ನೀವೂ ಪುಸ್ತಕಗಳನ್ನು ಡಿಜಿಟೈಸ್ ಮಾಡುತ್ತಿದ್ದೀರಿ!

ನೀವೂ ಪುಸ್ತಕಗಳನ್ನು ಡಿಜಿಟೈಸ್ ಮಾಡುತ್ತಿದ್ದೀರಿ!

ಬರಹ

ನೀವು
ಅಂತರ್ಜಾಲವನ್ನು ಬಳಸುತ್ತಿದ್ದರೆ, ಪುಸ್ತಕವನ್ನು ಡಿಜಿಟೈಸ್ ಮಾಡುವ ಯೋಜನೆಯಲ್ಲಿ
ನಿಮಗರಿವಿಲ್ಲದೆಯೇ ಭಾಗವಹಿಸುತ್ತಿರುವ ಸಾಧ್ಯತೆ ಉಜ್ವಲವಾಗಿದೆ. ಅಂತರ್ಜಾಲದ ವಿವಿಧ
ತಾಣಗಳ ಸೇವೆಯನ್ನು ಪಡೆಯಲು ಬಳಕೆದಾರ ನೋಂದಾಯಿಸಿಕೊಳ್ಳ ಬೇಕಾಗುತ್ತದೆ ತಾನೇ? ಹೀಗೆ
ನೋಂದಾಯಿಸಿಕೊಳ್ಳುವಾಗ, ನಮ್ಮ ಖಾತೆಗೆ ಹೆಸರು ಮತ್ತು ಗುಪ್ತಸಂಕೇತಗಳನ್ನು ಆಯ್ದು
ಕೊಳ್ಳಬೇಕಾಗುತ್ತದೆ.ಕಂಪ್ಯೂಟರ್ ಪ್ರೊಗ್ರಾಮುಗಳೂ ಈ ರೀತಿ ಖಾತೆಗಳನ್ನು ನೋಂದಾಯಿಸಿ
ಕೊಳ್ಳಬಹುದು. ಆದರೆ ಇಂತಹ ಸ್ವಯಂಚಾಲಿ ವ್ಯವಸ್ಥೆಗಳ ಮೂಲಕ ಆಗುವ ನೋಂದಾವಣೆಗಳು ತಮ್ಮ
ಸೇವೆಯ ಮೇಲೆ ಒತ್ತಡ ಉಂಟು ಮಾಡುವುದಲ್ಲದೆ,ನೈಜ ಬಳಕೆಗಾಗಿ ತೆರೆದ ಖಾತೆಗಳಲ್ಲ
ಎನ್ನುವುದು ಸೇವೆಗಳನ್ನು ಒದಗಿಸುವವರಿಗೆ ಗೊತ್ತು. ಅದಕ್ಕಾಗಿ ನೈಜ ಬಳಕೆದಾರನೇ ಖಾತೆ
ತೆರೆಯುತ್ತಿದ್ದಾನೆ ಎನ್ನುವುದನ್ನು ಖಚಿತ ಪಡಿಸುವ ನಿಟ್ಟಿನಲ್ಲಿ, ಖಾತೆ
ತೆರೆಯುವವರಿಗೆ ಪರೀಕ್ಷೆಯನ್ನೊಡ್ಡುವುದು ಸೇವಾದಾತೃಗಳ ವೈಖರಿ.ಇದಕ್ಕಾಗಿ ಅವರು ಸುಲಭದ
ಹಾದಿ ಹಿಡಿಯುತ್ತಾರೆ. ಅಡ್ಡಾದಿಡ್ಡಿ ಬರೆದ ಒಂದು ಪದವನ್ನು ತೆರೆಯ ಮೇಲೆ
ಪ್ರದರ್ಶಿಸಿ,ಅದನ್ನು ಟೈಪಿಸುವಂತೆ ಬಳಕೆದಾರನಿಗೆ ಸವಾಲೊಡ್ಡುವುದೇ ಆ ವೈಖರಿ.ನೈಜ
ಬಳಕೆದಾರನಿಗೆ ಅದು ಚಿಟಿಕೆ ಹೊಡೆದಷ್ಟೇ ಸುಲಭ. ಆದರೆ ಕಂಪ್ಯೂಟರ್ ಆಧಾರಿತ
ವ್ಯವಸ್ಥೆಯಾದರೆ, ಈ ಸವಾಲು ಬಿಡಿಸಲದಕ್ಕೆ ಸಾಧ್ಯವಾಗದು.
ಕ್ಯಾಪ್ಚ(captcha)
ಎನ್ನುವ ಈ ವಿಧಾನವನ್ನು ಒಳ್ಳೆಯ ಗುರಿ ಸಾಧನೆಗೆ ಬಳಸಬಾರದೇಕೆ ಎನ್ನುವ ಯೋಚನೆ
ಗ್ವಾಟೆಮಾಲದ ವೋನಾನ್ ಎಂಬಾತನಿಗೆ ಬಂತು.ಗೂಗಲ್‌ನ ಪುಸ್ತಕಗಳನ್ನು ಡಿಜಿಟೈಸ್ ಮಾಡುವಂತಹ
ಯೋಜನೆಗಳಿಗೆ ಇದನ್ನು ಉಪಯೋಗಿಸುವುದೇ ಈ ಯೋಚನೆ.ಡಿಜಿಟೈಸ್ ಮಾಡಿದ ಪುಸ್ತಕಗಳ ಸ್ಕ್ಯಾನ್
ಮಾಡಿದ ಪುಟಗಳನ್ನು ಅಪ್ಟಿಕಲ್ ಕ್ಯಾರೆಕ್ಟರ್ ರೆಕೊಗ್ನಿಶನ್ ತಂತ್ರಾಂಶ ಬಳಸಿ,ಡಿಜಿಟೈಸ್
ಮಾಡಲು ಯತ್ನಿಸಲಾಗುತ್ತದೆ.ಆದರೆ ಶೇಕಡಾ ಇಪ್ಪತ್ತು ಪದಗಳನ್ನು ಗುರುತಿಸಲು
ಕಂಪ್ಯೂಟರಿಗೆ ಸಾಧ್ಯವಾಗದು.ಪುಟಗಳ ಬಣ್ಣಗೆಟ್ಟಿರುವುದು,ಶಾಯಿ ಕಲೆಗಳು ಇಂತಹ
ಕಾರಣಗಳಿಂದ ಹೀಗಾಗಬಹುದು. ಅಂತಹ ಗುರುತಿಸಲಾಗದ ಪದಗಳನ್ನು ಖಾತೆ ತೆರೆಯುವವರಿಗೆ
ಒದಗಿಸಿ, ಅವರಿಂದ ಈ ಪದಗಳನ್ನು ಟೈಪಿಸುವ ಪ್ರಯತ್ನ ನಡೆಯುತ್ತದೆ.ಒಂದಕ್ಕಿಂತ ಹೆಚ್ಚು
ಜನರಿಗೆ ಇಂತಹ ಪದವನ್ನು ಒದಗಿಸಿ,ಅವರು ಅದನ್ನು ಒಂದೇ ರೀತಿ ಟೈಪಿಸಿದರೆ,ಅದನ್ನು
ಸರಿಯಾಗಿದೆ ಎಂದು ತಿಳಿಯಲಾಗುತ್ತದೆ. ಈ ರೀತಿ ದಿನವೊಂದಕ್ಕೆ ಒಂದು ಕೋಟಿ ಪದಗಳನ್ನು
ತಮಗರಿವಿಲ್ಲದೆಯೇ ಜನರು ಅಂತರ್ಜಾಲದಲ್ಲಿ ಟೈಪಿಸಿ, ಪುಸ್ತಕವನ್ನು ಡಿಜಿಟೈಸ್ ಮಾಡುವ
ಒಳ್ಳೆಯ ಯೋಜನೆಯಲ್ಲಿ ಪಾಲ್ಗೊಂಡು ಬಿಡುತ್ತಾರೆ!
ಸ್ಯಾನ್‌ಪ್ರಾನಿಸ್ಕೋದ ಓಪನ್
ಕಂಟೆಂಟ್ ಅಲಾಯನ್ಸ್ ಎನ್ನುವ ಲಾಭರಹಿತ ಸಂಸ್ಥೆಯೊಂದು ಜಗತ್ತಿನ ಸುಮಾರು ನೂರೈವತ್ತು
ಗ್ರಂಥಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಈ ಯೋಜನೆಯ ಲಾಭವನ್ನು
ಪಡೆಯುತ್ತಿವೆ.ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ 1851ರ ನಂತರದ ಸಂಚಿಕೆಗಳನ್ನು
ಡಿಜಿಟೈಸ್ ಮಾಡುವ ಕಾರ್ಯವೂ ಇಂತಹ ರಿಕ್ಯಾಪ್ಚ ಯೋಜನೆಯ ಮೂಲಕ
ಗಣಕೀಕರಣಗೊಳ್ಳುತ್ತಿದೆ.ಇದೀಗಲೇ ಅರ್ಧಾಂಶದಷ್ಟು ಕೆಲಸ ಮುಗಿದಿದೆ.ಇದೀಗಲೇ ಸುಮಾರು
ನಲುವತ್ತು ಕೋಟಿ ಜನರು ಇದರಲ್ಲಿ ಕೈಗೂಡಿಸಿದ್ದಾರೆ.ಜನಬಲವನ್ನು ಗುರಿ ಸಾಧಿಸಲು ಬಳಸುವ
ಹನಿಗೂಡಿದರೆ ಹಳ್ಳ ಎನ್ನುವಂತಹ ಇಂತಹ ಯೋಜನೆಗಳು ಹೆಚ್ಚೆಚ್ಚು ನಡೆಯಬೇಕು ಅಲ್ಲವೇ?
---------------------------------------------------------------
ಭಯೋತ್ಪಾದನೆ ಕಡಿವಾಣಕ್ಕೆ ಹೊಸ ಶಾಸನ
ಅಂತರ್ಜಾಲದ
ಮೂಲಕವೂ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿರುವುದು ದಿನದಿಂದ ದಿನಕ್ಕೆ
ಸ್ಪಷ್ಟವಾಗುತ್ತಿದೆ. ಸರ್ವವ್ಯಾಪಿಯಾಗಿರುವ ಅಂತರ್ಜಾಲದ ಮೂಲಕ ನಡೆದ ಘಟನೆಗಳ ತನಿಖೆ
ನಡೆಸುವುದು ತುಂಬಾ ತೊಡಕಿನ ಸವಾಲು. ಅಂತರ್ಜಾಲವನ್ನು ಬಳಸಿಕೊಂಡವರ ದಾಖಲೆಯನ್ನು
ಉಳಿಸಿಕೊಳ್ಳದಿರುವುದು ಬಹುಪ್ರಮುಖ ತೊಡಕು.ಹೀಗಾಗಿ ಅಂತರ್ಜಾಲ ಸೇವೆಯನ್ನು
ಒದಗಿಸಿದವರು,ಅದನ್ನು ಪಡೆದ ಬಳಕೆದಾರ ಯಾರು ಎನ್ನುವ ವಿವರಗಳನ್ನು ಎರಡು
ವರ್ಷಗಳವರೆಗಾದರೂ ಉಳಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಅಮೆರಿಕಾದ ಸಂಸತ್ತಿನಲ್ಲಿ
ಶಾಸನ ರೂಪಿಸಲಾಗುತ್ತಿದೆ.ಇದರ ಪ್ರಕಾರ ಅಂತರ್ಜಾಲ ಸೇವಾದಾತೃಗಳು
ಮಾತ್ರವಲ್ಲದೆ,ನಿಸ್ತಂತು ಜಾಲವನ್ನು ಒದಗಿಸುವ ಹೋಟೆಲ್,ಪೆಟ್ರೋಲ್
ಬಂಕುಗಳು,ವಿಶ್ವವಿದ್ಯಾಲಯಗಳು,ಸೈಬರ್ ಕೆಫೆಗಳು ಅಷ್ಟೇ ಏಕೆ ಮನೆಗಳಲ್ಲೂ ಅಂತರ್ಜಾಲ
ಸೇವೆಯನ್ನು ಬಳಸಿದವರ ವಿವರಗಳನ್ನು ದಾಖಲಿಸಿ,ಉಳಿಸಿಕೊಳ್ಳುವುದು ಕಡ್ಡಾಯವಾಗಲಿದೆ.
---------------------------------------------------------------
ಮೊಬೈಲ್ ಮೂಲಕ ಬ್ಯಾಂಕಿಂಗ್ ಸೇವೆ
ಮೊಬೈಲ್
ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪೂರೈಸಿ,ಜಗತ್ತಿನ ಬಡಜನರ ಆರ್ಥಿಕ ಏಳಿಗೆಯನ್ನು
ಸಾಧಿಸಲು ಬಿಲ್ ಗೇಟ್ಸ್ ಅವರ ದತ್ತಿ ಸಂಸ್ಥೆ ಉತ್ಸಾಹ ಹೊಂದಿದೆ. ಸುಮಾರು ನೂರು ಕೋಟಿ
ಜನ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ.ಇದರಿಂದ ಅವರ ಚಟುವಟಿಕೆಗಳು ಬಾಧಿತವಾಗುತ್ತವೆ.
ಒಂದು ವೇಳೆ ಅವರಿಗೆ ಬ್ಯಾಂಕ್ ಸೇವೆಗಳು ದೊರಕಿದರೆ,ಅವರ ಏಳಿಗೆ ಸುಲಭದಲ್ಲಿ ಆಗುತ್ತದೆ
ಎನ್ನುವುದು ದತ್ತಿ ಸಂಸ್ಥೆಯ ಲೆಕ್ಕಾಚಾರ.ಕೆನ್ಯಾದ ಎಂ-ಪೆಸಾ ಎನ್ನುವ ಯೋಜನೆಯನ್ನು
ಮಾದರಿಯಾಗಿಟ್ಟು ಕೊಳ್ಳುವುದು ಸಂಸ್ಥೆಯ ಯೋಚನೆ. ಕೆನ್ಯಾದ ಯೋಜನೆಯಲ್ಲಿ ಏಜಂಟರುಗಳು
ಜನರಿಂದ ನಗದು ಸ್ವೀಕರಿಸಿ,ಅದನ್ನು ಅವರ ಮೊಬೈಲ್ ಫೋನಿನ ಖಾತೆಗೆ ಸಂದಾಯ ಮಾಡುವ ಸೇವೆ
ನೀಡುತ್ತಾರೆ.ವ್ಯವಹಾರಕ್ಕೆ ಹಣ ಸಂದಾಯ ಮಾಡುವಾಗ ಜನರು ತಮ್ಮ ಮೊಬೈಲ್ ಖಾತೆಯಲ್ಲಿ
ಜಮೆಯಾಗಿರುವ ಹಣವನ್ನು ಬಳಸಿಕೊಂಡು ಮೊಬೈಲ್ ಮೂಲಕವೇ ಪಾವತಿಸಬಹುದು. ಹಣವನ್ನು ನಗದಾಗಿ
ಪಡೆಯಲು ಏಜೆಂಟ್ ಬಳಿ ಹೋಗಿ,ತನ್ನ ಮೊಬೈಲ್ ಖಾತೆಯಲ್ಲಿ ಸಂದಾಯವಾಗಿರುವ ಹಣವನ್ನು
ನಗದಾಗಿ ಪಡೆಯಬಹುದು.
----------------------------------------------------
ರೈಲ್ವೇ ಬೋಗಿಯಲ್ಲೂ ಸಭಾಂಗಣ!

ಚಲಿಸುವ
ರೈಲಿನಲ್ಲೇ ಪ್ರಯಾಣಿಕರಿಗೆ ವಿಡಿಯೋ ಪ್ರದರ್ಶನದ ಮೂಲಕ ಸಾಧಕರ ಅನುಭವಗಳನ್ನು ಹಂಚಿ
ಕೊಳ್ಳುವ ಸೌಲಭ್ಯ ಒದಗಿಸುವ ವಿನೂತನ ಯತ್ನ ನಡೆದಿದೆ.ಟಾಟಾ ಸಂಸ್ಥೆಯು ಈ ಯೋಜನೆಯ
ರೂವಾರಿ. ಭಾರತದ ವಿವಿಧ ಭಾಗಗಳಿಂದ ಆಯ್ದ ಎಳೆಯ ಪ್ರತಿಭಾವಂತರಿಗೆ ಅವರಿಗೆ ಸಾಧಕರ
ಸಾಧನೆಗಳ ಬಗ್ಗೆ ಪರಿಚಯಿಸುವ ಕಾರ್ಯಕ್ರಮವನ್ನು ಡಿಸೆಂಬರಿನಲ್ಲಿ
ಹಮ್ಮಿಕೊಳ್ಳಲಾಯಿತು.ಇದರಲ್ಲಿ ಶ್ರೀಪಡ್ರೆಯವರೂ ಪಾಲ್ಗೊಂಡು ನೀರಿನ ಬಗ್ಗೆ
ಅರಿವನ್ನುಂಟು ಮಾಡಲು ಪ್ರಯತ್ನಿಸಿದ್ದರು.ಇದನ್ನವರು ತಮ್ಮ ಬ್ಲಾಗ್‍ನಲ್ಲಿ
(http://jeevajala.blogspot.comನಲ್ಲಿ ದಾಖಲಿಸಿದ್ದಾರೆ.
ಉದಯವಾಣಿ
ashokworld
*ಅಶೋಕ್‌ಕುಮಾರ್ ಎ