ನೀರ್ಗುದುರೆಗೆ ರೋಮವಿದ್ದಾಗ ಮತ್ತು ಆಫ್ರಿಕಾದ ಇತರ ಕಥೆಗಳು
ನಿಕ್ ಗ್ರೀವ್ಸ್ ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿ ನಿರೂಪಿಸಿದ ಆಫ್ರಿಕಾದ 36 ದಂತಕತೆಗಳ ಮತ್ತು ಜನಪದ ಕತೆಗಳ ಸಂಕಲನ ಇದು. ಇಂಗ್ಲೆಂಡಿನಲ್ಲಿ ಹುಟ್ಟಿದ ಅವರು ಅಲ್ಲೇ ಶಿಕ್ಷಣ ಪಡೆದರು. ಅವರ ಕಾಲೇಜು ವ್ಯಾಸಂಗ ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದೊಡ್ಡ ಗಣಿ ಪ್ರದೇಶದಲ್ಲಿ ದುಡಿಯಲು ದಕ್ಷಿಣ ಆಫ್ರಿಕಾಕ್ಕೆ ಹೋದರು. ತಮ್ಮ ಕೆಲಸದ ನಿಮಿತ್ತ ದಕ್ಷಿಣ ಮತ್ತು ನೈಋತ್ಯ ಆಫ್ರಿಕಾ, ಜಿಂಬಾಬ್ವೆ ಮತ್ತು ಬೊಟ್ಸ್-ವಾನಾ ದೇಶಗಳ ಕುಗ್ರಾಮಗಳಿಗೆ ಹೋಗಬೇಕಾಯಿತು. ಈ ಅವಧಿಯಲ್ಲಿ ಆಫ್ರಿಕಾದ ವನ್ಯಜೀವಿ ವೈವಿಧ್ಯತೆಯ ಅಧ್ಯಯನದಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡರು. ಅವರು ಇಲ್ಲಿ ನಿರೂಪಿಸಿದ ಕತೆಗಳೇ ಇದಕ್ಕೆ ಪುರಾವೆ. ಟಿ.ಸಿ. ಪೂರ್ಣಿಮಾ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದರ ಗ್ರಂಥಸೂಚಿಯಲ್ಲಿ ಪಟ್ಟಿ ಮಾಡಿರುವ ಪುಸ್ತಕಗಳೂ ಅವರ ಅಧ್ಯಯನದ ಸೂಚಿ: ಆಫ್ರಿಕನ್ ಮಿಥ್ಸ್ ಆಂಡ್ ಲೆಜೆಂಡ್ಸ್; ಆನಿಮಲ್ಸ್ ಆಫ್ ರೊಡೇಸಿಯಾ; ಬಂಟು ಫೋಕ್‌ಲೋರ್; ಬರ್ಡ್ಸ್ ಆಫ್ ಸೌತ್ ಆಫ್ರಿಕಾ; ಲೆಜೆಂಡರಿ ಆಫ್ರಿಕಾ; ಸೈನ್ಸ್ ಆಫ್ ದ ವೈಲ್ಡ್; ಸೌತ್ ಆಫ್ರಿಕನ್ ಫೋಕ್ ಟೇಲ್ಸ್; ಟೇಲ್ಸ್ ಫ್ರಮ್ ದ ಒಕಾವಾಂಗೊ; ಜುಲು ಫೈರ್ ಸೈಡ್ ಟೇಲ್ಸ್ ಇತ್ಯಾದಿ.
ಸಿಂಹ, ಕಡಿಮಾ ಮೊಲ, ಚಿರತೆ, ಚಿರ್ಚ, ಕಾಡುನಾಯಿ, ಕತ್ತೆಕಿರುಬ, ನರಿ, ಆನೆ, ಖಡ್ಗಮೃಗ, ನೀರ್ಗುದುರೆ, ಕಾಡುಕೋಣ, ಬಬುನ್ ಕೋತಿ, ಜಿರಾಫೆ, ನೀರುಜಿಂಕೆ, ಮೊಸಳೆ, ಜೀಬ್ರಾ, ಸೆಸಬಿ ಹರಿಣ, ಕಾಡುಹಂದಿ, ಆಮೆ, ಹೈರಾಕ್ಸ್ ಮೊಲ, ಉಷ್ಟ್ರ ಪಕ್ಷಿ - ಈ ಪ್ರಾಣಿಗಳಿಗೆ ಸಂಬಂಧಿಸಿದ ಕತೆಗಳು ಇದರಲ್ಲಿವೆ.
ಈ ಪುಸ್ತಕದಲ್ಲಿ ಆಕರ್ಷಕ ಚಿತ್ರಗಳನ್ನು ರಚಿಸಿದವರು ರಾಡ್ ಕ್ಲೆಮೆಂಟ್. 1961ರಲ್ಲಿ ಜನಿಸಿದ ಇವರು ತಮ್ಮ ಕುಟುಂಬದೊಂದಿಗೆ ಪಾಪುವ ನ್ಯೂಗಿನಿಗೆ ಬಂದು ನೆಲೆಸಿದರು. ಅನಂತರ ಸ್ವದೇಶವಾದ ಆಸ್ಟ್ರೇಲಿಯಾಕ್ಕೆ ಮರಳಿ, ನ್ಯೂಸೌತ್ ವೇಲ್ಸಿನಲ್ಲಿ ನೆಲೆ ನಿಂತರು. ಅವರು ಚಿತ್ರಿಸಿದ ಆಫ್ರಿಕಾ ಪ್ರಾಣಿಗಳ ಮೊದಲ ಸರಣಿ ಈ ಪುಸ್ತಕದಲ್ಲಿದೆ. ಇವನ್ನು ಅವರು ರಚಿಸಿದ್ದು ಉದ್ಯಾನ ಮತ್ತು ಮೃಗಾಲಯಗಳಲ್ಲಿ ಕುಳಿತು. ಆದ್ದರಿಂದಲೇ ಅವು ನೈಜವೆನಿಸುವಂತೆ ಮೂಡಿ ಬಂದಿವೆ.
ಇವರಿಬ್ಬರೂ ಜೊತೆಗೂಡಿ ರಚಿಸಿದ ಮೊದಲ ಪುಸ್ತಕ "ಸಿಂಹ ಹಾರುತ್ತಿದ್ದಾಗ ಮತ್ತು ಆಫ್ರಿಕಾದ ಇತರ ಕಥೆಗಳು” ಜನಪ್ರಿಯವಾಯಿತು. ಅದುವೇ ಈ ಎರಡನೇ ಪುಸ್ತಕ ರಚಿಸಲು ಅವರಿಗೆ ಪ್ರೇರಣೆ.
ಈ ಪುಸ್ತಕದ ವಿಶೇಷತೆ: ಕತೆಗಳ ಜೊತೆಗೆ ಆಯಾ ಕತೆಯಲ್ಲಿ ಪ್ರಸ್ತಾಪಿಸಲಾದ ಪ್ರಾಣಿ ಅಥವಾ ಪಕ್ಷಿಯ ಬಗ್ಗೆ (ಕತೆಯ ನಂತರ) ಮಾಹಿತಿ ನೀಡಿರುವುದು. ಪುಸ್ತಕದ ಆರಂಭದಲ್ಲಿ ಆಫ್ರಿಕಾ ಖಂಡದ ಬಗ್ಗೆ ಸಾಮಾನ್ಯ ಮಾಹಿತಿಯನ್ನೂ, (ಆಫ್ರಿಕಾದ ಮೂಲನಿವಾಸಿ ಜನಾಂಗಗಳ ಮಾಹಿತಿ ಸಹಿತ) ಆಫ್ರಿಕಾದ ಸಸ್ಯವಲಯಗಳನ್ನು ಸೂಚಿಸುವ ಭೂಪಟವನ್ನೂ ಮುದ್ರಿಸಲಾಗಿದೆ.
ಸುಮಾರು 35 ವರುಷಗಳ ಮುಂಚೆ ಪ್ರಕಟವಾದ ಈ ಪುಸ್ತಕದ ಪರಿಚಯದಲ್ಲಿ ಆಫ್ರಿಕಾದ ವನ್ಯಜೀವಿಗಳ ನಾಶದ ಬಗ್ಗೆ ನಿಕ್ ಗ್ರೀವ್ಸ್ ಹೀಗೆಂದು ಆತಂಕದಿಂದ ಬರೆದಿದ್ದಾರೆ: ಇತ್ತೀಚೆಗಿನ ವರೆಗೂ ಜಗತ್ತಿನ ವೈವಿಧ್ಯಮಯ ವನ್ಯಜೀವಿಗಳು ಅಧಿಕ ಸಂಖ್ಯೆಯಲ್ಲಿ ಆಫ್ರಿಕಾ ಖಂಡದಲ್ಲಿ ಕಂಡು ಬರುತ್ತಿದ್ದವು. ಆ ಅಗಣಿತ ವನ್ಯಜೀವಿಗಳ ಹಿಂಡುಗಳು ಈಗ ಗತಕಾಲಕ್ಕೆ ಸೇರಿ ಹೋಗಿರುವುದು ಶೋಚನಿಯವಾಗಿದೆ. .. ಮೋಜಿಗಾಗಿ ಬೇಟೆಯಾಡುವವರು, ಆನೆದಂತ ಬೇಟೆಗಾರರು ಮತ್ತು ರೈತರು ಆಫ್ರಿಕಾದ ಹಲವೆಡೆಗಳಲ್ಲಿ ಅಲ್ಲಿಯ ಸ್ಥಳೀಯ ಪ್ರಾಣಿಗಳನ್ನು ಕೊಂದು ಅವುಗಳ ವಿನಾಶಕ್ಕೆ ಕಾರಣರಾಗಿದ್ದಾರೆ.
“ಆಫ್ರಿಕಾದ ಜನಪದ ವೈಭವ ಅಲ್ಲಿನ ವನ್ಯಜೀವಿ ಸಂಕುಲದ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ. ವಿವಿಧ ಪ್ರದೇಶಗಳ ವಿವಿಧ ಜನಾಂಗಗಳು ಹೇಳಿದ್ದ ಹಲವು ಕತೆಗಳು ಮೂಲತಃ ಒಂದೇ ಬಗೆಯವು. ಅವು ನಮಗೂ ನಮ್ಮ ಮುಂದಿನ ಜನಾಂಗಕ್ಕೂ ಜ್ನಾನ ಹಾಗೂ ಉಲ್ಲಾಸದ ಭಂಡಾರವಾಗಿವೆ. ನಿರಂತರವಾಗಿ ಹೆಚ್ಚುತ್ತಿರುವ ನಗರ ಪ್ರದೇಶಗಳ ಜನರಿಗೆ ಈ ಪುಸ್ತಕ ಜಾನಪದ ಮತ್ತು ಪೌರಾಣಿಕ ಸಂಗತಿಗಳನ್ನು ತಿಳಿಸುವುದಲ್ಲದೆ ಆಫ್ರಿಕಾದ ಕಾಡುಗಳ ವಿವಿಧ ಪ್ರಾಣಿಗಳ ಬಗೆಗಿನ ರೋಚಕ ವಿಷಯಗಳನ್ನು ಚಿತ್ರಿಸಲು ಪ್ರಯತ್ನಿಸುತ್ತದೆ. .. ಈ ಹಳೆಯ ಕತೆಗಳು ಎಂದೆಂದಿಗೂ ಮರೆಯಲಾಗದ ಆಫ್ರಿಕಾ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿದೆ” ಎಂದು ನಿಕ್ ಗ್ರೀವ್ಸ್ “ಪರಿಚಯ"ದಲ್ಲಿ ದಾಖಲಿಸಿದ್ದಾರೆ.
“ಚಿರತೆಗಳು ಆಹಾರವನ್ನು ಮರದ ಮೇಲೆ ಬಚ್ಚಿಡುವುದೇಕೆ” ಎಂಬ ಕತೆ, ಚಿರತೆಯ ಗೆಳೆಯರಾಗಿದ್ದ ನರಿ ಮತ್ತು ಕತ್ತೆಕಿರುಬದ ಸ್ವಾರ್ಥ ಬುದ್ಧಿಯನ್ನು ತಿಳಿಸುತ್ತದೆ. ಚಿರತೆ ತಾನು ಮಾಡಿದ ಬೇಟೆಯಲ್ಲಿ ಒಂದು ಪಾಲನ್ನು ಯಾವಾಗಲೂ ತನ್ನ ಗೆಳೆಯರಿಗೆ ಕೊಡುತ್ತಿತ್ತು. ಆದರೆ, ಒಮ್ಮೆ ಚಿರತೆಗೆ ಕಾಯಿಲೆ ಆದಾಗ ಅವು ನೆವನ ಹೇಳಿ ಚಿರತೆಗೆ ಆಹಾರ ಕೊಡಲು ನಿರಾಕರಿಸಿದವು. ಇದರಿಂದಾಗಿ ಚಿರತೆಗೆ ಕೋಪ ಬಂತು. ಅದು ತನ್ನ ನಿರ್ಧಾರ ತಿಳಿಸಿತು: “ನಿಮ್ಮಿಬ್ಬರನ್ನೂ ನನ್ನ ಮಿತ್ರರೆಂದು ತಿಳಿದಿದ್ದೆ. ಆದರೆ ನೀವಿಬ್ಬರು ಒಳ್ಳೆಯವರಲ್ಲ, ಸೋಮಾರಿಗಳು. ಇನ್ನೆಂದಿಗೂ ನನ್ನ ಆಹಾರದಲ್ಲಿ ನಿಮಗೆ ಪಾಲು ಕೊಡುವುದಿಲ್ಲ…" ಅನಂತರ ಚಿರತೆ ಹಾಗೆಯೇ ಮಾಡಿತು.
"ಆನೆ ಗೌರವ ಕೊಡುವುದನ್ನು ಕಲಿಯಿತು" ಎಂಬುದು ಜೀವನ ಪಾಠದ ಕತೆ. ಒಂದು ದಿನ ಆನೆಗೆ ಒಂದು ಅಳಿಲು ಎದುರಾಯಿತು. ದುರಹಂಕಾರಿಯಾದ ಆನೆ ತನ್ನ ಸೊಂಡಿಲಿನಿಂದ ಅಳಿಲನ್ನು ಪಕ್ಕಕ್ಕೆ ನೂಕಿ, "ದಾರಿ ಬಿಟ್ಟು ತೊಲಗು, ನನ್ನ ಬಾಲದಷ್ಟೂ ದಪ್ಪಗಿಲ್ಲದ ನೀನು ನನಗೆ ಅಡ್ಡ ಬರುವೆಯಾ?” ಎಂದಿತು. ಪುಟ್ಟ ಅಳಿಲಿಗೆ ರೇಗಿ ಹೋಯಿತು. ಇತರರಿಗೆ ಮರ್ಯಾದೆ ಕೊಡುವುದನ್ನು ಆನೆಗೆ ಕಲಿಸಬೇಕೆಂದು ಅದು ನಿರ್ಧರಿಸಿತು. "ನಾನೇನೋ ಚಿಕ್ಕವನಿರಬಹುದು. ಆದರೆ, ನೀನು ತಿನ್ನುವುದಕ್ಕಿಂತ ಹತ್ತರಷ್ಟು ಪಾಲು ಜಾಸ್ತಿ ಹಣ್ಣು ತಿನ್ನಬಲ್ಲೆ. ನಿನಗೆ ಸವಾಲು ಹಾಕುತ್ತೇನೆ” ಎಂದು ಸ್ಪರ್ಧೆಗೆ ಆಹ್ವಾನಿಸಿತು. ಆನೆ ಸ್ಪರ್ಧೆಗೆ ಒಪ್ಪಿತು. ಆದರೆ, ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಆನೆ ಸೋತು ಸುಣ್ಣವಾಯಿತು. (ಯಾಕೆಂದರೆ, ಅಳಿಲಿನ ಬಂಧುಗಳೆಲ್ಲವೂ ಸರತಿಯಲ್ಲಿ ಬಂದು ಹಣ್ಣು ತಿನ್ನುತ್ತಲೇ ಇದ್ದವು. ಇದು ಆನೆಗೆ ಗೊತ್ತಾಗಲೇ ಇಲ್ಲ.) ಕೊನೆಗೆ, “ನಿಜವಾಗಲೂ ನೀನೊಂದು ಅದ್ಭುತ ಅಳಿಲು! ನೀನು ಸ್ಪರ್ಧೆಯಲ್ಲಿ ಗೆದ್ದೆ” ಎಂದು ಆನೆ ಸೊಂಡಿಲೆತ್ತಿ ಅಳಿಲಿಗೆ ವಂದಿಸಿತು.
"ಚಿರ್ಚದ ಕೆನ್ನೆಯ ಮೇಲೆ ಕಂಬನಿಯ ಕಲೆ ಏಕಿರುತ್ತದೆ” ಎಂಬ ಕತೆಯಲ್ಲಿ ಮನುಷ್ಯನೊಬ್ಬ ಚಿರ್ಚದ ಮೂರು ಮರಿಗಳನ್ನು ಮೋಸದಿಂದ ಕದ್ದು ಹಳ್ಳಿಗೆ ತರುತ್ತಾನೆ. ತಾಯಿ ಚಿರ್ಚ ವಾಪಾಸಾದಾಗ ತನ್ನ ಮರಿಗಳನ್ನು ಕಾಣದೆ ಅದರ ಹೃದಯ ಒಡೆಯಿತು. ಅದು ಬಿಕ್ಕಿಬಿಕ್ಕೆ ಅಳತೊಡಗಿತು. ರಾತ್ರಿಯಿಡೀ ಅದರ ಅಳುವಿನ ಸದ್ದು ಕೇಳಿದ ಒಬ್ಬ ಮುದುಕ ಏನಾಯಿತೆಂದು ನೋಡಲು ಅಲ್ಲಿಗೆ ಬಂದ. ಅಪಾರ ವಿವೇಕಿಯೂ ಜ್ನಾನಿಯೂ ಆಗಿದ್ದ ಆ ಮುದುಕ ಪ್ರಾಣಿಪಕ್ಷಿಗಳ ಬಗ್ಗೆ ದಯೆಯುಳ್ಳವನೂ ಆಗಿದ್ದ. ಏನಾಗಿದೆ ಎಂದು ತಿಳಿದಾಗ ಅವನು ಅತೀವ ಕೋಪಗೊಂಡ. ಯಾಕೆಂದರೆ ಆ ಸೋಮಾರಿ ಬೇಟೆಗಾರ ಕಳ್ಳತನ ಮಾಡಿದ್ದಲ್ಲದೆ ತಮ್ಮ ಜನಾಂಗದ ಸಂಪ್ರದಾಯಗಳನ್ನು ಮುರಿದದ್ದು ತಪ್ಪಾಗಿತ್ತು; ಈ ರೀತಿಯ ಶಿಕಾರಿ ಅವಮಾನಕರ. ಹಳ್ಳಿಗೆ ಮರಳಿದ ವೃದ್ಧ ನಡೆದಿರುವುದನ್ನು ಇತರ ಹಿರಿಯರಿಗೂ ತಿಳಿಸಿದ. ಹಳ್ಳಿಗರು ಕುಪಿತರಾಗಿ, ಆ ಸೋಮಾರಿ ಬೇಟೆಗಾರನನ್ನು ಶಾಶ್ವತವಾಗಿ ಹಳ್ಳಿಯಿಂದ ಓಡಿಸಿಬಿಟ್ಟರು. ವೃದ್ಧ ಆ ಮೂರು ಮರಿಗಳನ್ನು ತಾಯಿ ಚಿರ್ಚಕ್ಕೆ ಒಯ್ದು ಒಪ್ಪಿಸಿದ. ಆದರೆ ಚಿರ್ಚದ ಮುಖದಲ್ಲಿ ಕಂಬನಿಯ ಕಲೆ ಶಾಶ್ವತವಾಗಿ ಉಳಿದಿದೆ.
ಈ ಸಂಕಲನದ ಕತೆಗಳು ಪ್ರಾಣಿ ಮತ್ತು ಮನುಷ್ಯರ ಅಸೂಯೆ, ಸ್ವಾರ್ಥ, ಹಗೆತನ, ಸೇಡು ಇವನ್ನೆಲ್ಲ ಮನಮುಟ್ಟುವಂತೆ ಕಟ್ಟಿ ಕೊಡುತ್ತವೆ. ಶತಮಾನಗಳ ಮುಂಚೆ ಉತ್ತಮ ಜೀವನಮೌಲ್ಯಗಳನ್ನು ಮೂಲನಿವಾಸಿಗಳು ತಲೆಮಾರಿನಿಂದ ತಲೆಮಾರಿಗೆ ಜಾನಪದ ಹಾಗೂ ದಂತಕತೆಗಳ ಮೂಲಕ ದಾಟಿಸುತ್ತಿದ್ದರು ಎಂಬುದನ್ನು ಈ ಕತೆಗಳು ದಾಖಲಿಸುತ್ತವೆ.