ನುಡಿದಂತೆಯೇ ನಡೆದು ಬಾಳಿದ ಮಹಾಚೇತನ ಸಿದ್ದೇಶ್ವರ ಸ್ವಾಮಿಗಳು
"ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ.
ಇರೋದು ಇರುತ್ತದೆ, ಹೋಗೋದು ಹೋಗುತ್ತದೆ.
ಯಾವುದನ್ನೂ ಹೆಚ್ಚಿಗೆ ಹಚ್ಚಿಕೊಳ್ಳದೆ ಸಮಾಧಾನಿಯಾಗಿರಬೇಕು. ಇದೇ ಸುಖ ಜೀವನದ ಸೂತ್ರ.
ಎಲ್ಲವನ್ನು ಸಹಿಸುವ ಗುಣವಿದ್ದವನಲ್ಲಿಯೇ ಎಲ್ಲವನ್ನು ಎದುರಿಸುವ ಶಕ್ತಿ ಇರುವುದು.
ನಿಮ್ಮೆಲ್ಲ ಒತ್ತಡಗಳಿಗೂ ನೀವು ಪ್ರತಿಕ್ರಿಯಿಸುವ ಬಗೆಯೇ ಕಾರಣ.
ಆದ್ದರಿಂದ ಸ್ಪಂದಿಸಲು ಕಲಿಯಿರಿ, ಪ್ರತಿಕ್ರಿಯಿಸಬೇಡಿ.
ಮನಸ್ಸಿದ್ದರೆ ದಾರಿ ಖಂಡಿತ ದೊರಕುತ್ತದೆ. ಇಲ್ಲವಾದರೆ ಅದೇ ಮನಸ್ಸು ಕಾರಣ ಹುಡುಕುತ್ತದೆ.
ಕಡಿಮೆ ಮಾತನಾಡಿ, ಮೆಲ್ಲಗೆ ಮಾತನಾಡಿ, ಮಧುರವಾಗಿ ಮಾತನಾಡಿ, ಗೌರವದಿಂದ ಮಾತನಾಡಿ.
ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ, ನಿನ್ನ ಪಾಡಿಗೆ ನೀನಿರು.
ಕುದಿಯುವವರು ಬಲಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ.
ಮಹಾತ್ಮರ ಬದುಕೊಂದು ಮಹಾವೃಕ್ಷ. ನಿಸರ್ಗದಲ್ಲಿರುವ ಗಿಡಮರಗಳು ತಾಪ ಕಳೆದರೆ,
ಸಂತರ ಸಮಾಗಮವು ನಮ್ಮ ಅಂತರಂಗದ ತಾಪ ಕಳೆಯುತ್ತದೆ.
ಕೈಶುದ್ಧಿ, ವಾಕ್‌ಶುದ್ಧಿ, ಮನಶುದ್ಧಿ ಉಳ್ಳವನು ಮತ್ತಾವುದರ ಬಗೆಗೂ ಚಿಂತಿಸಬೇಕಾಗುವುದಿಲ್ಲ.
ಯಾರ ನೋವಿಗೆ ಯಾರು ಹೊಣೆಗಾರರು? ನಿನ್ನ ಕಣ್ಣೀರಿಗೆ ಯಾರು ಮರುಗುವರು?
ನಿನಗೆ ನೀನೇ ಮಿತ್ರ, ನಿನಗೆ ನೀನೇ ಶತ್ರು.
ನಿನ್ನಿಂದಲೇ ಶಾಂತಿ, ನಿನ್ನಿಂದಲೇ ಕ್ರಾಂತಿ.”
-ಇವೆಲ್ಲವೂ 2 ಜನವರಿ 2023 ದೈವಾಧೀನರಾದ ವಿಜಯಪುರದ ಜ್ನಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ನುಡಿಗಳು. ಮನುಷ್ಯ ಹೇಗೆ ಬದುಕಬೇಕು? ಎಂಬುದನ್ನು ಇದಕ್ಕಿಂತ ಸರಳವಾಗಿ ತಿಳಿಸಲು ಸಾಧ್ಯವಿಲ್ಲ. ಈ ಮಹಾನ್ ನುಡಿಗಳಿಗೆ ಬೆಲೆ ಕಟ್ಟಲಾಗದು. ಯಾಕೆಂದರೆ ಇವನ್ನಾಡಿದ ಸಿದ್ದೇಶ್ವರ ಸ್ವಾಮಿಗಳು “ನುಡಿದಂತೆ ನಡೆದವರು”.
ಅವರ ಕೆಲವು “ನಡೆ"ಗಳನ್ನು ಗಮನಿಸಿ: (1) ಅಧ್ಯಾತ್ಮ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಪರಿಗಣಿಸಿ, ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಆದರೆ ಸಿದ್ದೇಶ್ವರ ಸ್ವಾಮಿಗಳು ಅದನ್ನು ನಿರಾಕರಿಸುತ್ತಾ ಹೀಗೆಂದಿದ್ದರು: “ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಘೋಷಿದಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸನ್ಯಾಸಿ. ಅಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವ ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆ ನನಗಿಲ್ಲ. ಎಲ್ಲ ಗೌರವಾದರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ.”
(2) ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದಾಗಲೂ ಅದನ್ನು ನಿರಾಕರಿಸಿದರು. ಹೀಗೆ ತಮಗೆ ನೀಡಲಾದ ಹಲವು ಅಗ್ರ ಪ್ರಶಸ್ತಿಗಳನ್ನು ವಿನಮ್ರವಾಗಿ ನಿರಾಕರಿಸಿದರು.
(3) ಅವರ ಹಲವಾರು ಭಕ್ತರು ಅವರಿಗೆ ದುಬಾರಿ ಬೆಲೆಯ ಕಾರು ಅಥವಾ ಬಂಗಲೆಯನ್ನು ಕೊಡುಗೆಯಾಗಿ ನೀಡಬೇಕೆಂದು ಕಾಯುತ್ತಿದ್ದರು. ಆದರೆ, ಅವೆಲ್ಲವನ್ನೂ ನಿರಾಕರಿಸಿದ ಸ್ವಾಮಿಗಳು ಅಧ್ಯಾತ್ಮ ಸಾಧನೆಯಲ್ಲೇ ಮುಳುಗಿದರು.
(4) ಭಕ್ತರು ಪ್ರೀತಿಯಿಂದ ತಂದ ಯಾವುದೇ ವಸ್ತುವನ್ನು ಕೈಯಿಂದಲೂ ಮುಟ್ಟದೇ, ಆಶೀರ್ವಾದ ಮಾಡುತ್ತಿದ್ದರು.
(5) ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಿದರೂ ಚಾಚೂ ತಪ್ಪದೆ ಸಮಯಪಾಲನೆ ಮಾಡುತ್ತಿದ್ದರು.
(6) ತಮ್ಮ ಗ್ರಾಮದಲ್ಲಿ ಅಥವಾ ಊರಿನಲ್ಲಿ ಸ್ವಾಮಿಗಳ ಪ್ರವಚನ ನೀಡಬೇಕೆಂದು ವಿನಂತಿ ಮಾಡಲು ಬಂದ ಪ್ರಮುಖರಿಗೆ ಅವರು ಹೀಗೆನ್ನುತ್ತಿದ್ದರು: “ನೀವೆಲ್ಲರೂ ಸ್ವಚ್ಛವಾಗಿದ್ದು, ನಿಮ್ಮ ಊರನ್ನೂ ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ನಾನು ಪ್ರವಚನ ಮಾಡಲು ಬರುತ್ತೇನೆ." ಆಯಾ ಗ್ರಾಮದವರು ಅಥವಾ ಊರಿನವರು ತಮ್ಮ ಆದೇಶವನ್ನು ಪಾಲಿಸಿದ ನಂತರವೇ ಅಲ್ಲಿಗೆ ಪ್ರವಚನ ನೀಡಲು ಹೋಗುತ್ತಿದ್ದರು. ಹೀಗೆ ನೂರಾರು ಗ್ರಾಮಗಳಲ್ಲಿ ಹಾಗೂ ಊರುಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು.
(7) ತಮ್ಮ ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳು ಶಿವಾಧೀನರಾದ ನಂತರ ಜ್ನಾನ ಯೋಗಾಶ್ರಮದ ಸಂಪೂರ್ಣ ಜವಾಬ್ದಾರಿಯನ್ನು ಟ್ರಸ್ಟಿಗೆ ಒಪ್ಪಿಸಿ, ತಮ್ಮ ತೀರಾ ಸರಳ ಬದುಕನ್ನು ಅಧ್ಯಾತ್ಮಿಕ ಬೋಧನೆಯ ಕಾಯಕಕ್ಕೆ ಮುಡಿಪಾಗಿಟ್ಟರು. ಪ್ರವಚನ, ಅಂಕಣ ಬರಹಗಳು ಮತ್ತು ಕೃತಿಗಳ ಮೂಲಕ ಲಕ್ಷಗಟ್ಟಲೆ ಜನರ ಮನಪರಿವರ್ತನೆಗೆ ಕಾರಣರಾದರು.
(8) ಮುಂಜಾನೆ ಅವರು ನೀಡುತ್ತಿದ್ದ ಪ್ರವಚನಗಳು ಕೇಳುಗರಿಗೆ ಅದ್ಭುತ ಅನುಭವ. ತೀರಾ ಸರಳ ಭಾಷೆಯಲ್ಲಿ, ಜನಸಾಮಾನ್ಯರಿಗೆ ಅರ್ಥವಾಗುವ ಧಾಟಿಯಲ್ಲಿ ಅವರ ಬೋಧನೆ ಹರಿದು ಬರುತ್ತಿತ್ತು. ಉಪಮೆಗಳು, ಕತೆಗಳು ತುಂಬಿದ್ದ ಅವರ ಪ್ರವಚನ ಸೂಜಿಗಲ್ಲಿನಂತೆ ಕೇಳುಗರನ್ನು ಸೆಳೆಯುತ್ತಿತ್ತು. ಅವರ ಮಾತುಗಳಲ್ಲಿದ್ದ ಜೀವನಪಾಠ ಕೇಳುಗರ ಮನಮುಟ್ಟುತ್ತಿತ್ತು, ಮನಗೆಲ್ಲುತ್ತಿತ್ತು. ಅಧ್ಯಾತ್ಮ, ವೇದಾಂತವನ್ನು ದೃಷ್ಟಾಂತಗಳ ಮೂಲಕ ಜನಮನದಲ್ಲಿ ಅರಿವು ಮೂಡುವಂತೆ ಬಿಡಿಸಿ ಹೇಳುತ್ತಿದ್ದುದು ಅವರ ವಿಶೇಷತೆ. ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರಗಳು, ವಚನಶಾಸ್ತ್ರಗಳ ಬಗ್ಗೆ ಅವರ ಅಮೋಘ ಪ್ರವಚನಗಳು ಜಗದ್ವಿಖ್ಯಾತ.
(9) ಕಳೆದ ಒಂದು ತಿಂಗಳಿನಿಂದ ಸಿದ್ದೇಶ್ವರ ಸ್ವಾಮಿಗಳ ಆರೋಗ್ಯ ಹದಗೆಡುತ್ತಾ ಬರುತ್ತಿತ್ತು. ಆದರೆ, ಅವರು ಆಶ್ರಮದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕೆಂದು ಅವರ ಮನವೊಲಿಸಲು ಮಾಡಿದ ಪ್ರಯತ್ನವನ್ನೆಲ್ಲಾ ನಿರಾಕರಿಸಿದರು. ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಕೊನೆಯ ಹಂತದಲ್ಲಿ ಅವರನ್ನು ಭೇಟಿಯಾಗಿ ಆಸ್ಪತ್ರೆಗೆ ಸೇರಬೇಕೆಂದು ವಿನಂತಿಸಿದಾಗಲೂ ಅವರು ಒಪ್ಪಲಿಲ್ಲ. ಕೊನೆಗೆ ಆಹಾರ ಸೇವನೆಯನ್ನೇ ನಿಲ್ಲಿಸಿದರು.
(10) 2014ರ ಗುರುಪೂರ್ಣಿಮೆಯಂದು ಸಿದ್ದೇಶ್ವರ ಸ್ವಾಮಿಗಳು ಮೂವರು ಸಾಕ್ಷಿಗಳ ಸಮಕ್ಷಮದಲ್ಲಿ ತಮ್ಮ “ಉಯಿಲು ಪತ್ರ" ಬರೆದಿಟ್ಟಿದ್ದರು. ಅದರಲ್ಲಿ ಅವರು ತಮ್ಮ ದೇಹದ ಅಂತ್ಯವಿಧಿಗಳ ಬಗ್ಗೆ ಬರೆದಿದ್ದ ಆಶಯಗಳು: ದೇಹವನ್ನು ಅಗ್ನಿಯರ್ಪಿತ ಮಾಡುವುದು; ಶ್ರಾದ್ಧಿಕ ವಿಧಿ-ವಿಧಾನಗಳು ಅನಗತ್ಯ; ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು; ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು.
ಆದ್ದರಿಂದಲೇ ಸಿದ್ದೇಶ್ವರ ಸ್ವಾಮಿಗಳು ಜನಮಾನಸದಲ್ಲಿ “ನಡೆದಾಡುವ ದೇವರು" ಎಂದೇ ಶಾಶ್ವತರಾಗಿದ್ದಾರೆ. ಹಾಗಾಗಿಯೇ ಅವರ ಪ್ರವಚನಗಳಿಗೆ ಸಮುದ್ರದ ಅಲೆಗಳಂತೆ ಜನಸಾಗರ ಹರಿದು ಬರುತ್ತಿತ್ತು. ಕಿಂಚಿತ್ತೂ ಸದ್ದು ಮಾಡದೆ, ಮೌನವಾಗಿ ಅವರ ಮಾತುಗಳನ್ನು ಕೇಳುತ್ತಿತ್ತು. ಅವರ ಜೀವನಪಾಠದ ಸಮಗ್ರ ದರ್ಶನದಲ್ಲಿ ತಲ್ಲೀನವಾಗುತ್ತಿತ್ತು.
ಅವರ “ಉಯಿಲಿ"ನಲ್ಲಿತ್ತು ಬದುಕಿಗೆ, ಜಗತ್ತಿಗೆ ಅಂತಿಮ ಅಭಿವಾದನ ಮತ್ತು ಲೋಕಕ್ಕೆ (ಈ ಕೆಳಗಿನ) ಅದ್ಭುತ ಸಂದೇಶ:
"ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.
ಸಹಜವೂ ಇಲ್ಲ, ಅಸಹಜವೂ ಇಲ್ಲ.
ನಾನೂ ಇಲ್ಲ, ನೀನೂ ಇಲ್ಲ.
ಇಲ್ಲ, ಇಲ್ಲ ಎಂಬುದು ತಾನಿಲ್ಲ.
ಗುಹೇಶ್ವರನೆಂಬುದು ತಾ ಬಯಲು
ಅಂತ್ಯ ಪ್ರಣಮಾಂಜಲಿಃ!”
-ಸ್ವಾಮಿ ಸಿದ್ದೇಶ್ವರ