ನೀರೆತ್ತಲು ಪ್ಲಾಸ್ಟಿಕ್ ಪೆಡಲ್ ಪಂಪ್

ನೀರೆತ್ತಲು ಪ್ಲಾಸ್ಟಿಕ್ ಪೆಡಲ್ ಪಂಪ್

ಮೊದಲ ಬಾರಿ ಪೆಡಲ್ ಪಂಪ್ ನೋಡಿದ ನರೇನ್ ಭಿಂಗೆಯ ತಲೆಯೊಳಗೆ ಗುಂಗಿ ಹುಳ ಹೊಕ್ಕಿತ್ತು. ಯಾಕೆಂದರೆ ಅದನ್ನು ಚಲಾಯಿಸಲು ವಿದ್ಯುತ್ ಬೇಡವೇ ಬೇಡ! ಪೆಡಲ್ ಮಾಡಿದರಾಯಿತು, ಆಳದಿಂದ ನೀರನ್ನು ಮೇಲಕ್ಕೆತ್ತುವ ಪಂಪ್ ಅದು.  ಇನ್ನೂ ಚೆನ್ನಾಗಿರುವ ಪೆಡಲ್ ಪಂಪ್ ತಯಾರಿಸಿದರೆ ರೈತರಿಗೆ ಬಹಳ ಸಹಾಯವಾಗುತ್ತದೆ ಎಂದು ಅವರಿಗೆ ಅನಿಸಿತ್ತು.

ಅವರು ನೋಡಿದ್ದ ಪಂಪ್ ಆಫ್ರಿಕಾಕ್ಕೆ ರಫ್ತಾಗುತಿತ್ತು. ಅದು ಬಹಳ ಭಾರ ಮತ್ತು ಅದರ ಪೆಡಲುಗಳನ್ನು ತುಳಿಯೋದು ಕಷ್ಟ. ಲೋಹದಿಂದ ತಯಾರಾದ ಅದರ ಒಂದು ತೊಂದರೆ: ಬಿಡಿಭಾಗಗಳ ಸವೆತ.

ಈ ಕೊರತೆಗಳನ್ನೆಲ್ಲ ಹೋಗಲಾಡಿಸಿ, ಸುಧಾರಿತ ಪಂಪ್ ತಯಾರಿಸಲು ಸಾಧ್ಯ ಎಂಬುದು ನರೇನರ ನಂಬಿಕೆ. ಥರ್ಮೋ-ಪ್ಲಾಸ್ಟಿಕುಗಳ ಬಗ್ಗೆ ತಿಳಿದಿದ್ದ ನರೇನರಿಗೆ ಪೆಡಲ್ ಪಂಪ್ ತಯಾರಿಗೆ ಅದನ್ನೇ ಬಳಸುವ ಯೋಚನೆ. ಆ ಮೂಲಕ ಪೆಡಲ್ ಪಂಪಿನ ತೂಕವನ್ನು ಕೇವಲ 12 ಕಿಲೋಗ್ರಾಮಿಗೆ ಇಳಿಸಲು ಸಾಧ್ಯ ಎಂಬ ಅಂದಾಜು. ಇದರಿಂದಾಗಿ 60 ಕಿಗ್ರಾ ಮೈತೂಕದ ಮನುಷ್ಯನೂ ಅದನ್ನು ಬೇಕಾದಲ್ಲಿಗೆ ಹೊತ್ತೊಯ್ಯಲು ಸಾಧ್ಯ. ಪ್ಲಾಸ್ಟಿಕ್ ಪೆಡಲ್ ಪಂಪಿನ ಬೆಲೆ ಸುಮಾರು ರೂ.2,500 ಆದೀತೆಂಬ ಲೆಕ್ಕಾಚಾರ (2004ರಲ್ಲಿ).

ಹೊಸ ಪೆಡಲ್ ಪಂಪಿನ ಪ್ರತಿಯೊಂದು ಭಾಗಕ್ಕೂ ಸೂಕ್ತವಾದ ಇಂಜಿನಿಯರಿಂಗ್ ಪ್ಲಾಸ್ಟಿಕನ್ನು ಪತ್ತೆ ಮಾಡುವುದು ನರೇನ್ ಎದುರಿಸಿದ ಸವಾಲು.  ಹೊಸ ಪೆಡಲ್ ಪಂಪಿನ ತಯಾರಿ ಶುರು ಮಾಡುವ ಮುನ್ನ ಅವರಿಂದ ಜಗತ್ತಿನ ಅತ್ಯುತ್ತಮ ಪೆಡಲ್ ಪಂಪುಗಳ ಅಧ್ಯಯನ. ಅಂತೂ ಒಂದು ವರುಷದ ಪೂರ್ವತಯಾರಿ ಹಾಗೂ ಪ್ರಯೋಗಗಳ ಫಲವಾಗಿ ಪ್ಲಾಸ್ಟಿಕ್ ಪೆಡಲ್ ಪಂಪಿನ ಮಾದರಿ ಸಿದ್ಧ.

ಇದರ ಬೆಲೆ ಕಡಿಮೆಯಾದರೂ ಕಾರ್ಯಕ್ಷಮತೆ ಕಡಿಮೆಯಾಗಿರಲಿಲ್ಲ. ಏಳು ಮೀಟರ್ ಆಳದಿಂದ 15 ಮೀಟರ್ ಎತ್ತರಕ್ಕೆ ಗಂಟೆಗೆ 5,000 ಲೀಟರ್ ನೀರೆತ್ತಲು ಈ ಪಂಪ್ ಶಕ್ತ. ಇದು ಲೋಹದ ಪೆಡಲ್ ಪಂಪುಗಳಿಗಿಂತ ಹಲವು ಪಟ್ಟು ಸಮರ್ಥ. ಮಿನಿ-ಸ್ಪ್ರಿಂಕ್ಲರ್ ಜಾಲಕ್ಕೆ ಈ ಪಂಪ್ ಅಳವಡಿಸಿದರೆ, ಒಬ್ಬ ವ್ಯಕ್ತಿ ಒಂದು ಗಂಟೆಯಲ್ಲಿ ಒಂದೆಕ್ರೆಗೆ ನೀರುಣಿಸಲು ಸಾಧ್ಯ. ಈಗ 1.5 ಇಂಚು ಅಥವಾ 2 ಇಂಚು ನಿಪ್ಪಲ್‌ಗಳಿರುವ ಪಂಪುಗಳು ಲಭ್ಯ (ಅಂದರೆ, ಇನ್‌ಲೆಟ್ -ಆಳದಿಂದೆತ್ತುವ ನೀರಿನ- ಪೈಪ್ ಮತ್ತು ಔಟ್‌ಲೆಟ್ -ಹೊರ ತಳ್ಳುವ ನೀರಿನ- ಪೈಪ್ ವ್ಯಾಸ). ಈ ಪಂಪಿನ ತೂಕ 12 ಕಿಗ್ರಾ. ಬೆಲೆ ರೂ.5,600 (2022ರಲ್ಲಿ)

ನರೇನ್ ಭಿಂಗೆ 2004ರಲ್ಲಿ ತನ್ನ ಪ್ಲಾಸ್ಟಿಕ್ ಪೆಡಲ್ ಪಂಪಿನ ಪೇಟೆಂಟಿಗೆ ಅರ್ಜಿ ಸಲ್ಲಿಸಿ, 2007ರಲ್ಲಿ ಪೇಟೆಂಟ್ ಪಡೆದರು. ತನ್ನ ನೂತನ ಪಂಪನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದರು. ಆಗ ಅವರಿಗೊಂದು ಸಂಗತಿ ತಿಳಿಯಿತು: ಮಹಾರಾಷ್ಟ್ರದ ನಾಸಿಕದಲ್ಲಿ, ನರೇಂದ್ರರ ಫ್ಯಾಕ್ಟರಿಯ ಹತ್ತಿರದಲ್ಲಿ ಮಹೇಂದ್ರ ಆಂಡ್ ಮಹೇಂದ್ರ ಕಂಪೆನಿಯ ಕಾರ್ಖಾನೆಯಲ್ಲಿ ಸ್ಕಾರ್ಪಿಯೋ ಹೆಸರಿನ ಹೊಸ ಜೀಪನ್ನು ಇನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿರಲಿಲ್ಲ; ಯಾಕೆಂದರೆ, ಮಾರುಕಟ್ಟೆಯಲ್ಲಿ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳಬಾರದೆಂದು ಆ ಕಂಪೆನಿ ಅದನ್ನು ಕಠಿಣ ಪರೀಕ್ಷೆಗಳಿಗೆ ಒಳಪಡಿಸುತಿತ್ತು.

ತನ್ನ ಪಂಪನ್ನೂ ಕಠಿಣ ಪರೀಕ್ಷೆಗಳಿಗೆ ಒಳಪಡಿಸಲು ನಿರ್ಧರಿಸಿದರು ನರೇನ್. ತನ್ನ ಪಂಪನ್ನು ಹಲವಾರು ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿ, ಅದನ್ನು ಪರೀಕ್ಷಿಸಲು ವಿನಂತಿಸಿದರು. ಇದರಿಂದಾಗಿ ಹೊಸ ಪಂಪಿನ ಎರಡು ನ್ಯೂನತೆಗಳನ್ನು ಪತ್ತೆ ಮಾಡಿ, ಅವನ್ನು ಸರಿಪಡಿಸಲು ನರೇನರಿಗೆ ಸಾಧ್ಯವಾಯಿತು.

ಬ್ಯಾಂಕಾಕಿನಲ್ಲಿ ಜರಗಿದ ಸರಕಾರೇತರ ಸಂಸ್ಥೆಗಳ (ಎನ್‌ಜಿಓ) ಸಮಾವೇಶದಲ್ಲಿ ತನ್ನ ಹೊಸ ಪಂಪನ್ನು ಪ್ರದರ್ಶನಕ್ಕೆ ಇಟ್ಟಿದ್ದರು ನರೇನ್. ಅಲ್ಲಿ, 140 ಕಿಗ್ರಾ ತೂಕದ ವ್ಯಕ್ತಿಯೊಬ್ಬ ಅದನ್ನು ಹತ್ತಿ ಪೆಡಲ್ ಮಾಡಿದಾಗ, ಅದರ ಸಿಲಿಂಡರ್ ಕಿತ್ತು ಬಂತು! ಅನಂತರ ನರೇನ್ ಪಂಪನ್ನು ಇನ್ನಷ್ಟು ಸುದೃಢಗೊಳಿಸಿದರು.

ಹೊಸ ಪೆಡಲ್ ಪಂಪನ್ನು ಯಾವೆಲ್ಲ ಉದ್ದೇಶಕ್ಕೆ ಬಳಸಬಹುದೆಂದು ನರೇನ್ ಪರಿಶೀಲಿಸಿದರು. ಅಲ್ಲಿಯ ವರೆಗೆ ಅವರ ಯೋಚನೆ: ಇದನ್ನು ನೀರಾವರಿ ಉದ್ದೇಶಕ್ಕಾಗಿ ಮಾತ್ರ ಬಳಸಬಹುದು ಎಂಬುದು. ಅದು ಪ್ಲಾಸ್ಟಿಕಿನಿಂದ ನಿರ್ಮಿಸಿದ ಕಾರಣ ಅದರಲ್ಲಿ ಎಲ್ಲಿಯೂ ಲ್ಯೂಬ್ರಿಕೆಂಟ್ ಇಲ್ಲ. ಹಾಗಾಗಿ, ಕುಡಿಯುವ ನೀರನ್ನು ಪಂಪ್ ಮಾಡಲಿಕ್ಕೂ ಹೊಸ ಪಂಪನ್ನು ಬಳಸಬಹುದು ಎಂದು ಅವರಿಗೆ ಹೊಳೆಯಿತು. ಅದಕ್ಕಾಗಿ, ಪಂಪಿಗೆ ಬಳಸುವ ಪ್ಲಾಸ್ಟಿಕ್‌ಗಳಿಗೆ ಕೆಲವು ವಿಶೇಷ ರಾಸಾಯನಿಕಗಳನ್ನು ಸೇರಿಸಿದರು.

ಇವೆರಡೂ ಸುಧಾರಣೆಗಳನ್ನು ಹೊಸ ಪಂಪಿನಲ್ಲಿ ಅಳವಡಿಸಿದ ನಂತರ ಅನೇಕ ಸರಕಾರೇತರ ಸಂಸ್ಥೆಗಳ ಸಹಕಾರದಿಂದ ತನ್ನ ಹೊಸ ಪ್ಲಾಸ್ಟಿಕ್ ಪೆಡಲ್ ಪಂಪನ್ನು ನರೇನ್ ಭಿಂಗೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಮಾಡಿದರು. ಕೃಷಿರಂಗಕ್ಕೆ ಅತ್ಯುತ್ತಮ ಕೊಡುಗೆ ಸಲ್ಲಿಸಿದ್ದಕ್ಕಾಗಿ ಅವರಿಗೆ 2005ರಲ್ಲಿ ಪ್ರಶಸ್ತಿ ನೀಡಲಾಯಿತು - ಪ್ಲಾಸ್ಟಿಂಡಿಯ ಫೌಂಡೇಷನಿನಿಂದ “ಪ್ಲಾಸ್ಟಿಕಾನ್" ಪ್ರಶಸ್ತಿ. ಅದೇ ವರುಷ, ಇಗತಪುರಿಯ ಗ್ರಾಮಸ್ಥರು, ಆಗಿನ ರಾಷ್ಟ್ರಪತಿ ಶ್ರೀ ಎ.ಪಿ.ಜೆ. ಅಬ್ದುಲ್ ಕಲಾಮ್ ಅವರನ್ನು ತಮ್ಮ ಗ್ರಾಮಕ್ಕೆ ಆಹ್ವಾನಿಸಿ, ಈ ಸರಳ ಪಂಪಿನ ಕಾರ್ಯವಿಧಾನ ತೋರಿಸಿದರು. ಇದರಿಂದಾಗಿ ಈ ಅನುಶೋಧನೆಗೆ ಭಾರೀ ಪ್ರಚಾರ ಸಿಕ್ಕಿತು.

ಆಗಿನಿಂದ ಮಹಾರಾಷ್ಟ್ರದ ನಾಸಿಕದ "ಭಿಂಗೆ ಬ್ರದರ್ಸ್” ಕಂಪೆನಿಯ ಉತ್ಪನ್ನವಾದ ಪ್ಲಾಸ್ಟಿಕ್ ಪೆಡಲ್ ಪಂಪ್ ಜನಪ್ರಿಯವಾಗಿದೆ. ಮಾಳವಿ, ಜಾಂಬಿಯಾ ಇತ್ಯಾದಿ ದೇಶಗಳಿಗೆ ಸಾವಿರಾರು ಪ್ಂಪುಗಳನ್ನು ಅವರು ರಫ್ತು ಮಾಡಿದ್ದಾರೆ. ಎರಡು ವರುಷಗಳ ನಂತರ, ಹೆಚ್ಚುತ್ತಿರುವ ಬೇಡಿಕೆ ಪೂರೈಸಲಿಕ್ಕಾಗಿ ಇನ್ನೊಂದು ಘಟಕವನ್ನೂ ನಿರ್ಮಿಸಿದರು. ಇವರು ಸೈಕಲ್ ಪಂಪಿನಂತಹ ಪೆಡಲ್ ಪಂಪ್ ಕೂಡ ಆವಿಷ್ಕರಿಸಿದ್ದಾರೆ (5 ಮೀಟರ್ ಆಳದಿಂದ ನೀರು ಎತ್ತಿ, 15 ಮೀಟರ್ ಎತ್ತರದ ವರೆಗೆ -ಅಥವಾ 300 ಮೀಟರ್ ದೂರದ ವರೆಗೆ ನೀರು ತಳ್ಳಬಲ್ಲ ಪಂಪ್) ಅದೂ ಮಾರಾಟಕ್ಕೆ ಲಭ್ಯ.  ಇವರ ವೆಬ್-ಸೈಟ್ https://ecoflowindia.com (ಕಂಪೆನಿಯ ವಿಳಾಸ: ಡಬ್ಲ್ಯು-62, ಎಮ್.ಐ.ಡಿ.ಸಿ., ಸಾತ್ಪುರ, ನಾಸಿಕ್, ಮಹಾರಾಷ್ಟ್ರ 422007) ಫೋನ್: 253 2351181/2351481 Email: sales@ecoflowindia.com

ಸೂಕ್ತ ಅನುಶೋಧನೆಗಳು ಹಾಗೂ ತಂತ್ರಜ್ನಾನ ಅಭಿವೃದ್ಧಿ ಪಡಿಸಿದರೆ, ರೈತರು ಮತ್ತು ಗ್ರಾಮೀಣ ಜನರು ವೇಗವಾಗಿ ಅವನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ಪ್ಲಾಸ್ಟಿಕ್ ಪೆಡಲ್ ಪಂಪ್.