ನೀವು ಬರೆದ ಮೊದಲ ಬರಹದ ನೆನಪಿದೆಯೇ?

ನೀವು ಬರೆದ ಮೊದಲ ಬರಹದ ನೆನಪಿದೆಯೇ?

ಪ್ರತಿಯೊಬ್ಬರ ಜೀವನದಲ್ಲಿ 'ಮೊದಲು' ಎಂಬ ಪದ ಆಗಾಗ ಬಂದೇ ಬರುತ್ತದೆ. ಮೊದಲ ಮಾತು, ಮೊದಲ ಅಕ್ಷರ, ಮೊದಲ ಹಲ್ಲು, ಮೊದಲ ಶಾಲೆ, ಮೊದಲ ಟೀಚರ್, ಮೊದಲ ಪ್ರೇಮ, ಮೊದಲ ಕೆಲಸ, ಮೊದಲ ಮಗು.. ಹೀಗೆ ಪಟ್ಟಿ ಎಂದೂ ಮುಗಿಯುದೇ ಇಲ್ಲ. ಕಥೆ, ಕವನ ಬರೆಯಲು ಅಥವಾ ಲೇಖಕನಾಗಲು ನೀವು ಚತುರ ಬರಹಗಾರರೇ ಆಗಬೇಕಿಲ್ಲ. ಹಲವರು ಮಂದಿ ಪ್ರತೀ ದಿನ ತಮ್ಮ ಚಟುವಟಿಕೆಗಳ ಬಗ್ಗೆ ಡೈರಿ ಬರೆಯುತ್ತಾರೆ. ಅದರಲ್ಲಿನ ಕೆಲವೊಂದು ಅಂಶಗಳು ನಿಜಕ್ಕೂ ಚೆನ್ನಾಗಿರುತ್ತದೆ. ಸತ್ಯವೆಂದರೆ ಅವರೆಲ್ಲಾ ಬರಹವನ್ನು ತಮ್ಮ ಉದ್ಯೋಗ ಅಥವಾ ಹವ್ಯಾಸವಾಗಿ ತೆಗೆದುಕೊಂಡಿಲ್ಲ ಅಷ್ಟೇ. ಅವರಿಗೆಲ್ಲಾ ಅವರದ್ದೇ ಆದ ಬೇರೆ ಬೇರೆ ಕೆಲಸ ಕಾರ್ಯಗಳು ಇರುತ್ತವೆ. ಆದರೂ ಡೈರಿ ಬರೆಯುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಕೆಲವರ ಡೈರಿ ಬರಹಗಳು ಅವರ ಜೊತೆಯೇ ಮಣ್ಣಾಗಿ ಬಿಡುತ್ತವೆ. ಕೆಲವು ಪ್ರಕಟವಾಗಿ ಕೋಲಾಹಲವೆಬ್ಬಿಸಿಬಿಡುವುದೂ ಉಂಟು. ಖ್ಯಾತ ನಾಮರ ಡೈರಿಯ ಬರಹಗಳಂತೂ ಪ್ರಕಾಶಕರ ಪಾಲಿಗೆ ಹಾಟ್ ಕೇಕ್ ಗಳು. ಒಂದಂತೂ ಸತ್ಯ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಬರಹಗಾರರೇ. ಬರೆದದ್ದು ಕವನ, ಕಥೆ, ಲೇಖನ, ಪತ್ರ ಅಥವಾ ಈಗಿನ ಟ್ರೆಂಡ್ ಆದ ವಾಟ್ಸಾಪ್ ಬರಹಗಳು. ಕೆಲವರ ವಾಟ್ಸಾಪ್ ಬರಹಗಳಂತೂ ಎಷ್ಟು ಮುದ್ದಾಗಿರುತ್ತವೆಯೆಂದರೆ, ಇವರು ಯಾಕೆ ಬರವಣಿಗೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಎಂದು ಅನಿಸಿ ಬಿಡುತ್ತದೆ.

ಈಗ ಆ ವಿಷಯವನ್ನು ಬದಿಗಿಡೋಣ. ನಾವು ನಮ್ಮ ಜೀವಮಾನದಲ್ಲಿ ಏನಾದರೂ ಬರೆದೇ ಇರುತ್ತೇವೆ. ಕಡೇ ಪಕ್ಷ ಪತ್ರಗಳನ್ನಾದರೂ ಬರೆದಿರುತ್ತೇವೆ. ಈಗ ಸಂಪರ್ಕ ಸಾಧನಗಳು ಬಹಳ ಆಗಿರುವುದರಿಂದ ಪತ್ರ ಬರಹಗಳು ನೇಪಥ್ಯಕ್ಕೆ ಸಂದಿವೆ. ಪತ್ರ ಬರಹಗಳೂ ಒಂದು ರೀತಿಯ ಅದ್ಭುತ ಲೇಖನಗಳೇ. ಅಪ್ಪ ಮಗನಿಗೆ ಅಥವಾ ಮಗಳಿಗೆ ಬರೆದ ಪತ್ರ. ಓರ್ವ ಪ್ರೇಮಿ ತನ್ನ ಪ್ರಿಯತಮೆಗೆ ಬರೆದ ಕವನ ಪತ್ರ, ಭಗ್ನ ಪ್ರೇಮಿಯ ಸಾಲು ಬರಹ, ಅಮ್ಮನಿಗೆ ಮಗ ಬರೆದ ಭಾವನಾತ್ಮಕ ಪತ್ರ ಹೀಗೆ ಹತ್ತು ಹಲವಾರು. ನಿಮಗೆ ನೀವು ಬರೆದ ಮೊದಲ ಬರಹ ನೆನಪಿದೆಯೇ? ಅದು ನೀವು ಬರೆದ ಪತ್ರವೂ ಆಗಿರಬಹುದು, ಲೇಖನ, ಸಣ್ಣ ಕವನ ಅಥವಾ ಕಥೆ?..ಏನಾದರೂ ನೆನಪಾಗುತ್ತಿದೆಯೇ?

ನನಗೆ ನನ್ನ ಪ್ರಥಮ ಬರಹ ಎಂದು ಹೇಳಿದಾಕ್ಷಣ ನೆನಪಾದದ್ದು, ನಾನು ಐದು ಅಥವಾ ಆರನೇ ತರಗತಿಯಲ್ಲಿದ್ದಾಗ ಬರೆದ ಒಂದು ಮಕ್ಕಳ ಕಥೆ. ಆಗೆಲ್ಲಾ ಮಕ್ಕಳಿಗಾಗಿ ಹಲವಾರು ಪತ್ರಿಕೆಗಳು ಹೊರ ಬರುತ್ತಿದ್ದುವು. ನನ್ನ ತಂದೆ ನನಗಾಗಿ ಬಾಲಮಿತ್ರ, ಬೊಂಬೆಮನೆ, ಚಂದಮಾಮ ಮೊದಲಾದ ಪತ್ರಿಕೆಗಳನ್ನು ತರುತ್ತಿದ್ದರು. ಅವುಗಳಲ್ಲಿನ ಕಥೆಗಳು (ಕಥೆಗೆ ತಕ್ಕುದಾದ ಸುಂದರ ಚಿತ್ರಗಳು) ಬಹಳ ರೋಚಕವಾಗಿಯೂ, ನೀತಿಯುಕ್ತವಾಗಿಯೂ ಇರುತ್ತಿದ್ದುವು. ಅವುಗಳನ್ನು ಓದಿ ನಾನೂ ಕಲ್ಪನಾ ಲೋಕದಲ್ಲಿ ತೇಲಾಡುತ್ತಿದ್ದೆ. ಇಂದ್ರಜಾಲ ಕಾಮಿಕ್ಸ್ ಎಂಬ ಪುಸ್ತಕಗಳೂ ಬರುತ್ತಿದ್ದವು. ಅದರಲ್ಲಿ ಬರುವ ಫ್ಯಾಂಟಮ್, ಮಾಂಡ್ರೇಕ್ ಮುಂತಾದ ಫ್ಯಾಂಟಸಿ ಕಥೆಗಳನ್ನು ಮರೆಯಲು ಸಾಧ್ಯವೇ? ನಂತರದ ದಿನಗಳಲ್ಲಿ ಅಮರ ಚಿತ್ರ ಕಥೆಗಳು ಬಂದವು. ಪಂಚತಂತ್ರದ ಕಥೆ. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ' ಇವೆಲ್ಲಾ ಓದುವುದರ ಮಜಾ ನಂತರದ ದಿನಗಳಲ್ಲಿ ಬಂದ ದೂರದರ್ಶನ ಹಾಳು ಮಾಡಿ ಹಾಕಿತು. ಓದುವ ಸುಖ ಮಾತ್ರ ನಾನು ಈಗಲೂ ಪುಸ್ತಕಗಳನ್ನು ಓದುತ್ತಾ ಅನುಭವಿಸುತ್ತಿರುತ್ತೇನೆ.

ನಾನು ಬರೆದ ಮೊದಲ ಬರಹವಾದ ಮಕ್ಕಳ ಕತೆಯ ಹೆಸರು ‘ಓತಿ ಮತ್ತು ಅರಣೆ' ಓತಿ ಅಥವಾ ಓಂತಿ ಎಂದರೆ ನಿಮಗೆ ತಿಳಿದೇ ಇರುವ ಓತಿಕ್ಯಾತ. ಇದರ ಮೈಬಣ್ಣ ವಾತಾವರಣದ ಬದಲಾವಣೆಗೆ ತಕ್ಕಂತೆ ಬದಲಾಗುವುದರಿಂದ ಇದಕ್ಕೆ ಗೋಸುಂಬೆ ಎಂದೂ ಕರೆಯುತ್ತಾರೆ. ಅರಣೆ ಅಥವಾ ಹಾವುರಾಣಿ ಇದೇ ಸಾಲಿಗೆ ಸೇರುವ ಇನ್ನೊಂದು ಜೀವಿ. ಆದರೆ ಇದು ಬಣ್ಣ ಬದಲಾಯಿಸುವುದಿಲ್ಲ. ಸಣ್ಣ ಹಾವಿನಂತಹ ಮುಖಹೊಂದಿದ್ದರೂ ಹಾವಿನ ಹಾಗೆ ಉದ್ದವಿರುವುದಿಲ್ಲ. ಇದಕ್ಕೆ ಕಾಲುಗಳಿರುತ್ತವೆ. ನಾವು ಸಣ್ಣವರಿದ್ದಾಗಿನಿಂದಲೂ ಅರಣೆ ಸಾಧು ಜೀವಿ ಆದರೆ ಓತಿ ಮಾತ್ರ ನಮ್ಮ ರಕ್ತ ಹೀರಿ ಕೆಂಪಾಗುತ್ತದೆ. ಅದನ್ನು ಕೊಂದರೆ ನಿಧಿ ಅಥವಾ ಹಣ ಸಿಗುತ್ತದೆ ಎಂಬ ವಿಚಿತ್ರ ನಂಬಿಕೆ ಇತ್ತು. ಅದಕ್ಕಾಗಿ ನಾವು ಅದನ್ನು ಸಿಕ್ಕಿದಲ್ಲಿ ಕಲ್ಲಿನಲ್ಲಿ ಹೊಡೆದು ಕೊಲ್ಲುತ್ತಿದ್ದೆವು. ಕೊಂದ ನಂತರ ಅದರ ಪುಣ್ಯ(??!) ದ ಫಲದಿಂದ ಹಣ ಸಿಗುವುದನ್ನೇ ಕಾಯುತ್ತಿದ್ದೆವು. ಇದು ಓತಿಗೆ ದೇವರು ನೀಡಿದ ಶಾಪ ಎಂದು ನನಗೆ ಸಣ್ಣವನಿದ್ದಾಗ ಯಾರೋ ಹೇಳಿದ್ದರು. ಅದನ್ನೇ ನಾನು ಕಥೆಯಾಗಿ ಬರೆದೆ. ಕಥೆಯ ಸಾರಾಂಶ ಹೀಗಿದೆ-

ಒಮ್ಮೆ ದೇವ ಲೋಕದಲ್ಲಿ ಹಬ್ಬವಿತ್ತು. ಅದಕ್ಕಾಗಿ ಭೂಲೋಕದ ಎಲ್ಲಾ ಪ್ರಾಣಿ ಪಕ್ಷಿ, ಜೀವಿ ಜಂತುಗಳಿಗೆ ಆಹ್ವಾನ ಬಂದಿತ್ತು. ಓತಿ ಹಾಗೂ ಅರಣೆ ಮಿತ್ರರಾಗಿದ್ದರು. ಅವರೂ ಈ ಹಬ್ಬಕ್ಕೆ ಹೋಗಲು ತಯಾರಿ ಮಾಡಿಕೊಂಡರು. ದೇವರಿಗೆ ಹಬ್ಬಕ್ಕೆ ಉಡುಗೊರೆ ಕೊಡಬೇಕಲ್ಲಾ. ಅದಕ್ಕೆ ಅರಣೆಯು ದೇವರಿಗಾಗಿ ಉತ್ತಮ ಹೂವು ಹಾಗೂ ಹಣ್ಣುಗಳನ್ನು ಸಂಗ್ರಹಿಸಿತು. ಅದರೆ ಓತಿಕೇತವು ದೇವರಿಗೆ ಕೊಡಲು ಕಸಕಡ್ಡಿ ಇನ್ನಿತರ ಕೊಳಕಾದ ತ್ಯಾಜ್ಯವಸ್ತುಗಳನ್ನು ತಂದಿತು. ಅದರ ಮನಸ್ಸು ಒಳ್ಳೆಯದಿರಲಿಲ್ಲ. ಅವುಗಳೆರಡೂ ದೇವರಿಗೆ ತಾವು ತಂದ ವಸ್ತುಗಳನ್ನು ನೀಡಿದಾಗ ದೇವರು ಅವುಗಳನ್ನು ತೆರೆದು ನೋಡಿ ಅರಣೆಗೆ ಆಶೀರ್ವಾದ ಮಾಡಿದರು. ಓತಿಯ ಮೇಲೆ ಕೋಪಗೊಂಡು ಅದಕ್ಕೆ ಮಾನವರ ಕೈಯಿಂದ ಸಾಯುವ ಶಾಪ ನೀಡಿದರು. ಆ ಕಾರಣದಿಂದಲೇ ಈಗ ನಾವು ಓತಿಯನ್ನು ನೋಡಿದ ಕೂಡಲೇ ಅದನ್ನು ಹೊಡೆದು ಕೊಲ್ಲುತ್ತೇವೆ. ಇದು ಅದಕ್ಕೆ ಸಿಕ್ಕಿದ ಶಾಪದ ಪ್ರತಿಫಲ ಎಂದೆಲ್ಲಾ ಕಥೆಯಲ್ಲಿ ಬರೆದ ನೆನಪು. 

ನನ್ನ ನೋಟ್ ಪುಸ್ತಕದಲ್ಲಿ ಬರೆದ ಈ ಕಥೆಯನ್ನು ನಮ್ಮ ನೆರೆಕರೆಯವರೆಲ್ಲಾ ಓದಿ ನಕ್ಕಿದ್ದೇ ನಕ್ಕಿದ್ದು. ನಂತರದ ದಿನಗಳಲ್ಲಿ ನಾನು ನಿಧಾನವಾಗಿ ಬರವಣಿಗೆಯಲ್ಲಿ ಪಳಗಲಾರಂಭಿಸಿದೆ. ನಂತರ ಹಲವಾರು ವರ್ಷಗಳ ಬಳಿಕ ಒಮ್ಮೆ ಮನೆಯನ್ನು ಶುಚಿಗೊಳಿಸುವಾಗ ಈ ಕಥೆ ಇದ್ದ ಪುಸ್ತಕ ಸಿಕ್ಕಿತ್ತು. ಅಂದಿನ ಬಾಲಿಶ ಬರವಣಿಗೆ ಮತ್ತು ವಿಷಯ ಗಮನಿಸಿದಾಗ ನನಗೆ ಈಗ ನಗು ಬರುತ್ತಿದೆ. ಅದರೆ ಅಂದು ಅದೇ ನನ್ನ ಪಾಲಿನ ಅದ್ಭುತ ಕಥೆಯಾಗಿತ್ತು. ಮೊದಲ ಕಥೆಯನ್ನು ನಾನಿನ್ನೂ ಮರೆತಿಲ್ಲ. ಆದರೆ ಆ ಪುಸ್ತಕ ಮಾತ್ರ ಮತ್ತೆ ಮರೆಯಾಗಿದೆ. ಹುಡುಕಿದರೂ ಸಿಗುತ್ತಿಲ್ಲ. ನೋಡುವ ಮುಂದಾದರೂ ಸಿಕ್ಕಿದರೆ, ಅದರ ಬಗ್ಗೆ ಮತ್ತೆ ಫೋಟೋ ಸಹಿತ ಬರೆಯುವೆ.

ನಿಮ್ಮಲ್ಲೂ ಇದೇ ರೀತಿಯ ನೀವು ಬರೆದ ಮೊದಲ ಬರಹದ ಕಥೆಗಳು ಇರಬಹುದಲ್ವೇ? ಆ ಕಥೆಯ ಬಗ್ಗೆ, ಬರೆಯುವಾಗ ನಿಮ್ಮ ವಯಸ್ಸು, ಮನಸ್ಸು, ಇವುಗಳೆಲ್ಲದುದರ ಸಾರವನ್ನು ನೀವು ಯಾಕೆ ಬರವಣಿಗೆಯಲ್ಲಿ ಹಂಚಿಕೊಳ್ಳ ಬಾರದು? ನಿಮ್ಮಿಂದ ಬರುವ ಸ್ವಾರಸ್ಯಕರವಾದ ‘ಮೊದಲ ಬರಹದ ನೆನಪುಗಳು' ಓದಲು ಕಾಯುತ್ತಿರುವೆ. ಬರೆಯುತ್ತೀರಿ ತಾನೇ?

ಚಿತ್ರ ಕೃಪೆ : ಅಂತರ್ಜಾಲ ತಾಣ