ನೀ ದೂರ ಹೋದಾಗ

ನೀ ದೂರ ಹೋದಾಗ

ಪುಸ್ತಕದ ಲೇಖಕ/ಕವಿಯ ಹೆಸರು
ಫೌಝಿಯಾ ಸಲೀಂ
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧ರ
ಪುಸ್ತಕದ ಬೆಲೆ
ರೂ. ೨೨೦.೦೦, ಮುದ್ರಣ : ೨೦೨೩

‘ನೀ ದೂರ ಹೋದಾಗ’ ಇದು ಫೌಝಿಯಾ ಸಲೀಂ ಅವರ ಕಾದಂಬರಿ. ಕಾದಂಬರಿ ಬರೆಯುವವರೇ ಅಪರೂಪವಾಗಿರುವಾಗ ಇವರು ಬರೆದ ಕಾದಂಬರಿಯು ಹೊಸ ಆಕಾಂಕ್ಷೆಯನ್ನು ಹುಟ್ಟುಹಾಕುತ್ತದೆ. ಹೆಣ್ಣು ಮಗಳೊಬ್ಬಳು ಕಷ್ಟ ಪಟ್ಟು ದುಡಿದು, ಯಾರ ಸಹಾಯವನ್ನೂ ಕೋರದೆ ಹಣ ಗಳಿಸಿ ದೂರದ ದುಬೈಗೆ ಹೋಗುವ ಸಂಗತಿಯನ್ನು ಕಾದಂಬರಿಯಲ್ಲಿ ರೋಚಕವಾಗಿ ವರ್ಣಿಸಿದ್ದಾರೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಮೋಹನ್ ಕುಮಾರ್ ಟಿ. ಇವರು. ಇವರ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ...

“ಫೌಝಿಯಾ ಸಲೀಂ(ದುಬೈ)ರವರ ನಾಲ್ಕನೆಯ ಕಾದಂಬರಿ 'ನೀ ದೂರ ಹೋದಾಗ...' ಇದು ಹೆಣ್ಣೂಬ್ಬಳು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜೀವನದ ಕಥನ ಎಂದರೆ ತಪ್ಪಾಗಲಾರದು. ತನಗಾಗಿ ತನ್ನ ತನಕ್ಕಾಗಿ ಪ್ರತಿಕ್ಷಣವೂ ಹೋರಾಡುತ್ತ ಬದುಕುತ್ತಾಳೆ. ಅವಳಿಗೆ ಅವಳದೇ ಆದ ಕೆಲವೊಂದು ಕಟ್ಟುಪಾಡುಗಳಿವೆ. ಬದುಕಿಗೆ ಹಾಕಿಕೊಂಡ ರೀತಿ ನಿಯಮಗಳಿವೆ. ಅವಳೆಷ್ಟೆ ಮುಂದುವರಿದಿದ್ದರೂ ತನ್ನೊಳಗಿನ ಚೌಕಟ್ಟು ಮೀರಲಾರಳು. ತಾನು ಅಂದುಕೊಂಡ ರೇಖೆಯನ್ನು ಬದಲಿಸಲಾರಳು. ಇದು ಪ್ರತಿಯೊಬ್ಬ ಹೆಣ್ಣಿನೊಳಗಿರುವ ಸ್ವಭಾವ. ಒಮ್ಮೆ ಬಿರುಗಾಳಿಯಾದರೆ ಮತ್ತೊಮ್ಮೆ ಶಾಂತಮೂರ್ತಿಯಾಗಿ ಸಂತೈಸುವವಳೇ ಈ ಹೆಣ್ಣು. ಹೆಣ್ಣೆಂದರೆ ಜೀವ ಚೈತನ್ಯವಿದ್ದಂತೆ, ನೋವಲ್ಲೂ ನಗುವನ್ನ ಕಲಿತವಳು. ಸೋತಾಗ ಸಂತೈಸಿ ಮೈದಡವುವ ಕರುಣಾಮಯಿ. ಅತ್ತಾಗ ಮಡಿಲಲ್ಲಿ ಸಾಂತ್ವನಿಸುವ ಮಮತಾಮಯಿ. ಅದಕ್ಕೆ ಹೆಣ್ಣೆಂದರೆ ಶಕ್ತಿ,

ಮಹಿಳಾ ಸಾಹಿತ್ಯವೆಂಬ ಹೆಸರಿನಲ್ಲಿ ಗುರುತಿಸಬಹುದಾದಂಥದ್ದು ಹೆಚ್ಚು ಕಂಡುಬರುವುದಿಲ್ಲ. ಸ್ತ್ರೀಯರು ವಿದ್ಯೆಯಿಂದ ವಂಚಿತರಾದದ್ದು, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗುವ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗದೇ ಹೋದದ್ದು, ಸ್ವಾತಂತ್ರ್ಯ ವಿರದ ಅವಲಂಬನೆಯ ಜೀವನವೇ ಪ್ರಧಾನವಾದದ್ದು-ಇಂಥ ಅನೇಕ ಕಾರಣಗಳಿಂದಾಗಿ ಮಹಿಳೆ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಬಹುಕಾಲದವರೆಗೆ ಅನನ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

“ನೀ ದೂರ ಹೋದಾಗ...' ಎಂಬ ಕಾದಂಬರಿಯು ಫೌಝಿಯಾ ಸಲೀಂರವರ 33 ಬಾಳ ಪಯಣ ಕಾದಂಬರಿಗಿಂತ ರೋಚಕತೆಯಿಂದ ಮೈ ನವಿರೇಳಿಸುವ ಕಾದಂಬರಿ, 33 ಬಾಳ ಪಯಣ ಕಾದಂಬರಿ ದುಬೈನಲ್ಲೂ ಕೂಡ ಬಿಡುಗಡೆಗೊಂಡಿದೆ. 'ನೀ ದೂರ ಹೋದಾಗ...' ಕಾದಂಬರಿಯು ಒಂದು ಚಿಕ್ಕ ಹಳ್ಳಿಯಲ್ಲಿ ಬೆಳೆದ ಹೆಣ್ಣು ಮಗಳು ಒಬ್ಬಳು ವಿದೇಶದಲ್ಲಿ ಯಾವ ರೀತಿ ಬದುಕುತ್ತಿದ್ದಾಳೆ ಎಂಬುದರ ಸತ್ಯ ಘಟನೆ ಆಧಾರಿತವಾದ ಕಾದಂಬರಿ.

ಸ್ತ್ರೀಸಂವೇದನೆಯ ನೆಲೆಗಳು ಮುಟ್ಟುತ್ತಿರುವ ಹಾದಿಗಳನ್ನು ಗುರುತಿಸುವ ಪುಟ್ಟ ಪ್ರಯತ್ನ ಇದು ಎನ್ನಬಹುದು. ಹಾಗೆಯೇ ಇಲ್ಲಿ ವಿಶ್ಲೇಷಣೆಗೆ ಹೆಚ್ಚು ಗಮನಹರಿಸಿ ಉದಾಹರಣೆಗಳನ್ನು ಕ್ವಚಿತ್ತಾಗಿ ಬಳಸಿಕೊಳ್ಳಲಾಗಿದೆ. ಸದ್ಯದ ವರ್ತಮಾನದಲ್ಲಿ ಬರೆಯುತ್ತಿರುವ ಸ್ತ್ರೀಲೇಖಕಿಯರ ಬರವಣಿಗೆಗಳ ಬಗ್ಗೆಯೇ ನಾನು ಹೆಚ್ಚು ಕುತೂಹಲಿ ಎಂದರೆ ತಪ್ಪಾಗಲಾರದು.

ನಮ್ಮ ಕಥಾ ನಾಯಕಿಯು ಪಿಯುಸಿ ಎಕ್ಸಾಮ್ ಮುಗಿಸಿ ರಜೆಯಲ್ಲಿ ಇರಬೇಕಾದರೆ ತಂದೆಯ ಸೋದರಿಯ ಮದುವೆಗೆ ಹೋಗುತ್ತಾಳೆ. ಅಲ್ಲಿ ನಡೆಯುವ ಕೆಲವು ಘಟನೆಗಳನ್ನು ಮನ ಮಿಡಿಯುವ ರೀತಿ ವಿವರಣಾತ್ಮಕವಾಗಿ ಪ್ರತಿಯೊಂದು ಎಳೆ ಎಳೆಯಾಗಿ ಕಾದಂಬರಿಗಾರ್ತಿಯು ತಿಳಿಸಿಕೊಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು, ಹೆಣ್ಣು ಮಕ್ಕಳು ಯಾವ ರೀತಿ ಇರಬೇಕು, ಹೆಣ್ಣು ಮಕ್ಕಳನ್ನು ಅವರ ಸಂಬಂಧಿಕರು ಯಾವ ರೀತಿ ನೋಡುತ್ತಾರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.

ಕುಟುಂಬದಲ್ಲಿ ನಡೆಯುವ ಕೆಲವು ಸಂಸಾರದ ಸಾಂಗತ್ಯಗಳನ್ನು ಹಾಗೂ ಅಜ್ಜ ಅಜ್ಜಿಯರು ಕುಟುಂಬ ವರ್ಗದವರು ಅವರ ಜೊತೆ ಯಾವ ರೀತಿ ಒಬ್ಬ ಹೆಣ್ಣು ಮಗಳು ಬದುಕುತ್ತಾಳೆ ಎಂಬುದನ್ನು ತಿಳಿಸಿದ್ದಾರೆ. ಇಲ್ಲಿ ಬರುವ ಪ್ರಮುಖ ಅಂಶಗಳು ಎಂದರೆ, ತವರು ಮನೆ ಬೆಳಕಾದಾಗ, ಮಿಡಿದ ಹೃದಯ, ಕಾಯಿನ್ ಬಾಕ್ಸ್ ಟೆಲಿಫೋನ್, ಹೃದಯ ಬಡಿತ ನಿಂತಾಗ, ಮರೆಯದ ನೆನಪು, ಇತ್ಯಾದಿ. ಪ್ರತಿಯೊಬ್ಬರ ಜೀವನದಲ್ಲೂ ನಡೆದಿರುವ ಅಂಶಗಳನ್ನು ಹಾಗೂ ಹೆಣ್ಣು ಮಕ್ಕಳು ಸಮಾಜದಲ್ಲಿ ಯಾರದೇ ಸಹಾಯವಿಲ್ಲದೆ ಯಾವ ರೀತಿ ಬದುಕಬೇಕೆಂಬುದನ್ನು ತೋರಿಸಿಕೊಟ್ಟ ಮಹಿಳಾ ಪ್ರಧಾನ ಕಾದಂಬರಿಯೇ “ನೀ ದೂರ ಹೋದಾಗ...!

ಹೆಣ್ಣು ಮಗಳೊಬ್ಬಳು ಯಾರ ಸಹಾಯವೂ ಇಲ್ಲದೆ ಯಾರಿಂದಲೂ ಹಣವನ್ನು ಪಡೆಯದೆ, ತಾನು ದುಡಿದ ಹಣದಲ್ಲೇ ಸ್ವಲ್ಪವನ್ನು ಶೇಖರಣೆ ಮಾಡಿ ಇಟ್ಟುಕೊಂಡು ದುಬೈಗೆ ಹಾರುವ ರೀತಿ ಅವಳು ಪಡುವ ಕಷ್ಟಗಳನ್ನು ಇಂಚಿಂಚಾಗಿ ಪ್ರತಿಯೊಂದು ವಿವರಣಾತ್ಮಕವಾಗಿ ತಿಳಿಸಿಕೊಟ್ಟಿದ್ದಾರೆ.

ಕಥೆಯ ಕೊನೆಯಲ್ಲಿ ಆ ಹೆಣ್ಣು ಮಗಳು ದುಬೈಗೆ ಹೋದಾಗ ಅವಳು ಅನುಭವಿಸುವ ಕಷ್ಟಗಳು, ಉದ್ಯೋಗ ಸಿಗದೇ ಯಾವ ನಡೆಸುತ್ತಿದ್ದಳು ಎಂಬುದನ್ನು ನೀವು ಈ ಕಾದಂಬರಿಯಲ್ಲಿ ತಿಳಿಯಬೇಕಾದ ಮುಖ್ಯ ಅಂಶ. ಕೊನೆಗೆ ಅವಳಿಗೆ ಕೆಲಸ ಸಿಕ್ಕಿತೆ...! ಕೊನೆಗೆ ಆ ಹೆಣ್ಣು ಮಗಳು ಭಾರತಕ್ಕೆ ಬರುವಳೇ...! ಎಂಬುದನ್ನು ನೀವು ಕಾದಂಬರಿಯನ್ನು ಓದಿ ತಿಳಿದುಕೊಳ್ಳಬೇಕಾಗಿ ವಿನಂತಿ. ಇದು ಸ್ತ್ರೀವಾದಿ ದೃಷ್ಟಿಯಿಂದ ಮಹತ್ವದ ಕೃತಿಯಾಗಿದೆ.

ಈ ಪುಸ್ತಕದಲ್ಲಿ ನನಗೆ ಇಷ್ಟವಾದ ಸಾಲುಗಳು ಎಂದರೇ, 'ನನಗೆ ಯಾಕೋ ನಿನ್ನ ಮೇಲೆ ಬೇಸರ? ನಾನು ಈ ಒಂದು ಹಂತಕ್ಕೆ ಬರಲು ಕಾರಣನೇ ನೀನು. ಯಾವ ಜನರ ಚುಚ್ಚು ಮಾತುಗಳಿಲ್ಲದೆ ನೆಮ್ಮದಿಯಿಂದ ಇದ್ದೇನೆ ಕಣೋ. ತಂದೆ ದೂರ ಹೋದಾಗ ಬಡತನ ಏನೆಂದು ಅರಿತೆ, ಅಣ್ಣ ದೂರ ಹೋದಾಗ ಜವಾಬ್ದಾರಿ ಏನೆಂದು ಅರಿತೆ. ಪ್ರೀತಿ ದೂರ ಹೋದಾಗ ಒಂಟಿತನ ಏನೆಂದು ಅರಿತೆ, ಈಗ ನಾನೇ ಎಲ್ಲರಿಂದ ದೂರ ಬಂದಾಗ ಬದುಕುವುದನ್ನು ಕಲಿತೆ' ಈ ಸಾಲುಗಳು ತುಂಬಾ ಅರ್ಥಗರ್ಭಿತವಾಗಿದ್ದು ಎಲ್ಲರ ಮನಸ್ಸಿನಲ್ಲಿಯೂ ಉಳಿಯುವಂತೆ ಮಾಡುತ್ತದೆ.

ಏಕೆಂದರೆ ಇದು ನೊಂದು-ಬೆಂದು ಹೋದ ದಿಟ್ಟ ಹೆಣ್ಣೂಬ್ಬಳ ಜೀವನದ ಹೋರಾಟದ ನೈಜ ಕಥೆ...! ಒಂದು ಮುಸ್ಲಿಂ ಸಮುದಾಯದ ಹೆಣ್ಣು ಹಾಗೂ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿ ಪ್ರದೇಶದ ಕಥೆ.

ಜಾತಿ, ವರ್ಗ, ವರ್ಣ ವೈವಿಧ್ಯಗಳು ಸೃಷ್ಟಿಸುವ ಸಾಂಸ್ಕೃತಿಕ ಹಿನ್ನೆಲೆ ಭಾಷೆಗಿದ್ದೇ ಇರುತ್ತದೆ. ಅನುಭವ ಕಥಾನಕಗಳಲ್ಲಿ ಹೊಮ್ಮುವ ವಿವರಗಳು, ಚಿತ್ರಗಳು ಸಾಂಸ್ಕೃತಿಕ ನಿಶ್ಚಿತತೆಯನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಹಾಗಾಗಿ ಕಾರಂತರ ಕಾದಂಬರಿಗಳಲ್ಲಿ ಕಾಣುವ ತುಳುನಾಡಿನ ವಿವರಗಳನ್ನು ವಿಭಿನ್ನವಾಗಿ ಪ್ರಕಟಗೊಳ್ಳಬಹುದಾದ ಸಾಧ್ಯತೆಗಳನ್ನು ಗಮನಿಸಬೇಕು.

ಚಳುವಳಿಗಳ ಬೆಂಬಲದ ನುಡಿಗಳಿಂದ ಹೊರಬಂದು, ಅನುಭವಗಳಿಂದ ಬಿಚ್ಚಿಕೊಳ್ಳುತ್ತಿರುವ ಇಂದಿನ ಮಹಿಳಾ ಸಂವೇದನೆಯ ಸ್ವರೂಪವು, ಸಾಹಿತ್ಯದಲ್ಲಿ ಸೃಷ್ಟಿಸಿಕೊಳ್ಳುತ್ತಿದೆ. ಅಂದರೆ, ಒಂದು ಓದಿಗೆ ಮುಗಿದು ಹೋಗುವಂತಿರದೆ, ಅದನ್ನು ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಧ್ಯತೆಗಳನ್ನು ಸಾಹಿತ್ಯದಲ್ಲಿ ಸೃಷ್ಟಿಸುವುದು. ಇದು ಹೆಚ್ಚು ಸಂಕೀರ್ಣವೂ, ಕ್ರಿಯಾಶೀಲವೂ ಆದ ಸವಾಲು. ಇದನ್ನು ಬರಹಗಾರ್ತಿಯಾದ ಫೌಝಿಯಾ ಸಲೀಂ ಬರಹಗಳಲ್ಲಿ ಬಹುಪಾಲು ಕಾಣುತ್ತಿರುವುದು ಒಂದು ಒಳ್ಳೆಯ ಸೂಚನೆಯೇ ಆಗಿದೆ. ವಿಶಿಷ್ಟ ಕತೆಗಾರ್ತಿ ಫೌಝಿಯಾ ಸಲೀಂರವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನೀವು ಹೀಗೆ ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆಯಲಿ ಎಂದು ಆಶಯಿಸುತ್ತೇನೆ.”