ನೀವು ಮನೋಹರ ಗ್ರಂಥಮಾಲೆಯ ಚಂದಾದಾರರೇ?

ನೀವು ಮನೋಹರ ಗ್ರಂಥಮಾಲೆಯ ಚಂದಾದಾರರೇ?

ಬರಹ

   

ಖ್ಯಾತ ನಾಟಕಕಾರ ಜಿ.ಬಿ.ಜೋಶಿ ("ಜಡಭರತ") ಯವರು ಸ್ಥಾಪಿಸಿದ, ಮನೋಹರ ಗ್ರಂಥಮಾಲೆ ಕನ್ನಡದ ಅತಿ ಹಳೆಯ ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. ಕಳೆದ ವರ್ಷ ಇದಕ್ಕೆ ಅಮೃತ ಮಹೋತ್ಸವದ ಸಂಭ್ರಮ.

 

ಇವರಲ್ಲಿ ಚಂದಾದಾರ ಸ್ಕೀಮು ಇದೆ. ವರ್ಷಕ್ಕೆ ಮುನ್ನೂರು ರೂಪಾಯಿ ಕೊಟ್ಟರೆ, ಸುಮಾರು ಆಗಸ್ಟ್ / ಸೆಪ್ಟೆಂಬರ್‍ ಹೊತ್ತಿಗೆ ೪-೫ ಪುಸ್ತಕಗಳ ಕಟ್ಟು ಮನೆಗೆ ಕಳಿಸುತ್ತಾರೆ. ಈ ಪುಸ್ತಕಗಳಲ್ಲಿ ಕೆಲವರು ಹೊಸ ಲೇಖಕರು, ಕೆಲವರು ಹೆಸರಾಂತರು. ಐದು ವರ್ಷದ ಚಂದಾ ಒಮ್ಮಗೇ ಕಟ್ಟುವ ಸೌಲಭ್ಯವೂ ಇದೆ.

 

ನಾನು ಇದಕ್ಕೆ ಕಳೆದ ಅನೇಕ ವರ್ಷಗಳಿಂದ ಚಂದಾದಾರ. ನನಗೆ ಬಂದಿರುವ ಕೆಲ ಪುಸ್ತಕಗಳು

೧.ಭೀಮಸೇನ (ಭೀಮಸೇನ ಜೋಷಿಯವರ ಜೀವನ ಚರಿತ್ರೆ - ಅನುವಾದ ಶುಭದಾ ಅಮಿನಭಾವಿ)

 

೨.ಒಂದಿಷ್ಟು ಹೊಸ ಕಥೆಗಳು - (ಕನ್ನಡದ ಹೆಸರಾಂತ ಕಥೆಗಾರರ ಕಥೆಗಳ ಸಂಕಲನ)

 

೩. ಖೋ! - (ಮರು ಮುದ್ರಣ .ನಲವತ್ತು ವರ್ಷಗಳ ಹಿಂದೆ ಮಾಡಿದ ಹೊಸ ಪ್ರಯೋಗ - ಒಂದೇ ಕಾದಂಬರಿಯ ಹನ್ನೊಂದು ಅಧ್ಯಾಯಗಳನ್ನು ಹನ್ನೊಂದು ಲೇಖಕರು ಬರೆದದ್ದು. ಈ ಲೇಖಕರು ಕನ್ನಡ ಸಾಹಿತ್ಯದ ಘಟಾನುಘಟಿಗಳಾದ ಶಂಕರ ಮೊಕಾಶಿ ಪುಣೇಕರ, ದ.ರಾ.ಬೇಂದ್ರೆ, ಕುರ್ತಕೋಟಿ, ಏ.ಕೆ.ರಾಮಾನುಜನ್, ವಿ.ಕೆ.ಗೋಕಾಕ್, ವಿ.ಎಂ.ಇನಾಂದಾರ್‍, ಶಾಂತಿನಾಥ ದೇಸಾಯಿ, ದ.ಬಾ.ಕುಲಕರ್ಣಿ, ವರಗಿರಿ ಮತ್ತು ಎನ್ಕೆ ಕುಲಕರ್ಣಿ)

 

೪.ತ್ರಸ್ತ - ರೇಖಾ ಕಾಖಂಡಕಿ,

 

೫. ಕರ್ನಾಟಕದ ಏಕೀಕರಣದ ನಾಲ್ವರು ಚಿಂತಕರು - (ಡಿ.ವಿ.ಜಿ, ಹರ್ಡೇಕರ್‍ ಮಂಜಪ್ಪ, ಪಂಡಿತ ತಾರಾನಾಥರು ಮತ್ತು ಆಲೂರು ವೆಂಕಟರಾಯರು ) - ಅನುವಾದ -ಆರ್ಯ

 

೬.ಹಿಡಿಯದ ಹಾದಿ - (ಪ್ರಬಂಧಗಳು ) - ಗಿರಡ್ಡಿ ಗೋವಿಂದರಾಜ

 

೭.ಹಳ್ಳ ಬಂತು ಹಳ್ಳ -ಶ್ರೀನಿವಾಸ ವೈದ್ಯ (೨೦೦೪ರಲ್ಲಿ ಪ್ರಕಟವಾದ ಇದಕ್ಕೆ ಈಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇದಕ್ಕೆ ಡಿ.ಎಸ್ .ನಾಗಭೂಷಣ ವಿಮರ್ಶೆ ಬರೆದಿದ್ದಾರೆ ಇಲ್ಲಿ: http://sampada.net/article/16006)

 

೮.ಬಿಂಬ ಮತ್ತು ಇತರ ನಾಟಕಗಳು - ಗಿರೀಶ ಕಾರ್ನಾಡ್ ಮತ್ತು ಮಹೇಶ ಎಲಕುಂಚವಾರ (ಮರಾಠಿಯಲ್ಲಿ ಹೆಸರಾಂತ ನಾಟಕಕಾರ)

 

೯.ಬಿಳಿಯ ಚಾದರ - ಡಾ.ಗುರುಪ್ರಸಾದ ಕಾಗಿನೆಲೆ - ಹೊಸರೀತಿಯ ನಿರೂಪಣೆಯ, ಐಟಿ / ಹೊರದೇಶದ ಬದುಕಿನ ಬಗ್ಯೆಯ ವಿಭಿನ್ನ ರೀತಿಯ ಕಾದಂಬರಿ. ಯು.ಆರ್‍ ಅನಂತಮೂರ್ತಿಗಳ ಹಿನ್ನುಡಿಯಿದೆ.)

 

ಇವಲ್ಲದೆ ಕೆಲವು ಹೊಸ ಬರಹಗಾರರ ಪುಸ್ತಕಗಳೂ ಇವೆ.

 

ಈಚೆಗೆ ಇವರ ವೆಬ್ ಸೈಟ್ ಕೂಡಾ ಮಾಡಿದ್ದಾರೆ. http://www.granthamala.com/ (ಇವತ್ತು ಪ್ರಯತ್ನಿಸಿದಾಗ Error ಬರುತ್ತಿದೆ.)

 

ನೀವೂ ಯಾಕೆ ಚಂದಾದಾರರಾಗಬಾರದು ? ಕನ್ನಡದ ಸಂಸ್ಥೆಯೊಂದಕ್ಕೆ ಸಹಾಯವಾಗುತ್ತದೆ. ನಿಮಗೂ ಒಳ್ಳೆಯ ಪುಸ್ತಕಗಳು ಕಡಿಮೆ ಬೆಲೆಗೆ ಸಿಗುತ್ತವೆ.

 

ಇವರ ವಿಳಾಸ ಹೀಗಿದೆ.

 

ಮನೋಹರ ಗ್ರಂಥಮಾಲಾ

ಲಕ್ಷ್ಮೀ ಭವನ, ಸುಭಾಸ ರಸ್ತೆ

ಧಾರವಾಡ - ೫೮೦ ೦೦೧

ಫೋನು: ೦೮೩೬ - ೨೪೪೧೮೨೨ , ೨೪೪೧೮೨೩