ನೀವು ದೇವರೇ?

ನೀವು ದೇವರೇ?

ಬೆಂಗಳೂರಿನ ಆ ಹಾದಿಬೀದಿಯಲ್ಲಿ ಬೆಳಿಗ್ಗೆ ಒಬ್ಬ ಮಾಸಲು ತೊಡುಗೆಯ ಎಂಟು ವರ್ಷದ ಹುಡುಗ ದಾರಿಯಲ್ಲಿ ಹೋಗುವ ಎಲ್ಲರಲ್ಲಿಯೂ “ನೀವು ದೇವರೇ?...” ಎಂದು ಕೇಳುತ್ತಿದ್ದ. ಆದರೆ ಅವನನ್ನು ಯಾರೂ ಮಾತನಾಡಿಸದೆ ಪಕ್ಕಕ್ಕೆ ತಳ್ಳುತ್ತಿದ್ದರು. 

ಆ ಹುಡುಗ ಅಲ್ಲಿಂದ ಶ್ರೀಮಂತರ ಬಡಾವಣೆಯ ಉದ್ಯಾನವನವೊಂದಕ್ಕೆ ಹೋಗಿ ಅಲ್ಲಿರುವ ಜನರಲ್ಲಿಯೂ “ನೀವು ದೇವರೇ?” ಎಂದು ಕೇಳುತ್ತಿದ್ದ. ಆದರೆ ಅವರೆಲ್ಲ ಅವನನ್ನು ಯಾರೋ ತಲೆಹರಟೆ ಹುಡುಗನೆಂದು ಬೈದು ದೂರ ತಳ್ಳುತ್ತಿದ್ದರು. 

ಅದೇ ಪಾರ್ಕಿನಲ್ಲಿ ಕುಳಿತಿದ್ದ ವಯಸ್ಕರೊಬ್ಬರು ಆ ವಿದ್ಯಮಾನವನ್ನು ಗಮನಿಸುತ್ತಿದ್ದರು. ಅವರಲ್ಲಿಗೂ ಆ ಹುಡುಗ ಹೋಗಿ “ನೀವು ದೇವರೇ?” ಎಂದು ಕೇಳಿದ. ಅವರು ಆ ಹುಡುಗನ ಮುಖವನ್ನೇ ಒಮ್ಮೆ ದಿಟ್ಟಿಸಿ ನೋಡಿದರು. ಅವನ ಮುಖದಲ್ಲಿ ಬಡತನದ ಬೇಗೆಯಿತ್ತು. ದುಗುಡವಿತ್ತು, ಆತಂಕವಿತ್ತು. ಅವರು ಆ ಹುಡುಗನನ್ನು ತನ್ನ ಪಕ್ಕಕ್ಕೆ ಕರೆದು 

“ನಿನಗ್ಯಾಕೆ ದೇವರು ಬೇಕು?” ಎಂದು ಕೇಳಿದರು. 

ಆಗ ಆ ಬಾಲಕನು “ತಾತ, ನಾನು ರಾಜು ಅಂತ. ನಾನು ಮತ್ತೆ ನನ್ನಮ್ಮ ಇಲ್ಲೇ ಗುಡಿಸಲಿನಲ್ಲಿ ಜೀವಿಸುತ್ತಿದ್ದೆವು. ನನಗೆ ಈ ಪ್ರಪಂಚದಲ್ಲಿ ಅಮ್ಮನನ್ನು ಬಿಟ್ಟರೆ ಇನ್ಯಾರೂ ಇಲ್ಲ. ಅವಳು ಅಲ್ಲಿ ಇಲ್ಲಿ ಕೂಲಿ ಮಾಡಿಕೊಂಡು ನನ್ನನ್ನು ನೋಡಿಕೊಳ್ಳುತ್ತಿದ್ದಳು. ಆದರೆ ಇಂದು ಬೆಳಿಗ್ಗೆ ನನ್ನಮ್ಮ ಇದ್ದಕ್ಕಿದ್ದಂತೆ ಎದೆನೋವೆಂದು ಕುಸಿದುಬಿದ್ದಳು. ಅವರಿವರ ಸಹಾಯದಿಂದ ನಾನು ಆಕೆಯನ್ನು ಅಲ್ಲಿ ಕಾಣುತ್ತಿರುವ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆದರೆ ಆಸ್ಪತ್ರೆಯವರು ನನ್ನ ಅಮ್ಮನನ್ನು ಪರೀಕ್ಷಿಸಿ ನೋಡಿ ಅವಳಿಗೆ ತೀವ್ರ ಹೃದಯಸಂಬಂಧಿ ಕಾಯಿಲೆಯಿದೆ. ಹಾಗಾಗಿ ಆಕೆಯನ್ನು ಬದುಕಿಸಲು ಆ ದೇವರೇ ಬರಬೇಕು, ಅಂತ ಹೇಳಿ ಜನರಲ್‌ ವಾರ್ಡಿನಲ್ಲಿ ಮಲಗಿಸಿದ್ದಾರೆ. ಅಮ್ಮ ತುಂಬಾ ಅಸ್ವಸ್ಥರಾಗಿದ್ದಾರೆ. ನನ್ನ ಅಮ್ಮ ಬದುಕ ಬೇಕಾದರೆ ದೇವರು ಬರಬೇಕು. ಅದಕ್ಕೆ ನಾನು ಆ ದೇವರಿಗೋಸ್ಕರ ಎಲ್ಲಾ ಕಡೆ ಹುಡುಕುತ್ತಿದ್ದೇನೆ. ಹೇಳಿ, ನೀವು ದೇವರೇ?ʼ ಎಂದು ದೈನ್ಯತೆಯಿಂದ ಕೇಳಿದ. 

ಆ ಬಾಲಕನ ಮುಗ್ಧ ಮಾತನ್ನು ಕೇಳಿ ತಾತನಿಗೆ ಕರುಣೆ ಹುಟ್ಟಿತು. ಆದರೆ, ಅದನ್ನು ಅವರು ತೋರ್ಪಡಿಸದೆ ನಗುತ್ತಾ “ನೋಡಪ್ಪಾ ರಾಜು, ನಾನು ದೇವರಲ್ಲ. ಆದರೆ ದೇವರು ಎಲ್ಲಿದ್ದಾನೆ, ಅಂತ ನನಗೆ ಗೊತ್ತು. ನಾನು ಆ ದೇವರಿಗೆ ನಿನ್ನಮ್ಮನನ್ನು ಬದುಕಿಸಲು ಆಸ್ಪತ್ರೆಗೆ ಹೋಗಲು ಹೇಳ್ತೇನೆ. ನೀನು ತಕ್ಷಣ ಅಮ್ಮನ ಬಳಿಗೆ ಹೋಗು” ಎಂದು ರಾಜುವಿನ ಬೆನ್ನು ಸವರಿ ಕಳುಹಿದರು. ಅವರ ಮಾತನ್ನು ಕೇಳಿ ಸಂತೋಷದಿಂದ “ದೇವರು ಬರ್ತಾರೆ… ನನ್ನಮ್ಮನನ್ನು ಬದುಕಿಸಲು ದೇವರು ಬರ್ತಾರೆ…!” ಎಂದು ಕೇಕೆ ಹಾಕುತ್ತಾ ಆಸ್ಪತ್ರೆಯ ಕಡೆಗೆ ಓಡಿದ. ಅವನೆಡೆಗೆ ಸಹಾನುಭೂತಿಯಿಂದ ನೋಡುತ್ತಾ ಆ ತಾತ ತನ್ನ ಮೊಬೈಲಿನಲ್ಲಿ ಯಾರಿಗೋ ಫೋನ್‌ ಮಾಡಿದ್ರು. 

ಇತ್ತ ಆ ಬಾಲಕ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಅಮ್ಮನನ್ನು ಕಂಡು “ಅಮ್ಮಾ, ನಾನೀಗ ಒಬ್ಬ ತಾತನನ್ನು ಕಂಡೆ. ಅವರಿಗೆ ದೇವರು ಎಲ್ಲಿದ್ದಾನೆ ಅಂತ ಗೊತ್ತಂತೆ. ನಿನ್ನನ್ನು ಬದುಕಿಸಲು ಅವರು ದೇವರನ್ನು ಇಲ್ಲಿಗೆ ಕಳುಹಿಸುತ್ತಾರಂತೆ” ಎಂದು ಆಕೆಗೆ ಸಮಾಧಾನ ಮಾಡಿದಾಗ ಆ ತಾಯಿಯು ಹತಾಶೆಯಿಂದ ಕಣ್ಣೀರು ಸುರಿಸಿದಳು. ಆಗ ಇದ್ದಕ್ಕಿದ್ದಂತೆ ಡಾಕ್ಟರುಗಳ ತಂಡ ಅಲ್ಲಿಗೆ ಆಗಮಿಸಿ ಆಕೆಯನ್ನು ಸ್ಟ್ರೆಚರಿನಲ್ಲಿ ಮಲಗಿಸಿ ಐಸಿಯು ಒಳಗೆ ಕರೆದುಕೊಂಡು ಹೋದರು. ಅದಾಗಿ ಕೆಲವು ಸಮಯದಲ್ಲಿ ಆ ಆಸ್ಪತ್ರೆಗೆ ಮುಂಬೈನ ಸುಪ್ರಸಿದ್ಧ ಹೃದಯತಜ್ಞರು ಆಗಮಿಸಿದರು. 

ಅದಾಗಿ ಕೆಲವು ದಿನಗಳ ನಂತರ ಆಕೆ ಸಂಪೂರ್ಣವಾಗಿ ಗುಣಮುಖಳಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುತ್ತಿರಬೇಕಾದರೆ ಅವಳಲ್ಲಿಗೆ ಅದೇ ತಾತ ಆ ಆಸ್ಪತ್ರೆಯ ಆಡಳಿತ ಮಂಡಳಿಯವರ ಜೊತೆಗೆ ಆಗಮಿಸಿದರು. ಅವರನ್ನು ನೋಡಿ ಆ ಹುಡುಗ ಆನಂದಾತಿಶಯನಾಗಿ “ಅಮ್ಮಾ, ಅಮ್ಮಾ… ಇವರೇ ನಿನ್ನನ್ನು ಬದುಕಿಸಲು ದೇವರನ್ನು ಕಳುಹಿಸಿದವರು!” ಎಂದು ಸಂಭ್ರಮದಿಂದ ಕುಣಿದು ಕುಪ್ಪಳಿಸಿದ. 

ಆ ತಾತನನ್ನು ಕಂಡು ಆ ಮಾತೆ ಕೈಗಳನ್ನು ಜೋಡಿಸಿ ಪ್ರಣಾಮ ಮಾಡಿದಳು. 

“ಮಹಾಶಯರೇ, ನಾನು ಕನಸಿನಲ್ಲಿಯೂ ಊಹಿಸದ ರೀತಿಯಲ್ಲಿ ಈ ಆಸ್ಪತ್ರೆಯಲ್ಲಿ ನನಗೆ ಅತ್ಯುತ್ತಮ ಚಿಕಿತ್ಸೆ ಸಿಕ್ಕಿದೆ. ಆದರೆ ನೀವು ಕಳುಹಿಸಿದ ದೇವರು ಯಾರೆಂದು ನನಗೆ ಗೊತ್ತಾಗಲಿಲ್ಲ. ಅದು ಯಾರೆಂದು ಗೊತ್ತಾದರೆ ನಾನು ಬದುಕಿರುವಷ್ಟು ದಿನ ಅವರ ಹೆಸರಿನಲ್ಲಿ ತುಪ್ಪದ ದೀಪ ಹಚ್ಚುತ್ತೇನೆ” ಎಂದು ನಮೃತೆಯಲ್ಲಿ ನುಡಿದಳು ಆಕೆ. 

ಅದನ್ನು ಕೇಳಿ ಆ ತಾತನ ಜೊತೆಗೆ ಇದ್ದ ಆಸ್ಪತ್ರೆಯ ಆಡಳಿತಾಧಿಕಾರಿ “ಅಮ್ಮಾ, ನಮ್ಮ ದೇಶದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾದ ಇವರು ಈ ಆಸ್ಪತ್ರೆಯ ಯಜಮಾನರಿಗೆ ಫೋನ್‌ ಮಾಡಿ ನಿಮಗೆ ಪ್ರಖ್ಯಾತ ಹೃದಯತಜ್ಞರಿಂದ ಅಪರೇಶನ್‌ ಮಾಡಿಸಿದ್ದಲ್ಲದೆ ಎಲ್ಲಾ ಸೌಲಭ್ಯವನ್ನು ಅವರ ದುಡ್ಡಿನಲ್ಲೇ ಕೊಡಿಸಿದರು” ಎಂದರು.

ಆ ಮಾತನ್ನು ಕೇಳಿ ಆಕೆ ಗದ್ಗದಿತಳಾಗಿ ಮಾತುಗಳು ಕಟ್ಟಿಹೋಗಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು “ನೀವೇ ನನ್ನ ಪಾಲಿನ ದೇವರು” ಎಂದು ಅವರ ಪಾದಕ್ಕೆ ಸಾಷ್ಟಾಂಗ ನಮಸ್ಕರಿಸಿದಳು.

ಆಗ ಆ ತಾತ ಅವಳನ್ನು ಮೇಲೆತ್ತಿ “ನೋಡು ತಾಯಿ, ನೀನಿಂದು ಮಾರಣಾಂತಿಕ ಹೃದಯ ಕಾಯಿಲೆಯಿಂದ ಪೂರ್ಣವಾಗಿ ಗುಣಮುಖಳಾಗಲು ಕಾರಣ ನಿನ್ನ ಈ ಪುಟ್ಟ ಮಗ ರಾಜು. ಅವನಂದು ಬಂದು ನನ್ನನ್ನು 'ನೀವು ದೇವರೇ?' ಎಂದು ಮುಗ್ಧವಾಗಿ ಕೇಳಿದ್ದರಿಂದ ನಾನು ಈ ಆಸ್ಪತ್ರೆಯಲ್ಲಿ ನಿನಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡುವುದಕ್ಕೆ ನನಗೆ ದೈವಪ್ರೇರಣೆಯಾಯಿತು. ಆ ಕಾರಣದಿಂದ ನಿನಗೋಸ್ಕರ ನಾನು ಸುಪ್ರಸಿದ್ಧ ಹೃದಯತಜ್ಞರನ್ನೇ ಇಲ್ಲಿಗೆ ಕರೆಸಿ ಚಿಕಿತ್ಸೆ ಕೊಡಿಸಿದೆ. ಹಾಗಾಗಿ ನಿನ್ನ ಪಾಲಿನ ದೇವರು ನಿನ್ನ ಈ ಮುಗ್ದ ಮಗನೇ ಹೊರತು ನಾನಲ್ಲ!” ಎಂದರು.

(ವಾಟ್ಸಾಪ್ ನಿಂದ ಹಂಚಿಕೊಂಡದ್ದು)

ಚಿತ್ರ ಕೃಪೆ: ಇಂಟರ್ನೆಟ್ ತಾಣ