ನೀರ ನೆನಪಿನ ಗ್ರಾಮ ವೃತ್ತಾಂತ

ನೀರ ನೆನಪಿನ ಗ್ರಾಮ ವೃತ್ತಾಂತ

ಪುಸ್ತಕದ ಲೇಖಕ/ಕವಿಯ ಹೆಸರು
ಶಿವಾನಂದ ಕಳವೆ
ಪ್ರಕಾಶಕರು
ಸುವರ್ಣ ಸಹ್ಯಾದ್ರಿ ಪ್ರಕಾಶನ ಅಂಚೆ: ಕಳವೆ, ಶಿರಸಿ ತಾಲೂಕು - 581 402
ಪುಸ್ತಕದ ಬೆಲೆ
ಪುಟಗಳು: 48 ಬೆಲೆ: ರೂ. 60

“ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತವಾಗಿ ನಿಲ್ಲುತ್ತದೆ. ಎರಡು ವರ್ಷದ ಹಿಂದೆ ಎಪ್ರಿಲ್ ತಿಂಗಳ ಉರಿಬಿಸಿಲಿನಲ್ಲಿ ಕೆರೆಯ ಚಿತ್ರ ತೆಗೆಯುತ್ತಿದ್ದೆ. ಆಗ ಮುಕ್ಕಾಲು ಭಾಗ ನೀರು ತುಂಬಿತ್ತು. ಕೆರೆಯ ಸುತ್ತ ಈಗಲೂ ಇದ್ದದ್ದು ಕಲ್ಲುಗುಡ್ಡ, ಕಳ್ಳಿಗಿಡಗಳ ಪ್ರದೇಶ! ಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವರು ಇದು ಮೊನ್ನೆ ಸುರಿದ ಮಳೆ ನೀರೆಂದರು. ಮೊನ್ನೆ ಯಾವತ್ತು ಮಳೆ ಸುರಿಯಿತೆಂದು ಕೊಂಚ ವಿಚಾರಿಸಿದರೆ ಆರು ತಿಂಗಳ ಹಿಂದೆ ಅಕ್ಟೋಬರ್‍ನಲ್ಲಿ ಸುರಿದ ಮಳೆ ನೀರು ಎಂಬುದು ಆಮೇಲೆ ತಿಳಿಯಿತು. ಒಮ್ಮೆ ಕೆರೆ ಭರ್ತಿಯಾದರೆ ಹಲವು ತಿಂಗಳು ನೀರಿರುತ್ತದೆ. ಬರದ ಸೀಮೆಯಲ್ಲಿ ನೀರುಳಿಸುವ ಕೆರೆಯ ವಿಶೇಷವಿದು.
ಮಲೆನಾಡಿನ ಗುಡ್ಡಗಳಲ್ಲಿ ಕೆರೆ ನಿರ್ಮಿಸಿದರೆ ಹರಳು ಮಿಶ್ರಿತ ಕೆಂಪು ಮಣ್ಣಲ್ಲಿ ಬಹುಬೇಗ ನೀರು ಇಂಗುತ್ತದೆ. ಬರೋಬ್ಬರಿ ಒಂದು ಎಕರೆಯಲ್ಲಿ ಒಂದು ಕೋಟಿ ಲೀಟರ್ ಮಳೆ ನೀರು ತುಂಬುವ ಹೊಸ ಕಣಿವೆ ಕೆರೆ ನಮ್ಮ ಊರಲ್ಲಿದೆ. ಒಮ್ಮೆಯಂತೂ ಕೆರೆ ತುಂಬಿದ ವಾರದ ಬಳಿಕ ಅದರಲ್ಲಿ ಪಕ್ಷಿ ಕುಡಿಯಲೂ ನೀರು ಉಳಿದಿರಲಿಲ್ಲ. ಒಂದಿಷ್ಟು ನೀರು ಭೂಮಿಗೆ ಇಂಗಿ, ಇನ್ನಷ್ಟು ಬಸಿದು ಖಾಲಿಯಾಗಿತ್ತು. ಆದರೆ ಜಮಖಂಡಿ, ಹುಬ್ಬಳ್ಳಿ, ಗದಗ, ಬಿಜಾಪುರ, ಹೊಸಪೇಟೆ ಹೀಗೆ ಭಣಭಣ ಬಿಸಿಲಿನ ಯಾವುದೇ ಪ್ರದೇಶಕ್ಕೆ ಹೋದರೂ ಮಳೆ ಸುರಿದು ಆರು ತಿಂಗಳು, ವರ್ಷ ಕಳೆದರೂ ನೀರು ಹಿಡಿದಿಡುವ ಕೆರೆ ರಚನೆಗಳು ದೊರೆಯುತ್ತವೆ. ಇಲ್ಲಿನ ಮಣ್ಣಿಗೆ ನೀರು ಹಿಡಿದಿಡುವ ಶಕ್ತಿಯಿದೆ. ಬಯಲು ಭೂಮಿಗೆ ಪ್ರಕೃತಿ ನೀಡಿದ ವಿಶೇಷ ಅವಕಾಶವಿದು.
ಗದಗದ ಲಕ್ಷ್ಮೇಶ್ವರ ಹೊಲದಲ್ಲಿ ಹೋಗುವಾಗ ಇಲ್ಲಿ ಯಾವಾಗ ಮಳೆ ಸುರಿಯಿತೆಂದು ಕೇಳಿದರೆ ನಾಲ್ಕು ತಿಂಗಳಿಂದ ಮಳೆಯಿಲ್ಲವೆಂದರು. ಆದರೆ ಅಲ್ಲಿನ ಎರೆಮಣ್ಣಿನ ಗುಡ್ಡದ ಹೊಲದ ಕೃಷಿ ಹೊಂಡದಲ್ಲಿ ನೀರು ತುಂಬಿತ್ತು. ಮಳೆ ನಂಬಿ ಬೇಸಾಯ ನಡೆಸುವ ಗದಗದ ಎತ್ತಿನಹಳ್ಳಿ ಊರಿಗೆ ಇರುವುದು ಮೂರು ಕೆರೆ. ಮಳೆ ನೀರು ನಿಂತು ಇಂಗುವ ಕೆರೆ ಮೊದಲನೆಯದು. ಅಲ್ಲಿ ಸೀಮೆಯ ನೀರು ಶೇಖರಣೆಯಾಗಿ ಕೆರೆ ತುಂಬಿ ಹರಿದದ್ದು ಎತ್ತುಗಳು ನೀರು ಕುಡಿಯುವ ಇನ್ನೊಂದು ಕೆರೆ ಪ್ರವೇಶಿಸುತ್ತದೆ. ಅದರ ಪಕ್ಕದಲ್ಲಿ ಕುಡಿಯುವ ನೀರಿಗೆ ಮಳೆ ನೀರು ಶೇಖರಣೆಗೆಂದು ಮೂವತ್ತೈದು ಅಡಿ ಆಳದ ಮೂರು ಎಕರೆ ವಿಶಾಲ ಕೆರೆಯಿದೆ. ಕೆರೆ ಒಮ್ಮೆ ಭರ್ತಿಯಾದರೆ ಇವರಿಗೆ ಒಂದು ವರ್ಷ ನೀರಿಗೆ ತೊಂದರೆಯಿಲ್ಲ! ಹುಡುಕುತ್ತಾ ಹೋದರೆ ಬಯಲು ನಾಡಿನ ಪ್ರತಿ ಕೆರೆಯ ಹಿಂದೆ ನೀರ ಪ್ರೀತಿಯ ಎಚ್ಚರಗಳಿವೆ. ಬಿಸಿಲಿನ ಪ್ರಹಾರಕ್ಕೆ ಕೆರೆಯ ನೀರು ಆವಿಯಾಗುತ್ತದೆ. ಭೂಮಿಗೆ ಇಂಗುತ್ತದೆಂದು ಗಂಟಲು ಒಣಗುವಂತೆ ಸೆಮಿನಾರುಗಳಲ್ಲಿ ದೊಡ್ಡ ಚರ್ಚೆ ಮಾಡುತ್ತೇವೆ. ನೀರು ಆವಿಯಾಗದಂತೆ ಹಸಿರು ಆವರಣ ಹೆಚ್ಚಿಸಬೇಕು, ಬಿಸಿಲು ತಾಗದಂತೆ ರಾಸಾಯನಿಕ ದ್ರವ ಪದರ ರೂಪಿಸಬೇಕೆಂಬ ಸಲಹೆಗಳಿವೆ. ಆದರೆ ಈ ಯಾವುದರ ಅಗತ್ಯವಿಲ್ಲದೇ ಇಲ್ಲಿ ನೀರು ನಗುತ್ತದೆ.
ಚಿತ್ರದುರ್ಗದ ಬಾಂಡ್ರಾಯಿಯಲ್ಲಿ ಫಾರೆಸ್ಟ್ ಗಾರ್ಡ್ ಕೆಲಸ ಮಾಡುವಾಗ ನಾಗಪ್ಪ ಜುಮ್ಮಣ್ಣ ಮೇಟಿ ಅಲ್ಲಿನ ಗುಲುಕಲು ಬಂಡೆಯೆಂಬ ಕಲ್ಲಿನಲ್ಲಿ ಇದ್ದ ನೀರು ನಿತ್ಯ ಕುಡಿಯುತ್ತಿದ್ದರು. ಅಲ್ಲಿ ಮಳೆ ಸುರಿದಾಗ ಶೇಖರಣೆಯಾದ ನೀರು ಅದು. ಅಬ್ಬಬ್ಬಾ ಎಂದರೆ ಇಲ್ಲಿ 350 - 400 ಮಿಲಿ ಲೀಟರ್ ಮಳೆ ಸುರಿಯಬಹುದು! ಕಾಡು ಗುಡ್ಡದ ಬಂಡೆ ಏರಿ ಅಲ್ಲಿನ ನೀರು ಖುದ್ದಾಗಿ ನೋಡಿದ್ದೇನೆ. ಅಲ್ಲಿ ವರ್ಷದ ಎಂಟು ತಿಂಗಳು ಕಲ್ಲಿನಲ್ಲಿ ಮಳೆ ನೀರು ನಿಂತಿರುತ್ತದೆ. ಬೇಸಿಗೆಯಲ್ಲಿ ಕೆಲವೊಮ್ಮೆ 43 - 44 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಿರುತ್ತದೆ. ಇಲ್ಲಿ ಕಲ್ಲು ಬಂಡೆಯಲ್ಲಿನ ನೀರು ನಮ್ಮ ಲೆಕ್ಕದ ಪ್ರಕಾರ ಬಾಣಲೆಯ ಎಣ್ಣೆಯಂತೆ ಕುದಿಯುತ್ತಾ ಕುದಿಯುತ್ತಾ ಬೇಗ ಖಾಲಿಯಾಗಬೇಕು. ಆದರೆ ಹಾಗಾಗುವುದಿಲ್ಲ.
ಬಯಲುಸೀಮೆಯನ್ನು ಆಳಿದವರು ನೀರಿನ ಯೋಜನೆ ರೂಪಿಸುವಾಗ ಶತಮಾನಗಳ ಹಿಂದೆಯೇ ನೀರುಳಿಸುವ ಪರಿಣಾಮಕಾರಿ ಮಾರ್ಗ ಮನಗಂಡಿದ್ದಾರೆ. ನೆಲದ ಅನುಭವ ಜ್ಞಾನಗಳನ್ನು ನಿರ್ಮಾಣಕ್ಕೆ ಬಳಸಿದ್ದಾರೆ. ಕರ್ನಾಟಕ ಕೆರೆ ನೀರಾವರಿ ಇತಿಹಾಸದಲ್ಲಿ ಮೈಸೂರು ಸೀಮೆಯ ಇತಿಹಾಸ ಬಿಟ್ಟರೆ ಹೆಚ್ಚಿನವು ಬಯಲು ಬೆರಗಿನ ದಾಖಲೆಗಳು.
ವಿಜಯನಗರದ ಅರಸು ಪ್ರೌಢ ಪ್ರತಾಪ ದೇವರಾಯನ (ಕ್ರಿ.ಶ. 1406-22) ಮಂತ್ರಿ ಲಕ್ಷ್ಮೀಧರನು ಕೂಸಾಗಿದ್ದಾಗ ಅವನ ತಾಯಿ ‘ಕೆರೆಯಂ ಕಟ್ಟಿಸು ಬಾವಿಯಂ ಸವೆಸು...’ ಎಂದು ಹಾಡು ಹೇಳುತ್ತಿದ್ದಳೆಂದು ಹಂಪಿಯ ಶಾಸನ ಹೇಳುತ್ತದೆ. ವಿಜಯನಗರ ಸಾಮ್ರಾಜ್ಯದ ಅದ್ಭುತ ನೀರಾವರಿ ವ್ಯವಸ್ಥೆಗಳಲ್ಲಿ, ಬಿಜಾಪುರದ ಬಾವಡೆಗಳಲ್ಲಿ, ಚಿತ್ರದುರ್ಗದ ಜೋಗಿಮಟ್ಟಿಯವರ ಸಂತೆ ಹೊಂಡದವರೆಗಿನ ಗುಡ್ಡದ ಕೆರೆಗಳಲ್ಲಿ ನೀರು ಹಿಡಿಯುವ ತತ್ವಗಳನ್ನು ನೋಡಬಹುದು. ಕಲ್ಲುಬಂಡೆಗಳಿರುವಲ್ಲಿ ಕೆರೆ ನಿರ್ಮಿಸಿದ್ದಾರೆ. ಶಿಲಾಪದರಗಳಿರುವ ಜಾಗದಲ್ಲಿ ಒಡ್ಡು ಕಟ್ಟಿದ್ದಾರೆ. ಮಳೆ ನೀರು ವ್ಯರ್ಥ ಹರಿಯದೇ ಇಂಥ ಸ್ಥಳಗಳಲ್ಲಿ ಶೇಖರಣೆಯಾಗುತ್ತದೆ. ಎರೆಮಣ್ಣು ನೀರು ತಾಗಿದರೆ ಜಿಗುಟು, ಈ ಕೆರೆಗಳು ಇಂದಿಗೂ ಊರನ್ನು ಉಳಿಸಿವೆ. ಕೃಷಿಗೆ ನೆರವಾಗುತ್ತಿವೆ. ಜಾನುವಾರುಗಳ ಜೀವ ಉಳಿಸಿವೆ. ಯಾವ ತಂತ್ರಜ್ಞಾನಗಳಿಲ್ಲದ ಕಾಲದಲ್ಲಿ ಇಲ್ಲಿ ಸಂಸ್ಥಾನಗಳು ಉದಿಸಿವೆ. ಲಕ್ಷ ಲಕ್ಷ ಸೈನಿಕರು ನೆಲೆಸಿದ್ದಾರೆ. ಇಲ್ಲಿನ ಬದುಕು ಹೇಗಿತ್ತೆಂದು ಚರಿತ್ರೆ ಸಾರಿ ಸಾರಿ ಹೇಳುತ್ತಿದೆ.
ಬಯಲುಸೀಮೆ ಎಂದಾಕ್ಷಣ ಬಿಸಿಲು, ಬರಗಾಲವೆಂದು ತಿಳಿಯುತ್ತೇವೆ. ಇಲ್ಲಿನ ಮಣ್ಣು, ಕೆರೆಗಳಲ್ಲಿ ನೀರು ಹಿಡಿದಿಡುವ ಶಕ್ತಿ ಮರೆಯುತ್ತೇವೆ. ನೆಲ ಮರೆಯದ ಮಾದರಿಗಳು ಇಲ್ಲಿ ಉಳಿದಿವೆ. ಬೃಹತ್ ನೀರಾವರಿಯೆಂಬ ಕೇಂದ್ರೀಕೃತ ಯೋಜನೆ ರೂಪಿಸುವುದರಲ್ಲಿ ತಂತ್ರಜ್ಞರು ಪಳಗಿದ್ದಾರೆ. ಕಾಲುವೆಯ ನೀರಿನ ಕನಸಿನಿಂದಾಗಿ ಹೊಲ ಗುಡ್ಡಗಳಲ್ಲಿನ ಪುಟ್ಟ ಪುಟ್ಟ ಮಾದರಿಗಳಿಂದ ಮಳೆ ನೀರು ಉಳಿಸಿ ಬಳಸುವ ಸಮುದಾಯ ತಂತ್ರಗಳನ್ನು ಮರೆತಿದ್ದೇವೆ. ಮಳೆ ಬಿದ್ದರೆ ಪ್ರವಾಹ, ಬಿಸಿಲು ಬಂದರೆ ಬರಗಾಲ ಎಂದು ಲೆಕ್ಕ ಹಾಕುವ ಅಧಿಕಾರಿಗಳು, ರಾಜಕಾರಣಿಗಳ ಜಂಟಿ ಯೋಜನೆಯಿಂದ ನೆಲದ ಭವಿಷ್ಯ ಯಾವತ್ತೂ ಉದ್ಧಾರವಾಗುವುದಿಲ್ಲ. ಮೊನ್ನೆ ಮೊನ್ನೆ ಹುಟ್ಟಿಕೊಂಡ ಬೃಹತ್ ನೀರಾವರಿ ಯೋಜನೆಗಳು ಶತಮಾನಗಳ ಪರಂಪರೆಯ ನೆಲದ ಉತ್ಕ್ರಷ್ಟ ಮಾದರಿಗಳನ್ನು ಮರೆಯಲು ಕಲಿಸುತ್ತಿವೆ...”
ಇಲ್ಲಿರುವ ಎಲ್ಲಾ ಜಲ ವರ್ತಮಾನಗಳು ಕೃಷಿಕರ ಒಡಲಿಂದ ಎತ್ತಿ ತಂದವುಗಳು. ಕನ್ನಾಡಿನಾದ್ಯಂತ ನಿರಂತರ ಓಡಾಡುವ ಶಿವಾನಂದ ಕಳವೆ ನೀರ ಸಾಧಕ. ಕಳೆದೆರಡು ದಶಕಗಳಿಂದ ನೀರಿಗೆ ದನಿಯಾಗುತ್ತಿದ್ದ ಸಾಧಕರನ್ನು ಶಿರಸಿ ಕಳವೆಯಲ್ಲಿ ಒಗ್ಗೂಡಿಸಿ ಎರಡು ದಿವಸ ಮಾತುಕತೆ ಮಾಡಿದ್ದಾರೆ. ಭವಿಷ್ಯದ ಜಲಾಂದೋಳನ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹೊರಬಂದ ಪುಟ್ಟ ಪುಸ್ತಕ ‘ಜಲವರ್ತಮಾನ’. ಇದು ನೀರ ನೆನಪಿನ ಗ್ರಾಮ ವೃತ್ತಾಂತ.
 
ಪುಸ್ತಕದ ಹೆಸರು : ಜಲ ವರ್ತಮಾನ
ಲೇಖಕರು : ಶಿವಾನಂದ ಕಳವೆ
ಪುಟಗಳು : 48 ಬೆಲೆ: ರೂ. 60
ಪ್ರಕಾಶಕರು : ಸುವರ್ಣ ಸಹ್ಯಾದ್ರಿ ಪ್ರಕಾಶನ
ಅಂಚೆ: ಕಳವೆ, ಶಿರಸಿ ತಾಲೂಕು - 581 402