ನೀರ ಸುಟ್ಟ ಸೂರ್ಯ

ನೀರ ಸುಟ್ಟ ಸೂರ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ದೇವೂ ಮಾಕೊಂಡ
ಪ್ರಕಾಶಕರು
ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ, ವಿಜಯಪುರ.
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೩

‘ನೀರ ಸುಟ್ಟ ಸೂರ್ಯ’ ದೇವೂ ಮಾಕೊಂಡ ಕವಿತೆಗಳು. ಕೃತಿಯ ಕುರಿತು ಬರೆಯುತ್ತಾ ದೇವು ಮಾಕೊಂಡ ಅವರ ಕವಿತೆಗಳು ತಮ್ಮಷ್ಟಕ್ಕೆ ತಾವು ಬಿಚ್ಚಿಕೊಳ್ಳುತ್ತಾ ಹೋಗುವ ಗುಣವುಳ್ಳವು. ಕವಿತೆಗಳೆಂದರೆ ಗಟ್ಟಿದನಿಯಲ್ಲಿ ಮಾತನಾಡಬೇಕಾದುದಿಲ್ಲ. ಅವುಗಳಿಗೆ ಒಂದು ಒಳದನಿ ಇರುತ್ತದೆ. ಅವು ಒಳಗಿವಿಗಳಿಗೆ ಕೇಳಿದರೆ ಸಾಕು ಎನ್ನುವಂತೆ ದೇವು ಪದ್ಯ ಬರೆಯುತ್ತಾರೆ. ಹಾಗಂತ ಇವು ಸ್ವಗತ ಪದ್ಯಗಳಲ್ಲ. ಇವುಗಳಲ್ಲಿ ಇರುವ ಸೃಜನಶೀಲ ಪಸೆ ಕವಿತೆಗಳಿಗೆ ಮೃದುಲವಾದ ಸ್ಪರ್ಶ ನೀಡುತ್ತವೆ ಎಂದಿದ್ದಾರೆ.

ಜೊತೆಗೆ ದೇವು ಅವರ ಕವಿತೆಗಳ ಕಟ್ಟನ್ನು ಬಿಚ್ಚಿದರೆ ಅಲ್ಲಿ ಎರಡು ಬಗೆಯ ನಿವೇದನೆಗಳಿರುವುದನ್ನು ಕಾಣಬಹುದು: ಒಂದು, ಪ್ರೇಮ ತುಡಿತವನ್ನೇ ಪ್ರಧಾನವಾಗುಳ್ಳ ಕವಿತೆಗಳು; ಮತ್ತೊಂದು ರಾಜಕೀಯ ಶುದ್ಧತೆಗಾಗಿ ಹಂಬಲಿಸುವ ಕವಿತೆಗಳು. ಈ ಕವಿತಾ ಸಂಕಲನದಲ್ಲಿ ಪ್ರಮುಖವಾಗಿ ಕಾಣುವುದು ರಾಜಕೀಯ ಕವಿತೆಗಳೇ. ಅವರ ಕವಿತೆಗಳು ಆಳದಲ್ಲಿ ಪೊಲಿಟಿಕಲ್ ಆಗಿವೆ. ರಾಜಕೀಯ ಎಂದಾಕ್ಷಣ ಸಮಕಾಲೀನವಾಗಿ ಪ್ರಚಲಿತವಿರುವ ಪೊಲಿಟಿಕಲ್ ಕರೆಕ್ಟ್ ನೆಸ್ ತಂತ್ರ ನೆನಪಿಗೆ ಬರುತ್ತದೆ. ಅದರಲ್ಲಿಯೂ ಈಗ ಐಡೆಂಟಿಟಿ ಪಾಲಿಟಿಕ್ಸ್ ಮುನ್ನೆಲೆಯಲ್ಲಿರುವಾಗ ರಾಜಕೀಯವಾಗಿ ಕರೆಕ್ಟ್ ನೆಸ್ ಅನ್ನು ಘೋಷಿಸಿಕೊಳ್ಳುವುದು ಅನಿವಾರ್ಯ ಎನ್ನಿಸಿಬಿಟ್ಟಿದೆ. ದೇವು ಅವರು ಈ ಹಾದಿ ಹಿಡಿಯುವುದಿಲ್ಲ.

ಅವರಿಗೆ ರಾಜಕೀಯ ಎನ್ನುವುದು ನಮ್ಮ ಬದುಕಿಗೆ ಸಂಬಂಧಿಸಿದ ಆಂತರಂಗಿಕವಾದ ಮೌಲ್ಯ ಎನ್ನುವುದರ ಕಡೆಗೆ ಆಸಕ್ತಿ ಇದೆ. ರಾಜಕಾರಣ ಎನ್ನುವುದು ಗಾಂಧಿ ಹೇಳುವಂತೆ ಒಳಗೂ ಹೊರಗೂ ಇರುವಂತದ್ದು; ಒಳಗಿನ ಯುದ್ಧವನ್ನು ಗೆಲ್ಲದ ಹೊರತು ಹೊರಗಿನ ಯುದ್ಧ ಗೆಲ್ಲಲು ಸಾಧ್ಯವಿಲ್ಲ ಎನ್ನುವ ನಂಬಿಕೆ. ಇದು ದೇವು ಅವರಲ್ಲೂ ಕಾಣುತ್ತದೆ. ಹಾಗಾಗಿ ಅವರ ಕವಿತೆಗಳು ರಾಜಕೀಯವನ್ನು ಕುರಿತು ಧ್ಯಾನಿಸುತ್ತವೆ. ಹೀಗೆ ಶುದ್ಧತೆಗಾಗಿ ಹಂಬಲಿಸುವ ಕವಿಗಳು ಸಾಮಾನ್ಯವಾಗಿ ವ್ಯಂಗ್ಯ ಅಥವಾ ತುಸು ಜಾಡಿಸುವ ಧಾಟಿಯನ್ನು ಮೈಗೂಡಿಸಿಕೊಂಡು ಬರೆಯುತ್ತಿರುತ್ತಾರೆ ಎಂದಿದ್ದಾರೆ.

ಈ ಕೃತಿಗೆ ಡಾ.ಆರ್. ತಾರಿಣಿ ಶುಭದಾಯಿನಿ ಅವರು ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ…

ದೇವೂ ಮಾಕೊಂಡ ಅವರು ತಮ್ಮ ಕವಿತೆಗಳ ಕಟ್ಟನ್ನು ಕಳಿಸಿ ಒಂದು ನಾಲ್ಕು ಮಾತು ಬರೆಯಿರಿ ಎಂದು ಕೇಳಿ ಆಗಲೇ ನಾಲ್ಕು ತಿಂಗಳಾಯಿತು! ಒಂದೊಂದು ಮಾತಿಗೂ ಒಂದೊಂದು ತಿಂಗಳ ತೂಕವನ್ನು ತೆಗೆದುಕೊಂಡು ನಾನು ಬರೆಯಬೇಕೆಂದು ಕುಳಿತಾಗ ನನ್ನನ್ನು ಚಕಿತಗೊಳಿಸುವ ಕವಿತೆಗಳು ಕಂಡವು. ಸಮಕಾಲೀನವಾಗಿ ಬರೆಯುತ್ತಿರುವ ದೇವೂ ಅವರಂತೆ ಅನೇಕ ಕವಿಗಳು ಕವಿತೆ ಎನ್ನುವುದನ್ನು ಅನೇಕ ರೀತಿಗಳಲ್ಲಿ ಕವಿತೆಯೆನ್ನುವ ಪ್ರಕಾರವನ್ನು ಗ್ರಹಿಸಿ ಬರೆಯುತ್ತಿದ್ದಾರೆ. ದೇವೂ ಅವರ ಕಾವ್ಯ ಕಟ್ಟುವ ರೀತಿ ವೇಗದ, ಆವೇಶದ ಧಾಟಿಗೆ ಹೊರತಾಗಿ ಬರೆಯುವ ರೀತಿ. ಹಾಗೆಂದೆ ಅವು ನನ್ನ ಗಮನ ಸೆಳೆದವು ಎನ್ನಬಹುದು. ಕಾವ್ಯ ಎನ್ನುವುದು ಮಾಸಿದ ರೂಪಕದಂತೆ ತೋರುತ್ತಿರುವ ಹೊತ್ತಿನಲ್ಲಿ ಕವಿತೆಯನ್ನು ನೆಚ್ಚಿ ನಡೆಯುವುದು ತುಸು ಕಠಿಣವಾದ ಸವಾಲೇ ಸರಿ. ದೇವು ಅವರು ಕಾವ್ಯವನ್ನು ನಂಬಿ ನಡೆಯುತ್ತಿರುವುದಕ್ಕೆ ಉದಾಹರಣೆಯಾಗಿ ಇಲ್ಲಿ ಅವರ ಒಳ್ಳೆಯ ಕವಿತೆಗಳಿವೆ. ಇದು ಮುನ್ನುಡಿಯ ಔಪಚಾರಿಕ ಮಾತುಗಳಲ್ಲ. ನಾನು ಮತ್ತೊಮ್ಮೆ ಮಗದೊಮ್ಮೆ ಓದುವಾಗ ಅನ್ನಿಸಿದ ಅನಿಸಿಕೆ.   

ನಾವೀಗ ಐಡಿಯಾಗಳನ್ನು ಕವಿತೆ ಮಾಡುತ್ತಿದ್ದೇವೆ. ಕಂತೆ ಕಂತೆ ರಾಜಕೀಯ ವಸ್ತುಗಳು, ಅನುಭಾವ, ಲೋಕದ ಸಂತೆಯೆಲ್ಲವೂ ಸರಕು ಸರಕುಗಳಾಗಿ ಮೇಳವಿಸಿ ಚಕ್ಕಳದಂತೆ ಗಟ್ಟಿಯಾಗಿ ಬಿಟ್ಟಿವೆಯೇನೊ. ನಮ್ಮ ಸಂವೇದನೆಯಾಗಿ ಅವು ದೇಹದ ಕಣಕಣದಲ್ಲಿ ಸಂಚರಿಸಿ ಕಟ್ಟಿಕೊಳ್ಳಲು ಮರೆತಿವೆಯೇನೊ? ನಾನರಿಯೆ. ಈ ಹೊತ್ತಿಗೆ ಉತ್ತರ ಸಿಗುವುದು ಕಷ್ಟ. ವರ್ತಮಾನವೆನ್ನುವುದನ್ನು ಅನುಸಂಧಾನ ಮಾಡುವುದು ಕಡುಕಷ್ಟ. ಸಮೀಪದೃಷ್ಟಿಯ ದೋಷ. ವರ್ತಮಾನವನ್ನು ಕಲೆಯನ್ನಾಗಿಸುವುದು ಇನ್ನೂ ಕಷ್ಟು. ಮಾಗದೆ ಉಳಿದ ಹಸಿಬಿಸಿ ಭಾವಗಳು ಹಾಗಾಗೇ ಬರುವಂತೆ ಭಾಸ. ಈ ಗೊಂದಲಗಳಿಂದ ಕವಿತೆಯನ್ನು ಬರೆಯುವುದು, ಓದುವುದು ಒಂದು ಇಷ್ಟದ ಕೆಲಸವಾಗದೆ ಉಳಿದಿದೆಯೇನೊ. 

ದೇವು ಮಾಕೊಂಡ ಅವರ ಕವಿತೆಗಳು ತಮ್ಮಷ್ಟಕ್ಕೆ ತಾವು ಬಿಚ್ಚಿಕೊಳ್ಳುತ್ತಾ ಹೋಗುವ ಗುಣವುಳ್ಳವು. ಕವಿತೆಗಳೆಂದರೆ ಗಟ್ಟಿದನಿಯಲ್ಲಿ ಮಾತನಾಡಬೇಕಾದುದಿಲ್ಲ. ಅವುಗಳಿಗೆ ಒಂದು ಒಳದನಿ ಇರುತ್ತದೆ. ಅವು ಒಳಗಿವಿಗಳಿಗೆ ಕೇಳಿದರೆ ಸಾಕು ಎನ್ನುವಂತೆ ದೇವು ಪದ್ಯ ಬರೆಯುತ್ತಾರೆ. ಹಾಗಂತ ಇವು ಸ್ವಗತ ಪದ್ಯಗಳಲ್ಲ. ಇವುಗಳಲ್ಲಿ ಇರುವ ಸೃಜನಶೀಲ ಪಸೆ ಕವಿತೆಗಳಿಗೆ ಮೃದುಲವಾದ ಸ್ಪರ್ಶ ನೀಡುತ್ತವೆ.          

ದೇವು ಅವರ ಕವಿತೆಗಳ ಕಟ್ಟನ್ನು ಬಿಚ್ಚಿದರೆ ಅಲ್ಲಿ ಎರಡು ಬಗೆಯ ನಿವೇದನೆಗಳಿರುವುದನ್ನು ಕಾಣಬಹುದು: ಒಂದು, ಪ್ರೇಮ ತುಡಿತವನ್ನೇ ಪ್ರಧಾನವಾಗುಳ್ಳ ಕವಿತೆಗಳು; ಮತ್ತೊಂದು ರಾಜಕೀಯ ಶುದ್ಧತೆಗಾಗಿ ಹಂಬಲಿಸುವ ಕವಿತೆಗಳು. ಈ ಕವಿತಾ ಸಂಕಲನದಲ್ಲಿ ಪ್ರಮುಖವಾಗಿ ಕಾಣುವುದು ರಾಜಕೀಯ ಕವಿತೆಗಳೇ.    

ತೆರಿಗೆ ಬಗ್ಗೆ ವ್ಯಂಗ್ಯವಾಗಿ, ವಿಷಾದದ ದನಿಯಲ್ಲಿ ಬರುವ ಈ ಸಾಲುಗಳನ್ನು ನೋಡಬೇಕು:

ಮಣ್ಣಿಗೊಂದಿಷ್ಟು ತೆರಿಗೆ
ಗೋರಿಗೊಂದಿಷ್ಟು/ಮಕ್ಕಳು ಹೆತ್ತಿದ್ದಕ್ಕೂ!
ಬೆಟ್ಟದೆತ್ತರದ ಭಾಷಣ ಕೇಳಿ
ದಾರಿಬಿಟ್ಟ ಹದಿನೆಂಟರ ಹರಯದವರು
ಬಟ್ಟಬಯಲಲ್ಲಿ ಓದು ಬಿಟ್ಟು ಕಣಿವೆಯಲಿ ಮಣ್ಣಾದರು’(ತೆರಿಗೆ ಎಲ್ಲದಕ್ಕೂ)

ಕವಿತೆ ಎನ್ನುವುದು ನಿರಂತರವಾಗಿ ಕಟ್ಟುವ, ಮುರಿದು ಕಟ್ಟುವ ಭಾಷಿಕ, ಸಾಂಸ್ಕøತಿಕ ಕೆಲಸ. ಇವನ್ನು ಇಂದ್ರಿಯಗಳಿಂದ ಪಡೆದುಕೊಳ್ಳುವಂತೆ, ಪರಂಪರೆಯಿಂದಲೂ ಪಡೆದುಕೊಂಡು ಮುನ್ನಡೆಯುವುದಾದರೆ ಅದಕ್ಕೆ ಭವಿಷ್ಯವಿರುತ್ತದೆ ಎನ್ನುವ ನಂಬಿಕೆ ನನ್ನದು. ಈ ದಿಸೆಯಲ್ಲಿ ದೇವು ಅವರು ಆಲೋಚಿಸಲಿ. ಅವರ ಕವಿತೆಯ ಋಜುಮಾರ್ಗ ಅವರನ್ನು ನಡೆಸಲಿ. ಅಲ್ಲದೆ ದೇವು ಅವರ ಕವಿತೆಗಳು ನನ್ನ ನಿರೀಕ್ಷೆಗೂ ಮೀರಿ ಸಹಜ ಕವಿತೆಗಳನ್ನು ಬರೆದಿದ್ದಾರೆ. ಅಂಟಿಯೂ ಅಂಟದಂತೆ, ಜಾಗೃತ ಹಾಗು ಸುಪ್ತಮನಸಿನ ಹದವಾದ ಸಂಗದಂತೆ ಬರೆಯಲು ಅವರಿಗೆ ಸಾಧ್ಯವಾಗಿರುವುದಕ್ಕೆ ನನ್ನ ಮೆಚ್ಚುಗೆ ಹಾಗು ಅಭಿನಂದನೆ ತಿಳಿಸುತ್ತೇನೆ”