ನೀ ಮೌನಿಯಾದರೇ...?
ನೀ ಮೌನಿಯಾದರೇ ಏನೆಂದು ಅರಿಯಲಿ ನಾ
ನಿನ್ನ ಮನಸು ನೊಂದರೆ ನಗುತಿರಲಿ ಹೇಗೆ ನಾ || ಪ ||
ನಿನ್ನ ಮೊಗದ ಮೇಲಿಳಿದ ಮುಂಗುರುಳುಗಳಲ್ಲಿ || 1 ||
ಏನಾಯ್ತು, ಮೊದಲಿದ್ದ ತುಂಬು ನಗೆಯು.
ಬಿಟ್ಟು ಬಿಡದೆ ಆಡುತ್ತಿದ್ದ ನಿನ್ನ ಒಲವ ಮಾತುಗಳಿಗೆ
ಯಾವ ಕಟ್ಟೆಯಾಯ್ತು ನಿಂತು ತಡೆಯು.
ಜೊತೆಯಾಗಿ ನಾವು ನಡೆದ ಬಾಳ ಹಾದಿಯಲ್ಲಿ || 2 ||
ಇಂದದೇಕೋ ಕಾಣುತಿದೆ ಕವಲು
ಒಂದೇ ರಾಗದಲ್ಲಿ ಹಾಡಿದ ಬಾಳ ಹಾಡಿನಲ್ಲಿ
ಭಾವವೇತಕೋ ಆಗುತಿದೆ ಬದಲು
ನೀ ದೂರವಾಗುತಿರಲು ಏನು ಕಾರಣ || 3 ||
ಉಸುರಬಾರದೇ ಗೆಳತಿ
ಏನೊಂದನ್ಹೇಳದೇ ಈ ಮೌನದಿಂದ
ನನ್ನನೇತಕೇ ನೀನು ಕೊಲ್ಲುತಿ
ಇಂದಿರುಳ ಬಾನಿನಲಿ ಮೂಡಿರುವ ಗ್ರಹತಾರೆಗಳಿಗೆ || 4 ||
ಹಿಂದಿದ್ದ ಹೊಳಪು ಕಳೆದಿದೆ
ನನ್ನೆದೆಯ ಬಾಂದಳದಲ್ಲಿ ನೀನು ಕಾಣೆಯಾಗಿ
ಕತ್ತಲೆಯು ತುಂಬಿದೆ, ಎದೆ ಭಾರವಾಗಿದೆ.
ನೀ ಮೌನಿಯಾದರೇ ಏನೆಂದು ಅರಿಯಲಿ ನಾ || ಪ ||
ನಿನ್ನ ಮನಸು ನೊಂದರೆ ನಗುತಿರಲಿ ಹೇಗೇ ನಾ
-ಜಯಪ್ರಕಾಶ ನೇವಾರ ಶಿವಕವಿ.