ನೀವು ಓದಿದ್ದು ಇನ್ನಷ್ಟು ನೆನಪಿರಲು ೪ ನಿಯಮ

ನೀವು ಓದಿದ್ದು ಇನ್ನಷ್ಟು ನೆನಪಿರಲು ೪ ನಿಯಮ

ನೀವು ಓದಿದ್ದನ್ನು ಹೆಚ್ಚೆಚ್ಚು ನೆನಪಿಟ್ಟುಕೊಳ್ಳಬೇಕೇ? ಅದಕ್ಕಾಗಿ ಓದುವಾಗ ಕೆಲವು ನಿಯಮಗಳನ್ನು ಪಾಲಿಸಿ. ಇದರಿಂದ ಓದಿದ್ದರಲ್ಲಿ ಇನ್ನಷ್ಟು ನೆನಪಿಟ್ಟುಕೊಳ್ಳಲು ಖಂಡಿತ ಸಾಧ್ಯ. ಇದನ್ನು ತಿಳಿಸಿದವರು ಅಮೆರಿಕನ್ ವಿಶ್ವವಿದ್ಯಾಲಯದ ಭಾಷಾ ಶಾಸ್ತ್ರದ ಪ್ರೊಫೆಸರ್ ನವೊಮಿ ಎಸ್. ಬಾರೊನ್.

1)ಕೇಳುವುದರ ಬದಲಾಗಿ ಓದಿ
ಅಡಿಯೋ ಪುಸ್ತಕಗಳು ಅಪೂರ್ವ ಆವಿಷ್ಕಾರ. ಆದರೆ, ಕೇಳುವುದರಿಂದ ನೆನಪಿಟ್ಟುಕೊಳ್ಳಲು ಹೆಚ್ಚಿನ ಸಹಾಯವಾಗೋದಿಲ್ಲ. ಉದಾಹರಣೆಗೆ, ಕಾದಂಬರಿಗಳನ್ನು “ಕೇಳು ಪುಸ್ತಕ”ಗಳ ಮೂಲಕ ಕೇಳಿದವರಿಗೆ ಅವುಗಳ ಬಗ್ಗೆ ಹೆಚ್ಚೇನೂ ನೆನಪಿರೋದಿಲ್ಲ. ಓದಿದಾಗ ವಿಷಯ ಅರ್ಥ ಮಾಡಿಕೊಳ್ಳುವುದು ಸುಲಭ ಯಾಕೆಂದರೆ ಮನಸ್ಸು ಎಲ್ಲೆಲ್ಲಿಗೋ “ಸಂಚಾರ" ಹೋರಡೋದಿಲ್ಲ. ಅದಲ್ಲದೆ, ಸರಿಯಾಗಿ ಅರ್ಥವಾಗದ ಪುಟಗಳನ್ನು ಪುನಃ ಓದುವುದು (ಪುನಃ ಕೇಳುವುದಕ್ಕಿಂತ) ಸುಲಭ.

2)ಡಿಜಿಟಲ್ ಪುಟದಲ್ಲಿನ ವಿಷಯದ ಬದಲಾಗಿ ಕಾಗದದ ಪುಟದಲ್ಲಿನ ವಿಷಯ ಓದಿ
ಮೊಬೈಲ್ ಫೋನ್, ಟ್ಯಾಬ್ಲೆಟ್, ಲಾಪ್‌ಟಾಪ್ ಅಥವಾ ಕಂಪ್ಯೂಟರ್ ಪರದೆಯಲ್ಲಿ ಓದಿದ್ದನ್ನು ನೆನಪಿಟ್ಟು ಕೊಳ್ಳುವುದಕ್ಕಿಂತ ಚೆನ್ನಾಗಿ ಕಾಗದದ ಹಾಳೆಗಳಲ್ಲಿ ಮುದ್ರಿಸಿದ್ದನ್ನು ನೆನಪಿಟ್ಟು ಕೊಳ್ಳುತ್ತೇವೆ. ಇದನ್ನು ಖಚಿತ ಪಡಿಸುವ ಹಲವಾರು ಸಂಶೋಧನಾ ವರದಿಗಳಿವೆ. ಯಾಕೆ? ಯಾಕೆಂದರೆ, ನೆನಪು ಅನ್ನೋದು ಭೌತಿಕ ಜಗತ್ತಿಗೆ ಸಂಬಂಧಿಸಿದ ಸಂಗತಿ; ಅಂದರೆ, ನಾವು ಓದಿದ್ದು ಒಂದು ಪುಟದಲ್ಲಿ ಎಲ್ಲಿದೆ ಮತ್ತು ಪುಸ್ತಕದಲ್ಲಿ ಸುಮಾರಾಗಿ ಎಲ್ಲಿದೆ ಎಂಬುದನ್ನು ನಾವು ನೆನಪು ಮಾಡಿಕೊಳ್ಳುತ್ತೇವೆ.

ಆದರೆ, ಡಿಜಿಟಲ್ ಪುಟವನ್ನು ಓದುವಾಗ ನಮ್ಮ ಮನಃಸ್ಥಿತಿ ಬದಲಾಗುತ್ತದೆ; ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದದ್ದನ್ನು ಓದುವ ರೀತಿಯಲ್ಲಿ ಕ್ಯಾಸುವಲ್ ಆಗಿ ಓದುತ್ತೇವೆ. ಮುದ್ರಿತ ಪುಟವನ್ನು ಓದುವಾಗ ನಾವು ಬಳಸುವ ಮಾನಸಿಕ ಪ್ರಯತ್ನಕ್ಕಿಂತ ಕಡಿಮೆ ಪ್ರಯತ್ನವನ್ನು ಡಿಜಿಟಲ್ ಪುಟ ಓದುವಾಗ ಬಳಸುತ್ತೇವೆ.

3)ಹಲವು ಕೆಲಸಗಳ ನಡುವೆ ಓದಬೇಡಿ
ಬಾರೊನ್ ಅವರ ಸಂಶೋಧನೆಯ ಅನುಸಾರ, ನೀವು ಓದಿದ್ದನ್ನು ನೆನಪಿಟ್ಟುಕೊಳ್ಳಬೇಕು ಎಂದಾದರೆ, ನೀವು ಶ್ರದ್ಧೆಯಿಂದ  ಓದಬೇಕು. ಉದಾಹರಣೆಗೆ, ಮೊಬೈಲ್ ಫೋನಿನ ಅಥವಾ ಕಂಪ್ಯೂಟರ್ ಪರದೆಯಲ್ಲಿ ಓದುತ್ತಿರುವಾಗ ಯಾವ್ಯಾವುದೋ “ನೋಟಿಫಿಕೇಷನು"ಗಳು ಬರುತ್ತವೆ. ಪ್ರತೀ ಸಲ ನಿಮ್ಮ ಗಮನ ಕೇಂದ್ರೀಕರಿಸುವುದಕ್ಕೆ ಮತ್ತು ವಿಷಯ ಗ್ರಹಿಸುವುದಕ್ಕೆ ಅದರಿಂದ ತೊಂದರೆಯಾಗುತ್ತದೆ. ಆದ್ದರಿಂದ ಕಾಗದದ ಪುಟ ಅಥವಾ ಡಿಜಿಟಲ್ ಪುಟದಲ್ಲಿ ಓದುತ್ತಿರುವಾಗ ಕೇವಲ ಓದಿ. ನೋಟಿಫಿಕೇಷನುಗಳು ಬಾರದಂತೆ ವ್ಯವಸ್ಥೆ ಮಾಡಿಕೊಳ್ಳಿ.

4)ಓದಿದ್ದನ್ನು ಮತ್ತೆಮತ್ತೆ ಪರಿಶೀಲಿಸಿ
ಡಿಜಿಟಲ್ ಮಾಧ್ಯಮದಲ್ಲಿ ಓದುವಾಗ, ನಿಮ್ಮ ಹಲವು ಅಭ್ಯಾಸಗಳು ಓದಿದ್ದನ್ನು ಕಲಿಯುವುದಕ್ಕೆ ತೊಂದರೆ ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದವುಗಳು: ಓದಿದ್ದರ ಟಿಪ್ಪಣಿ ಮಾಡಿಕೊಳ್ಳುವುದು ಮತ್ತು ಓದಿದ್ದನ್ನು ಮತ್ತೆಮತ್ತೆ ಪರಿಶೀಲಿಸುವುದು.

ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಓದಿದ್ದನ್ನು ಮತ್ತೆಮತ್ತೆ ಪರಿಶೀಲಿಸುವುದು ಅಗತ್ಯ ಎಂಬುದು ನೆನಪಿರಲಿ. (ಡಿಜಿಟಲ್ ಪುಸ್ತಕ ಓದಿದಾಗ, ಅದರಲ್ಲಿ ಲಭ್ಯವಿರುವ “ಸರ್ಚ್" ಸವಲತ್ತನ್ನು ಮತ್ತೆಮತ್ತೆ ಪರಿಶೀಲನೆಗಾಗಿ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದೂ ನೆನಪಿರಲಿ.)

ಉದ್ಯಮಶೀಲರು ಮತ್ತು ಮುಂದಾಳುಗಳ ಅನುಸಾರ ಮುಂಚೂಣಿಯಲ್ಲಿ ಇರಬೇಕಾದರೆ ಪಾಲಿಸಬೇಕಾದ ಪ್ರಧಾನ ಸೂತ್ರ: ಜೀವಮಾನವಿಡೀ ನಿರಂತರ ಕಲಿಕೆ. ಇದನ್ನು ಸಾಧಿಸಲು ಅತ್ಯುತ್ತಮ ದಾರಿ: ಓದುವುದು. ನಿಮ್ಮ ಓದಿನಿಂದ ಇನ್ನಷ್ಟು ಪ್ರಯೋಜನ ಆಗಬೇಕಾದರೆ, ಈ ನಾಲ್ಕು ನಿಯಮಗಳನ್ನು ಪಾಲಿಸಿ.      

ಫೋಟೋ ಕೃಪೆ: ಫ್ರೀಪಿಕ್.ಕೋಮ್

Comments

Submitted by Ashwin Rao K P Mon, 06/13/2022 - 18:08

ಉತ್ತಮ ೪ ನಿಯಮಗಳು

ಓದಿದ್ದನ್ನು ನೆನಪಿನಲ್ಲಿರಿಸಿಕೊಳ್ಳುವುದು ಬಹಳಷ್ಟು ಜನರಿಗೆ ಕಷ್ಟವಾಗುವ ಈ ಸಮಯದಲ್ಲಿ ಲೇಖಕರು ಇಲ್ಲಿ ನೀಡಿದ ನಾಲ್ಕು ಸರಳ ನಿಯಮಗಳು ನಿಜಕ್ಕೂ ಬಹಳ ಪ್ರಯೋಜನಕಾರಿ. ಡಿಜಿಟಲ್ ಓದುವಿಕೆಗಿಂತ ಪುಸ್ತಕವನ್ನು ಕೈಯಲ್ಲಿ ಹಿಡಿದು ಪುಟ ತಿರುಗಿಸುತ್ತಾ ಓದುವುದು ಬಹಳ ಹಿತಕಾರಿ ಹಾಗೂ ಓದಿದ್ದು ನೆನಪಲ್ಲಿ ಉಳಿಯಲು ಸಹಕಾರಿ ಎನ್ನುವುದು ನನ್ನ ಸ್ವಂತ ಅನುಭವ.

ಕೆಲವರು ಓದಿದ್ದನ್ನು ನೆನಪಿನಲ್ಲಿರಿಸಿಕೊಳ್ಳಲು ಬಾಯಿಪಾಠ ಮಾಡುತ್ತಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇದು ಸಹಕಾರಿಯಾದರೂ, ಭವಿಷ್ಯದಲ್ಲಿ ಆ ವ್ಯಕ್ತಿಗೆ ತಾನು ಓದಿದ ಯಾವುದೇ ವಿಷಯ ನೆನಪಿನಲ್ಲಿ ಉಳಿಯಲಾರದು.  ಸಂಗೀತವನ್ನು ಕೇಳುತ್ತಾ ಪುಸ್ತಕಗಳನ್ನು ಓದುವವರೂ ಇದ್ದಾರೆ. ಒಟ್ಟಿನಲ್ಲಿ ಇದೊಂದು ಉತ್ತಮ ಲೇಖನ.