ನೀವ್ ಏನ್ ಹೇಳ್ತೀರ ? .. ಮೋಸ ಮೋಸ
ತುಮಕೂರಿಗೆ ಹೊರಟು ಬಸ್ಸಿನಲ್ಲಿ ಕುಳಿತಿದ್ದೆ . ಬಸ್ಸು ಇನ್ನು ಹೊರಟಿರಲಿಲ್ಲ ಎಲ್ಲ ಗೌಜು ಕಿಟಕಿ ಬಳಿ ಯಾರೋ ಕೂಗುತ್ತಿದ್ದರು ಸಿ.ಡಿ. ಬೇಕಾ ಸರ್ ಸಿ.ಡಿ ... ಎಲ್ಲಾ ಹೊಸದು.. ಈಚಿನದು .. ನಾನು ಕುತೂಹಲದಿಂದ ಬಗ್ಗಿ ನೋಡಿದೆ ಇದೇನು ಆಶ್ಚರ್ಯ ಕೂಮಾರಸ್ವಾಮಿಗಳು ಈ ಗೆಟಪ್ ನಲ್ಲಿ ಹತ್ತಿರವೆ ಬಂದರು "ಏನಿದು?" ಎಂದೆ. "ಎಲ್ಲ ಜೀವನಕ್ಕೆ ದಾರಿ ಅಲ್ವ ಅಂದರು " ನನಗೆ ಆಶ್ಚರ್ಯವಾಯುತು. "ನಿಮ್ಮ ರಾಜಕೀಯ ವೃತ್ತಿಯ ಗತಿ" ಅಂತ ಕೇಳಿದೆ. ಅವರು ಇನ್ನೆಲಿಯ ರಾಜಕೀಯ ಎಲ್ಲ ಮು.ಮೊ.ಹೋಯ್ತಲ್ಲ ಎಂದು ನನ್ನತ್ತ ನೋಡಿ ಮುಂದುವರೆಸಿದರು "ಈಗ ಎಲ್ಲರ ರಾಜಕೀಯ ಎಲ್ಲ ಬಂದ್ ಎಲ್ಲ ಡೈರೆಕ್ಟ್ ಆಗಿ ಇಟಲಿಯಿಂದಲೆ ರಿಮೋಟ್ ಆಡಳಿತ ವಿದಾನಸೌದವು ಇಲ್ಲ ಪಾರ್ಲಿಮೆಂಟು ಇಲ್ಲ ಅಂದರು" . ನನಗೆ ಆಶ್ಚರ್ಯ ದೇಶದಲ್ಲಿ ಇಷ್ಟೊಂದು ಬದಲಾದರು ನಾನು ಏನು ತಿಳಿದುಕೊಂಡೆ ಇಲ್ವಲ್ಲ. ಕುತೂಹಲಕ್ಕೆ ಪ್ರಶ್ನಿಸಿದೆ "ಅಲ್ಲ ಕಮಲದವರು ಏನು ಮಾಡ್ತಿದ್ದಾರೆ?" . ನನ್ನ ಕಡೆ ಕೆಂಗಣ್ಣು ಬೀರಿದ ಅವರು "ಕೈ" ತೋರಿಸಿದರು. ಆ ಕಡೆ ನೋಡಿದೆ, ಅಯ್ಯಪ್ಪ ಇದೇನಿದು ಹೂವಿನ ಅಂಗಡಿಯಲ್ಲಿ ಬರೀ ಕಮಲಗಳೇ. "ಬೇಗ ತಗೋಳ್ಳೀ ಹೊಸ ಸಿ.ಡಿ. ರೆಡ್ಡಿ ಪ್ರಕರಣ,ಬಳ್ಳಾರಿ ಗಣಿ ಹಗರಣ ತುಮಕೂರಿನ ಗೌಡರ ಪಕ್ಷಾಂತರದ ಗಲಾಟೆ ಎಲ್ಲ ಇದೆ ಹಳೆ ಕನ್ನಡ ಸಿನಿಮಾ ನೋಡಿದಂತಾಗುತ್ತೆ ಏನು ಮೋಸವಿಲ್ಲ ಎಲ್ಲ ಹೊಸ ಕಾಪಿ " ಅಂತ ಗಲಾಟೆ ಎಬ್ಬಿಸಿದರು. ನಾನು ಕುತೂಹಲಕ್ಕೆ ಇರಲಿ ಅಂತ ಹತ್ತು ರುಪಾಯಿ ಕೊಟ್ಟು ಪಡೆದೆ.
ತುಮಕೂರಿನಲ್ಲಿ ಮನೆ ತಲುಪಿ ನಂತರ ಡಿ.ವಿ.ಡಿ. ಆನ್ ಮಾಡಿ ಅದರ ಬಾಯಿಗೆ ಸಿ.ಡಿ ತುರುಕಿದೆ . ಪ್ರಾರಂಬವಾಯಿತು. ಮೊದಲ ದೃಷ್ಯದಲ್ಲಿ ದೆ.ಗೌಡರು ಸೋಫದಲ್ಲಿ ಹಿಂದೆ ಒರಗಿ ನಿದ್ದೆ ಮಾಡುತ್ತಿದಾರೆ. ನೋಡುತ್ತಿದ್ದೆ ನಿಮಿಶ ಒಂದಾಯಿತು , ಎರಡಾಯಿತು ಅದೇ ದೃಷ್ಯ ಅವರ ನಿದ್ದೆ. ಇದೇನು ಅನ್ನುತ್ತ ರಿಮೋಟ್ ಒತ್ತಿ ಸ್ವಲ್ಪ ಮುಂದೆ ಹಾಕಿದೆ, ಪುನ: ಅದೇ ಪುನರಾವರ್ತನೆ. ಹಾಗೆ ರಿಮೋಟ್ ಒತ್ತುತ್ತ ಕಡೆಯವರೆಗೂ ಹೋದೆ ಒಂದೇ ದೃಷ್ಯ ದೆ.ಗೌಡರ ನಿದ್ದೆ. ಇದೇನು ಮೋಸ, ಎಲ್ಲ ಇದೆ ಅಂತ ಹೇಳಿ ಈ ರೀತಿ ಮೋಸವ? ನಲವತ್ತು ನಿಮಿಷದ ಸಿ.ಡಿ.ಯಲ್ಲಿ ಬರೀ ನಿದ್ದೆಯ? ಅಂತ ಕೋಪ ಬಂದು. ಆರಿಸಿ ಜೋರಾಗಿ ಕೂಗಿಕೊಳ್ಳತೊಡಗಿದೆ "ಮೋಸ ಮೋಸ ಕುಮಾರಸ್ವಾಮಿ ಮೋಸ" ಅಂತ. ಪಟ್ ಅಂತ ಹೆಗಲಮೇಲೆ ಏಟು ಬಿತ್ತು. ಕಣ್ಬಿಟ್ಟು ನೋಡಿದರೆ ನನ್ನ ಪತ್ನಿ "ಏನ್ರಿ ಇದು ಮದ್ಯಾನದ ಊಟ ಮಾಡಿ ಕುರ್ಚಿ ಮೇಲೆ ಕೂತು ನಿದ್ದೆ ಮಾಡಿದವರು ಏನೋ ಮೋಸ ಮೋಸ ಅಂತ ಕೂಗ್ತಿದ್ದೀರಿ" ಅಂದಳು. ಅಂದ್ರೇ ಇದು ಮದ್ಯಾನದ ನಿದ್ದೇನಾ? ಇನ್ನು ರಾತ್ರಿಯ ನಿದ್ದೆ ಬಾಕಿ ಇದೆ ಎನ್ನುತಾ ಭವ್ಯಬಾರತದ ಮತದಾರನಾದ ನಾನು ಎದ್ದು ಕುಳಿತೆ. ಪಕ್ಕದ ಮನೆಯ ಅಜ್ಜಿ ತನ್ನ ಸೊಸೆಯನ್ನು ಜೋರಾಗಿ ಕೇಳುತ್ತಿದ್ದ ಮಾತು ಕಿಟಕಿಯಲ್ಲಿ ಕೇಳಿಸಿತು."ಅಲ್ವೇ ಶೋಭ ನಿನ್ನ ಅಕ್ಕ ಕಮಲಗೆ ಅಪರೇಷನ್ ಅಂತಿದ್ಯಲ್ಲ ಏನಾಯಿತೆ?". ಆಪರೇಶನ್,ಕಮಲ ಅನ್ನುವ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನಿದ್ದೆ ಯ ಮತ್ತು ಕಳೆದು ಎದ್ದು ಕುಳಿತೆ.