ನೀ ನಿಂತಾಗೆನಗೆ ದೇವ ದರ್ಶನವಾಯ್ತು

ನೀ ನಿಂತಾಗೆನಗೆ ದೇವ ದರ್ಶನವಾಯ್ತು

ಬರಹ

ಸಖೀ,

ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ
ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ

ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು
ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು

ನಡೆಯಲ್ಲಿ ನೀ ಆ ಹಂಸವನೇ ನಾಚಿಸಿದ ಕಂಡೆ
ಹಂಸದ ಆ ನಡೆಯಲ್ಲಿ ನಿನ್ನ ನಾ ನೆನಪಿಸಿಕೊಂಡೆ

ನನ್ನ ನೀ ಕೂಗೆ ಕೋಗಿಲೆಯೇ ಕೂಗಿದಂತಾಯ್ತು
ಕೋಗಿಲೆ ಕುಹೂ ಎನಲು ನೀನೇ ಕರೆದಂತಾಯ್ತು

ದೇವನಿಗಾಗಿ ಧ್ಯಾನಿಸಲು ಅಲ್ಲಿ ನಿನ್ನ ಕಂಡಂತಾಯ್ತು
ನೀ ಕಣ್ಮುಂದೆ ನಿಂತಾಗೆನಗೆ ದೇವ ದರ್ಶನವಾಯ್ತು

ನನ್ನ ಮನದೊಳಗಿಲ್ಲಿ ನಾನಿಲ್ಲ ಬರೇ ನೀನೇ ನೀನು
ನಿನ್ನ ಕಣ್ಣೊಳಗಣ ಬಿಂಬದಲಿ ಬರೇ ನಾನೇ ನಾನು
*-*-*-*-*-*-*-*-*-*-*-*-*-*-*-*