ನೀವೂ ದಾರ ಕಟ್ಟಿ
ಪ್ರಕಾಶಕರು ಜರಗಿಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ೧೩ ಕಥೆಗಳ ಸಂಕಲನ ಇದು. ಈ ಸ್ಪರ್ಧೆಗೆ ಪ್ರಕಾಶಕರಿಗೆ ಬೆಂಗಳೂರಿನ ಜಾಗತಿಕ ಕನ್ನಡಿಗರ ಕೂಟ “ಕಥನ" ಸಹಯೋಗ ನೀಡಿತ್ತು.
ಆ ಸ್ಫರ್ಧೆಗೆ ಸಲ್ಲಿಕೆಯಾದ ೨೨೦ ಕತೆಗಳಲ್ಲಿ ಮೊದಲ ಬಹುಮಾನ ಪಡೆದ ಕತೆ “ನೀವೂ ದಾರ ಕಟ್ಟಿ”. ಫತೇಪುರಸಿಕ್ರಿಗೆ ಪ್ರವಾಸ ಹೋಗಿದ್ದ ದಂಪತಿಗಳಿಗೆ ಸೂಫಿ ಸಂತ ಸಲೀಂ ಕ್ರಿಸ್ತಿಯ ಸಮಾಧಿಯ ಕಿಂಡಿಯನ್ನು ತೋರಿಸಿ, ಪ್ರವಾಸಿ ಗೈಡ್ “….ಮಕ್ಕಳಿಲ್ಲದವರು ಈ ಕಿಂಡಿಗೆ ದಾರ ಕಟ್ಟಿದರೆ ಅವರ ಇಷ್ಟಾರ್ಥ ಪೂರೈಸುತ್ತದಂತೆ. ಸರ್, ನೀವೂ ಹೋಗಿ ದಾರ ಕಟ್ಟಿ ಬನ್ನಿ” ಎನ್ನುತ್ತಾನೆ. ಆ ಪ್ರವಾಸಿ ಗೈಡ್ ವಿಕಲಚೇತನ. ಪ್ರವಾಸಕ್ಕೆ ಬಂದಿದ್ದ ವಿನಾಯಕನ ಹೆಂಡತಿ, ಪ್ರವಾಸಿ ಗೈಡಿಗೆ “ನೀವೂ ದಾರ ಕಟ್ಟಿ. ನಿಮ್ಮ ಸಂಗಡ ನಾವೂ ಬರುತ್ತೇವೆ” ಎನ್ನುತ್ತಾಳೆ. ಇಂದಿನ ಆಗುಹೋಗುಗಳ ಕೆಲವು ಸೂಕ್ಷ್ಮಗಳನ್ನು ನವಿರಾಗಿ ಸ್ಪರ್ಶಿಸುವ ಕತೆ, ಆ ಕ್ಷಣದಲ್ಲಿ ಮಾನವೀಯ ಮುಖವೊಂದನ್ನು ಅನಾವರಣಗೊಳಿಸುವ ಮೂಲಕ ಆಪ್ತವಾಗುತ್ತದೆ.
ಎರಡನೆಯ ಕತೆ “ನಿನ್ನದೊಂದು ನೋಟ ಬೇಕು”. ಹದಿನಾರು ವಯಸ್ಸಿನ ಚಂದ್ರಿಕಾಳ ತಂದೆ ಈರಾಚಾರಿ, ಆಕೆ ಮೂರು ವರುಷದ ಬಾಲೆಯಾಗಿದ್ದಾಗಲೇ ಪತ್ನಿಯನ್ನು ಡೈವೋರ್ಸ್ ಮಾಡಿಕೊಂಡವನು. ಅನಂತರ ಸರಕಾರಿ ಶಾಲೆಯೊಂದರಲ್ಲಿ ಟೀಚರ್ ಆಗಿರುವ ಕಸ್ತೂರಿಯನ್ನು ಎರಡನೇ ಮದುವೆಯಾದ. ಇದೀಗ, ಚಂದ್ರಿಕಾಳಿಗೆ ತನ್ನ ತಾಯಿಯ ಬಗ್ಗೆ ಕೆಲವು ಸಂಗತಿಗಳು ತಿಳಿಯುತ್ತವೆ. ಅವಳನ್ನೊಮ್ಮೆ ನೋಡಬೇಕೆಂಬ ಅವಳ ಬಯಕೆ ಬೆಂಕಿಯಾಗಿ ಸುಡುತ್ತದೆ. ಆ ಸಂದರ್ಭ ಎದುರಾದಾಗ ಮಾತ್ರ ಅವಳು ತಲ್ಲಣಿಸುತ್ತಾಳೆ. ತನಗೆ ಎದುರಾದ ಮೂವರು ಮಹಿಳೆಯರಲ್ಲಿ ತನ್ನ ತಾಯಿ ಯಾರೆಂದು ಸ್ಪಷ್ಟವಾಗದೆ, ಆ ಬಗ್ಗೆ ಮಲತಾಯಿಯ ಜೊತೆಗೆ ಕೇಳಲೂ ಆಗದೆ ನಲುಗಿ ಹೋಗುತ್ತಾಳೆ.
ಮುಂದಿನ ಕತೆ "ಹೊರಗೂ ಮಳೆ, ಒಳಗೂ ಮಳೆ”ಯಲ್ಲಿ ಸಂಬಂಧಗಳ ಮಾನಸಿಕತೆ ಮತ್ತು ಭೌತಿಕತೆಗೆ ಮಳೆ ಸಂಕೇತವಾಗಿ ನಿಲ್ಲುತ್ತದೆ. “ಚಿಟ್ಟೆ" ಕತೆ, ಸಂಸಾರಗಳ "ಅಕ್ರಮತೆ" ಮತ್ತು “ಸಕ್ರಮತೆ"ಯ ಸಂಕೀರ್ಣ ವಸ್ತುವನ್ನು ಒಳಗೊಂಡಿದೆ; ಅದನ್ನು ಲೇಖಕರು ಕೆದಕುವ ಶೈಲಿ ಗಮನಾರ್ಹ. ತಂದೆಯ ಬೇರೆ ಸಂಸಾರದ ಭಯದ ನೆರಳಿನಲ್ಲೇ ಬೆಳೆದಾತ ಕಥಾನಾಯಕ. ಈಗ, ತನ್ನ ಅಕ್ಕ ಬೇರೊಂದು ಸಂಸಾರದ ನೆಮ್ಮದಿ ಕೆಡಿಸುವ ವಾಸ್ತವಕ್ಕೆ ಮುಖಾಮುಖಿಯಾದಾಗ ತೀರ್ಪುಗಾರನಾಗಲು ಸಂಧಿಗ್ದ.
“ಸರಹದ್ದು" ಕತೆ, ಕೊಲ್ಲಿ ದೇಶಗಳಿಗೆ ಕೆಲಸಕ್ಕಾಗಿ ಹೋಗುವವರ ಬಗೆಗಿನ ನಮ್ಮ ಕಲ್ಪನೆಗಳನ್ನು ಪ್ರಶ್ನಿಸುವಂತಿದೆ. ಅವರು ಅಲ್ಲಿಯೂ ಇಲ್ಲಿಯೂ ಎದುರಿಸುವ ರಿಸ್ಕ್ ಮತ್ತು ಬವಣೆಗಳನ್ನು ಬಿಡಿಸಿಡುತ್ತದೆ. “ನೀನ್ಯಾಕೋ ನಿನ ಹಂಗ್ಯಾಕೋ" ಕತೆಯು ಇಂದಿನ ನ್ಯೂಕ್ಲಿಯರ್ ಕುಟುಂಬಗಳು ಎದುರಿಸುವ ಸವಾಲುಗಳನ್ನು ಚಿತ್ರಿಸುತ್ತದೆ. ಆದರೆ ಕೆಲವು ಸಿನೀಮಿಯ ಅಂಶಗಳನ್ನು ಎಳೆದು ತಂದಿರುವುದು, ಕತೆಯ ಓಘಕ್ಕೆ ಅಡ್ಡಿಯಾಗಿದೆ.
ಬೆಂಗಳೂರಿನಲ್ಲಿ ಹಾವು ಹಿಡಿಯುವ ಇಮಾಂಸಾಬಿಯ ನೆಲೆಯಲ್ಲಿ, ನಗರೀಕರಣವು ಜನಸಾಮಾನ್ಯರ ಬದುಕಿಗೆ ಕೊಳ್ಳಿಯಿಡುವ ಬೆಳವಣಿಗೆಗಳನ್ನು ಕಟ್ಟಿಕೊಡುತ್ತದೆ "ಹಾವು" ಕತೆ. “ನಕ್ಸಲ್" ಕತೆಯ ಬೆಳವಣಿಗೆ ದೀರ್ಘಕಾಲ ಓದುಗರನ್ನು ಕಾಡುವಂತಿದೆ; ಆದರೆ, ಕತೆಯಲ್ಲಿ ವ್ಯಕ್ತವಾಗುವ ಕೆಲವು ತೀರ್ಮಾನಗಳು ಎಳೆಯ ಓದುಗರಿಗೆ ಒಂದು ಆದರ್ಶವಾಗುವ ಅಪಾಯವೂ ಇದೆ.
“ಮೌನ ಮನದ ವೀಣೆ” ಕತೆ ಮಹಾ ಹಟಮಾರಿ ತಾಯಿಯೊಬ್ಬಳನ್ನು ಚಿತ್ರಿಸುತ್ತದೆ. ತಾಯಿಯೊಬ್ಬಳು ಹೀಗಿರಲು ಸಾಧ್ಯವೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕುವುದರ ಜೊತೆಗೆ, ಆ ಹಟಮಾರಿತನಕ್ಕೆ ಕಾರಣವಾದ ಸಂಗತಿಗಳೂ ಓದುಗರನ್ನು ತಟ್ಟುತ್ತವೆ.
ಕೊನೆಯ ಕತೆ “ವ್ಯೂಹ”ದಲ್ಲಿ ಚಿತ್ರಿತವಾಗಿರುವ ಮಹಿಳೆಯರ ತುಮುಲ ಉತ್ತಮ ನಿರೂಪಣೆಯಿಂದಾಗಿ ಗಮನ ಸೆಳೆಯುತ್ತದೆ.