ನೀವು ಯಾವ ಜನ?
"ನೀವು ಯಾವ ಜನ?" - ನಿಮ್ಮದು ಯಾವ ಜಾತಿಯೆಂದು ಕೇಳಿ ತಿಳಿದುಕೊಳ್ಳುವ ಸಲುವಾಗಿ ಎದುರಾಗಬಹುದಾದ ಪ್ರಶ್ನೆಯಿದು. ಕೆಲವರಿಗೆ ಈ ಪ್ರಶ್ನೆಯಿಂದ ಮುಜುಗರವೂ ಆಗುತ್ತದೆ. ಬರುವ ಉತ್ತರ ಬ್ರಾಹ್ಮಣ, ಲಿಂಗಾಯತ, ಗೌಡರು, ಕ್ರಿಶ್ಚಿಯನ್, ಮುಸ್ಲಿಮ್, ಇತ್ಯಾದಿಗಳಿದ್ದರೆ, ಮರುಪ್ರಶ್ನೆ ಬರುತ್ತದೆ, "ಅದರಲ್ಲಿ ಯಾರು?" "ಸ್ಮಾರ್ಥ, ವೈಷ್ಣವ, ಮಾಧ್ವ, ದಾಸಗೌಡ, ಮುಳ್ಳುಗೌಡ, ಪಂಚಮಸಾಲಿ, ಆರಾಧ್ಯ, ಶಿಯಾ, ಸುನ್ನಿ, ಪ್ರಾಟೆಸ್ಟೆಂಟ್, . . . ." - ಮರು ಉತ್ತರ ಹೀಗೆ ಸಾಗುತ್ತದೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಆ ಒಳಜಾತಿಯಲ್ಲಿ ಒಳಪಂಗಡಗಳು, ಊರು, . ., ಹೀಗೆ ಕುಲಾನ್ವೇಷಣೆ ಮುಂದುವರೆಯುತ್ತದೆ. ಇಬ್ಬರದೂ ಒಂದೇ ಜಾತಿ, ಒಳಜಾತಿಗಳಾದರೆ ಆತ್ಮೀಯತೆಯ ಬಂಧ ಗಟ್ಟಿಯಾಗುತ್ತದೆ. ಏಕೆ ಹೀಗೆ? ನಮ್ಮವರು, ಇತರೆಯವರು ಎನ್ನುವ ಇಂತಹ ಭೇದ ಕೇವಲ ಜಾತಿಗೆ ಮಾತ್ರ ಸೀಮಿತವಲ್ಲ. ಮಾಡುವ ವೃತ್ತಿ, ರಾಜಕೀಯ, ಕಲಿಯುವ ಕಲಿಕೆ, ಊರು, ಸ್ವಭಾವ, ಅಂತಸ್ತು, ಇತ್ಯಾದಿಗಳಿಗೂ ಅನ್ವಯವಾಗುತ್ತದೆ. ಈ 'ನಮ್ಮವರು' ಪ್ರತಿಯೊಂದರಲ್ಲೂ 'ಇತರರಿಗಿಂತ' ಮುಂದಿರಬೇಕು ಎಂಬ ಭಾವನೆ ಎಲ್ಲರಲ್ಲೂ ಅಂತರ್ಗತವಾಗಿರುತ್ತದೆ. ಈ 'ನಮ್ಮವರು' ಭಾವನೆ ಪರಿಚಯವಿಲ್ಲದವರನ್ನೂ ಒಗ್ಗೂಡಿಸುತ್ತದೆ, 'ಇತರರು' ಎನ್ನುವ ಭಾವನೆಯೂ ಸಹ ಪರಿಚಯವಿರುವರನ್ನೂ ಸಂಶಯದಿಂದ ನೋಡುವಂತೆ ಮಾಡುತ್ತದೆ.
ಇಂದು ನಾವು ಕಾಣುತ್ತಿರುವ ದ್ವೇಷ, ಜಗಳ, ಭಿನ್ನಮತ, ಇತ್ಯಾದಿಗಳ ಮೂಲವೇ ಈ 'ನಮ್ಮವರು', 'ಇತರರು' ಅನ್ನುವ ಭಾವನೆ. ನಮ್ಮ ದೇವರೇ ಬೇರೆ, ನಮ್ಮ ಧರ್ಮವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಆಚಾರವೇ ಬೇರೆ, ನಮ್ಮ ವಿಚಾರವೇ ಬೇರೆ - ಹೀಗೆ ನಾವೇ ಬೇರೆ, ನೀವೇ ಬೇರೆಗಳನ್ನು ಬೆಳೆಸುತ್ತಾ, ಪೋಷಿಸುತ್ತಾ ಬಂದುದರ ಫಲವಿದು. ಈ ಬೇರೆಗಳು ಬೆಳೆಯುತ್ತಾ ಬೆಳೆಯುತ್ತಾ ನಮ್ಮವರಲ್ಲೇ ನಮ್ಮ ಒಳಗಿನವರು, ಒಳಗಿನ ಒಳಗಿನವರು ಸಹ ಬೆಳೆಯುತ್ತಾ ಹೋದರು. ಎಷ್ಟು ಧರ್ಮಗಳು, ಎಷ್ಟು ಜಾತಿಗಳು, ಎಷ್ಟು ಪಂಗಡಗಳು, ಒಳಪಂಗಡಗಳು!! ಒಂದೇ ಧರ್ಮ, ಜಾತಿ, ಪಂಗಡಗಳವರಲ್ಲೇ ವಿಭಿನ್ನ ರೀತಿಯ ಆಚಾರ-ವಿಚಾರಗಳು!! ನಮ್ಮವರುಗಳೇ ನಮಗೆ ಪರಕೀಯರಾಗುತ್ತಾ ಹೋದರು. ಈ ಭಾವನೆ ಪರಸ್ಪರರಲ್ಲಿ ದ್ವೇಷ, ವೈಮನಸ್ಸುಗಳನ್ನು ಉಂಟುಮಾಡಿ, ಒಂದಾಗದ ವಾತಾವರಣ ನಿರ್ಮಾಣವಾಯಿತು. ಈ ರೀತಿಯ ಒಳಜಗಳ, ದ್ವೇಷಾಸೂಯೆಗಳೇ ವಿದೇಶೀಯರು ನಮ್ಮ ದೇಶದ ಮೇಲೆ ಸಹಸ್ರ ವರ್ಷಗಳವರೆಗೆ ಹಿಡಿತ ಸಾಧಿಸಲು ಸಹಕಾರಿಯಾದವು. ಈ ರೀತಿ ಪರಸ್ಪರರನ್ನು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ಇಬ್ಬರನ್ನೂ ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವ 'ಒಡೆದು ಆಳುವ' ನೀತಿಯನ್ನು ಬ್ರಿಟಿಷರು ಯಶಸ್ವಿಯಾಗಿ ನಮ್ಮ ದೇಶದ ಮೇಲೆ ಪ್ರಯೋಗಿಸಿದ್ದು ಈಗ ಇತಿಹಾಸ.
ನಮ್ಮಲ್ಲಿ ಈ 'ನಮ್ಮವರು', 'ಇತರರು' ಭಾವನೆ ಎಷ್ಟು ರಕ್ತಗತವಾಗಿದೆಯೆಂದರೆ ಯಾರಾದರೂ ದಾರ್ಶನಿಕರು, ಸಂತರು ಭೇದ ಭಾವಗಳನ್ನು ದೂರಮಾಡಿ ಜಾತಿಗಳನ್ನು ಒಂದುಗೂಡಿಸಲು ಮಾಡುವ ಪ್ರಯತ್ನಕ್ಕೆ ಓಗೊಟ್ಟು ಒಂದಾಗುವವರದ್ದೇ ಮತ್ತೊಂದು ಬೇರೆ ಧರ್ಮ/ಜಾತಿ ಆಗಿಬಿಡುತ್ತದೆ. ಇರುವ ಗುಂಪುಗಳ ಜೊತೆಗೆ ಮತ್ತೊಂದು ಹೊಸ ಗುಂಪು ಸೇರ್ಪಡೆಯಾಗುತ್ತದೆ. ಮಹಾನ್ ಮಾನವತಾವಾದಿ ಬಸವಣ್ಣನವರ ಜಾತಿಗಳನ್ನು ಒಗ್ಗೂಡಿಸುವ ಕರೆಗೆ ಓಗೊಟ್ಟು ಹಿಂಬಾಲಿಸಿದವರದ್ದೇ ಒಂದು ಪ್ರತ್ಯೇಕ ಜಾತಿಯಾದುದನ್ನು ಉದಾಹರಿಸಬಹುದು. ಇವರು ತಮ್ಮ ಧರ್ಮವೇ ಪ್ರತ್ಯೇಕವಾಗಿದ್ದು ಅದನ್ನು ಪ್ರತ್ಯೇಕ ಧರ್ಮ ಎಂದು ನಮೂದಿಸಬೇಕೆಂದು ರಾಷ್ಟ್ರೀಯ ಜನಗಣತಿ ಸಮಯದಲ್ಲಿ ಕರೆ ಕೊಡುವುದನ್ನೂ ಕಂಡಿದ್ದೇವೆ. ಶಂಕರಾಚಾರ್ಯರ ತತ್ವ, ಸಿದ್ಧಾಂತಗಳನ್ನು ಒಪ್ಪುವವರು ಸ್ಮಾರ್ತರೆನಿಸಿದರು. ಮಧ್ವಾಚಾರ್ಯರ ಅನುಯಾಯಿಗಳು ಮಾಧ್ವರಾದರು. ರಾಮಾನುಜರ ವಿಚಾರಗಳನ್ನು ಒಪ್ಪಿದವರು ವೈಷ್ಣವರೆನಿಸಿದರು. ಹೀಗೆ ಜಾತಿಗಳು ಹೆಚ್ಚುತ್ತಾ ಹೋದವು. ವಿಭಿನ್ನ ಆಚಾರ-ವಿಚಾರಗಳನ್ನು ರೂಢಿಸಿಕೊಂಡರು. ತಾವೇ ಹೆಚ್ಚು ಎಂದು ತರ್ಕ-ವಿತರ್ಕಗಳಲ್ಲಿ ಮುಳುಗಿಹೋದರು. ಜಾತಿಗಳು ಹೆಚ್ಚಿದಂತೆ ದೇವರುಗಳೂ ಹೆಚ್ಚಾಗುತ್ತಾ ಹೋದರು. ಸಮಾಜಕ್ಕೆ ಮಾರ್ಗದರ್ಶಿಯಾದ ಆದರ್ಶಪುರುಷರುಗಳನ್ನೂ, ಸಾಧು-ಸಂತರನ್ನೂ ದೇವರ ಮಟ್ಟಕ್ಕೆ ಏರಿಸಿ ದೇವರುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿರುವುದನ್ನೂ ಕಂಡಿದ್ದೇವೆ, ಕಾಣುತ್ತಲೂ ಇದ್ದೇವೆ.
ಒಂದು ರೀತಿಯಲ್ಲಿ ನೋಡಿದರೆ ಜಗತ್ತು ನಡೆದಿರುವುದೇ ಭಿನ್ನತೆಯಿಂದ! ಭಿನ್ನತೆಯಿರುವುದರಿಂದಲೇ ಜಗತ್ತಿಗೆ ಅರ್ಥ ಬಂದಿರುವುದು. ಆದರೆ ಈ ಭಿನ್ನತೆ ಪರಸ್ಪರರ ಉತ್ಕರ್ಷಕ್ಕೆ ಕಾರಣವಾಗಬೇಕೇ ಹೊರತು ಅವನತಿಗಲ್ಲ. ಆ ದೇವನ ಸೃಷ್ಟಿಯಲ್ಲೇ ಇರುವ ಭಿನ್ನತೆಗಳು ಪರಸ್ಪರರಿಗೆ ಪೂರಕವಾಗಿವೆ. ಆದರೆ ಮಾನವ ನಿರ್ಮಿತ ಭಿನ್ನತೆಗಳು ಅವನನ್ನು ಪಾತಾಳಕ್ಕೆ ತಳ್ಳುತ್ತಿವೆ. ಭಿನ್ನತೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಆಗದಿರುವುದನ್ನು ಅರ್ಥ ಮಾಡಿಕೊಂಡು ಭಿನ್ನತೆಗಳನ್ನು ಉನ್ನತಿಗೆ ಸಹಕಾರಿಯಾಗುವಂತೆ ಯಾರಿಗೂ ನೋವಾಗದಂತೆ ಸರ್ವ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಬಳಸುವುದನ್ನು ಉತ್ತೇಜಿಸಬೇಕಿದೆ.
ಇಂದು ಪ್ರಚಲಿತವಿರುವ ಅನೇಕ ಜಾತಿಗಳಿಗೆ, ಜಾತಿಪದ್ಧತಿಗೆ ವೇದಗಳೇ ಮೂಲವೆಂದು ಆರೋಪಿಸಲಾಗುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಚಾತುರ್ವಣ್ಯಗಳನ್ನು ಜಾತಿಗಳೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಯಾವುದೋ ಸುದೀರ್ಘ ಹಿಂದಿನ ಕಾಲದಲ್ಲಿ ಜಾತಿಯನ್ನು ಹುಟ್ಟಿನಿಂದ ಬರುವುದೆಂದು ಪರಿಗಣಿಸಲ್ಪಟ್ಟು, ಅದೇ ಮುಂದುವರೆದುಕೊಂಡು ಬಂದಿದ್ದು, ಅದನ್ನು ಸಂಪ್ರದಾಯವಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪೋಷಿಸಿಕೊಂಡು ಬರುತ್ತಿರುವುದೂ ಸತ್ಯ. ಆದರೆ, ಸತ್ಯದ ಹಿನ್ನೆಲೆಯಲ್ಲಿ ಪೂರ್ವಾಗ್ರಹಪೀಡಿತರಾಗದೆ ಅಧ್ಯಯನ ಮಾಡುವವರಿಗೆ ವೇದಗಳಲ್ಲಿ ಜಾತಿಗಳು ಎಂದೂ ಹುಟ್ಟಿನಿಂದ ಬರುವುದೆಂದು ಪ್ರತಿಪಾದಿಸಿರುವುದು ಕಂಡುಬರುವುದಿಲ್ಲ. [ಇಂದಿನ ಆಡಳಿತ ವ್ಯವಸ್ಥೆಯೂ ಹುಟ್ಟಿನಿಂದ ಬರುವ ಜಾತಿಗೆ ಅನಗತ್ಯ ಪ್ರಾಧಾನ್ಯತೆ ನೀಡಿ, ಅಧಿಕಾರದ ಸಲುವಾಗಿ ಅದನ್ನು ಬಲಗೊಳಿಸುತ್ತಿರುವುದು ಕಠೋರ ಸತ್ಯ. ಇದರಿಂದಾಗಿ ದೇಶ ಸಂಕಟದ ಸಮಯಗಳಲ್ಲಿ ಒಂದಾಗಿ ನಿಲ್ಲುವುದೂ ದುಸ್ತರವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಸುಳ್ಳಲ್ಲ.] ವಿಪ್ರ ಸಮುದಾಯದವರಲ್ಲೇ 'ನಾವು ಋಗ್ವೇದಿಗಳು', 'ನಾವು ಯಜುರ್ವೇದಿಗಳು', ಇತ್ಯಾದಿ ಹೇಳಿಕೊಳ್ಳುವುದನ್ನು ಕಾಣುತ್ತೇವೆ. ಋಗ್ವೇದಿಗಳೆಂದರೆ ಋಗ್ವೇದವನ್ನು ಅಭ್ಯಸಿಸಿದವರು, ಯಜುರ್ವೇದಿಗಳೆಂದರೆ ಯಜುರ್ವೇದವನ್ನು ಅಭ್ಯಸಿಸಿದವರು ಅಷ್ಟೆ. ಅವರೇ ಬೇರೆ, ಇವರೇ ಬೇರೆ ಅಂತಲ್ಲ. ಅದೇ ರೀತಿ ಎರಡು ವೇದಗಳನ್ನು ಅರಿತವರು ದ್ವಿವೇದಿಗಳು, ಮೂರು ಮತ್ತು ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರು ಅನುಕ್ರಮವಾಗಿ ತ್ರಿವೇದಿ ಮತ್ತು ಚತುರ್ವೇದಿಗಳೆಂದು ಕರೆಯುತ್ತಾರೆ. ಆದರೆ ಋಗ್ವೇದಿ, ಯಜುರ್ವೇದಿ, ಇತ್ಯಾದಿ ಗುರುತಿಸಿಕೊಳ್ಳುವವರ ಪೈಕಿ ಎಷ್ಟು ಜನರು ನಿಜವಾಗಿಯೂ ಇಂದು ಆ ವೇದಗಳನ್ನು ಅಭ್ಯಸಿಸಿದ್ದಾರೆ?
ವೇದಗಳ ಮಂತ್ರಗಳನ್ನು ಅವುಗಳ ಗುಣ ಲಕ್ಷಣಗಳಿಗನುಸಾರವಾಗಿ ಮೂರು ವಿಧವಾಗಿ ಗುರುತಿಸುತ್ತಾರೆ. ಛಂದೋಬದ್ಧವಾದ ಮಂತ್ರಗಳನ್ನು 'ಋಕ್ಕು'ಗಳು ಎಂತಲೂ, ಗದ್ಯಮಯವಾದ ಮಂತ್ರಗಳನ್ನು 'ಯಜುಷ್' ಎಂತಲೂ ಮತ್ತು ಗೀತಾತ್ಮಕವಾಗಿ ಹೇಳಬಹುದಾದುದನ್ನು 'ಸಾಮ'ಗಳು ಎಂದು ಹೇಳುತ್ತಾರೆ. ಈ ಮೂರೂ ಪ್ರಕಾರಗಳು ನಾಲ್ಕು ವೇದಗಳಲ್ಲೂ ಕಾಣಸಿಗುತ್ತವೆ. ಋಗ್ವೇದ ಜ್ಞಾನಪ್ರಧಾನ, ಯಜುರ್ವೇದ ಕರ್ಮಪ್ರಧಾನ, ಸಾಮವೇದ ಉಪಾಸನಾಪ್ರಧಾನವಾಗಿದ್ದು, ಅಥರ್ವವೇದ ಈ ಮೂರೂ ಅಂಶಗಳನ್ನು ಒಳಗೊಂಡದ್ದಾಗಿದೆ. ಇವುಗಳಲ್ಲಿ ಯಾವುದು ಬೇಡ? ಜ್ಞಾನ ಮಾತ್ರ ಸಾಕು, ಕರ್ಮ ಮತ್ತು ಉಪಾಸನೆಗಳು ಬೇಡವೆನ್ನಬಹುದೇ? ಹಾಗೆಯೇ ಕೇವಲ ಉಪಾಸನೆ ಮಾಡೋಣ, ಜ್ಞಾನ ಮತ್ತು ಕರ್ಮಗಳು ಬೇಕಿಲ್ಲವೆನ್ನಲಾದೀತೆ? ನೈಜವಾಗಿ ಧಾರ್ಮಿಕನೆನಿಸಿಕೊಳ್ಳಲು ಜ್ಞಾನ, ಕರ್ಮ, ಉಪಾಸನೆಗಳು ಮೂರೂ ಅವಶ್ಯಕವೇ ಆಗಿದೆ. ಒಬ್ಬ ಋಗ್ವೇದಿ ಯಜುರ್ವೇದಿಯಾಗಬಾರದೆಂದೇನಿಲ್ಲ. ಇತರ ವೇದಗಳನ್ನು ಅಧ್ಯಯನ ಮಾಡಬಾರದೆಂದಿಲ್ಲ. ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ನಾಲ್ಕೂ ವೇದಗಳು ಪ್ರಜ್ಞಾವಂತರ ಅಧ್ಯಯನಕ್ಕೆ ಅತ್ಯಂತ ಯೋಗ್ಯವಾಗಿವೆ.
'ನಮ್ಮವರು', 'ಇತರರು' ಎಂಬವು ನಮ್ಮ ಸೃಷ್ಟಿಯಾಗಿವೆ, ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿಯಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಒಂದು ಉದಾಹರಣೆ ನೋಡೋಣ. ಅನೇಕ ರೀತಿಯ ವೈದ್ಯಕೀಯ ಪದ್ಧತಿಗಳಿವೆ - ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಇತ್ಯಾದಿ, ಇತ್ಯಾದಿ. ಇವುಗಳಲ್ಲಿ ಯಾವುದು ಮೇಲು? ಯಾವುದು ಕೀಳು? ಎಲ್ಲಾ ವೈದ್ಯಕೀಯ ಶಾಸ್ತ್ರಗಳ ಉದ್ದೇಶ ಒಂದೇ - ಆರೋಗ್ಯಭಾಗ್ಯವನ್ನು ಕಾಪಾಡುವುದು. ಪ್ರತಿಯೊಂದು ವಿಧಾನಕ್ಕೂ ಈಗಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮುಂದುವರೆಯಲು ಅವಕಾಶಗಳು ಮುಕ್ತವಾಗಿವೆ. ವೈದ್ಯರುಗಳಲ್ಲೇ ಹಲವು ವಿಶೇಷ ತಜ್ಞವೈದ್ಯರಿದ್ದಾರೆ - ನರರೋಗ ತಜ್ಞ, ಹೃದಯರೋಗ ತಜ್ಞ, ನೇತ್ರ ತಜ್ಞ, ದಂತ ತಜ್ಞ, ಮನೋರೋಗ ತಜ್ಞ, ಹೀಗೆ ಹಲವಾರು ವಿಭಾಗಗಳಲ್ಲಿ ಪರಿಣತರಿದ್ದಾರೆ. ಇವರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ? ಒಬ್ಬ ವೈದ್ಯರ ಮಗ ವೈದ್ಯನೇ ಆಗಬೇಕೆಂದಿದೆಯೇ? ವಕೀಲರ ಮಕ್ಕಳು ವಕೀಲರೇ ಆಗಿರುತ್ತಾರೆಯೇ? ಇದೇ ವಾದವನ್ನು ಜಾತಿಗಳ ವಿಚಾರದಲ್ಲೂ ಅನ್ವಯಿಸಬಹುದಲ್ಲವೇ? ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ನೀಡಿ, 'ಒಡೆದು ಆಳುವ' ವ್ಯವಸ್ಥೆ ಇರುವವರೆಗೂ ಜಾತಿ ಆಧಾರಿತ ಮೇಲು-ಕೀಳುಗಳಿಗೆ ಅವಕಾಶವಿದ್ದೇ ಇರುತ್ತದೆ.
ವಿವೇಕಾನಂದರ ಈ ನುಡಿ ಮಾನವತೆಯ ಹಂಬಲಿಗರಿಗೆ ಪ್ರೇರಕವಾಗಿದೆ: "ನಿಜವಾದ ಧರ್ಮವೆಂದರೆ ಮಾತಲ್ಲ, ಸಿದ್ಧಾಂತಗಳಲ್ಲ ಅಥವ ಶಾಸ್ತ್ರಗಳಲ್ಲ ಅಥವ ಮತವಲ್ಲ. ಅದು ಆತ್ಮ ಮತ್ತು ದೇವರ ನಡುವಣ ಸಂಬಂಧ. ಧರ್ಮವೆಂದರೆ ದೇವಸ್ಥಾನಗಳನ್ನು ಕಟ್ಟುವುದಲ್ಲ ಅಥವ ಚರ್ಚುಗಳನ್ನು ನಿರ್ಮಿಸುವುದಲ್ಲ ಅಥವ ಸಾಮೂಹಿಕವಾಗಿ ಪೂಜಿಸುವುದನ್ನು ಒಳಗೊಂಡಿಲ್ಲ. ಅದು ಪುಸ್ತಕಗಳಲ್ಲಿ ಅಥವ ಪದಗಳಲ್ಲಿ ಅಥವ ಉಪನ್ಯಾಸಗಳಲ್ಲಿ ಅಥವ ಸಂಸ್ಥೆಗಳಲ್ಲಿ ಕಾಣುವಂತಹುದಲ್ಲ. ನಾವು ದೇವರನ್ನು ಅರಿಯಬೇಕು, ಅನುಭವಿಸಬೇಕು, ದೇವರೊಡನೆ ಸಂಭಾಷಿಸಬೇಕು. ಅದು ಧರ್ಮ." ದೇವರನ್ನು ಅರಿಯುವ ಕ್ರಿಯೆಗೆ ಜ್ಞಾನ, ಕರ್ಮ, ಉಪಾಸನೆಗಳು ಸಾಧನಾಪಥಗಳು. ಈ ಜ್ಷಾನ ಕರ್ಮ, ಉಪಾಸನೆಗಳು ಯಾವುದೇ ಒಂದು ಜಾತಿಯ, ಒಂದು ವರ್ಗದ, ಒಂದು ಧರ್ಮದ ಸ್ವತ್ತಲ್ಲ. ಎಲ್ಲಾ ಮಾನವರ ಸ್ವತ್ತು ಅದು, ಆಸಕ್ತಿ ಇರುವ ಯಾರೇ ಆದರೂ ಅದನ್ನು ಪಡೆಯಬಹುದು, ಮಾಡಬಹುದು, ಅನುಷ್ಠಾನಕ್ಕೆ ತರಬಹುದು. ಈಗ ಹೇಳಿ, ನೀವು ಯಾವ ಜನ?
Comments
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by rameshbas
ಉ: ನೀವು ಯಾವ ಜನ?
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by makara
ಉ: ನೀವು ಯಾವ ಜನ?
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by partha1059
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by ಗಣೇಶ
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by partha1059
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by ಗಣೇಶ
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by bhalle
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by ಗಣೇಶ
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by partha1059
ಉ: ನೀವು ಯಾವ ಜನ?
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by nageshamysore
ಉ: ನೀವು ಯಾವ ಜನ?
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by Vasant Kulkarni
ಉ: ನೀವು ಯಾವ ಜನ?
ಉ: ನೀವು ಯಾವ ಜನ?
In reply to ಉ: ನೀವು ಯಾವ ಜನ? by ರಾಮಕುಮಾರ್
ಉ: ನೀವು ಯಾವ ಜನ?