ನೀಲಿ ತಿಮಿಂಗಿಲದ ರೋಚಕ ಜಗತ್ತು !

ನೀಲಿ ತಿಮಿಂಗಿಲದ ರೋಚಕ ಜಗತ್ತು !

ಭೂಮಿಯ ಮೇಲೆ ವಾಸಿಸುವ ಅತೀ ದೊಡ್ಡ ಪ್ರಾಣಿ ಆಫ್ರಿಕಾದ ಆನೆಯಾದರೆ, ಸಾಗರದ ತಳದಲ್ಲಿ ವಾಸಿಸುವ ನೀಲಿ ತಿಮಿಂಗಿಲವು ಈಗ ಬದುಕಿರುವ ಅತೀ ದೊಡ್ಡ ಜೀವಿಯಾಗಿದೆ. ಇದು ನೀರಿನಲ್ಲಿದ್ದರೂ ಇತರ ಮೀನಿನಂತೆ ಮೊಟ್ಟೆ ಇಡದೇ ನೇರವಾಗಿ ಮರಿ ಇಟ್ಟು ಹಾಲುಣಿಸುತ್ತದೆ. ಹಾಗಾಗಿ ಇದು ಸಸ್ತನಿಯಾಗಿದೆ. ನೀಲಿ ತಿಮಿಂಗಿಲದ ಬಗ್ಗೆ ಇರುವ ಕೆಲವು ರೋಚಕ ಸಂಗತಿಗಳನ್ನು ಒಂದೊಂದಾಗಿ ತಿಳಿಯುತ್ತಾ ಹೋಗುವ.

* ನೀಲಿ ತಿಮಿಂಗಿಲದ ಮರಿ ಹುಟ್ಟುವಾಗಲೇ ೮ ಮೀಟರ್ ಉದ್ದ ಇರುತ್ತದೆ. ಪ್ರತೀದಿನ ಅದು ತನ್ನ ತಾಯಿಯಿಂದ ಸುಮಾರು ೧೮೦ ಲೀಟರ್ ಹಾಲನ್ನು ಹೀರುತ್ತದೆ. ಪ್ರತೀದಿನ ಅದು ತೂಕ ಹೆಚ್ಚಿಸಿಕೊಳ್ಳುತ್ತಾ ಏಳು ತಿಂಗಳವರೆಗೆ ಸುಮಾರು ೯೦ ಕಿ.ಗ್ರಾಂ. ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ. 

* ನೀಲಿ ತಿಮಿಂಗಿಲದ ನಾಲಿಗೆಯು ೨೫೦೦ ಕಿ.ಗ್ರಾಂ ಇರುತ್ತದೆ. ಅಂದರೆ ಈ ಜೀವಿಯ ಒಂದು ನಾಲಿಗೆ ಭೂಮಿಯಲ್ಲಿ ವಾಸಿಸುವ ಒಂದು ಆನೆಯ ಭಾರಕ್ಕೆ ಸಮನಾಗಿದೆ. ಒಂದು ಆನೆಯು ತಿಮಿಂಗಿಲದ ನಾಲಿಗೆಯ ಮೇಲೆ ನಿಲ್ಲಬಹುದು.

* ಒಂದು ಪೂರ್ಣವಾಗಿ ಬೆಳೆದ ತಿಮಿಂಗಿಲವು ೧೦೦ ರಿಂದ ೧೫೦ ಟನ್ ತೂಕವನ್ನು ಹೊಂದಿರುತ್ತದೆ. ಆಫ್ರಿಕಾದ ಆನೆಯು ೬ ಟನ್ ಮಾತ್ರ ಭಾರವಿರುತ್ತದೆ. 

* ಪ್ರೌಢ ತಿಮಿಂಗಿಲವು ಪ್ರತೀ ದಿನ ೧೦೦೦ ದಿಂದ ೧೫೦೦ ಕಿ.ಗ್ರಾಂ ನಷ್ಟು ಕ್ರಿಲ್ (Krill- ಸಿಗಡಿ ಜಾತಿಯ ಜೀವಿ) ಗಳನ್ನು ಭಕ್ಷಿಸುತ್ತದೆ. 

* ನೀರಿನ ಮೇಲೆ ಅದರ ಹೃದಯ ನಿಮಿಷಕ್ಕೆ ೩೭ ಬಾರಿ ಮಿಡಿಯುತ್ತದೆ. ಪ್ರತಿ ೧೦ ಸೆಕೆಂಡಿಗೊಮ್ಮೆ ೨೨೦ ಲೀಟರ್ ರಕ್ತ ಅದರ ಹೃದಯದಿಂದ ಪಂಪಾಗುತ್ತದೆ. 

* ನೀಲಿ ತಿಮಿಂಗಿಲದ ಹೃದಯ ಇಡೀ ಪ್ರಾಣಿ ಪ್ರಪಂಚದಲ್ಲೇ ಅತ್ಯಂತ ದೊಡ್ಡದು. ಸುಮಾರು ೧೮೦ ಕಿ.ಗ್ರಾಂ. ತೂಗುತ್ತದೆ. 

* ಸಾಗರಗಳಲ್ಲಿ ಸದಾ ಸಂಚರಿಸುವ ವಾಣಿಜ್ಯ ಹಡಗುಗಳಿಂದ ಆಗುವ ಶಬ್ದ-ಖನಿಜ ಸಂಪನ್ಮೂಲಗಳಿಗಾಗಿ ಸಾಗರ ತಳದಲ್ಲಿ ನಡೆಸುವ ಶೋಧ, ಕಂಪನ ನೀಲಿ ತಿಮಿಂಗಿಲಗಳ ಸಂತಾನಾಭಿವೃದ್ಧಿಗೆ, ಆಹಾರ ಸಂಪಾದನೆಗೆ ಮತ್ತು ವಲಸೆ ಹೋಗುವ ಮಾರ್ಗಗಳಿಗೆ ಅತ್ಯಂತ ಅಡೆತಡೆ ಒಡ್ಡುತ್ತವೆ. ತಿಮಿಂಗಿಲಗಳ ಸಂತತಿ ಕುಸಿತಕ್ಕೆ ಇವೂ ಕಾರಣವಾಗಿದೆ.

* ನೀಲಿ ತಿಮಿಂಗಿಲ ಅತೀ ದೊಡ್ಡ ಜೀವಿ, ಅದು ಮಾಡುವ ಶಬ್ಧವೂ ಅತ್ಯಂತ ದೊಡ್ದದೇ. ಇವುಗಳು ಉಂಟು ಮಾಡುವ ೧೮೦ ಡೆಸಿಬೆಲ್ (ಮನುಷ್ಯ =೬೦ ಡೆಸಿಬೆಲ್) ಶಬ್ಧ ಜೆಟ್ ವಿಮಾನದ (೧೪೦ ಡೆಸಿಬಲ್) ಶಬ್ಧಕ್ಕಿಂತಲೂ ಹೆಚ್ಚು. ನೂರಾರು ಮೈಲುಗಳಷ್ಟು ದೂರದವರೆಗೂ ಈ ಶಬ್ದ ಕೇಳಿಸುತ್ತದೆ. ಮುಖ್ಯವಾಗಿ ಪರಸ್ಪರ ಸಂಭಾಷಣೆ ನಡೆಸುವ ಸಮಯದಲ್ಲಿ ತಿಮಿಂಗಿಲಗಳು ಈ ಶಬ್ದವನ್ನುಂಟು ಮಾಡುತ್ತದೆ. 

* ನೀಲಿ ತಿಮಿಂಗಿಲ ಆಹಾರ ಸೇವಿಸುವ ರೀತಿ ವಿಭಿನ್ನ. ತಿಮಿಂಗಿಲದ ಬಾಯಿಯೊಳಗೆ ಹಲ್ಲುಗಳಿರುವುದಿಲ್ಲ. ಬದಲಿಗೆ ಬಲೀನ್ (baleen) ಎಂಬ ರಚನೆಗಳಿವೆ. ಇವು ಜರಡಿಯಂತೆ ಕೆಲಸ ಮಾಡುತ್ತವೆ. ಇವುಗಳು ಕ್ರಿಲ್ ಗಳನ್ನು ಸಾವಿರಾರು ಸಂಖ್ಯೆಯಲ್ಲಿ ನುಂಗುವಾಗ ಒಳಹೋದ ನೀರು ಈ ಬಲೀನ್ ಗಳ ಮುಖಾಂತರ ಸೋಸಿ ಹೊರಗೆ ಹೋಗುತ್ತದೆ. 

* ನೀಲಿ ತಿಮಿಂಗಿಲವು ತಿನ್ನುವ ಕ್ರಿಲ್ ಎಂಬ ಜೀವಿಯ ಗಾತ್ರ ಕೇವಲ ಒಂದರಿಂದ ಎರಡು ಸೆಂಟಿಮೀಟರ್ ಗಳಷ್ಟಿರುತ್ತವೆ. ಕ್ರಿಲ್ ಬಿಟ್ಟರೆ ನೀಲಿ ತಿಮಿಂಗಿಲ ಮನುಷ್ಯನೂ ಸೇರಿದಂತೆ ಬೇರೆ ಯಾವ ಮೀನುಗಳನ್ನೂ ತಿನ್ನುವುದಿಲ್ಲ.

* ತಿಮಿಂಗಿಲಗಳು ಮೀನಿನಂತೆ ನೀರಿನಲ್ಲಿ ಉಸಿರಾಡುವ ಸಾಮರ್ಥ್ಯವನ್ನು ಪಡೆದುಕೊಂಡಿಲ್ಲ. ಉಸಿರಾಟಕ್ಕಾಗಿ ಅವುಗಳು ನೀರಿನ ಮೇಲ್ಮೈಗೆ ಬರಲೇ ಬೇಕು. ಒಮ್ಮೆ ಉಸಿರಾಡಿದ ಬಳಿಕ ಕೆಲ ನಿಮಿಷಗಳ ಕಾಲ ನೀರಿನೊಳಗೆ ಈಜಾಡಿ ಮತ್ತೆ ಉಸಿರಾಟಕ್ಕೆ ನೀರಿನ ಮೇಲ್ಮೈಗೆ ಬರುತ್ತದೆ. ತುರ್ತು ಸಂದರ್ಭಗಳಲ್ಲಿ ನೀರಿನ ಒಳಗೆ ಒಂದೂವರೆ ಗಂಟೆಗಳವರೆಗೂ ಉಸಿರು ಹಿಡಿದು ಇರಬಲ್ಲುದು. 

* ನೀಲಿ ತಿಮಿಂಗಿಲಗಳ ಉಸಿರಾಟಕ್ಕಾಗಿ ನೆತ್ತಿಯ ಮೇಲೆ ಎರಡು ರಂಧ್ರಗಳಿರುತ್ತವೆ. ಈ ರಂಧ್ರಗಳ ಮೂಲಕ ಉಸಿರು ಹೊರಹಾಕುವಾಗ ಇವುಗಳು ಗಾಳಿಯೊಂದಿಗೆ ನೀರನ್ನು ಬೆರೆಸಿ ಕಾರಂಜಿಯಂತೆ ಹೊರ ಚಿಮ್ಮಿಸುತ್ತವೆ. 

* ತಿಮಿಂಗಿಲಗಳ ಜೀವಿತಾವಧಿ ಸಾಮಾನ್ಯವಾಗಿ ೮೦-೯೦ ವರ್ಷಗಳು. ಅಪರೂಪದ ಸಂದರ್ಭಗಳಲ್ಲಿ ನೂರಕ್ಕೂ ಅಧಿಕ ವರ್ಷಗಳ ಕಾಲ ಬದುಕಿದ ನಿದರ್ಶನಗಳಿವೆ. ನೀಲಿ ತಿಮಿಂಗಿಲಗಳ ಕಿವಿಯೊಳಗೆ ಸ್ರವಿಸುವ ಮೇಣವು ಪದರಗಳ ರೂಪದಲ್ಲಿ ಶೇಖರಣೆಯಾಗುತ್ತದೆ. ಈ ಪದರಗಳನ್ನು ಎಣಿಸುವ ಮೂಲಕ ಅವುಗಳ ವಯಸ್ಸನ್ನು ನಿರ್ಧಾರ ಮಾಡಲಾಗುತ್ತದೆ.

* ನೀಲಿ ತಿಮಿಂಗಿಲಗಳ ಬೃಹತ್ ಗಾತ್ರದ ಕಾರಣದಿಂದಾಗಿ ಇವುಗಳಿಗೆ ನೈಸರ್ಗಿಕ ಶತ್ರುಗಳು ಕಡಿಮೆ. ಆದರೆ ಮಾನವ ಮಾತ್ರ ಇವುಗಳನ್ನು ಬೇಟೆಯಾಡುತ್ತಲೇ ಬಂದಿದ್ದಾನೆ. ಮಾಂಸ, ಚರ್ಮ, ಕೊಬ್ಬು, ಬಲೀನ್ ಗಳಿಗಾಗಿ ಬೇಟೆ ನಡೆಯುತ್ತದೆ.

* ನೀಲಿ ತಿಮಿಂಗಿಲಗಳ ಅವ್ಯಾಹತ ಬೇಟೆಯನ್ನು ಗಮನಿಸಿ ೧೯೫೫ರಲ್ಲಿ ತಿಮಿಂಗಿಲಗಳ ಹತ್ಯೆಯನ್ನು ನಿಷೇಧ ಮಾಡಲಾಯಿತು. ನೀಲಿ ತಿಮಿಂಗಿಲಗಳ ಬಗ್ಗೆ ಜಾಗೃತಿಯನ್ನುಂಟು ಮಾಡಲು ಪ್ರತೀ ವರ್ಷ ಫೆಬ್ರವರಿ ೨೦ನ್ನು 'ವಿಶ್ವ ತಿಮಿಂಗಿಲಗಳ ದಿನ' ಎಂದು ಆಚರಣೆ ಮಾಡುತ್ತಾರೆ.

ಯಾವುದೇ ಜೀವಿಗಳ ನಾಶವು ಪ್ರಕೃತಿಯ ಸಮತೋಲನದ ಮೇಲೆ ಅತ್ಯಂತ ಅಧಿಕ ಪ್ರಭಾವ ಬೀರುತ್ತದೆ. ಈ ಕಾರಣದಿಂದ ತಿಮಿಂಗಿಲಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ.  

ಚಿತ್ರ ಕೃಪೆ: ಅಂತರ್ಜಾಲ ತಾಣ