ನೀಲಕಂಠನ ಆಹಾರ ವಿಹಾರ

ನೀಲಕಂಠನ ಆಹಾರ ವಿಹಾರ

ನೀಲಕಂಠ ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ಇಂಗ್ಲೀಷ್ ನಲ್ಲಿ ಇಂಡಿಯನ್ ರೋಲರ್ (Indian Roller) ಎಂದು ಕರೆಯಲ್ಪಡುವ ಈ ಪಕ್ಷಿಯ ವೈಜ್ಞಾನಿಕ ಹೆಸರು Coracias benghalensis. ‘ಬ್ಲೂ ಜಾಯ್’ ಎಂಬ ಹೆಸರೂ ಇದಕ್ಕಿದೆ. ನೋಡುವಾಗ ಕೊಂಚ ಮಿಂಚುಳ್ಳಿ (ಕಿಂಗ್ ಫಿಶರ್) ಹಕ್ಕಿಯಂತೆ ಕಂಡರೂ ಇದರ ದೇಹರಚನೆಯಲ್ಲಿ ಹಲವಾರು ವ್ಯತ್ಯಾಸಗಳಿವೆ. 

ಎತ್ತರದ ಮರದ, ವಿಶೇಷವಾಗಿ ಒಣಗಿ ಬೋಳಾದ ತೆಂಗಿನ ಮರದ, ಪೊಟರೆ ಇದರ ಗೂಡು. ವಿದ್ಯುತ್ ತಂತಿಗಳು ಅತ್ಯಂತ ಪ್ರಿಯವಾದ ಬೇಟೆಯ ತಾಣ ಇವಕ್ಕೆ. ತಮ್ಮ ವಾಸ ಸ್ಥಳದ ಬಳಿ ಬರುವ ಆಗಂತುಕರನ್ನು ಬಹು ಬೇಗನೆ ಗುರುತಿಸಿ ಕೂಗಿ ಆತಂಕವನ್ನು ತೋರ್ಪಡಿಸುತ್ತವೆ. ಅವುಗಳ ಕೂಗು ‘ಕ್ಯಾವ್' ಎಂತಲೂ ಕೆಲವು ಸಮಯ ‘ಚ್ಯಾವ್' ಅಂತಲೂ ಕೇಳಿಸುತ್ತದೆ. ತಮ್ಮ ಗೂಡಿನ ಬಳಿ ಬರುವ ಇತರೆ ಪಕ್ಷಿ, ಅಳಿಲು ಮುಂತಾದುವುಗಳನ್ನು ಬೆದರಿಸಿ ಓಡಿಸುತ್ತವೆ. ರೈತರು ಉಳುಮೆ ಮಾಡುತ್ತಿರುವಾಗ ಹಿಂಬಾಲಿಸಿ ಭೂಮಿಯಿಂದ ಹೊರಬೀಳುವ ಹುಳಹುಪ್ಪಟೆಗಳನ್ನು ಆರಿಸಿ ತಿನ್ನುತ್ತವೆ. ವಿವಿಧ ಕೀಟಗಳು, ಸಣ್ಣ ಓತಿಕ್ಯಾತನಂಥ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಜೊತೆಯಾಗಬಯಸುವ ಗಂಡು, ಹೆಣ್ಣು ನೀಲಕಂಠ ಹಕ್ಕಿಗಳು ತಮ್ಮ ವಿವಿಧ ಶೈಲಿಯ ಏರೋಬಿಕ್ಸ್ ಪ್ರದರ್ಶನ ಮಾಡಿ ಪರಸ್ಪರ ಒಪ್ಪಿ ಜೋಡಿಯಾಗುತ್ತವೆ. ಮರದ ಪೊಟರೆಯಲ್ಲಿ ಹೆಣ್ಣು ೩ ರಿಂದ ೫ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡುತ್ತದೆ. ಸರಿಸುಮಾರು ಇಪ್ಪತ್ತು ದಿನಗಳಲ್ಲಿ ಮೊಟ್ಟೆ ಒಡೆದು ಮರಿಗಳು ಹೊರ ಬರುತ್ತವೆ. ಮರಿಗಳಿಗೆ ಗುಟುಕನ್ನು ಸರತಿಯಂತೆ ಗಂಡು ಹೆಣ್ಣು ಎರಡೂ ಪಕ್ಷಿಗಳು ತಂದುಕೊಡುತ್ತವೆ. ಸುಮಾರು ಒಂದು ತಿಂಗಳಲ್ಲಿ ಮರಿಗಳು ಬೆಳೆದು ನಿಂತು ಹಾರಿ ಹೋಗುತ್ತವೆ.

***

ದನದ ಮೆಲುಕು

* ದನಗಳಿಗೆ ಪದೇ ಪದೇ ಆಹಾರವನ್ನು ನೀಡದೆ ದಿನಕ್ಕೆ ಎರಡು ಅಥವಾ ಮೂರು ಸಲ ಮಾತ್ರ ಕೊಡುವ ರೂಢಿ ಇಟ್ಟುಕೊಳ್ಳಬೇಕು. ಇದರಿಂದ ಮೆಲುಕು ಹಾಕಲು ಸಾಕಷ್ಟು ಸಮಯ ದೊರೆತು ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ.

* ಹಿಟ್ಟು, ಗಂಜಿ, ಬೆಲ್ಲ, ಸಿಹಿ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡಬಾರದು. ಇವು ಅಜೀರ್ಣ, ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತವೆ.

* ಆಹಾರದಲ್ಲಿ ಪದೇ ಪದೇ ಬದಲಾವಣೆ ಮಾಡಬಾರದು. ಯಾವುದೇ ಹೊಸ ಆಹಾರ ಕೊಡಲು ಆರಂಭಿಸುವುದಿದ್ದರೂ ಸ್ವಲ್ಪ ಸ್ವಲ್ಪವೇ ಕೊಟ್ಟು ರೂಢಿ ಮಾಡಿಸಿಕೊಳ್ಳಬೇಕು.

* ಆಹಾರದಲ್ಲಿ ಲೋಹದ ಚೂಪಾದ ವಸ್ತುಗಳಿರದಂತೆ ನೋಡಿಕೊಳ್ಳಬೇಕು. ಕರುಗಳು ಹುಟ್ಟಿದ ಕೂಡಲೇ ತಾಯಿ ನೆಕ್ಕಲು ಬಿಡಬೇಕು. ಪ್ರಾರಂಭದಲ್ಲಿ ಒಮ್ಮೆಲೇ ಹುಲ್ಲು ತಿನ್ನಿಸಬಾರದು. 

***

(ಮಾಹಿತಿ ಕೃಪೆ: ‘ಸೂತ್ರ’ ಮಾಸ ಪತ್ರಿಕೆ)