ನೀರ ನಿಶ್ಚಿಂತೆಗೆ ನೂರಾರು ಕೈಗಳು

ನೀರ ನಿಶ್ಚಿಂತೆಗೆ ನೂರಾರು ಕೈಗಳು

ಬರಹ

ಮೊನ್ನೆ ಮಾರ್ಚ್ ೧೫ ರ ಭಾನುವಾರ ನೀರ ಚಿಂತಕರ ಚಾವಡಿ. ವಿವಿಧ ವಯೋಮಾನ ಮತ್ತು ವರ್ಗಗಳ ಸಮ್ಮಿಶ್ರ ಗುಂಪಿನ ಜಮಾವಣೆ. ಇಡೀ ದಿನ ತುಮಕೂರು ಜಿಲ್ಲೆಯ ನೀರ ಸಮಸ್ಯೆಗಳ ಚರ್ಚೆ, ಪ್ರಶ್ನೋತ್ತರ, ಕಾರ್ಯಯೋಜನೆ, ಅಂತರ್ಜಾಲ ಬಳಕೆ ಮೂಲಕ ಪರಿಹಾರ ಹುಡುಕುವತ್ತ ಚಿಂತನೆ.

ಪರಿಸರ ಚಿಂತಕ ಸಿ.ಯತಿರಾಜುರವರ ನೀರು ಮತ್ತು ಇತರ ಸಂಪನ್ಮೂಲಗಳು ಎದುರಿಸುತ್ತಿರುವ  ಸಮಸ್ಯೆಗಳ ವಿಶ್ಲೇಷಣೆಯಿಂದ ಪ್ರಾರಂಭವಾದ ಕಾರ್ಯಕ್ರಮ ಪಂಜಾಬ್ನ ಸಂತರೊಬ್ಬರ ನದಿ ಪುನರುಜ್ಜೀವನದ ಯಶೋಗಾಥೆಯ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಅರ್ಥಪೂರ್ಣವಾಗಿ ಮುಕ್ತಾಯವಾಯಿತು.

“ಇಂಟರ್ನೆಟ್ ಒಂದು ಅಧ್ಬುತ ಜ್ಞಾನದ ಭಂಡಾರ. ಬೇರೆ ಮಾಧ್ಯಮಗಳಿಗಿಂತ ಸರಳ, ಸುಲಭ. ಕ್ಷಣಾರ್ಧದಲ್ಲಿ ವಿಶ್ವದ ಎಲ್ಲ ಮೂಲೆಗಳಿಗೂ ತಲುಪಬಹುದಾದ ಏಕೈಕ ಮಾಧ್ಯಮ” ಎಂದು ಮಾತಿಗಾರಂಭಿಸಿದ ವಸಂತ ಕಜೆ ಅಂತರ್ಜಾಲ ಎಷ್ಟು ಉಪಯುಕ್ತ ಎಂಬುದನ್ನು ವಿವರಿಸಿದರು. ಅದು ಬೆಳೆಯುತ್ತಿರುವ ವೇಗದ ಬಗ್ಗೆ ಗಮನ ಸೆಳೆದರು.

ನಂತರ ಕನ್ನಡ ವಾಟರ್ ಪೋರ್ಟಲ್ನ ಪರಿಚಯ ಮಾಡಲಾಯಿತು. ಅದರ ಉದ್ದೇಶ, ಇತಿಹಾಸ, ಬಳಕೆಗಳ ಕುರಿತು ಹರಿಪ್ರಸಾದ ನಾಡಿಗ್ ವಿವರಣೆ ನೀಡಿದರು.

ಓಂಶಿವಪ್ರಕಾಶ್ ಇಂಟರ್ನೆಟ್ನಲ್ಲಿ ಕನ್ನಡ ಬಳಕೆ ಬಗ್ಗೆ ನೀಡಿದ ಪ್ರಾಯೋಗಿಕ ಮಾಹಿತಿ ಅಮೂಲ್ಯವಾದುದು. ಈ ಬಗ್ಗೆ ಪ್ರತಿಧಿಗಳು ಹೆಚ್ಚು ಪ್ರಶ್ನೆ ಕೇಳುವ ಮೂಲಕ ತಮ್ಮ ಅನುಮಾನ ಸಂದೇಹಗಳಿಗೆ ಪರಿಹಾರ ಪಡೆದುಕೊಂಡರು. ವಾಟರ್ ಪೋರ್ಟಲ್ಲನ್ನು ಬಳಸುವ ಮತ್ತು ಬರೆಯುವ ಬಗ್ಗೆ ಬಹಳಷ್ಟು ಜನ ಉತ್ಸಾಹ ತೋರಿದರು.

ತುಮಕೂರು ಜಿಲ್ಲೆಯಲ್ಲಿ ನೀರು ಮತ್ತು ಗ್ರಾಮೀಣ ಅಭಿವೃದ್ಧಿ ಬಗ್ಗೆ ಕೆಲಸ ಮಾಡುವ ಅನೇಕ ಸ್ವಯಂಸೇವಾ ಸಂಸ್ಥೆಗಳು ಭಾಗವಹಿಸಿದ್ದು ವಿಶೇಷ, ಬೈಫ್ ಸಂಸ್ಥೆ, ಐ.ಡಿ.ಎಫ್. ಆರ್ಡರ್, ಸಾಮಾಜಿಕ ಬದಲಾವಣೆ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸಂವಾದ, ಸಹಜ ಸಮೃದ್ಧ, ಅಭಿವೃದ್ಧಿ - ಇವು ಪ್ರಮುಖವಾದವು. ಜೊತೆಗೆ ಪತ್ರಿಕೋದ್ಯಮ ಮತ್ತು ಇತರ ಕಾಲೇಜು ವಿದ್ಯಾರ್ಥಿಗಳು,  ಸಾಫ್ಟ್ವೇರ್ ಉದ್ಯಮಿಗಳು, ಉಪನ್ಯಾಸಕರು, ಪ್ರಾಂಶುಪಾಲರು, ಪತ್ರಿಕಾ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಸಕ್ತಿಯಿಂದ ಪಾಲ್ಗೊಂಡಿದ್ದರು.

ಅರ್ಘ್ಯಂ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸಂಪದ, ತುಮಕೂರಿನ ಧಾನ್ಯ ಸಂಸ್ಥೆ ಹಾಗೂ ಸಮೃದ್ಧಿ ಸಂಸ್ಥೆಗಳು ಪ್ರಸ್ತುತಪಡಿಸಿದವು.