ನೀವೂ ಜನಪ್ರಿಯ ಅಂಕಣಕಾರರಾಗಬಹುದು!

ನೀವೂ ಜನಪ್ರಿಯ ಅಂಕಣಕಾರರಾಗಬಹುದು!

ಬರಹ

(ಮೊದಲ ಭಾಗ)

೪. ಗುರಿಯ ಸ್ಪಷ್ಟತೆಯಿರಲಿ

ಅಂಕಣ ಬರಹಗಾರನಿಗೆ ತನ್ನ ಅಂಕಣವನ್ನು ಓದುವವರು ಯಾರು ಎಂಬ ಬಗ್ಗೆ ಸ್ಪಷ್ಟತೆ
ಇರಬೇಕು. ಆ ಸೂರ್ಯನಿಗೇ ಇಡೀ ಜಗತ್ತನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಹೀಗಿರುವಾಗ
ಹುಲುಮಾನವನಾದ ಅಂಕಣಕಾರ ಎಲ್ಲರನ್ನೂ ಮೆಚ್ಚಿಸಬೇಕೆನ್ನುವುದು ಅಸಾಧ್ಯವಾದ ಸಂಗತಿ. ತಾನು
ಮೆಚ್ಚಿಸಬೇಕಾದ್ದು ತನ್ನ ಅಂಕಣವನ್ನು ಓದುವ ವರ್ಗವನ್ನು ಎಂಬುದನ್ನು ಅಂಕಣಕಾರ ಬಹುಬೇಗ
ಮನದಟ್ಟು ಮಾಡಿಕೊಳ್ಳಬೇಕು.
ನಿಮ್ಮ ಅಂಕಣ ಬರಹಕ್ಕೆ ಯುವಕರೇ ಪ್ರಮುಖವಾದ ಓದುಗರು
ಎನ್ನುವುದಾದರೆ ಓಂ ಪ್ರಕಾಶ್ ಸಿನೆಮಾದ ಡೈಲಾಗ್ ಮಾದರಿಯಲ್ಲಿ ಹೆಡ್ಡಿಂಗುಗಳನ್ನೂ
ಲೇಖನದಲ್ಲಿ ಪಂಚ್ ಲೈನ್‌ಗಳನ್ನೂ ಬಳಸಬೇಕು. ನಿಮ್ಮ ಓದುಗರು ಹೆಂಗಸರು ಎಂದಾದರೆ
ಎಸ್.ನಾರಾಯಣ್ ಧಾರಾವಾಹಿ ಮಾದರಿಯಲ್ಲಿ ಬರೆಯಬೇಕು. ಒಟ್ಟಿನಲ್ಲಿ ನೀವು ಯಾರಿಗಾಗಿ
ಬರೆಯುತ್ತಿರುವಿರಿ ಎಂಬುದನ್ನು ಯಾವಾಗಲೂ ಸ್ಪಷ್ಟವಾಗಿ ನೆನಪಿಟ್ಟುಕೊಂಡಿರಬೇಕು.

೫. ಗಾಳಿಯೊಂದಿಗೆ ಗುದ್ದಾಡು

ಒಂದು ವಿಷಯದ ಬಗ್ಗೆ, ಯಾವುದಾದರೊಂದು ಕ್ಷೇತ್ರದಲ್ಲಿ ಅರಿಣಿತಿಯನ್ನು ಗಳಿಸಿ
ಟೆಕ್ಸ್ಟ್ ಬುಕ್ ಬರೆದ ಹಾಗೆ ಅಂಕಣ ಬರೆಯುವವರು ಇದ್ದಾರೆ. ಅವರ ಅಂಕಣಗಳನ್ನು ಆಸಕ್ತರು
ಹಾಗೂ ನಿರಾಸಕ್ತಿರೂ ಇಬ್ಬರೂ ಟೆಕ್ಸ್ಟ್ ಬುಕ್ ಓದಿದ ಹಾಗೆಯೇ ಓದಿಕೊಳ್ಳುತ್ತಾರೆ.
ಅಂಥವರನ್ನು ಜನಪ್ರಿಯ ಅಂಕಣಕಾರ ಎನ್ನಲು ಸಾಧ್ಯವಾಗದು.
ಅಂಕಣಕಾರ
ಜನಪ್ರಿಯನಾಗಬೇಕಾದರೆ ಗಾಳಿಯೊಂದಿಗೆ ಗುದ್ದಾಡಬೇಕು, ಹತ್ತಿಯ ಮೂಟೆಯ ಮೇಲೆ ತನ್ನ
ಬಾಕ್ಸಿಂಗ್ ಕೌಶಲ್ಯವನ್ನು ತೋರಬೇಕು, ಸಗಣಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು, ಕೊಳಚೆಯ
ಅಭಿಮಾನಿಯಾಗಿರಬೇಕು.
ಅರ್ಥವಾಗಲಿಲ್ಲವೇ, ವಿವರಿಸುತ್ತೇವೆ ಕೇಳಿ: ಅಂಕಣಕಾರ ತನ್ನ
ಪರಿಣಿತಿಯ ಕ್ಷೇತ್ರದಲ್ಲಿನ ವಿಷಯಗಳ ಬಗ್ಗೆ ಎಷ್ಟೇ ಪ್ರಖರವಾಗಿ ಬರೆದರೂ ಎಲ್ಲರಿಗೂ
ಅಪೀಲ್ ಮಾಡಲಾಗುವುದಿಲ್ಲ. ಅದಕ್ಕೆ ಆತ ಗಾಳಿಯ ಹಾಗೆ ಎಲ್ಲರಿಗೂ ಅನುಭವಕ್ಕೆ ಬಂದ,
ಎಲ್ಲರಿಗೂ ಲಭ್ಯವಾದ ವಿಷಯ ಆರಿಸಿಕೊಳ್ಳಬೇಕು. ಹಾಗೆಯೇ ಹತ್ತಿಯ ಚೀಲದಂತಹ
ಟಾಪಿಕ್ಕುಗಳನ್ನು ಇಟ್ಟುಕೊಳ್ಳಬೇಕು, ತನ್ನ ಪಂಚಿಂಗ್ ಕೌಶಲ್ಯವನ್ನು ತೋರಿಸುತ್ತಾ
ಹೋಗಬೇಕು. ಉದಾಹರಣೆಗೆ ಗಾಂಧೀಜಿ, ಧರ್ಮ, ದೇಶಪ್ರೇಮ ಇಂಥವನ್ನೇ ತೆಗೆದುಕೊಳ್ಳಿ. ಇವು
ಎಲ್ಲರಿಗೂ ಸಂಬಂಧಿಸಿದವು. ಗಾಂಧೀಜಿಗೆ ನೂರಾ ಎಂಟು ಪ್ರಶ್ನೆಗಳು ಎಂದು
ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಎಸೆದು ಲೇಖನ ಬರೀರಿ ಉತ್ತರ ಕೊಡೋಕೆ ಗಾಂಧಿ ಇದ್ರೆ
ತಾನೆ ಭಯ? ಹಂಗೇ ಧರ್ಮ ಅಂತ ಇಟ್ಕೊಂಡು ನಿಮಗೆ ಸರಿ ಕಂಡಿದ್ದನ್ನು ಕಾಣದ್ದನ್ನೆಲ್ಲಾ
ಗೀಚಿ ಹಾಕಿ, ನಿಮಗೆ ನಿಮ್ಮ ಓದುಗರು ಬಹುಸಂಖ್ಯಾತರಾಗಿರುವುದು ಯಾವ ಧರ್ಮದವರು ಎಂಬ
ಸ್ಪಷ್ಟತೆ ಇರುತ್ತದಾದ್ದರಿಂದ ತೊಂದರೆಯಾಗುವುದಿಲ್ಲ.
ಸಗಣಿಯೊಂದಿಗೆ
ಸಖ್ಯವೆಂದರೆ, ಅತ್ಯಂತ ಜನಪ್ರಿಯ ಅಂಕಣಕಾರನಾದವನಿಗೆ ಸಗಣಿ ಎಸೆಯುವ, ಮುಖಕ್ಕೆ ಮಸಿ
ಬಳಿಯುವ ಕಲೆ ಕರಗತವಾಗಿರಲೇ ಬೇಕು. ಅದೆಂತಹ ಒಳ್ಳೆಯ ವ್ಯಕ್ತಿಯನ್ನೇ ಟೀಕಿಸುವುದಿದ್ದರೂ
ನೀವು ಬಳಸುವ ಸಗಣಿ, ಮಸಿಯಿಂದ ಖುದ್ದು ಆ ವ್ಯಕ್ತಿಗೇ ತನ್ನ ಬಗ್ಗೆ ತನಗೆ ಸಂಶಯ
ಬಂದುಬಿಡಬೇಕು. ಇದಕ್ಕೆ ವಕೀಲಿ ವೃತ್ತಿಯ ಗೆಳೆಯರಿಂದ ವಾದಕ್ಕೆ ತಯಾರಿಯನ್ನೂ, ಬೀದಿಜಗಳ
ಪ್ರವೀಣರಿಂದ ವಿತಂಡವಾದದ ಅಭ್ಯಾಸವನ್ನೂ, ನಡೆದಾಡುವ ಅವಾಚ್ಯ ಶಬ್ಧಕೋಶಗಳಿಂದ ಬೈಗುಳ,
ಆರೋಪಗಳನ್ನು ಕಡ ತೆಗೆದುಕೊಳ್ಳಬೇಕು.
ಬರ್ನಾಡ್ ಶಾ ಒಮ್ಮೆ ಹೇಳಿದಂತೆ,
“ಹಂದಿಯೊಂದಿಗೆ ಕಿತ್ತಾಡಬೇಡ. ಹೆಚ್ಚು ಕಿತಾಡಿದಷ್ಟು ನೀನು ಕೊಳಕಾಗುತ್ತೀ ಆದ್ರೆ ಹಂದಿ
ಅದನ್ನ ಎಂಜಾಯ್ ಮಾಡ್ತಾ ಹೋಗುತ್ತೆ” ಅಂತ. ಈ ತತ್ವವನ್ನು ಬಳಸಿದರೆ ನಿಮಗೆ ಸರಿಸಾಟಿಯೇ
ಇರರು.

೬. ಸಂಗ್ರಹ ಬುದ್ಧಿ ಅವಶ್ಯಕ

ಅಂಕಣಕಾರನಿಗಿರುವ ಅತಿ ದೊಡ್ಡ ಸವಲತ್ತು ಎಂದರೆ ಆತ ಕೇವಲ ತನ್ನ ಸ್ವಂತದ್ದನ್ನೇ
ಬರೆಯಬೇಕೆಂದಿಲ್ಲ. ಅಥವಾ ಸ್ವಂತದ್ದೆನ್ನುವುದ್ಯಾವುದನ್ನೂ ಬರೆಯಬೇಕೆಂದಿಲ್ಲ. ತನ್ನ
ವಾದಕ್ಕೆ ಪೂರಕವಾಗಿ ಅನ್ಯರು ಹೇಳಿದ್ದನ್ನೆಲ್ಲಾ ಸಂಗ್ರಹಿಸಿ ಸೊಗಸಾಗಿ ಒಂದು ಖೌದಿ
ಹೊಲಿದು ಬಿಟ್ಟರೆ ಸಾಕು.
ಉದಾಹರಣೆಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಮೈಕ್ರೋಫೋನ್
ಬಳಸಬೇಕೇ ಬೇಡವೇ ಎಂದು ವಿವಾದವೆದ್ದಿದೆ ಎಂದು ಭಾವಿಸಿ. ಆಗ ಅಂಕಣಕಾರನಾದವನು ತನ್ನ
ವಾದಕ್ಕೆ ಪೂರಕವಾಗಿ ಕೋಟ್ ಬಳಸಬಹುದು. ಮೈಕ್ರೋಫೋನ್ ಬಳಸುವುದು ನಿಷಿದ್ಧ ಎಂಬ
ಅಭಿಪ್ರಾಯ ಬಿಂಬಿಸ ಹೊರಟವ “ದೇವರ ಪಿಸುಮಾತು ತಲುಪಬೇಕಾದ್ದು ಕಿವಿಗಳಿಗಲ್ಲ,
ಹೃದಯಕ್ಕೆ” - ವಾಲ್ಮೀಕಿ ಮಹರ್ಷಿ ಎಂದೂ, ಮೈಕ್ರೋಫೋನ್ ಬಳಕೆಯನ್ನು ಅನುಮೋದಿಸುವವ
“ಪುರೋಹಿತಶಾಹಿಯ ಸಂಚಿನ ಗುಟ್ಟು ರಟ್ಟಾಗುವುದಕ್ಕೆ ಬೇಕೇ ಬೇಕು ಡಂಗೂರ” -
ವಿಶ್ವಾಮಿತ್ರ ಮಹರ್ಷಿ ಎಂದು ಕೋಟ್ ಬಳಸಬೇಕು. ಇದರಿಂದ ನಿಮ್ಮ ವಾದವನ್ನು ಮಂಡಿಸುವುದರ
ಜೊತೆಗೆ ನಿಮ್ಮ ವಾದಕ್ಕೆ ಎಂತೆಂಥ ದೊಡ್ಡವರ ಬೆಂಬಲವಿದೆ ಎಂದು ತೋರ್ಪಡಿಸಿದ ಹಾಗೂ
ಆಗುತ್ತೆ. ಜೊತೆಗೆ ವಾಲ್ಮೀಕಿಯಾಗಲಿ, ವಿಶ್ವಾಮಿತ್ರರಾಗಲಿ ಹೀಗೆ ಹೇಳಿದ್ದರು,
ಮೈಕ್ರೋಫೋನಿನ ಬಗ್ಗೆ ತಿಳಿದಿದ್ದರು ಎನ್ನುವುದಕ್ಕೆ ಯಾವ ಸಾಕ್ಷಿಯೂ ಇರದು.
ಈ ತಂತ್ರದ ಸೂಕ್ತ ಬಳಕೆಗೆ ಅತ್ಯಂತ ಉಪಯುಕ್ತವಾದ ಸಾಧನ ಅಂತರಜಾಲ.

ಹೆಸರಾಂತ ಅಂಕಣಕಾರರಾಗುವುದಕ್ಕೆ ಬೇಕಾದ ರಹಸ್ಯ ಸೂತ್ರಗಳನ್ನು ಕೇಳಿದಿರಿ.
ಭಕ್ತಿಯಿಂದ, ಶ್ರದ್ಧೆಯಿಂದ ಇವನ್ನೆಲ್ಲಾ ಪಾಲಿಸಿದರೆ ಅವಶ್ಯಕವಾಗಿ ನಿಮಗೆ ಯಶಸ್ಸು
ಕಟ್ಟಿಟ್ಟ ಬುತ್ತಿ. ಕಡೆಗೆ ಇವೆಲ್ಲವನ್ನೂ ಸರಳಗೊಳಿಸಿ ಒಂದು ಮೆಥಾಡಲಜಿಯನ್ನು ಹೇಳಲಿ
ಬಯಸುತ್ತೇವೆ.

ಒಂದು ವಾರದ ಅಂಕಣವನ್ನು ಸಿದ್ಧ ಪಡಿಸಲು ಪಾಲಿಸಬೇಕಾದ ಅತ್ಯಂತ ಸರಳ ಪದ್ಧತಿ:
೧. ನಾಲ್ಕೂ ದಿಕ್ಕಲ್ಲಿ ಕಣ್ಣು ಹಾಯಿಸಿ ಬಿಸಿ ಬಿಸಿಯಾಗಿರುವ ವಿಷಯ ಆಯ್ದುಕೊಳ್ಳಿ.
೨. ವಿಷಯದ ಪರವಾಗಿ ಇಲ್ಲವೇ ವಿರುದ್ಧವಾಗಿ ಮಾತ್ರ ಬರೆಯಿರಿ. ಅಡ್ಡಗೋಡೆ ಮೇಲಿಟ್ಟ ದೀಪಕ್ಕೆ ಎಣ್ಣೆ ದಂಡ ಎಂಬುದು ನೆನಪಿರಲಿ.
೩. ವಿಷಯದ ಪರ, ವಿರುದ್ಧ ವಹಿಸುವುದು ಕಷ್ಟವಾದರೆ ಒಂದ್ರುಪಾಯಿ ನಾಣ್ಯ ತೂರಿ ನಿರ್ಧರಿಸಿ.
೪.
ಅನಂತರ ನಿಮ್ಮ ವಾದಕ್ಕೆ ಪೂರಕವಾಗಿ ಲಭ್ಯವಿರುವ ಮಾಹಿತಿಯನ್ನು ಅಂತರಜಾಲದಿಂದ, ನಿಮ್ಮ
ವಾದ ಬೆಂಬಲಿಸುವ ಮೂಲಭೂತವಾದಿಗಳಿಂದ, ಪುಸ್ತಕಗಳಿಂದ ಸಂಗ್ರಹಿಸಿಕೊಳ್ಳಿ.
೫. ಕೆಲವು ಕಡೆ ಕೋಟ್ ಮಾಡುತ್ತಾ ಉಳಿದಂತೆ ಸಂಗ್ರಹಿಸಿದ ಮಾಹಿತಿಯನ್ನೆಲ್ಲಾ ನಿಮ್ಮದೇ ಎನ್ನುವಂತೆ ಬರೀರಿ.
೬.
ನಿಮ್ಮನ್ನು ಮೆಚ್ಚಿ, ನಿಮ್ಮ ಪ್ರತಿ ಅಂಕಣವನ್ನು ಕೊಂಡಾಡುವ ಓದುಗರ ಪತ್ರಗಳು ಮಾತ್ರ
ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಿ. ಅಂಥದ್ದು ಯಾವುದೂ ಬರದಿದ್ದರೆ ನೀವೇ
ಓದುಗರ ಹೆಸರಲ್ಲಿ ಬರೆದುಕೊಂಡು ಪ್ರಕಟಿಸಿ.

ಇವನ್ನು ಪಾಲಿಸಿ ಪ್ರತಿಯೊಬ್ಬರೂ ಅತ್ಯುತ್ತಮ ಕಾಲಮಿಸ್ಟರಾಗಿ ಎಂದು ಹಾರೈಸುತ್ತೇವೆ.