ನೀವೂ ಬೆಳೆದರೆ ಉಳಿದವರೂ ಬೆಳೆಯುತ್ತಾರೆ...

ನೀವೂ ಬೆಳೆದರೆ ಉಳಿದವರೂ ಬೆಳೆಯುತ್ತಾರೆ...

ಸ್ವಾಮಿ ರಾಮತೀರ್ಥರು ಒಮ್ಮೆ ತಮ್ಮ ಅನುಯಾಯಿಗಳಿಗೆ ಪುಟ್ಟದೊಂದು ಸವಾಲನ್ನು ನೀಡುತ್ತಾರೆ. ಬೋರ್ಡಿನ ಮೇಲೆ ಸೀಮೆ ಸುಣ್ಣದಿಂದ ಉದ್ದದ ಗೆರೆಯನ್ನೆಳೆದು ಇದನ್ನು ಹೇಗಾದರೂ ಮಾಡಿ ಚಿಕ್ಕದು ಮಾಡುವಂತೆ ಹೇಳುತ್ತಾರೆ. ಎಲ್ಲಾ ಶಿಷ್ಯಂದಿರೂ ಒಬ್ಬರಿಗೊಬ್ಬರು ಪ್ರಯತ್ನವನ್ನು ಆರಂಭಿಸುತ್ತಾರೆ. ಕೆಲವರು ಅದರ ಸ್ವಲ್ಪ ಭಾಗವನ್ನು ಅಳಿಸಿ ಸಣ್ಣದಾಯಿತು ಎಂದು ಹೇಳುತ್ತಾರೆ. ಅದು ಸಣ್ಣದು ಎಂಬುದನ್ನು ಹೇಳಲು ಹೇಗೆ ಸಾಧ್ಯ? ಹೊಸದಾಗಿ ನೋಡುವವನಿಗೆ ಅದು ಗಮನಕ್ಕೆ ಬರುವುದಿಲ್ಲ ಎಂಬ ಮರು ಸವಾಲು ರಾಮತೀರ್ಥರದ್ದು. ಮತ್ತೆ ಕೆಲವರು ಬಂದು ಅದರ ಅರ್ಧಭಾಗವನ್ನು ಚಿತ್ತು ಮಾಡಿ ಈಗ ಸಣ್ಣದಾಗಿದೆ ಎನ್ನುತ್ತಾರೆ. ಆದರೂ ಅಲ್ಲಿ ಇನ್ನರ್ಧ ಭಾಗದ ಅಸ್ತಿತ್ವ ಇದ್ದೇ ಇದೆಯಲ್ಲ ಎಂಬ ವ್ಯಾಖ್ಯಾನ ಸ್ವಾಮಿಗಳದ್ದು. ಹೀಗೆ ಹಲವು ಪ್ರಯತ್ನಗಳು ಸಾಗುತ್ತವೆ ಆದರೆ ಯಾವ ಉತ್ತರವೂ ಸೂಕ್ತವಿರುವುದಿಲ್ಲ. ಬಹಳಷ್ಟು ಮಂದಿ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸುತ್ತಾರೆ. ಕೊನೆಗೂ ಸಮಸ್ಯೆ ಬಗೆಹರಿಯದೆ ಗುರುವಿನ ಮೋರೆ ಹೋಗುತ್ತಾರೆ. ರಾಮತೀರ್ಥರು ನಗುತ್ತಾ ಮತ್ತೆ ಸೀಮೆಸುಣ್ಣ ತೆಗೆದುಕೊಂಡು ಗೆರೆಯ ಪಕ್ಕ ಮತ್ತೊಂದು ಉದ್ದದ ಕರೆಯುತ್ತಾರೆ. 

ಹೌದು, ಜೀವನದಲ್ಲಿ ನಾವು ಬೇರೆಯವರನ್ನು ಚಿಕ್ಕವರನ್ನಾಗಿಸಲು, ಅವರ ಅಭಿವೃದ್ಧಿ ತಡೆಯಲು, ಇನ್ನೊಬ್ಬರನ್ನು ಹತ್ತಿಕ್ಕಲು ಏನಿಲ್ಲ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಬೇರೆಯವರ ಏಳಿಗೆಯನ್ನು ಸಹಿಸದೆ ಕರುಬುತ್ತೇವೆ. ಅವರ ಬಗ್ಗೆ ಏನೆಲ್ಲಾ ತಲೆಕೆಡಿಸಿಕೊಳ್ಳುತ್ತೇವೆ. ಅವರನ್ನು ಹಿಡಿಯಲಾರದೆ ತೊಳಲಾಡುತ್ತೇವೆ. ಅದೇ ಪ್ರಯತ್ನವನ್ನು, ಅದೇ ಶ್ರಮವನ್ನು ನಮ್ಮ ಬೆಳವಣಿಗೆಯತ್ತ ವ್ಯಯಿಸಿದರೆ ತನ್ನಿಂದ ತಾನೇ ನಾವು ಬೆಳೆದಿರುತ್ತೇವೆ. ಇಲ್ಲಿ ಗಮನಿಸಲೇಬೇಕಾದ ಎರಡು ಸಂಗತಿಗಳಿವೆ. ಮೊದಲನೆಯದು ನಮ್ಮ ಬೆಳವಣಿಗೆ, ಎರಡನೆಯದು ಬೇರೆಯವರ ಬೆಳವಣಿಗೆಯನ್ನು ತಡೆಯುವುದು. ನಾವು ಎಡವುದೇ ಇಲ್ಲಿ. ಮೊದಲನೆಯದ್ದನ್ನು ಮರೆತುಬಿಡುತ್ತೇವೆ. ನಮ್ಮ ಮನಸ್ಸು ಎರಡನೆಯದರ ಬಗ್ಗೆಯೇ ಚಿಂತಿಸುತ್ತಿರುತ್ತದೆ. ಅದು ನಿಮ್ಮ ವೈರಿಯೇ ಇರಲಿ, ನಿಮ್ಮ ಪ್ರತಿಸ್ಪರ್ಧಿಗಳೇ ಇರಲಿ, ಯಾರೇ ಆಗಿರಲಿ ನೀವು ಎಲ್ಲವನ್ನೂ ಮೀರಿ ಬೆಳೆಯಲು ಪ್ರಯತ್ನಿಸಿದರೆ ಸಾಕು. ತನ್ನಿಂದ ತಾನೇ ಅವರು ಚಿಕ್ಕವರಾಗಿ ಬಿಟ್ಟಿರುತ್ತಾರೆ. ನಿಮ್ಮ ಗುರಿಯೇನಿದ್ದರೂ ನಿಮ್ಮ ಬೆಳವಣಿಗೆಯತ್ತ ಕೇಂದ್ರೀಕೃತವಾಗಿರಲಿ.

ಇದೇ ರೀತಿಯ ಒಂದು ಪ್ರಸಂಗ ರಾಮಕೃಷ್ಣ ಪರಮಹಂಸರ ಜೀವನದಲ್ಲೂ ಕಂಡು ಬರುತ್ತದೆ. ಒಮ್ಮೆ ಅವರು ತಮ್ಮ ಶಿಷ್ಯರಿಗೆಲ್ಲಾ ಮಾವಿನ ಹಣ್ಣನ್ನು ಕೊಡುತ್ತಾರೆ. ಮಾವಿನ ಹಣ್ಣನ್ನು ಪಡೆದುಕೊಂಡ ಕೆಲವು ಶಿಷ್ಯರಿಗೆ ತಮಗೆ ದೊರೆತ ಮಾವಿನ ಹಣ್ಣು ಬೇರೆಯವರಿಗೆ ಸಿಕ್ಕ ಹಣ್ಣಿಗಿಂತ ಸಣ್ಣದು ಎಂದು. ಈ ಅಸಮಧಾನವನ್ನು ಗುರುಗಳಾದ ರಾಮಕೃಷ್ಣ ಪರಮಹಂಸರಲ್ಲಿ ತೋಡಿಕೊಳ್ಳುತ್ತಾರೆ. ಅವರು ಶಿಷ್ಯರಿಂದ ಮಾವಿನ ಹಣ್ಣನ್ನು ತೆಗೆದು ಕೊಂಡು ಅವರ ಬಳಿ ಉಳಿದಿದ್ದ ಅದಕ್ಕಿಂತ ಸಣ್ಣ ಮಾವಿನ ಹಣ್ಣನ್ನು ಆ ಹಣ್ಣಿನ ಜೊತೆ ಇರಿಸಿ ತುಲನೆ ಮಾಡುವಂತೆ ಶಿಷ್ಯರಿಗೆ ಹೇಳುತ್ತಾರೆ. ಆಗ ಆ ಶಿಷ್ಯರ ಬಳಿ ಇದ್ದ ಮಾವಿನ ಹಣ್ಣು ಉಳಿದ ಹಣ್ಣುಗಳಿಗಿಂತ ದೊಡ್ಡದಾಗಿ ಕಾಣಿಸುತ್ತದೆ. ನಮ್ಮ ಜೀವನವೂ ಹೀಗೆಯೇ, ನಾವು ನಮ್ಮ ಜೀವನವನ್ನು ನಮಗಿಂತ ಮೇಲೆ ಇರುವವರ ಜೊತೆ ಹೊಂದಿಸಿ ನೋಡುತ್ತೇವೆ, ಮತ್ತೆ ಅವರನ್ನು ಹಿಂದಕ್ಕೆ ಹಾಕಲು ಪ್ರಯತ್ನಿಸುತ್ತೇವೆ. ನೇರ ದಾರಿಯಿಂದ ಸಾಧ್ಯವಿಲ್ಲವಾದರೆ ಅಡ್ಡ ದಾರಿಯಲ್ಲಿ ಹೋಗಿಯಾದರೂ ಅವರನ್ನು ಕೆಳಕ್ಕೆ ಬೀಳಿಸಲು ಪ್ರಯತ್ನಿಸುತ್ತೇವೆ. ಇದು ತಪ್ಪು. ನಮಗಿಂತ ಕೆಳಗಿನ ಜೀವನ ಮಟ್ಟವನ್ನು ಹೊಂದಿರುವವರನ್ನು ನೋಡಿ ನಾವು ಕಲಿತುಕೊಳ್ಳಬೇಕು. ಕೆಲವರಿಗೆ ದಿನದ ಒಂದು ಹೊತ್ತಿನ ಊಟವೂ ಕಷ್ಟ, ಆದರೆ ದೇವರು ನಮಗೆ ಎರಡು ಹೊತ್ತು ಹೊಟ್ಟೆ ತುಂಬಾ ಊಟ ನೀಡಿದ್ದಾನಲ್ಲ, ಅದಕ್ಕೆ ನಾವು ಆತನಿಗೆ ಕೃತಜ್ಞರಾಗಿರಬೇಕು. ಆಗ ಗುರುಗಳ ಮಾತಿನ ತಾತ್ಪರ್ಯವನ್ನು ಶಿಷ್ಯರು ಅರ್ಥ ಮಾಡಿಕೊಳ್ಳುತ್ತಾರೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ