ನೀರ ನೆಮ್ಮದಿಗೆ ದಾರಿ ಇಲ್ಲಿದೆ ಕಾಣಿರೋ !

ನೀರ ನೆಮ್ಮದಿಗೆ ದಾರಿ ಇಲ್ಲಿದೆ ಕಾಣಿರೋ !

ನೀರ ನೆಮ್ಮದಿಗೆ ದಾರಿ ಎಲ್ಲಿದೆ? ಕಾಣಬೇಕೆಂದಾದರೆ ಬನ್ನಿ, ಉತ್ತರಕನ್ನಡದ ಶಿರಸಿ ಹತ್ತಿರದ ಹುಲೇಮಳಗಿಗೆ. ’ನೀರ ನೆಮ್ಮದಿಗೆ ಪತ್ರಿಕೋದ್ಯಮ’ ಕಾರ್ಯಾಗಾರದ ಕೊನೆಯ ದಿನ ಶಿಬಿರಾರ್ಥಿಗಳೊಂದಿಗೆ ಅಲ್ಲಿಗೆ ಹೋಗಿದ್ದೆ; ಕಣ್ಣಾರೆ ಕಂಡಿದ್ದೆ.

ಹೋದೊಡನೆ ನಮ್ಮನ್ನೆಲ್ಲ ಆ ಹಳ್ಳಿಯವರು ಕರೆದೊಯ್ದದ್ದು ನಾಗೇಶ ಹೆಗಡೆಯವರ ಕುಟುಂಬದ ಮನೆಗೆ. ಅಲ್ಲಿ ನಮ್ಮನ್ನು ಕೂರಿಸಿ, ಹೊಟ್ಟೆತುಂಬ ಉಪಾಹಾರ ಬಡಿಸಿದ ರೀತಿಯಲ್ಲೇ ಆ ಹಳ್ಳಿಯವರ ಪರಸ್ಪರ ಸಹಕಾರದ ಬಾಳುವೆಯ ಚಿತ್ರಣ ನಮಗೆ ಸಿಕ್ಕಿತ್ತು.

ಅನಂತರ ನಮ್ಮನ್ನೆಲ್ಲ ಕುಳ್ಳಿರಿಸಿ, ಸಚ್ಚಿದಾನಂದ ತಮ್ಮ ಊರಿನ  ಮಳೆನೀರಿನ ಕತೆ ಹೇಳಿದರು, "ವರುಷದಿಂದ ವರುಷಕ್ಕೆ ನಮ್ಮ ಊರಿನ ಬಾವಿಗಳಲ್ಲಿ ನೀರಿನ ಮಟ್ಟ ಇಳೀತಿತ್ತು. ನಮ್ಮ ಅಡಿಕೆ ತೋಟ ಉಳಿಸಿಕೊಳ್ಳೋದು ಹ್ಯಾಗಂತ ಚಿಂತೆ ಹತ್ತಿತ್ತು. ಎರಡು ವರುಷದ ಮುಂಚೆ ಒಂದಿನ ನಮ್ಮ ಹಾಲಿನ ಡೈರಿಯಲ್ಲಿ ಮಾತಾಡ್ತಿರಬೇಕಾದ್ರೆ ಶ್ರೀಪಡ್ರೆಯವರ ’ನೆಲ ಜಲ ಉಳಿಸಿ’ ಪುಸ್ತಕದ ಮಾತು ಬಂತು. ಅದೇ ನಮಗೆ ಸ್ಫೂರ್ತಿ. ಅನಂತರದ ಭಾನುವಾರದಿಂದಲೇ ನಮ್ಮ ಸೊಪ್ಪಿನ ಬೆಟ್ಟದಲ್ಲಿ ಕೆಲಸ ಶುರು ಮಾಡಿದ್ವಿ.ಒಂದೆರಡು ತಿಂಗಳು ಹೆಚ್ಚು ಜನ ಬರಲಿಲ್ಲ. ಆ ಮೇಲೆ ಭಾನುವಾರ ಬಂತಂದ್ರೆ ನಮ್ಮ ಊರಿನ ಜನ ಹಾರೆ ತಗೊಂಡು ಸೊಪ್ಪಿನ ಬೆಟ್ಟಕ್ಕೆ ಹೋಗ್ಲಿಕ್ಕೆ ಶುರು ಮಾಡಿದ್ರು. ಈಗ ಪ್ರತಿ ಭಾನುವಾರಾನೂ ಅಲ್ಲಿ ಜನ ಸೇರ್ತೀವಿ. ಇಂಗುಗುಂಡಿ ಮಾಡ್ತೀವಿ. ಅರ್ಧ ತಾಸಿನಲ್ಲಿ ಎರಡು ಸೆಂಟಿಮೀಟರ್ ಮಳೆ ಬಿದ್ದರೂ ನಮ್ಮ ಸೊಪ್ಪಿನ ಬೆಟ್ಟದಿಂದ ನೀರು ಹರಿದು ಹೋಗಬಾರದು. ಅಲ್ಲೇ ಇಂಗಬೇಕು ಅನ್ನೋದು ನಮ್ಮ ಗುರಿ. ಒಂದೇ ವರುಷದಲ್ಲಿ ಅದನ್ನ ಸಾಧಿಸಿದ್ದೇವೆ."

ಹಿರಿಯರಾದ ವಾಸುದೇವ ಹಗಡೆಯವರು ಮಳೆ ಕೊಯ್ಲಿನಿಂದಾಗಿ ತಮ್ಮ ಊರಿನ ಬಾವಿಗಳಲ್ಲಿ ನೀರಿನ ಮಟ್ಟ ಏರಿದೆಯೆಂದು ತಿಳಿಸಿದರು. ಹುಲೇಮಳಗಿ ಸುಮಾರು ೧,೧೦೦ ಜನರಿರುವ ಪುಟ್ಟ ಹಳ್ಳಿ. ಅಲ್ಲಿನ ೩೫ ಮನೆಗಳಲ್ಲಿ ೨೮ ಮನೆಯವರಿಗೆ ತಲಾ ಸುಮಾರು ಒಂದೆಕೆರೆ ಅಡಿಕೆ ತೋಟ. ಈಗ ತೋಟ ಹಾಗೂ ಫಸಲು ಉಳಿಸಿಕೊಳ್ಳುವ ಬಗ್ಗೆ ಎಲ್ಲರಿಗೂ ನೆಮ್ಮದಿ. ಯಾಕೆಂದರೆ ಅಲ್ಲಿನ ಬಾವಿಗಳಲ್ಲಿ ಕಡು ಬೇಸಗೆಯಲ್ಲೂ ಸಮೃದ್ಧ ನೀರು. ಇದೆಲ್ಲ ಸಾಧ್ಯವಾದದ್ದು ಸಮುದಾಯದ ಕೆಲಸದಿಂದಾಗಿ ಎಂದು ವಾಸುದೇವ ಹೆಗಡೆ ವಿವರಿಸಿದರು.

ಎರಡು ವರುಷಗಳ ಮುನ್ನ ಪಕ್ಕದ ಹಳ್ಳಿಯವರು ಸೋಜಿಗ ಪಟ್ಟ ಸನ್ನಿವೇಶವನ್ನು ಸಚ್ಚಿದಾನಂದ ಹಾವಭಾವ ಸಹಿತ ಬಣ್ಣಿಸಿದರು."ನಮ್ಮ ಊರಿನಲ್ಲಿ ಮಳೆ ಬಂದಾಗ, ಇಲ್ಲಿನ ನೀರು ತೋಡಿನಲ್ಲಿ ಹರಿದು ಅಲ್ಲಿಯ ಕೆರೆಗೆ ಹೋಗಿ ಸೇರ್ತಿತ್ತು. ಆ ವರುಷ ಮೊದಲ ಮಳೆ ಬಂದಾಗ ಹಾಗಾಗಲಿಲ್ಲ. ಮರುದಿನ ಮತ್ತೆ ಇಲ್ಲಿ ಮಳೆ ಬಂದಾಗಲೂ ಅವರ ಕೆರೆಗೆ ಇಲ್ಲಿಂದ ನೀರು ಬರಲಿಲ್ಲ. ’ಇದೇನಾಯಿತು? ಅಲ್ಲಿ ಬಿದ್ದ ಮಳೆ ನೀರೆಲ್ಲ ಎಲ್ಲಿ ಹೋಯಿತು?’ ಎಂದು ಪರೀಕ್ಷೆ ಮಾಡಲು ಆ ಹಳ್ಳಿಯವರು ಇಲ್ಲಿಗೆ ಬಂದರು. ಅವರನ್ನು ನಮ್ಮ ಸೊಪ್ಪಿನ ಬೆಟ್ಟಕ್ಕೆ ಕರೆದುಕೊಂಡು ಹೋಗಿ ತೋರಿಸಿದೆವು. ಮಳೆ ನೀರೆಲ್ಲ ನಮ್ಮ ಇಂಗುಗುಂಡಿಗಳಲ್ಲೇ ಇತ್ತು. ನಿಧಾನವಾಗಿ ಮಣ್ಣಿನಾಳಕ್ಕೆ ಇಂಗುತ್ತಿತ್ತು. ನಮ್ಮ ಮ್ಯಾಜಿಕ್ ಅವ್ರಿಗೆ ಅರ್ಥವಾಯಿತು ನೋಡಿ. ಈಗ ಅವರೂ ಮಳೆ ನೀರಿಂಗಿಸುವ ಕೆಲಸ ಶುರು ಮಾಡಿದ್ದಾರೆ."  

ಅನಂತರ ಹುಲೇಮಳಗಿಯ ಸೊಪ್ಪಿನ ಬೆಟ್ಟಗಳಿಗೆ ಹೋಗಿ ಕಣ್ಣಾರೆ ಕಂಡೆವು. ಅವರು ಹೇಳಿದ್ದೆಲ್ಲ ನಿಜವಾಗಿತ್ತು. ಅಂದು ಮುಂಜಾನೆ ಸುರಿದ ಮಳೆಯ ನೀರು ಹಲವು ಇಂಗುಗುಂಡಿಗಳಲ್ಲಿ ಸಂಗ್ರಹವಾಗಿದ್ದು ನಿಧಾನವಾಗಿ ಇಂಗುತ್ತಿತ್ತು.

ಹುಲೇಮಳಗಿ ಮತ್ತು ಅಲ್ಲಿನ ಓಣಿಕೇರಿ - ಇವು ಇಂದು ನಮ್ಮ ಮಳೆಕೊಯ್ಲಿನ ಪಾಠಶಾಲೆಗಳು. ಒಂದು ಹಳ್ಳಿಯ ಜನರಿಗೆ ಬೆಳೆಕೊಯ್ಲಿನ ಜೊತೆಗೆ ಮಳೆಕೊಯ್ಲಿನ ಪಾಠ ಅರ್ಥವಾದರೆ ಏನಾಗುತ್ತದೆ ಎಂಬುದನ್ನಿಲ್ಲಿ ಕಣ್ಣಾರೆ ಕಾಣಬಹುದು. ಅಲ್ಲಿನವರ ಅನುಭವಗಳಿಂದ ಕಲಿಯೋಣ ಬನ್ನಿ.