ನುಡಿದಂತೆ ನಡೆಯುವ ಒಳ್ಳೆಯ ನಡವಳಿಕೆ ರೂಪಿಸಿಕೊಳ್ಳೋಣ...
ಇದ್ದಕ್ಕಿದ್ದಂತೆ ನುಗ್ಗಿಬಂದ ಆರ್ಥಿಕ ಸ್ವಾತಂತ್ರ್ಯ, ಬಲವಾಗಿ ಜಾಗೃತಗೊಂಡ ಮಹಿಳಾ ಸ್ವಾತಂತ್ರ್ಯ, ಎಚ್ಚರಗೊಂಡ ಸಾಮಾನ್ಯ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ, ಸಿಡಿದೆದ್ದ ಶೋಷಿತರ ಸಮಾನತೆಯ ಸ್ವಾತಂತ್ರ್ಯ, ಕೀಳರಿಮೆಗೆ ಒಳಗಾದ ಶೋಷಕರ ತಿಳುವಳಿಕೆಯ ಸ್ವಾತಂತ್ರ್ಯ, ಸರ್ವಾಂತರ್ಯಾಮಿಯಾಗಿ ಜನರ ಕ್ಯೆಗೆಟುಕಿದ ಸಮೂಹ ಸಂಪರ್ಕದ ಸ್ವಾತಂತ್ರ್ಯ, ಕನಸುಗಳಂತೆ ಗರಿಗೆದರಿದ ವ್ಯಕ್ತಿ ಸ್ವಾತಂತ್ರ್ಯ, ಜನರಲ್ಲಿ ಹೆಚ್ಚಿದ ಸಂಘಟನಾ ಸಾಮರ್ಥ್ಯ, ಸಾಮಾನ್ಯರಲ್ಲಿ ಮೂಡಿದ ವಿಶ್ವಮಟ್ಟದ ಚಿಂತನಾ ಸಾಮರ್ಥ್ಯ, ಭ್ರಮನಿರಸನಗೊಂಡು ಮಂಕಾದ ದೇವರು, ಧರ್ಮದ ಸಾಮರ್ಥ್ಯ, ತಲೆಕೆಳಗಾಗಿ ಗಲಿಬಿಲಿ ಮೂಡಿಸಿದ ಪಾಶ್ಚಾತ್ಯ, ಪೌರಾತ್ಯ ಸಾಂಸ್ಕೃತಿಕ ಮಿಲನ, ವ್ಯಾಪಾರೀಕರಣದಿಂದ ಕಳೆದುಹೋದ ಮಾನವೀಯ ಮೌಲ್ಯಗಳು, ಪಾಶ್ಚಿಮಾತ್ಯ ಜೀವನ ಶ್ಯೆಲಿಯ ಕೆಟ್ಟ ಅಂಶಗಳ ನಕಲು, ಕಾರ್ಪೊರೇಟ್ ಸಂಸ್ಕೃತಿ ಎಂಬ ಆತ್ಮಘಾತುಕ ವಂಚನಾ ಶ್ಯೆಲಿಯ ಆಕರ್ಷಣೆ, ನಮ್ಮೊಳಗಡಗಿದ್ದ ಸಾಂಪ್ರದಾಯಿಕ ಶ್ಯೆಲಿಯ ಚಿಂತನೆಗಳು, ವಸ್ತುಗಳು ನಂಬಿಕೆಗಳು, ಆಚರಣೆಗಳಲ್ಲಿ ಉಂಟಾದ ದ್ವಂದ್ವಗಳು, ಸರಿ-ತಪ್ಪು, ಒಳ್ಳೆಯದು -ಕೆಟ್ಟದ್ದು, ಮೌಲ್ಯಗಳು-ಅಪಮೌಲ್ಯಗಳು, ಆದರ್ಶಗಳು - ವಾಸ್ತವಗಳ ನಡುವೆ ತೆಳುವಾಗುತ್ತಾ ಸಾಗಿದ ಗೆರೆ, ಎಲ್ಲವನ್ನೂ, ಎಂತಹ ಕ್ರೂರತೆಯನ್ನು ಸಮರ್ಥಿಸುವ, ಒಪ್ಪಿಸುವ, ನಂಬಿಸುವ, ಚಾಣಾಕ್ಷ ಕುಟಿಲ ಮಾರುಕಟ್ಟೆಯ ತಂತ್ರಗಾರಿಕೆ, ಅನವಶ್ಯಕ ಪೈಪೋಟಿಯ ಭ್ರಮೆ, ಜನಪ್ರಿಯತೆಯೇ ಸಾಧನೆ ಎಂಬ ಅರ್ಥ, Success at any cost ಎಂಬ ಅಪಾಯಕಾರಿ ಕಲ್ಪನೆ, ಇತ್ಯಾದಿ ಅಂಶಗಳು ಇಂದು ಈ ಸಮಾಜವನ್ನು ಬದಲಾವಣೆಯ ಕಡೆಗೆ ಮುನ್ನಡೆಸುತ್ತಿದೆ.
ಅಪಾಯಕಾರಿ ಅಂಶಗಳ ಜೊತೆಗೆ ಅತ್ಯಂತ ಉನ್ನತ ಅತ್ಯಮೂಲ್ಯ ಅಂಶಗಳೂ ಈ ಬದಲಾವಣೆಯಲ್ಲಿ ಇವೆ. ಇದಕ್ಕೆ ಸರಿಯಾದ ದಿಕ್ಕು ತೋರಿಸಬೇಕಿದೆ, ಇದನ್ನು ಅತ್ಯುತ್ತಮ ಮಾನವೀಯ, ಸಮಾನತೆಯ, ಸರಳತೆಯ, ಜೀವಪರ, ಉತ್ಕೃಷ್ಟ ಅಭಿವೃದ್ಧಿ ಪರ ದಿಕ್ಕಿನೆಡೆಗೆ ಕೊಂಡೊಯ್ಯಬೇಕಿದೆ. ಈ ಬಗ್ಗೆ ಎಲ್ಲರೂ ಚಿಂತಿಸೋಣ, ಪ್ರಯತ್ನಿಸೋಣ. ನವ ಮನ್ವಂತರಕ್ಕೆ ಮುನ್ನುಡಿ ಬರೆಯೋಣ.
ಏಕೆಂದರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಎಷ್ಟೊಂದು ಸುಂದರ ಸಂದೇಶಗಳು, ಎಷ್ಟೊಂದು ಮನಮೋಹಕ ಶುಭಾಶಯಗಳು, ಎಷ್ಟೊಂದು ಅದ್ಭುತ ಕಾವ್ಯ ರಚನೆಗಳು, ಎಷ್ಟೊಂದು ಅರ್ಥಪೂರ್ಣ ವರ್ಣನೆಗಳು, ಆದರೆ, ಇವು ಪದಗಳಲ್ಲಿ ಮಾತ್ರ ಮೂಡಿದರೆ ಸಾಕೆ ? ಇವು ಮನಸ್ಸಿನಾಳಕ್ಕೆ ಇಳಿಯುವುದೆಂದು ? ವಾಸ್ತವ ನಡವಳಿಕೆಯಾಗಿ ಪರಿವರ್ತನೆ ಹೊಂದುವುದೆಂದು? ಅವು ಪ್ರಾಯೋಗಿಕ ಆಚರಣೆಗಳಾಗುವುದೆಂದು? ಇವು ಕೇವಲ ಉಪಯೋಗವಿಲ್ಲದ ಭಾವನಾತ್ಮಕ ಬರಹಗಳೇ ? ಅರ್ಥ ಕಳೆದುಕೊಂಡ ನಿರ್ಜೀವ ಅಕ್ಷರಗಳೇ ?
ಕತ್ತಲನ್ನು ಅಜ್ಞಾನಕ್ಕೂ ಬೆಳಕನ್ನು ಜ್ಞಾನಕ್ಕೂ ಹೋಲಿಸಲಾಗುತ್ತದೆ, ಕತ್ತಲನ್ನು ದುಷ್ಟತನಕ್ಕೂ ಬೆಳಕನ್ನು ಒಳ್ಳೆಯತನಕ್ಕೂ ಉದಾಹರಿಸಲಾಗುತ್ತದೆ. ಹೌದು, ಆದರೆ ಅದು ಆಗುವುದು ಯಾವಾಗ, ತಲತಲಾಂತರದಿಂದ ಆಚರಿಸುತ್ತಿರುವ ಈ ಹಬ್ಬದಲ್ಲಿ ನಾವು ನಮ್ಮ ಅಜ್ಞಾನವನ್ನು ತೊರೆದು ಜ್ಞಾನಿಗಳಾಗುತ್ತಿಲ್ಲವೇಕೆ ? ನಾನು ಈಗ ವಾಸಿಸುತ್ತಿರುವ ಸಮಾಜದ ಜನರ ಬದುಕನ್ನು ಗಮನಿಸಿ.
ನಿಜ,ಕಂಪ್ಯೂಟರ್ ಬಂದಿದೆ, ವಾಟ್ಸಾಪ್ ಪೇಸ್ ಬುಕ್, ಟ್ವಿಟರ್ ಬಂದಿದೆ, ಮೆಟ್ರೋ ಬಂತು, ರಾಕೆಟ್ ಬಂತು, ಅತ್ಯುತ್ತಮ ಕಾರು ಬೈಕು ಮಾಲ್ ಗಳು ಎಲ್ಲಾ ಬಂದಿದೆ, ಇವೆಲ್ಲವೂ ಮನುಷ್ಯನೇ ಸಂಶೋದಿಸಿದ ತಾಂತ್ರಿಕ ಸಾಧನೆಗಳು. ಇದಕ್ಕಾಗಿ ಹೆಮ್ಮೆ ಪಡೋಣ. ಆದರೆ, ನಿರ್ಜೀವ ವಸ್ತುಗಳ ವಿಜೃಂಭಣೆಯಲ್ಲಿ ಮರೆಯಾಗುತ್ತಿರುವ ಸಜೀವ ಮೌಲ್ಯಗಳ ನೆನಪಿದೆಯೇ?
ವಿಷವಾಗುತ್ತಿರುವ ಗಾಳಿ ನೀರು ಆಹಾರ ಬಿಡಿ,ಮನುಷ್ಯ ಸಂಬಂದಗಳೇ ವ್ಯಾಪಾರಿಕರಣವಾಗುತ್ತಿವೆ. ಸ್ವಂತ ಅಣ್ಣ ತಮ್ಮ ಅಕ್ಕ ತಂಗಿ ಆಸ್ತಿ ಹಂಚಿಕೆಗಾಗಿ ಶತ್ರುಗಳಾಗಿ ಬಹಳ ಕಾಲವಾಯಿತು. ಜಮೀನುಗಳ ಬೆಲೆಯೇರಿಕೆಯೊಂದಿಗೆ ರಕ್ತಸಂಬಂಧಿಗಳ ವಿಶ್ವಾಸ ದ್ರೋಹಗಳು ದಿನನಿತ್ಯದ ಕಸುಬಾಯಿತು. ಹಣಕ್ಕಾಗಿ ಕೊಲೆ ಸುಲಿಗೆಗಳು ಗಂಡು ಹೆಣ್ಣುಗಳೆಂಬ ಬೇದವಿಲ್ಲದೆ ಹವ್ಯಾಸಿ ವೃತ್ತಿಗಳಾದವು.
ಮಾಧ್ಯಮಗಳಲ್ಲಿ ಅಪರಾಧದ ಕಾರ್ಯಕ್ರಮಗಳೇ ಬಹುಬೇಡಿಕೆಯ, ಬಹುಲಾಭದಾಯಕ ಸುದ್ದಿಗಳಾದವು. ಎಲ್ಲೋ ಯಾರೋ ಒಬ್ಬರೋ ಇಬ್ಬರೋ ಪ್ರಾಮಾಣಿಕರನ್ನು ಹಿಡಿದುಕೊಂಡು ಬಂದು ಹಾರ ಹಾಕಿ ಪ್ರಶಸ್ತಿ ನೀಡಿ ಹಾಡಿ ಹೊಗಳಿ ಸನ್ಮಾನಿಸಿ ಕಳಿಸುವ ಸ್ಥಿತಿ ಬಂದಿದೆ. ಆತ್ಮವಂಚಕ ಮನಸ್ಥಿತಿಯ ಲಫಂಗರೇ ಆಡಳಿತದ ಮುಖ್ಯವಾಹಿನಿಗೆ ಬಂದು ಎಲ್ಲವನ್ನೂ ಆಕ್ರಮಿಸಿಕೊಂಡಿದ್ದಾರೆ.
ಹಾಗಾದರೆ ಈ ಬೆಳಕಿನ ಹಬ್ಬದ ಮಹತ್ವ ಕೇವಲ ಸಿಹಿತಿಂದು ಪಟಾಕಿ ಹಚ್ಚುವುದು ಮಾತ್ರವೇ. ಪರಿವರ್ತನೆ ಆಗದೆ ಜ್ಞಾನದ ಬೆಳಕನ್ನು ಕಾಣದೆ ಇನ್ನೆಷ್ಟುದಿನ ಹೀಗೆ ಕಾಟಾಚಾರದ ಹಬ್ಬ ಆಚರಿಸುವುದು. ಎಚ್ಚೆತ್ತುಕೊಳ್ಳೋಣ, ಈಗಲಾದರೂ.... ಹಬ್ಬಗಳನ್ನು ಅದರ ನಿಜ ಅರ್ಥದಲ್ಲಿ ಆಚರಿಸಿ ಅಳವಡಿಸಿಕೊಳ್ಳೋಣ. ಇದು ಅಸಾಧ್ಯವೇನಲ್ಲ. ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು. ನುಡಿದಂತೆ ನಡೆಯುವ ಒಳ್ಳೆಯ ನಡವಳಿಕೆ ರೂಪಿಸಿಕೊಳ್ಳೋಣ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ