ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

ಬರಹ

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದು ಕಲ್ಲು ಹೋಯಿತಷ್ಟೇ?

ಇಂತಹುದೇ ಪ್ರಯೋಗ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು. ಪತ್ರಿಕೋದ್ಯಮದ ಆಯ್ದ ವಿದ್ಯಾರ್ಥಿ ಸಮುದಾಯವನ್ನು ಒಂದೆಡೆ ಸೇರಿಸಿ ‘ನೀರ ನಿಶ್ಚಿಂತೆ’- ಅನ್ನದ ನೆಲ..ಅರಿವಿನ ಮುಗಿಲು ಎಂಬ ಕಾರ್ಯಾಗಾರದ ಭಾಗೀದಾರರಾಗುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲ. ಆನ್ಲೈನ್ ‘ಬ್ಲಾಗೀ’ದಾರರಾಗಿ ಇಂತಹ ಸಮುದಾಯದತ್ತ ನೀರ ನಿಶ್ಚಿಂತೆ ಪ್ರಯೋಗಗಳನ್ನು ಬೆಳಕಿಗೆ ತರಲು ವೇದಿಕೆ ಸೃಷ್ಠಿಸಲಾಯಿತು.

ಈ ಪುಟ್ಟ ಸಮುದಾಯ ನಂತರ ಸಮೂಹ ಸಂವಹನದಲ್ಲಿ ತೊಡಗಿ, ಜೀವಾಂಮೃತವಾದ ನೀರಿನ ಬಗ್ಗೆ ಅರಿವು, ತಿಳಿವಳಿಕೆ ಹಾಗು ನೀರ ಪ್ರಬಂಧನೆಯ ಬಗ್ಗೆ ಜೋಡಿಸಿಕೊಂಡು ‘ಜಲ ಯೋಧ’ರನ್ನಾಗಿಸುವ ಪ್ರಯೋಗಕ್ಕೆ ಮುನ್ನುಡಿ ಬರೆಯಲಾಯಿತು. ನೀರಿನ ಹಿತ-ಮಿತವಾದ ಬಳಕೆ, ಮಳೆ ನೀರು ಕೊಯ್ಲು, ಇಂಗು ಗುಂಡಿ, ಕೆರೆ, ಕಟ್ಟಗಳು, ತಲಪರಿಕೆಗಳು, ಬಾವಿ ಹೀಗೆ ಹತ್ತು ಹಲವು ವಿಧದಲ್ಲಿ ನಿಸರ್ಗದತ್ತ ನೀರನ್ನು ಹಿಡಿದಿಟ್ಟು, ಕಲುಷಿತ ಗೊಳ್ಳದಂತೆ ಮುಂಜಾಗ್ರತೆವಹಿಸುವ ಹತ್ತು ಹಲವು ಪ್ರಯೋಗಗಳನ್ನು ಮನವರಿಕೆ ಮಾಡಿಸಲಾಯಿತು.

ಇಂತಹ ಜೀವನ್ಮುಖಿ ಪ್ರಯೋಗಗಳು ಮುಖ್ಯ ವಾಹಿನಿಯ ಮಾಧ್ಯಮಗಳ ಗಮನಕ್ಕೆ ಬಂದಿರುವುದು ತೀರ ವಿರಳ. ಎಷ್ಟೋ ಸಂದರ್ಭಗಳಲ್ಲಿ ಹಳ್ಳಿಗಾಡಿನ ಈ ನೆಲ ಮೂಲ ಜ್ನಾನದ ಪರಿಸರ ಸ್ನೇಹಿ ಪ್ರಯೋಗ ಪ್ರಕಾರಗಳು ನಗರ ಕೇಂದ್ರಿತ ಮಾಧ್ಯಮಗಳ ಗಮನ ಸೆಳೆಯುವಲ್ಲಿ ಅಸಫಲವಾಗಿರುತ್ತವೆ. ಅಂತಹ ಪ್ರೇರಣಾದಾಯಿ ಪ್ರಯೋಗಗಳಿಗೆ ‘ನಾಗರಿಕ ಪತ್ರಿಕೋದ್ಯಮ’ ಉಸಿರಾಗಬಹುದು. ಅರ್ಥಾತ್..ಓದುಗರ ಕೈಗೆ ಲೇಖನಿ ನೀಡಿ ಅವರ ಆಶೋತ್ತರ ಅಥವಾ ಅಭಿಪ್ರಾಯಗಳಿಗೆ ಮನ್ನಣೆ ದೊರಕುವಂತೆ ಮಾಡುವುದು.

ಈಗಂತೂ..ಪತ್ರಿಕೆಗಳು ತಮ್ಮ ಹತ್ತೆಂಟು ಆವೃತ್ತಿಗಳನ್ನು ಹೆಚ್ಚಿಸಿಕೊಂಡು, ಬಣ್ಣಗಳಲ್ಲಿ ಪ್ರಕಟಗೊಳ್ಳುತ್ತಿದ್ದು ತೀರ ಸ್ಥಳೀಯವಾಗಿ ‘ಹೈಲಿ ಲೋಕಲೈಸ್ಡ್’ ವ್ಯವಸ್ಥೆ ಮೈಗೂಡಿಸಿಕೊಂಡು ಹುಬ್ಬಳ್ಳಿ-ಧಾರವಾಡದ ಓದುಗರು ಬೆಳಗಾವಿಯ ಸುದ್ದಿ ಓದದಂತೆ, ಗದುಗಿನ ಓದುಗರು ಬಿಜಾಪುರದ ಸುದ್ದಿ, ಓದಲೇಬೇಕಾದ ಘಟನಾವಳಿಗಳ ಬಗ್ಗೆ ಕಿಂಚಿತ್ತೂ (ಸು)ವಾಸನೆ ಬಡಿಯದಂತೆ ಸುದ್ದಿ ನೀಡುತ್ತಿವೆ. ಒಂದರ್ಥದಲ್ಲಿ ಪತ್ರಿಕೆಗಳು ಓದುಗರನ್ನು ಒಡೆದಾಳುತ್ತಿವೆ! ಎನ್ನಬಹುದು. ಹಾಗಿದ್ದ ಮೇಲೆ ಸುದ್ದಿಯ ಮಹತ್ವ? ದಿಲ್ಲಿ ರಾಜಕಾರಣ, ಬೆಂಗಳೂರಿನ ರಾಜಕೀಯ, ವಿರೋಧಕ್ಕಾಗಿಯೇ ಇರುವ ವಿರೋಧ ಪಕ್ಷದ ಹೇಳಿಕೆಗಳು, ಭಯೋತ್ಪಾದನೆ, ಅತ್ಯಾಚಾರ, ಭೂಕಂಪ, ನೆರೆ ಹಾವಳಿ, ಜನಾಂಗೀಯ, ಧಾರ್ಮಿಕ ಅಥವಾ ಕೋಮು ಗಲಭೆ, ಮತಾಂತರ..ಹೀಗೆ ಒಟ್ಟಾರೆ ದೇಶವನ್ನು ಅಸ್ಥಿರಗೊಳಿಸುವ ಹುನ್ಬಾರದ ಸುದ್ದಿಗಳಿಗೆ ‘ಆಲ್ ಎಡಿಶನ್’ ಗೌರವ!

ಹೀಗಿರುವಾಗ ಜಗಜ್ಜಾಲದ ವಿಶ್ವ ವ್ಯಾಪಿತ್ವ ಹೊಂದಿರುವ ವಯುಕ್ತಿಕ ‘ಬ್ಲಾಗ್’ ಅಥವಾ ‘ಡಾಟ್.ಕಾಮ್’ ಪತ್ರಿಕೆಗಳಿಗೆ ವಿಷಯ ಹಾಗು ಕ್ಷೇತ್ರ ಪರಿಣಿತಿ ಇರುವ ಸಮುದಾಯವೊಂದು ಬರೆಯಲು ಸನ್ನದ್ಧಗೊಂಡರೆ? ಆ ಆಪ್ತ ಬರವಣಿಗೆ ಹೆಚ್ಚು ಫಲಪ್ರದ. ಮುಕ್ತ ಅಭಿವ್ಯಕ್ತಿಗೆ, ಓದುಗರಿಂದ ಸೂಕ್ತ ಪ್ರತಿಕ್ರಿಯೆ ಪಡೆಯಲು ಅದು ಏಣಿಯಾಗಬಲ್ಲುದು. ಹಾಗೆಯೇ ಕೂಡಲೇ ಸಾರ್ವಜನಿಕ ಅಭಿಪ್ರಾಯ ರೂಪಿಸಿ, ಮಂಡಿಸಬೇಕಾದ ಸಾಕಷ್ಟು ವಿಷಯಗಳಿಗೆ ಇದೊಂದು ಹೊಸ ದಾರಿ. ಹೊಸಬರಿಗೆ ಇದೊಂದು ಹೊಸ ಓದಿನ ಮಾರ್ಗ. ವಿಚಾರಗಳ ವಿನಿಮಯಕ್ಕೆ ಆಳವಾದ ಹಾಗು ಅಷ್ಟೇ ನಿರಾಳದ ದಾರಿ.

ಆದರೆ, ನಮ್ಮ ಪತ್ರಿಕೋದ್ಯಮದ ವಿದ್ಯಾರ್ಥಿಗಳಲ್ಲಿ ಬಹುಪಾಲು ಜನ ‘ಟೆಕ್ನೋ ಸೇವಿ’ ಇಲ್ಲ. ಕಂಪ್ಯೂಟರ್ ಬಳಸುವುದು, ತಂತ್ರಾಂಶಗಳ ಬಳಕೆಯ ವಿಧಾನ ಕಲಿಯುವುದು ಎಂದರೆ ಅವರಿಗೆ ತೀರ ಅಲರ್ಜಿ. ‘ಬಳಕೆದಾರ-ಸ್ನೇಹಿ’ ಯಾಗಿ ಗಣಕಯಂತ್ರ, ಎಷ್ಟೋ ತಂತ್ರಾಂಶಗಳು ಬಂದರೂ..ಪ್ರತಿಶತ ೮೫ ರಷ್ಟು ವಿದ್ಯಾರ್ಥಿಗಳು ಇಂದಿಗೂ ‘ಪೇಪರ್ ಲೆಸ್ ನ್ಯೂಸ್ ಪೇಪರ್ ಆಫಿಸಸ್’ ಕಲ್ಪಿಸಿಕೊಳ್ಳಲು ಸಿದ್ಧರಿಲ್ಲ. ಅವರಿಗೆಲ್ಲ ‘ಆನ್ ಲೈನ್ ಪತ್ರಿಕೋದ್ಯಮ’ದ ಬರವಣಿಗೆ ತೀರ ಸಲೀಸು ಎಂಬ ಆತ್ಮ ವಿಶ್ವಾಸ ತುಂಬುವ ಕೆಲಸ ಅವರು ಮಾಡಿದರು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ‘ಅರ್ಘ್ಯಂ’ ಚಾರಿಟೇಬಲ್ ಟ್ರಸ್ಟ್, ಸಂಪದ ಫೌಂಡೇಷನ್ ಹಾಗು ಹುಬ್ಬಳ್ಳಿಯ ವಿದ್ಯಾಭಾರತಿ ಪ್ರತಿಷ್ಠಾನದ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಆಂಡ್ ರಿಸರ್ಚ್ ಜಂಟಿಯಾಗಿ ಈ ಕಾರ್ಯಾಗಾರ ಆಯೋಜಿಸಿದ್ದವು. ಸಂಪದ ಹಾಗು ಕನ್ನಡ ವಿಕಿಪೀಡಿಯಾ ಸಂಸ್ಥಾಪಕ, ಸಂಪಾದಕ ಹರಿಪ್ರಸಾದ ನಾಡಿಗ್ ಹಾಗು ಛಾಯಾಪತ್ರಕರ್ತ ವಸಂತ ಕಜೆ, ಸಮುದಾಯ ತಜ್ನ ಶೀಲ್ ಕುಮಾರ್ ಹಾಗು ಮುರಳಿ ಬ್ಲಾಗ್ ಬರವಣಿಗೆ ಬಗ್ಗೆ, ಜೊತೆಗೆ ಸ್ಥಳೀಯ ಪರಿಸರವಾದಿ ಮುಕುಂದ ಮೈಗೂರ್ ಜೀವಿ ವೈವಿಧ್ಯ ಹಾಗು ಪರಿಸರ ವಿಷಯವಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಉದಯೋನ್ಮುಖ ಪತ್ರಕರ್ತರಿಗೆ ತಿಳಿವಳಿಕೆ ಮೂಡಿಸಿದರು.

ಆಶ್ಚರ್ಯದ ವಿಷಯಎಂದರೆ..ಈ ಕಾರ್ಯಾಗಾರದ ಸಂಯೋಜಕನಾಗಿ ದುಡಿದ ನನಗೆ ಈ ಸಮಾನ ಮನಸ್ಕ, ಸಮುದಾಯದ ಅಭಿವೃದ್ಧಿಪರ ನಿಲುವಿನ ಹರಿ, ವಸಂತ, ಮುರಳಿ ಹಾಗು ಶೀಲ್ ಅವರ ಪರಿಚಯ ವಾದದ್ದು, ಸ್ನೇಹಕ್ಕೆ ತಿರುಗಿದ್ದು ಎಲ್ಲವೂ ಸಂಪದದ ಬರವಣಿಗೆಯಿಂದಾಗಿ. ನಮ್ಮನ್ನೆಲ್ಲ ನೀರ ನಿಶ್ಚಿಂತೆ ಎಂಬ ಈ ಕಾರ್ಯಾಗಾರಕ್ಕೆ ಏಕ ಸೂತ್ರದಲ್ಲಿ ಬಂಧಿಸಿ ಕೆಲಸಕ್ಕೆ ಅಣಿಗೊಳಿಸಿದ ಶ್ರೇಯ ‘ಆನ್ಲೈನ್’ ಬ್ಲಾಗ್ ಬರವಣಿಗೆಗೆ ಸಲ್ಲಬೇಕು. ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸೀಮಿತವಾಗಿದ್ದ ನನ್ನಂತಹ ಬರಹಗಾರರ ಪ್ರಭಾವಳಿ ಉತ್ತರ ಕರ್ನಾಟಕದ ಗಡಿ ದಾಟಿ ಪಸರಿಸಿದ್ದು ಈ ಜಗಜ್ಜಾಲದ ಬರವಣಿಗೆಯಿಂದ.

ಸುದ್ದಿಯ ತ್ಸುನಾಮಿಯಲ್ಲಿ ತೇಲಿರುವ ನಮಗೆ ಸದ್ಯ ಕಸ-ರಸ ಮಧ್ಯದ ವ್ಯತ್ಯಾಸ ಕಂಡುಕೊಳ್ಳುವುದು ಕಷ್ಟವಾಗಿದೆ. ಹಾಗೆಯೇ ಪೂರಕ ಪ್ರತಿಕ್ರಿಯೆ, ಸಕಾರಾತ್ಮಕ ಸ್ಪಂದನೆ, ಸೂಕ್ತ ಅಭಿವ್ಯಕ್ತಿ ಕಳೆದುಕೊಳ್ಳುತ್ತ ಸಾಗುತ್ತಿರುವ ಯುವ ಜನಾಂಗಕ್ಕೆ ‘ಫಾಸ್ಟ್ ಫುಡ್’..‘ಫಾಸ್ಟ್ ಡ್ರಿಂಕ್ಸ್’ ತರಹದ ಕೂಡಲೇ ಸ್ಪಂದಿಸಬಲ್ಲ ‘ಫಾಸ್ಟ್ ಬ್ಲಾಗ್’ ಸಂಸ್ಕೃತಿಗೆ ಹೊಂದಿಕೊಳ್ಳುವುದು ಕಷ್ಟವಾಗಲಿಕ್ಕಿಲ್ಲ.

ಈ ಪ್ರಯೋಗದ ಫಲ ಬಹುಶ: ನಮ್ಮ ಮಕ್ಕಳು ಆದಷ್ಟು ಬೇಗ ಬ್ಲಾಗ್ ಬರವಣಿಗೆಯಲ್ಲಿ ತೊಡಗುವುದು, ಕೆಲ ವಿಶಿಷ್ಠ ಪ್ರಯೋಗಕ್ಕೆ ನಾಂದಿ ಹಾಡುವುದು ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಕಾಲ ಉತ್ತರಿಸಲಿದೆ.