ನುಗ್ಗೆ ಬೇಸಾಯ : ನೂತನ ತಳಿಗಳು ಮತ್ತು ರೋಗ ನಿರ್ವಹಣೆ (ಭಾಗ 2)


ರಾಸಾಯನಿಕ ಗೊಬ್ಬರಗಳು
ಸಾರಜನಕ ೫೦ ಕಿ.ಗ್ರಾಂ.
ರಂಜಕ ೧೨೫ ಕಿ.ಗ್ರಾಂ.
ಪೊಟ್ಯಾಷ್ ೩೦ ಕಿ.ಗ್ರಾಂ.
ಸಸಿ ಬೆಳೆಸುವ ಕ್ರಮಗಳು : ೧೫ ಸೆಂ.ಮೀ. x ೪ ಸೆಂ.ಮೀ. ಅಳತೆಯ ಪಾಲಿಥಿನ್ ಚೀಲದಲ್ಲಿ ಮರಳಿನ ಮಿಶ್ರಣವನ್ನು ತುಂಬಿ, ಪ್ರತಿ ಚೀಲಕ್ಕೆ ಎರಡು ಬೀಜಗಳಂತೆ, ೨ ಸೆಂ.ಮೀ. ಆಳದಲ್ಲಿ ನೆಟ್ಟು ಪ್ರತಿದಿನ ನೀರು ಹಾಕಬೇಕು. ಸುಮಾರು ೭-೧೦ ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ನಂತರ ಪ್ರತಿ ಚೀಲಕ್ಕೆ ಒಂದು ಸಸಿಯನ್ನು ಉಳಿಸಬೇಕು. ಸಸಿಗಳು ೩.೫ರಿಂದ ೪ ತಿಂಗಳುಗಳಲ್ಲಿ ೨೦-೩೦ ಸೆಂ.ಮೀ. ಎತ್ತರ ಬೆಳೆದು ಹೊಲದಲ್ಲಿ ನೆಡಲು ಸಿದ್ಧವಾಗುತ್ತವೆ. ಜೂನ್ ಜುಲೈ ತಿಂಗಳುಗಳಲ್ಲಿ ಸಸಿಗಳನ್ನು ನಾಟಿ ಮಾಡಲು, ಬೀಜಗಳನ್ನು ಮಾರ್ಚ್ ನಲ್ಲಿ ಬಿತ್ತಬೇಕು. ಎಲೆ ತಿನ್ನುವ ಕೀಟಗಳ ಬಾಧೆಯನ್ನು ತಡೆಯಲು ಮೆಲಾಥಿಯಾನ್ ದ್ರಾವಣವನ್ನು (ಪ್ರತಿ ಲೀಟರ್ ನೀರಿಗೆ ೨ ಮಿ.ಲಿ.) ಸಿಂಪಡಿಸಬೇಕು.
ಬೇಸಾಯ ಕ್ರಮ : ೦.೦೬ ಫನ ಮೀ. ಗುಣಿಗಳನ್ನು ೩.೨೪ ಮೀ. ಅಂತರದಲ್ಲಿ (ಗಿಡ್ಡ ಜಾತಿಗೆ) ಅಥವಾ ೫ ಮೀ. ಅಂತರ (ಎತ್ತರ ಜಾತಿಗೆ) ತೆಗೆಯಬೇಕು. ಗುಣಿಗಳಿಗೆ ಸಮಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ಕೊಡಬೇಕು. ನಂತರ ಪ್ರತಿ ಗುಣಿಗೆ ಒಂದು ಸಸಿಯನ್ನು ನೆಡಬೇಕು. ಒಂದು ಮೀಟರ್ ಉದ್ದದ ಮತ್ತು ೧೫ ಸೆಂ.ಮೀ. ವ್ಯಾಸದ ಟೊಂಗೆಗಳನ್ನು ನೇರವಾಗಿಯೂ ಸಹ ನಾಟಿಗೆ ಉಪಯೋಗಿಸಬಹುದು. ಸಣ್ಣ ಸಸಿಗಳಿಗೆ ಆಧಾರವನ್ನು ಒದಗಿಸಬೇಕು. ಶಿಫಾರಸ್ಸು ಮಾಡಿದ ಅರ್ಧ ಪ್ರಮಾಣದ ರಾಸಾಯನಿಕ ಗೊಬ್ಬರವನ್ನು ನಾಟಿಮಾಡಿದ ೩ ತಿಂಗಳ ನಂತರ ಮತ್ತು ಉಳಿದ ಅರ್ಧವನ್ನು ೩ ತಿಂಗಳ ನಂತರ ಕೊಡಬೇಕು. ಎತ್ತರವಾಗಿ ಬೆಳೆದ ಗಿಡಗಳಿಗೆ ನಿರ್ದಿಷ್ಟಪಡಿಸಿದ ರಾಸಾಯನಿಕ ಗೊಬ್ಬರಗಳನ್ನು ಮಳೆಗಾಲ ಪ್ರಾರಂಭವಾದೊಡನೆ ಕೊಡಬೇಕು.
ಸಸ್ಯ ಸಂರಕ್ಷಣೆ : ಕೀಟಗಳು :
೧. ಹೇನು : ಹೇನುಗಳು ಎಲೆಯಿಂದ ಮತ್ತು ಎಳೆಯದಾದ ಭಾಗಗಳಿಂದ ರಸವನ್ನು ಹೀರುತ್ತವೆ.
ನಿರ್ವಹಣೆ ; ಗಿಡಗಳು ಹೊಸದಾಗಿ ಚಿಗುರಿದಾಗ ೨ ಮಿ.ಲೀ. ಮೆಲಾಥಿಯಾನ್ ೫೦ ಇ.ಸಿ. ೧ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೂ ಬಿಡಲು ಪ್ರಾರಂಭವಾದಾಗ .೫ ಮಿ.ಲೀ. ಇಮಿಡಾಕ್ಲೋಫ್ರಿಡ್ ೧ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
೨. ಕಪ್ಪು ಕಂಬಳಿ ಹುಳು ಮತ್ತು ಬೂದು ಕಂಬಳಿ : ಮರಿ ಎಲೆಗಳನ್ನು ತಿಂದು ಹಾಳು ಮಾಡುತ್ತವೆ.
ನಿರ್ವಹಣೆ : ಗಿಡಗಳು ಹೊಸದಾಗಿ ಚಿಗುರಿದಾಗ ೨ ಮಿ.ಲೀ. ಮೆಲಾಥಿಯಾನ್ ೫೦ ಇ.ಸಿ. ೧ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
೩. ಹೂ ಮೊಗ್ಗಿನ/ ಕಾಯಿಕೊರಕ : ಮರಿಹುಳುಗಳ ಹೂಮೊಗ್ಗು ಕಾಯಿಗಳನ್ನು ಕೊರೆದು ತಿನ್ನುತ್ತವೆ. ಮೊಗ್ಗುಗಳು ಕೆಳಗೆ ಬೀಳುತ್ತವೆ. ಕಾಯಿಗಳಿಂದ ಅಂಟು ಪದಾರ್ಥ ಹೊರ ಸೂಸುತ್ತದೆ. ನಿರ್ವಹಣೆ : ಗಿಡಗಳು ಹೊಸದಾಗಿ ಚಿಗುರಿದಾಗ ೨ ಮಿ.ಲೀ. ಮೆಲಾಥಿಯಾನ್ ೫೦ ಇ.ಸಿ. ೧ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ರೋಗಗಳು :
೧. ಬೂದು ರೋಗ : ಬಿಳಿ ಬೂದು ಬಣ್ಣ ಚುಕ್ಕೆಗಳು ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆ ಮೇಲೆ ಎಲೆ ಪೂರ್ತಿ ಆವರಿಸಿಕೊಂಡು ಒಣಗುತ್ತದೆ.
ನಿರ್ವಹಣೆ : ಹೂ ಬಿಡಲು ಪ್ರಾರಂಭವಾದಾಗ ನೀರಿನಲ್ಲಿ ಕರಗುವ ಗಂಧಕವನ್ನು ೧ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
೨. ಎಲೆಚುಕ್ಕೆ ರೋಗ : ವೃತ್ತಾಕಾರದ ಚುಕ್ಕೆಗಳು ಮೊದಲಿಗೆ ಕಾಣಿಸಿಕೊಳುತ್ತದೆ. ನಂತರ ಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗುತ್ತವೆ.
ನಿರ್ವಹಣೆ : ಪ್ರತಿ ಲೀಟರ್ ನೀರಿಗೆ ೨ ಗ್ರಾಂ. ಮ್ಯಾಂಕೋಜೆಬ್ ೭೫ ಡಬ್ಲೂö್ಯಪಿ. ಬೆರೆಸಿದ ದ್ರಾವಣದಿಂದ ಸಿಂಪಡಿಸಬೇಕು.
ಸೂಚನೆ : ಕೀಟ ಹಾಗೂ ರೋಗ ಪೀಡಿತ ಗಿಡದ ಭಾಗಗಳನ್ನು ಆಗಾಗ ಕತ್ತರಿಸಿ ತೆಗೆದು ಆಳವಾಗಿ ಹೂಳಬೇಕು.
ಇಳುವರಿ : ಗಿಡ್ಡ ತಳಿಗಳು ನೆಟ್ಟ ೮ ತಿಂಗಳಲ್ಲಿ ಹೂ ಮತ್ತು ಕಾಯಿಗಳನ್ನು ಬಿಡಲು ಪ್ರಾರಂಭಿಸುವವು. ಎತ್ತರದ ಗಿಡಗಳಿಗೆ ಒಂದೂವರೆ ವರ್ಷದಿಂದ ಎರಡು ವರ್ಷ ಬೇಕು. ಗಿಡ್ಡ ತಳಿಗಳಲ್ಲಿ ಪ್ರತಿ ಗಿಡದಿಂದ ಎರಡು ವರ್ಷದ ನಂತರ ೨೦೦-೨೫೦ ಕಾಯಿಗಳನ್ನು ಪಡೆಯಬಹುದು. ಎತ್ತರದ ತಳಿಗಳಿಂದ ಪ್ರತಿ ಗಿಡಕ್ಕೆ ೭೫ರಿಂದ ೧೦೦ ಕಾಯಿಗಳನ್ನು ಪಡೆಯಬಹುದು.
(ಮುಗಿಯಿತು)
ಮಾಹಿತಿ: ರಾಧಾಕೃಷ್ಣ ಹೊಳ್ಳ