ನುಗ್ಗೆ ಬೇಸಾಯ : ತಳಿಗಳು ಮತ್ತು ರೋಗ ನಿರ್ವಹಣೆ (ಭಾಗ 1)

ನುಗ್ಗೆ ಬೇಸಾಯ : ತಳಿಗಳು ಮತ್ತು ರೋಗ ನಿರ್ವಹಣೆ (ಭಾಗ 1)

ನುಗ್ಗೆಯ ಕೋಡೊಂದೇ ಬಳಕೆ ಯೋಗ್ಯವಾದುದಲ್ಲ. ಅದರ ಹೂವು ಎಲೆಯಲ್ಲಿಯೂ ಔಷಧೀಯ ಗುಣಗಳು ಅಪಾರ. ಎಲೆಯನ್ನು ಹುಡಿ ಮಾಡಿ ಪ್ಯಾಕೇಟ್ ಮಾಡಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹೊರ ದೇಶಗಳಲ್ಲಿ ಹಾಗೂ ದೇಶದ ಒಳಗೂ ನುಗ್ಗೆಯ ಎಲೆಯ ಹುಡಿಗೆ ಭಾರೀ ಬೇಡಿಕೆ ಇದ್ದು, ಕೊಳ್ಳುವ ಕರಾರಿನ ಮೇಲೆ ಹಲವಾರು ರೈತರು ಈಗ ನುಗ್ಗೆ ಬೇಸಾಯಕ್ಕೆ ಇಳಿದಿದ್ದಾರೆ. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಸಸ್ಯ ಬೆಳವಣಿಗೆಗೆ ಯಾವುದೇ ತೊಂದರೆ ಇಲ್ಲ, ಇದನ್ನು ಮನಗಂಡು ಕರಾವಳಿಯಲ್ಲೂ ಕೆಲವರು ನುಗ್ಗೆ ಬೇಸಾಯಕ್ಕೆ  ಇಳಿದಿದ್ದಾರೆ.

ನುಗ್ಗೆ ಬಹುವಾರ್ಷಿಕ ತರಕಾರಿ ಬೆಳೆಯಾಗಿದ್ದು, ಇದರ ಸೊಪ್ಪು ಹಾಗೂ ಹೂಗಳನ್ನು ಸಹ ತರಕಾರಿಯಂತೆ ಉಪಯೋಗಿಸುವುದು ನಮ್ಮಲ್ಲಿ ಚಾಲ್ತಿಯಲ್ಲಿದೆ. ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿ `ಸಿ’ ಅನ್ನಾಂಗ, ಕ್ಯಾರೋಟಿನ್ ಇದ್ದು, ಕಬ್ಬಿಣ, ರಂಜಕ, ಸುಣ್ಣದ ಅಂಶಗಳು ಸಾಕಷ್ಟು ಪ್ರಮಾಣದಲ್ಲಿವೆ. ನುಗ್ಗೆಕಾಯಿಯು ರಂಜಕ ಹಾಗೂ ಕ್ಯಾರೋಟಿನ್ ಒದಗಿಸುತ್ತದೆ.

ನುಗ್ಗೆ ಎಲ್ಲಾ ತರದ ಮಣ್ಣಿಗೂ ಹೊಂದಿಕೆಯಾಗುತ್ತದೆ. ಮುಖ್ಯವಾಗಿ ಸಡಿಲ ಮಣ್ಣಾಗಿದರೆ ವೇಗವಾಗಿ ಬೆಳೆಯುತ್ತದೆ.  ಮರಳು ಮಿಶ್ರಿತ ಗೋಡು ಮಣ್ಣು ಈ ಬೆಳೆಗೆ ಅತೀ ಸೂಕ್ತ. ರಾಜ್ಯದ ಎಲ್ಲಾ ಪ್ರದೇಶಗಳಲ್ಲೂ ನುಗ್ಗೆ ಬೇಸಾಯ ಇದೆ. ದೇಶದಾದ್ಯಂತ ನುಗ್ಗೆ ಕಾಯಿಯ ಬೆಳೆಯೂ ಇದೆ, ಬಳಕೆಯೂ ಇದೆ.

ನುಗ್ಗೆಯನ್ನು ಬೀಜಗಳಿಂದ ಸಸ್ಯಾಭಿವೃದ್ದಿ ಮಾಡುವುದು ಕ್ರಮವಾದರೂ, ಇದರ ಗೆಲ್ಲುಗಳಲ್ಲೂ  ಬೇರು ಬರುತ್ತದೆ. ಬೀಜದ ಬಿತ್ತನೆ ಕಾಲ ನೀರಾವರಿಯನ್ನು ಅವಲಂಭಿಸಿ ಮಾಡಬಹುದು. ಆದಾಗ್ಯೂ ಅಲ್ಪ ಮಳೆ ಬೀಳುವ ಒಣ ಪ್ರದೇಶದಲ್ಲಿ  ಇದನ್ನು ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡಬಹುದು. ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲ ಕಾಲದಲ್ಲಿಯೂ ನಾಟಿ ಮಾಡಬಹುದು. ಕರಾವಳಿ, ಮಲೆನಾಡಿನಲ್ಲಿ ಮಳೆಗಾಲ ಮುಗಿಯುವ ಸಮಯ ಆಗಸ್ಟ್ ಸಪ್ಟೆಂಬರ್ ಬಿತ್ತನೆಗೆ ಸೂಕ್ತ. ಗೆಲ್ಲು ನಾಟಿ ಮಾಡುವುದಾದರೆ ಜೂನ್ ತಿಂಗಳು ಸೂಕ್ತ. ಆದರೆ ಕೊಳೆಯದಂತೆ ಜಾಗರೂಕತೆವಹಿಸಬೇಕು. ಗೆಲ್ಲುಗಳು ಕೊಳೆಯದಂತೆ ಬುಡಭಾಗದಲ್ಲಿ ನೀರು ನಿಲ್ಲದಂತೆ ಮಾಡಬೇಕು, ಕತ್ತರಿಸಿದ ತುದಿ ಭಾಗಕ್ಕೆ ಬೋರ್ಡೋ ಪೇಸ್ಟ್ ಅಥವಾ ಸಿ ಒ ಸಿ ಹಚ್ಚಿ ಪ್ಲಾಸ್ಟಿಕ್ ಲಕೋಟೆಯನ್ನು  ಮುಚ್ಚಬೇಕು. 

ತಳಿಗಳು

ಜಾಫ್ನಾ : ಗಿಡಗಳು ೫ ಮೀ. ಎತ್ತರ ಬೆಳೆಯುತ್ತವೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಬೆಳೆಯುವ ತಳಿಯಾಗಿದೆ. ನುಗ್ಗೆ ಕಾಯಿಗಳು ೬೦-೯೦ ಸೆಂ.ಮೀ. ಉದ್ದವಾಗಿದ್ದು, ಮೆತ್ತನೆಯ ತಿರುಳು ಹಾಗೂ ಒಳ್ಳೆಯ ರುಚಿಯನ್ನು ಹೊಂದಿದೆ.

ಚವಕಚೇರಿ ಮುರುಂಗಾ : ಈ ತಳಿಯು ಜಾಫ್ನಾ ತಳಿಯ ಹೋಲಿಕೆ ಪಡೆದಿದ್ದು ನುಗ್ಗೆಕಾಯಿಗಳು ೯೦-೧೨೦ ಸೆಂ.ಮೀ. ಉದ್ದವಾಗಿರುತ್ತವೆ.

ಜಿ.ಕೆ.ವಿ.ಕೆ.-೧ : ಸುಮಾರು ೨೫೦-೩೦೦ ಕಾಯಿಗಳನ್ನು ಬಿಡುತ್ತವೆ. ಪ್ರತಿ ಕಾಯಿಯು ೩೫ - ೪೦ ಸೆಂ.ಮೀ. ಉದ್ದವಿದ್ದು ೪೦ ಗ್ರಾಂ. ತೂಕವಿರುತ್ತದ. ಈ ತಳಿಯು ಅಧಿಕ ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ.

ಜಿ.ಕೆ.ವಿ.ಕೆ.-೨ : ಗಿಡ್ಡ ಜಾತಿಯ ಫಲಭರಿತವಾದ ತಳಿ. ಒಂದು ವರ್ಷಕ್ಕೆ ಸುಮಾರು ೩೦೦-೪೦೦ ಕಾಯಿಗಳನ್ನು ಬಿಡುತ್ತದೆ.

ಜಿ.ಕೆ.ವಿ.ಕೆ.-೩ : ಗಿಡ್ಡ ಜಾತಿಯ ತಳಿ. ನುಗ್ಗೆಕಾಯಿಗಳು ತ್ರಿಕೋನಾಕಾರವಾಗಿದ್ದು ಕಪ್ಪು ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತವೆ. ಈ ತಳಿಯು ಅಧಿಕ ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ. ಒಂದು ವರ್ಷಕ್ಕೆ ಸುಮಾರು ೨೫೦-೩೦೦ ಕಾಯಿಗಳನ್ನು ಪ್ರತಿ ಗಿಡದಿಂದ ಪಡೆಯಬಹುದು.

ಧನರಾಜ (ಸೆಲೆಕ್ಷನ್ ೬/೪) ; ಇದು ಗಿಡ್ಡ ತಳಿ. ತೆಂಗು ಮತ್ತು ಮಾವು ತೋಟಗಳಲ್ಲಿ ಅಂತರ ಬೆಳೆಯಾಗಿ ಜಲಾನಯನ ಪ್ರದೇಶಗಳಲ್ಲಿ ಇಡೀ ಬೆಳೆಯಾಗಿ ಹಾಗೂ ಕೈತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಬೀಜ ಬಿತ್ತಿದ ಕೇವಲ ೯-೧೦ ತಿಂಗಳಲ್ಲಿ ಫಸಲು ಕೊಡುವುದು. ಎರಡು ವರ್ಷದ ಗಿಡ ಪ್ರತಿ ವರ್ಷ ೨೫೦-೩೦೦ ಕಾಯಿ ಕೊಡುವುದು. ಕಾಯಿ ೩೫-೪೦ ಸೆಂ.ಮೀ. ಉದ್ದವಿರುತ್ತದೆ.

ಪಿ.ಕೆ.ಎಂ.-೧ ; ಇದು ತಮಿಳುನಾಡಿನ ಗಿಡ್ಡ ಜಾತಿಯ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. ೬-೧೨ ತಿಂಗಳಲ್ಲಿ ಫಸಲು ಕೊಡುತ್ತದೆ. ಮೆತ್ತನೆಯ ತಿರುಳು ಮತ್ತು ಉತ್ತಮ ರುಚಿಯನ್ನು ಹೊಂದಿದೆ.

ಭಾಗ್ಯ : ಈ ತಳಿಯು ಮೂಲವಾಗಿ ಗಿಡ್ಡ ಜಾತಿಯದ್ದು. ಗಿಡದ ಎತ್ತರ ೨-೪ ಮೀ. ವರೆಗೆ ಬೆಳೆಯುವುದು. ಗಿಡಗಳು ಶೀಘ್ರವಾಗಿ ಹೂ ಬಿಡುತ್ತವೆ. ಒಟ್ಟು ನಾಟಿ ಮಾಡಿದ ೧೬೦-೧೮೦ ದಿನಗಳ ನಂತರ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ತಳಿಯು ವೈಶಿಷ್ಟ್ಯತೆ ಎಂದರೆ ಕಾಯಿಗಳು ಬಿಟ್ಟಾಗಲೂ ಸಹಿತ ಗೊಂಚಲುಗಳಲ್ಲಿ ಹೂ ಹಾಗೂ ಮಿಡಿಕಾಯಿಗಳು ನಿರಂತರವಾಗಿ ಬರುವುದರಿಂದ ವರ್ಷವಿಡೀ ಫಸಲು ತೆಗೆಯಬಹುದು. ಪ್ರತಿ ಕಾಯಿಯು ೬೦-೭೦ ಸೆಂ.ಮೀ. ಉದ್ದವಿದ್ದು ಕಡು ಹಸಿರು ಬಣ್ಣ ಹೊಂದಿ ದುಂಡಗೆ ಇರುತ್ತದೆ. ಪ್ರಥಮ ವರ್ಷದಿಂದ ೩೫೦-೪೦೦ ಕಾಯಿಗಳು ಹಾಗೂ ಎರಡನೇ ವರ್ಷದಲ್ಲಿ ೮೦೦-೧೦೦೦ಕಾಯಿಗಳ ಉತ್ತಮ ಫಸಲನ್ನು ಪಡೆಯಬಹುದು.

ಕರಾವಳಿ ಮಲೆನಾಡಿಗೆ ಸ್ಥಳೀಯವಾಗಿ ಹೊಂದಿಕೆಯಾಗುವ ತಳಿಗಳನ್ನು ಆಯ್ಕೆ ಮಾಡಬೇಕು. ಕೆಲವು ಕಡೆ ವರ್ಷದುದ್ದಕ್ಕೂ ಫಲ ಕೊಡುವ ಅಧಿಕ ಇಳುವರಿ ಕೊಡಬಲ್ಲ ತಳಿಗಳ ಮರಗಳಿದ್ದು, ಅದನ್ನು ಗುರುತಿಸಿ ನಿರ್ಲಿಂಗ ಸಸ್ಯಾಭಿವೃದ್ದಿ ಮಾಡಿ ಬೆಳೆಸಬಹುದು. ಎಲೆ - ಹೂವಿನ ಉದ್ದೇಶಕ್ಕೆ ಬೀಜದ ಯಾವುದೇ ತಳಿಯೂ ಸೂಕ್ತವಾಗುತ್ತದೆ. ಕೊಟ್ಟಿಗೆ ಗೊಬ್ಬರ ಒಂದು ಗಿಡಕ್ಕೆ ೨೫ ಕಿಲೋ ಪ್ರಮಾಣದಲ್ಲಿ ವರ್ಷವೂ ಕೊಡುತ್ತಿರಬೇಕು. 

(ಇನ್ನೂ ಇದೆ)

ಮಾಹಿತಿ: ರಾಧಾಕೃಷ್ಣ ಹೊಳ್ಳ