಗಿರುತ್ತವೆ. ಆದರೆ ಒಮ್ಮೆ ಶುರುವಾದ ಮೇಲೆ ಅವು ಹತೋಟಿ ತಪ್ಪುತ್ತವೆ. ಯಾರಿಂದಲೂ ಅವನ್ನು ನಿಯಂತ್ರಿಸಲಾಗುವುದಿಲ್ಲ. ಸಾಮಾಜಿಕ ಸಂಗತಿಗಳ ಗೂಢವಿರುವುದೇ ಇಲ್ಲಿ. ಒಂದೇ ಜಾತಿ ಕುಲಗಳಲ್ಲಿ ಜನಿಸಿದ ಅಸ್ಥಿರ ಮನಃಸ್ಥಿತಿಯ ಇಬ್ಬರ ಭ್ರಾತೃದ್ವೇಷ ನೋಡನೋಡುತ್ತಿದ್ದಂತೆ ಯುದ್ಧದ ಕ್ಷಿಪಣಿಯಂತೆ ಹೇಗೋ ಎತ್ತಲೊ ತಿರುಗಿ ಊರೊಳಗಿನ ಬ್ರಾಹ್ಮಣ-ಅಬ್ರಾಹ್ಮಣ ಜಾತಿ ವೈಷಮ್ಯವಾಗಿ ಬದಲಾಗುತ್ತದೆ. ಕಾಡ್ಗಿಚ್ಚಿನಂತೆ ದಹಿಸಿ ಊರಿನ ಸಮತೋಲನವನ್ನು ಅಡಿಮೇಲಾಗಿಸುತ್ತದೆ.

ನಾ. ಮೊಗಸಾಲೆಯವರಲ್ಲಿ ಅವೆಲ್ಲವು ಕೂಡಿಬಂದಿವೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿ ಈ ಕಾದಂಬರಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ ಪಂಕ್ತಿ ಭೋಜನದ ಪ್ರಸಂಗವು ಬರುತ್ತದೆ. ಸೀತಾಪುರದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ಆ ದೇವಸ್ಥಾನದ ಆಡಳಿತ ಮೊಕ್ತೇಸರರು ಮಹಾಬಲಯ್ಯನವರು. ಅವರೇ ಜಗಳವಾಡುವ ಸಹೋದರರಲ್ಲಿ ಹಿರಿಯರು. ಆ ಊರಿನ ಕೊರಗರು ಅಸ್ಪೃಶ್ಯರು. ದೇಶಕ್ಕೆ ಸ್ವಾತಂತ್ಯ್ರದ ಬಂದು ಎಷ್ಟು ದಶಕಗಳು ಕಳೆದರೂ, ಅಸ್ಪೃಶ್ಯತೆಯ ನಿವಾರಣಾ ಕಾಯ್ದೆಕಟ್ಟಳೆಗಳು ಬಂದರೂ, ದೇವಸ್ಥಾನದ ಗರ್ಭಗುಡಿ ಪ್ರವೇಶಕ್ಕೆ ಇವರು ಅನರ್ಹರು. ಹಾಗೆಯೇ, ಸಹಪಂಕ್ತಿ ಭೋಜನಕ್ಕೂ ಇವರು ಹೊರಗಿನವರು. ಇದನ್ನು ಬದಲಿಸಬೇಕೆಂದು ಒಬ್ಬ ಕ್ರಾಂತಿಕಾರಿ ದೇವಸ್ಥಾನಕ್ಕೆ ನೋಟೀಸು ಕೊಟ್ಟು ಕೊರಗರನ್ನು ಗುಂಪಿನಲ್ಲಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡುತ್ತಾನೆ. ದೇವಾಲಯದ ಮೊಕ್ತೇಸರರಾದ ಮಹಾಬಲಯ್ಯನವರಿಗೆ ಇಬ್ಬಂದಿ ಸಂಕಟ. ವಿರೋಧಿಸಿದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎನ್ನುವುದು ಅವರಿಗೆ ತಿಳಿದಿದೆ. ಆದರೆ ಕೊರಗರ ಜೊತೆ ಸಹಪಂಕ್ತಿ ಭೋಜನಕ್ಕೆ ಕೂರಲು ಅವರ ಜಾತಿಹಮ್ಮು ಬಿಡಲೊಲ್ಲದು. ಬದಲಾಯಿತೆಂದರೂ ಕರಗಿತೆಂದರೂ ಒಲ್ಲದ ಪರಂಪರಾಗತ ಮೌಲ್ಯಶ್ರದ್ಧೆಗಳು ಮತ್ತು ನಂಬಿಕೆಗಳು ಇನ್ನೂ ಚುಕ್ಕಿ ಗಾತ್ರಗಳಲ್ಲಿ ಅವರ ಮನಸ್ಸಿನಲ್ಲಿ ಇದ್ದೇ ಇವೆ. ಅದಕ್ಕವರು ಕಂಡುಕೊಳ್ಳುವ ಉಪಾಯವು ನೀತಿಗೆಡುವಂಥದ್ದು. ‘ಇಂದು ಗುರುವಾರ. ಸ್ವಾಮಿ ರಾಘವೇಂದ್ರ ರಾಯರ ದಿನ. ನನಗೆ ಉಪವಾಸದ ದಿನ. ಹಾಗಾಗಿ ನಾನು ನಿಮ್ಮೊಂದಿಗೆ ಉಣ್ಣಲಾಗದ್ದಕ್ಕೆ ಕ್ಷಮಿಸಬೇಕು’ ಎಂದು ಕೈಮುಗಿದು ಸಹ ಪಂಕ್ತಿಯಿಂದ ತಪ್ಪಿಸಿಕೊಳ್ಳುತ್ತಾರೆ. ಅದು ಸುಳ್ಳಿರಬಹುದು ಎಂದು ಊಟಕ್ಕೆ ಕುಳಿತ ಕೆಲವರಿಗೆ ಅನ್ನಿಸಿದರೂ ಏನೂ ಮಾಡದವರಾಗುತ್ತಾರೆ. ಜಗತ್ತಿನಲ್ಲಿ ಕಾಯಿದೆ ಕಾನೂನುಗಳ ಮೂಲಕ ಇಂದ್ರಿಯಾನುಭವಕ್ಕೆ ದಕ್ಕುವ ವ್ಯಭಿಚಾರವನ್ನು ತಡೆಯಬಹುದು ಆದರೆ ಮಾನಸಿಕ ವ್ಯಭಿಚಾರವನ್ನು ತಡೆಯಲುಂಟೆ? ನವಭಾರತದಲ್ಲಿ ಒಂದು ಅದ್ಭುತ ಸಾಮಾಜಿಕ ಬದಲಾವಣೆಗಾಗಿ ಅಂಬೇಡ್ಕರ್ ಮತ್ತಿತರ ಜ್ಞಾನಿಗಳಿಂದ ರೂಪುಗೊಂಡ ಅಸ್ಪೃಶ್ಯತೆ ನಿವಾರಣಾ ಚಳುವಳಿಯನ್ನೇ ಮರುಳುಮಾಡಲು ಹೊರಡುವ ಅಪಮೌಲ್ಯ ಹಾದಿಯಾಗಿ ಮಹಾಬಲಯ್ಯನ ಸುಳ್ಳು ನಿಲ್ಲುತ್ತದೆ.

ಈ ಕಾದಂಬರಿಯಲ್ಲಿ ನನಗೆ ವಿಶೇಷವಾಗಿ ಕಂಡಿದ್ದು ಸ್ತ್ರೀ ಪಾತ್ರಗಳು. ಅಣ್ಣ-ತಮ್ಮ ಮನಸ್ಸು ಮುರಿದುಕೊಂಡು ಎಷ್ಟೇ ದೂರ ಸರಿದರೂ ಅವರಿಬ್ಬರ ಪತ್ನಿಯರು ತಮ್ಮ ಗಂಡಂದಿರ ಅಸಹನೆಯ ನಡುವೆಯೂ ಒಂದಾಗಿರುತ್ತಾರೆ. ತಮ್ಮ ಸೈರಣೆ, ಹೊಣೆಗಾರಿಕೆ, ಬದುಕಿನೆಡೆಗೆ ಶ್ರದ್ಧೆ ಮತ್ತು ಕುಟುಂಬ ಮೌಲ್ಯಗಳೆಡೆಗಿನ ಆಳ ನಂಬಿಕೆಯಲ್ಲಿ ತಮ್ಮ ತಮ್ಮ ಸಂಸಾರಗಳನ್ನು ಉಳಿಸಿಕೊಳ್ಳುತ್ತಾರೆ. ಇಡೀ ಕಥಾನಕವನ್ನು ಪುರುಷ ಪಾತ್ರಗಳು ಯಕ್ಷಗಾನದಂತೆ ಅಬ್ಬರದಲ್ಲಿ ಮೆಟ್ಟುವಾಗ ನಿಶ್ಶಬ್ದವಾಗಿ ಒಳಗೊಳಗೇ ನಾಗರಿಕ ಮೌಲ್ಯಗಳನ್ನು ಪುನಃಸ್ಥಾಪಿಸುವ ಕಾರ್ಯವನ್ನು ನಡೆಸುವವರು ಸ್ತ್ರಿ ಪಾತ್ರಗಳೇ. ಉದಾಹರಣೆಗೆ, ಅಣ್ಣನೊಂದಿಗೆ ತನ್ನದೇ ಕಾರಣಕ್ಕೆ ಸಂಬಂಧವನ್ನು ಹೊಂದಿ ಬರೀ ದೇಹವಾಂಛನೆಗೋಸ್ಕರ ಸಮೀಪಿಸುವ ತಮ್ಮನನ್ನು ವಾಪಸ್ಸು ಕಳಿಸಿ ಅಣ್ಣ ತಮ್ಮರ ನಡುವೆ ಬಿರುಕಿಗೆ ಕಾರಣವಾಗುವ ಕೆಲಸದಾಕೆ ಚೋಮುವಿನ ನಡೆಯೂ ಅವಳಿದ್ದ ಸಂದರ್ಭಗಳ ಬೆಳಕಿನಲ್ಲಿ ಮೌಲ್ಯಯುತವೇ. ಅವಳಿಗೆ ಸಂಬಂಧಿಸಿದಂತೆ ಸಹೋದರರ ಭಂಡಗೇಡಿತನದ ಎಲ್ಲ ವಿಚಾರಗಳನ್ನು ಅರಿತ ಮೇಲೂ ಅವರ ಪತ್ನಿಯರು ಅದನ್ನು ತೆಗೆದುಕೊಳ್ಳುವ ರೀತಿ ಉದಾತ್ತವಾದುದು.

ಹೀಗೆ ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆ ಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು ವಿಶೇಷವಾಗುವುದೇ ಈ ಹೊಳವಿನಿಂದ. ಅವರ ಎಲ್ಲ ಸಾಮಾಜಿಕ ಪ್ರಯೋಗಗಳ ಉತ್ಪನ್ನವಾಗಿ ಸೀತಾಪುರ ಕಾಣಿಸಿಕೊಳ್ಳುತ್ತದೆ. ಪುರಾಣ, ಇತಿಹಾಸ ಪೂರ್ವ ಮತ್ತು ಪ್ರಸ್ತುತ ಭಾರತಗಳು ಅವರ ಸೀತಾಪುರವೆಂಬ ಬಿಂದುವಿನಲ್ಲಿ ಅಭಿಗಮಿಸುತ್ತವೆ.

ಸೀತಾಪುರವು ತನ್ನ ರಕ್ತದಲ್ಲೇ ವಾಸ್ತವಪುರದ ಎಲ್ಲ ಸಮಸ್ಯೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಹೊತ್ತಿರುತ್ತದೆ. ಇದು ಬರೀ ಒಂದು ಆದರ್ಶ ಪುರದ ದರ್ಶನವಲ್ಲ. ಅಲ್ಲೇ ಅದು ಮಾಲ್ಗುಡಿಯಿಂದ ಬೇರೆಯಾಗುವುದು. ಸೀತಾಪುರಕ್ಕೆ ಬಿಳಿಯೆಷ್ಟಿದೆಯೊ ಕಪ್ಪೂ ಅಷ್ಟೇ ಇದೆ. ರಾಜಕೀಯ ಒತ್ತಡಗಳು, ಆರ್ಥಿಕ ಪ್ರಲೋಭನೆ, ನಗರ ವಲಸೆ ಮುಂತಾದ ಬಾಹ್ಯ ಆಕ್ರಮಣಗಳನ್ನು ಸಹಿಸಿಕೊಂಡೇ ಅದು ತನ್ನೊಳಗಿನ ವಿಕೃತಿಯನ್ನೂ ಸಹಿಸಬೇಕಿದೆ. ಈ ದೃಷ್ಟಿಯಿಂದ ನೋಡಿದಾಗ ‘ಒಂದು ಸಣ್ಣ ಊರಿನ ಸರಳ ಕತೆ’ ಆಧುನಿಕ ಜಗತ್ತಿನ ಅತಿ ಸಂಕೀರ್ಣ ಆಖ್ಯಾಯಿಕೆಯಾಗಿ ಮಾರ್ಪಾಡಾಗುತ್ತದೆ.” ೨೬೪ ಪುಟಗಳ ಈ ಕಾದಂಬರಿಯು ಬಹಳ ರೋಚಕವಾಗಿ, ಕುತೂಹಲ ಕೆರಳಿಸುತ್ತಾ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.