ನೀಲಿ ಮತ್ತು ಸೇಬು

ನೀಲಿ ಮತ್ತು ಸೇಬು

ಪುಸ್ತಕದ ಲೇಖಕ/ಕವಿಯ ಹೆಸರು
ಸುಧಾ ಆಡುಕಳ
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೫

“ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ ಕುರಿತಾದ ಅವರ ಬದ್ಧತೆ ಮತ್ತು ಬದುಕನ್ನು ರೂಪಕಗಳ ಮೂಲಕ ಹುಡುಕಹೊರಟಿರುವ ಕವಿಯ ಆದರ್ಶ ಬೇರೆಬೇರೆಯಾಗುವುದೇ ಇಲ್ಲ. ಇವೆರಡನ್ನೂ ಪಾಕಮಾಡುತ್ತ ಥಟ್ಟನೆ ಓದುಗರನ್ನು ಹೊಸ ದರ್ಶನಕ್ಕೆ ಒಡ್ಡುವ ಅವರ ನಾಟಕೀಯ ಸಮಯದ ಜಾಣ್ಮೆ ನನಗೆ ಅತಿ ಪ್ರಿಯವಾದದ್ದು. ಅವರ ಸಾಮಾಜಿಕ ಪ್ರಜ್ಜೆ ಮತ್ತು ಕಳಕಳಿ ಅವರನ್ನು ಅನೇಕ ಸೂಕ್ಷ್ಮ ಮತ್ತು ಹೆಚ್ಚಾಗಿ ಕನ್ನಡ ಸಾಹಿತ್ಯ ಪ್ರಜ್ಞೆಯ ಆಚೆಗೇ ಉಳಿದ ಸ್ತ್ರೀ ತಲ್ಲಣಗಳ ಅನ್ವೇಷಣೆಗೆ ಹಚ್ಚುತ್ತವೆ. ಕೆಳ-ಮಧ್ಯಮ ವರ್ಗದ ಹೆಣ್ಣಿನ ಸುತ್ತ ಹೆಣದಿರುವ 'ಒಂದು ಶೌಚಾಲಯದ ಕಥೆ' ಇದಕ್ಕೆ ಉದಾಹರಣಿ, ಈ ಕಥಾ ಸಂಕಲನದಲ್ಲಿ ಯಾವುದೂ ಕೇವಲ ಪ್ರೇಮ ಕಥನಗಳಲ್ಲದಿದ್ದರೂ, ಅವರ ಕವಿತೆಗಳಲ್ಲಿ ಕಂಡುಬರುವ ಪ್ರೀತಿಯ ಕುರಿತಾದ ಅವರ ಅಗಾಧ ಅಚ್ಚರಿ ಇಲ್ಲ ಹಲವು ಸಾಮಾಜಿಕ ಮತ್ತು ರಾಜಕೀಯ ಗೊಂದಲಗಳಿಗೆ ಸೃಜನಶೀಲ ಉತ್ತರಗಳನ್ನು ಹುಡುಕುವ ಮಾರ್ಗವೂ ಆಗಿದೆ.” ಈ ಸಾಲುಗಳು ಕಂಡು ಬಂದದ್ದು ‘ನೀಲಿ ಮತ್ತು ಸೇಬು’ ಕಥಾ ಸಂಕಲನದ ಬೆನ್ನುಡಿಯಲ್ಲಿ. ಬರೆದವರು ಡಾ। ಶೀತಲಾ, ಪ್ರಾಧ್ಯಾಪಕರು, ಯಾರ್ಕ ಬಿ. ಬಿ. ಕೆನಡಾ ಇವರು.

ಈ ಕಥಾಸಂಕಲನದ ಹನ್ನೆರಡು ಕಥೆಗಳು ಒಂದಕ್ಕೊಂದು ಭಿನ್ನವಾದ ವಸ್ತುವಿನ ವೈವಿಧ್ಯತೆಯನ್ನು ಒಳಗೊಂಡಿದ್ದರೂ, ಪ್ರತಿಯೊಂದರ ಕೇಂದ್ರಬಿಂದುವೂ ಸ್ತ್ರೀ ಎನ್ನುವುದು ಸ್ಪಷ್ಟ. ಈ ಕಥೆಗಳು ಹಾಸ್ಯದ ಸೊಗಸಿನೊಂದಿಗೆ ಜೀವನದ ಗಂಭೀರತೆಯನ್ನು, ಸರಳತೆಯೊಳಗೆ ಬದುಕಿನ ಸಂಕೀರ್ಣತೆಯನ್ನು, ಗ್ರಾಮೀಣ ಪರಿಸರದ ಸೊಬಗನ್ನು, ಸಂಸ್ಕೃತಿಯ ಜೊತೆಗೆ ಭಾವನಾತ್ಮಕ ಲೋಕವನ್ನು, ಧಾರ್ಮಿಕ-ಪೌರಾಣಿಕ ಹಿನ್ನೆಲೆಯೊಂದಿಗೆ ಸಮಕಾಲೀನ ಜಗತ್ತಿನ ಸನ್ನಿವೇಶಗಳನ್ನು, ಮತ್ತು ಸಾಮಾಜಿಕ ಸಮಸ್ಯೆಗಳ ವಿಡಂಬನೆಯನ್ನು ಸಮರ್ಥವಾಗಿ ಚಿತ್ರಿಸುತ್ತವೆ. ಲೇಖಕಿಯವರ ಮನದಾಳದ ಮಾತು—ಕಥೆಯ ಸೃಷ್ಟಿಯು ಸಾವನ್ನು ಮೀರಿದ ಬದುಕಿನ ದಾರಿಯಾಗಿದೆ—ಓದುಗರಲ್ಲಿ ಕುತೂಹಲವನ್ನು ಜಾಗೃತಗೊಳಿಸುತ್ತದೆ.

ಅಪ್ಪತ್ತೆ: ಈ ಕಥೆಯ ಕೇಂದ್ರದಲ್ಲಿ ಅಪ್ಪತ್ತೆ ಇದ್ದಾಳೆ—ಹಳ್ಳಿಯ ಸಾಮಾನ್ಯ ಹೆಣ್ಣಿನಂತೆ ನಯವಿನಯದಿಂದಲೇ ಇರದೆ, ಧೈರ್ಯದಿಂದ, ಗಟ್ಟಿಗಿತ್ತಿಯಂತೆ ವರ್ತಿಸುವವಳು. ಮೇಲ್ನೋಟಕ್ಕೆ ಎಲ್ಲರೂ ಆಕೆಯ ಈ ಗುಣವನ್ನು ವಿರೋಧಿಸಿದರೂ, ಒಳಗೊಳಗೆ ಆಕೆಯ ಬಗ್ಗೆ ಹೆಮ್ಮೆಯ ಭಾವನೆಯಿದೆ. ಕಥಾನಿರೂಪಕಿ ತನ್ನ ಮಗಳಿಗೆ ಅಪ್ಪತ್ತೆಯ ಕಥೆಯನ್ನು ಹೇಳುತ್ತಾ, ಆಕೆಯನ್ನು ಆಕರ್ಷಕ ಮತ್ತು ಪ್ರಗತಿಪರ ವ್ಯಕ್ತಿತ್ವವಾಗಿ ಚಿತ್ರಿಸುತ್ತಾಳೆ. ಕೊನೆಗೆ, ಮಗಳು ತನ್ನ ಬದುಕಿನ ನಿರ್ಧಾರದಲ್ಲಿ ಅಪ್ಪತ್ತೆಯ ಬಿಂಬವನ್ನು ಪ್ರತಿಫಲಿಸುತ್ತಾಳೆ.

ಅಸ್ತಿತ್ವ: ಈ ಕಥೆಯಲ್ಲಿ ಸೂಕ್ಷ್ಮ ಸಂವೇದನೆಯ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿನಿಯ ಕುಟುಂಬದ ಸತ್ಯವನ್ನು ತಿಳಿದು, ಆಕೆಯ ಮಾನಸಿಕ ಗೊಂದಲಕ್ಕೆ ಪರಿಹಾರ ಸೂಚಿಸುವ ಕಥಾವಸ್ತುವಿದೆ. ಶಿಕ್ಷಕಿಯ ಕಾಲೇಜು ಹಾಸ್ಟೆಲ್ ದಿನಗಳಲ್ಲಿ ತನ್ನ ಮಗನನ್ನು ಕಳೆದುಕೊಂಡ ತಾಯಿಯೊಬ್ಬಳ ದುಃಖವನ್ನು ಕಂಡಿದ್ದು ಈ ಸನ್ನಿವೇಶದಲ್ಲಿ ನೆನಪಾಗುತ್ತದೆ. ಹುಟ್ಟು, ಸಾವು, ಮಕ್ಕಳಿಂದ ದೂರವಾದ ಪೋಷಕರು, ಮತ್ತು ತಂದೆ-ತಾಯಿಯಿಲ್ಲದ ಮಕ್ಕಳ ಮನೋವೇದನೆಯ ಕುರಿತು ಚಿಂತನೆಗೆ ಒಡ್ಡುವ ಕಥೆಯಿದು.

ಬೀಗ: ನಿಹಾರಿಕಾ, ಆಧುನಿಕ ಮನೋಭಾವದ ಉದ್ಯೋಗಿಯಾಗಿ, ತನ್ನ ಮನೆಯ ಗೇಟಿಗೆ ಎಂದಿಗೂ ಬೀಗ ಹಾಕದವಳು. ಒಮ್ಮೆ ಸಂಕಟಕ್ಕೆ ಸಿಲುಕಿದ ಕಾರ್ಮಿಕ ಮಹಿಳೆಯೊಬ್ಬಳು ಆಕೆಯ ಗಾರ್ಡನ್‌ನಲ್ಲಿ ಅವಿತುಕೊಳ್ಳುತ್ತಾಳೆ. ನಿಹಾರಿಕಾ ಆಕೆಯ ಕಥೆಯನ್ನು ಕೇಳಿ, ಪೋಲಿಸರಿಗೆ ಕರೆ ಮಾಡಿ, ಸ್ವತಃ ಹಣದ ಸಹಾಯ ಮಾಡಿ ಆಕೆಯನ್ನು ಊರಿಗೆ ಕಳುಹಿಸುತ್ತಾಳೆ. ಆಕೆಯ ಪತಿ ಅಚಿಂತ್ಯನ ಸಂಶಯವು ತಪ್ಪಾಗುತ್ತದೆ, ಮತ್ತು ಗೇಟಿಗೆ ಬೀಗ ಹಾಕಲು ಒಡ್ಡಿದಾಗ ನಿಹಾರಿಕಾ ನಿರಾಕರಿಸುವುದು ಕಥೆಯ ಮುಖ್ಯ ತಿರುವು.

ಈ ಸಂಕಲನದ ಕಥೆಗಳು ಸಾಮಾಜಿಕ ಮತ್ತು ಕೌಟುಂಬಿಕ ವೈರುಧ್ಯಗಳನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತವೆ. ಲೇಖಕಿಯ ಯಕ್ಷಗಾನ ಮತ್ತು ರಂಗಭೂಮಿಯ ಆಸಕ್ತಿಯು ಕಥೆಗಳಲ್ಲಿ ಪ್ರತಿಫಲಿಸುತ್ತದೆ. “ಎಲವೋ_ಸಂಜಯ_ಕೇಳು” ಕಥೆಯು ಯಕ್ಷಗಾನದ ಸುತ್ತ ಸುತ್ತುವ ಹಾಸ್ಯಮಿಶ್ರಿತ ಕಥೆಯಾಗಿದ್ದು, ಮಾರ್ಮಿಕವಾಗಿ ಕೊನೆಗೊಳ್ಳುತ್ತದೆ. “ಸಂಪಿಗೆ ಮರದ ಕೆಂಪಮ್ಮ” ಕಥೆಯು ಧಾರ್ಮಿಕ ಅಸಹಿಷ್ಣುತೆಯಿಂದ ಹಳ್ಳಿಯ ಸರಳ ಬದುಕಿನಲ್ಲಿ ಕಿಡಿಮೂಡಿಸಿ ಅಮಾಯಕರನ್ನು ಬಲಿತೆಗೆದುಕೊಳ್ಳುವ ಸತ್ಯವನ್ನು ಎತ್ತಿ ತೋರಿಸುತ್ತದೆ. ಕೆಂಪಮ್ಮ ಜನರಲ್ಲಿ ಎಚ್ಚರ ಮೂಡಿಸುವ ಶಕ್ತಿಯಾಗಿ ಕಾಣಿಸುತ್ತಾಳೆ.

ಸಂಕಲನದ ಶೀರ್ಷಿಕೆ ಕಥೆ “ನೀಲಿ ಮತ್ತು ಸೇಬು” ಬಡತನದ ಹುಡುಗಿ ನೀಲಿಯ ಸೇಬು ತಿನ್ನುವ ಕನಸಿನ ಸುತ್ತಲಿನ ಘಟನೆಗಳಿಂದ ಆಕರ್ಷಿಸುತ್ತದೆ. ಆಕೆ ತನ್ನ ಕನಸಿಗಿಂತ ಅಜ್ಜಿಯ ಹಸಿವಿಗೆ ಮೊದಲು ಬೆಲೆ ಕೊಡುವುದು, ಸಂತಸವು ಕೊಡುವುದರಲ್ಲೇ ಇದೆ ಎಂಬ ಸಂದೇಶವನ್ನು ಸಾರುತ್ತದೆ.

ಸುಧಾ ಆಡುಕುಳ ಅವರ ಈ ಕಥಾಸಂಕಲನವು ಮನರಂಜನೆಯ ಜೊತೆಗೆ ಜೀವನಪಾಠಗಳನ್ನು, ಹಾಸ್ಯದೊಂದಿಗೆ ಬದುಕಿನ ಸಂಘರ್ಷಗಳನ್ನು, ಗ್ರಾಮೀಣ ಸೊಗಡು ಮತ್ತು ನಗರದ ಯಾಂತ್ರಿಕತೆಯನ್ನು, ಸಂಬಂಧಗಳ ಒಡಲಾಟವನ್ನು ಒಳಗೊಂಡಿದೆ. ಪ್ರತಿ ಓದಿನಲ್ಲಿ ಹೊಸ ಒಳನೋಟಗಳನ್ನು ಬಿತ್ತುವ ಈ ಕಥೆಗಳು ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತವೆ.