ನೂರಕ್ಕೆ ನೂರು

ನೂರಕ್ಕೆ ನೂರು

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ನಿಮ್ಮ ಪುಸ್ತಕ ಪಬ್ಲಿಕೇಶನ್ಸ್, ಮಲ್ಲೇಶ ಪಾಳ್ಯ, ಬೆಂಗಳೂರು-೫೬೦೦೭೫
ಪುಸ್ತಕದ ಬೆಲೆ
ರೂ. ೧೭೦.೦೦, ಮುದ್ರಣ: ೨೦೨೨

‘ನಿಗೂಢ ನಾಣ್ಯ' ಕೃತಿಯ ಲೇಖಕರಾದ ವಿಠಲ್ ಶೆಣೈ ಇವರು ಮತ್ತೊಂದು ಕುತೂಹಲ ಭರಿತ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಿಠಲ್ ಶೆಣೈ ಅವರು ತಮ್ಮ ಮಾತುಗಳಲ್ಲಿ ಹೇಳುವುದು ಹೀಗೆ…

“ಇದು ಪ್ರಾಯಶಃ ಬಲು ಚಿಕ್ಕ ಮುನ್ನುಡಿ- ನನ್ನುಡಿ! ನನ್ನ ಮೂರನೇ ಕಾದಂಬರಿ ಬರೆಯಲು ಪ್ರೇರಣೆ ಯೂಟ್ಯೂಬ್ ನಲ್ಲಿ ನಾನು ನೋಡಿದ ಒಂದು ವಿಡಿಯೋದಲ್ಲಿ ಗಮನಿಸಿದ ಒಂದು ಕುತೂಹಲಕಾರಿ ಅಂಶ. ಅದರ ಬಗ್ಗೆ ಹೆಚ್ಚು ಹೇಳಲು ಹೋದರೆ ಈ ಕತೆಯ ಒಂದು ಮುಖ್ಯ ಸಾರವೇ ಹೊರಬೀಳಬಹುದು. ೨೦೨೦ರ ಕೊರೋನಾ ಲಾಕ್ ಡೌನಿನ ಕಾರಣದಿಂದ ಸಿಕ್ಕಿದ ಬಿಡುವು, ಈ ಕಾದಂಬರಿಯನ್ನು ಬರೆಯುವ ವೇಗವನ್ನು ಐದು ಪಟ್ಟು ಹೆಚ್ಚಿಸಿತು. ಈ ಕಾದಂಬರಿಯ ಬಾಲ ನಾಯಕ ಕಿಟ್ಟಿ ನಮ್ಮ ದೇಶದಲ್ಲಿ ನಿಜವಾಗಿಯೂ ಹುಟ್ಟಿ ಬರಲಿ ಎಂದು ನನ್ನ ಆಸೆ. ಕಾದಂಬರಿ ಬರೆದ ಮೂರು ತಿಂಗಳುಗಳ ಅವಧಿಯಲ್ಲಿ ಈ ಕಾಲ್ಪನಿಕ ಕಿಟ್ಟಿಯ ಒಡನಾಟ ನನ್ನೊಡನೆ ಎಷ್ಟಿತ್ತೆಂದರೆ ಇದನ್ನು ಮುಗಿಸುವ ಮನಸ್ಸೇ ಬರುತ್ತಿರಲಿಲ್ಲ !”

ಈ ಕಾದಂಬರಿಯನ್ನು ಓದಿದ ಬಳಿಕ ನಮಗೂ ಬಾಲ ನಾಯಕ ಕಿಟ್ಟಿ ಆವರಿಸಿಕೊಂಡು ಬಿಡುತ್ತಾನೆ. ಮೊದಲಿಗೆ ಪುಟ್ಟದಾಗಿ ಕಥೆಯನ್ನು ಹೇಳಿ ಬಿಡುತ್ತೇನೆ. ಹೆಚ್ಚಿಗೆ ಹೇಳಿದರೆ ನಿಮ್ಮ ಓದುವ ಕುತೂಹಲಕ್ಕೆ ಧಕ್ಕೆಯಾದೀತು. ಬಹಳ ಸರಳ ಕಥಾ ಹಂದರ. ತಂದೆ ತಾಯಿ ಮತ್ತು ಇಬ್ಬರು ಮಕ್ಕಳು ಇರುವ ಒಂದು ಕುಟುಂಬ. ತಂದೆ ರಾಮಪ್ಪ ಮತ್ತು ತಾಯಿ ಸಾವಿತ್ರಿಬಾಯಿ. ಮಕ್ಕಳು ಕಿಶೋರ್ ಯಾನೆ ಕಿಟ್ಟಿ (ಬಾಲ ನಾಯಕ) ಮತ್ತು ಆತನ ತಂಗಿ ಸುಧಾ. ಕಿಶೋರ್ ಹತ್ತನೇ ತರಗತಿಯಲ್ಲಿ ಓದುತ್ತಿರುವ ಹುಡುಗನಾದರೆ ತಂಗಿ ೬ನೇ ತರಗತಿ. ಇವರ ಊರು ಆನೆಕುಪ್ಪೆ. ಕಿಶೋರ್ ನ ತಂದೆಗೆ ‘ಶ್ರೀ ರಾಮ್ ಎಂಟರ್ ಪ್ರೈಸಸ್’ ಎಂಬ ದ್ವಿಚಕ್ರ ವಾಹನಗಳ ಬಿಡಿಭಾಗಗಳನ್ನು ಮಾರುವ ಅಂಗಡಿ.

ಕಿಟ್ಟಿ ಕಲಿಯುತ್ತಿದ್ದದ್ದು ಆನೆಕುಪ್ಪೆ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿಯಲ್ಲಿ. ಪ್ರತೀ ವರ್ಷ ರಾಜ್ಯದಲ್ಲೇ ಬಹಳ ಕನಿಷ್ಟ ಫಲಿತಾಂಶವನ್ನು ದಾಖಲಿಸುತ್ತಿದ್ದ ಸರಕಾರಿ ಶಾಲೆ ಇದು. ಕಿಟ್ಟಿ ಸಾಧಾರಣ ಕಲಿಕೆಯ ಹುಡುಗ. ಪ್ರಣವ್ ಹಾಗೂ ಸುರೇಂದ್ರ ಕಿಟ್ಟಿಯ ಸ್ನೇಹಿತರು. ಪ್ರಣವ್ ಶ್ರೀಮಂತ ಮನೆತನದ ಹುಡುಗನಾದುದರಿಂದ ಆತನಿಗೆ ಹಣಕ್ಕೇನೂ ತೊಂದರೆಯಿರಲಿಲ್ಲ. ಆತನ ಜೊತೆ ಸೇರಿ ಕಿಟ್ಟಿ ಸಿಗರೇಟು ಸೇದಲು ಕಲಿಯುತ್ತಾನೆ. ಒಮ್ಮೆ ಡ್ರಗ್ಸ್ ಸೇದಲು ಹೋದ ಸಂದರ್ಭದಲ್ಲಿ ಪೋಲೀಸರು ಬಂದು ಇವರನ್ನೆಲ್ಲಾ ಬಂಧಿಸುತ್ತಾರೆ. ಜೈಲಿಗೆ ಸೇರಿದ ಕಿಟ್ಟಿಯನ್ನು ಆತನ ತಂದೆ ಪೋಲೀಸ್ ಸ್ಟೇಶನ್ ಹೋಗಿ ಬಿಡಿಸಿಕೊಂಡು ಬರುತ್ತಾರೆ. ಅಲ್ಲಿಯ ತನಕ ಪೋಲೀಸ್ ಸ್ಟೇಶನ್ ಮೆಟ್ಟಲು ಹತ್ತದೇ ಇದ್ದ ಕಿಟ್ಟಿಯ ತಂದೆ ರಾಮಪ್ಪನವರಿಗೆ ಈ ಘಟನೆಯಿಂದ ತೀರಾ ನೋವಾಗುತ್ತದೆ. ಮನೆಗೆ ಬಂದು ಕಿಟ್ಟಿಯನ್ನು ಮನಸೋ ಇಚ್ಚೆ ದಂಡಿಸುತ್ತಾರೆ. ಕಿಟ್ಟಿಗೂ ನೋವಾಗುತ್ತದೆ. ಅದೇ ದಿನ ರಾತ್ರಿ ರಾಮಪ್ಪ ಹೃದಯಾಘಾತದಿಂದ ನಿಧನ ಹೊಂದುತ್ತಾರೆ. ಈ ಘಟನೆ ಕಿಟ್ಟಿಯ ಮನಸ್ಸಿನಲ್ಲಿ ಅಚ್ಚಳಿಯದ ನೋವಾಗಿ ಉಳಿದು ಬಿಡುತ್ತದೆ. ರಾಮಪ್ಪನವರ ದೂರದ ಸಂಬಂಧಿಯಾದ ಡಾ.ಶೇಷಸಾಯಿಯವರು ನೋವಿನಲ್ಲಿದ್ದ ಕಿಟ್ಟಿಗೆ ಹಾಗೂ ಆತನ ಬಳಿ ಮಾತು ಬಿಟ್ಟಿದ್ದ ಸಾವಿತ್ರಿಗೆ ಹಿತನುಡಿಗಳನ್ನು ಹೇಳುತ್ತಾರೆ. 

ಸಾವಿತ್ರಿ ಅಂಗಡಿಯನ್ನು ಮತ್ತೆ ತೆರೆಯುತ್ತಾಳೆ. ಕಿಟ್ಟಿ ಆಕೆಗೆ ಸಹಾಯ ಮಾಡುತ್ತಾನೆ. ಮೊದಲ ದರ್ಜೆಯಲ್ಲಿ ಉತ್ತೀರ್ಣನಾಗಬೇಕೆಂದು ಕಿಟ್ಟಿ ಹಗಲೂ ರಾತ್ರಿ ಓದುತ್ತಾನೆ. ಫಲಿತಾಂಶ ಬಂದಾಗ ಇಡೀ ಶಾಲೆ ಏಕೆ ಊರೇ ದಂಗಾಗಿ ಬಿಡುತ್ತದೆ. ಕಿಟ್ಟಿ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾನೆ. ಇಡೀ ರಾಜ್ಯಕ್ಕೆ ಮೊದಲ ರಾಂಕ್ ಬಂದಿರುತ್ತಾನೆ. ನಂತರ ನಡೆದ ಘಟನಾವಳಿಗಳು ಕಿಟ್ಟಿಯ ಬಾಳಿನಲ್ಲಿ ಸುಂಟರಗಾಳಿಯನ್ನೇ ಎಬ್ಬಿಸುತ್ತವೆ. ಇಷ್ಟು ವರ್ಷ ಬರೇ ಪಾಸ್ ಮಾರ್ಕ್ ಗಳಿಸುತ್ತಿದ್ದ ವಿದ್ಯಾರ್ಥಿ ಒಂದೇ ಸಲ ನೂರಕ್ಕೆ ನೂರು ಅಂಕಗಳನ್ನು ಪಡೆದದ್ದು ಶಿಕ್ಷಣ ಇಲಾಖೆಯವರಿಗೆ ಅಚ್ಚರಿ ಮೂಡಿಸುತ್ತದೆ. ಬೆಂಗಳೂರಿನಿಂದ ಇದನ್ನು ಪರಿಶೀಲಿಸಲು ತಂಡವೊಂದು ಬರುತ್ತದೆ. ಅವರು ಮತ್ತೆ ಕಿಟ್ಟಿಗೆ ಪರೀಕ್ಷೆ ಮಾಡ ಬಯಸುತ್ತಾರೆ. ಅದೇ ಸಮಯ ಕಿಟ್ಟಿ ಮನೆಯಿಂದ ನಾಪತ್ತೆಯಾಗುತ್ತಾನೆ. ಮನೆಯಲ್ಲಿ ಇರಿಸಿದ್ದ ಇಪ್ಪತ್ತೈದು ಸಾವಿರ ರೂಪಾಯಿ ಹಣವನ್ನೂ ತೆಗೆದುಕೊಂಡು ಹೋಗುತ್ತಾನೆ. ಕಿಟ್ಟಿ ಹೋದದ್ದಾದರೂ ಎಲ್ಲಿ? ಹಾಗೆ ಹೋಗಲು ಕಾರಣವಾದರೂ ಏನು?

ಇದೇ ಸಮಯ ಆನೆಕುಪ್ಪೆಯ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೂರ್ಯನಿಗೆ ಆ ಊರಿನ ಆಸುಪಾಸಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕುವ ಇಚ್ಛೆ ಮೂಡುತ್ತದೆ. ಹಿರಿಯ ಅಧಿಕಾರಿಗಳಲ್ಲಿ ಈ ಬಗ್ಗೆ ಮಾತನಾಡಿ ಅನುಮತಿಯನ್ನೂ ಪಡೆದುಕೊಳ್ಳುತ್ತಾನೆ. ಈ ಡ್ರಗ್ಸ್ ತಯಾರಿಸಲು ಬೇಕಾದ ಗಾಂಜಾ ಗಿಡಗಳು ಸಕಲೇಶಪುರದ ಕಾಡಿನಲ್ಲಿ ದೊರೆಯುತ್ತವೆ ಎಂಬ ಸುಳಿವು ಸಿಗುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿ ಜತೆ ಕಾಡಿಗೆ ತೆರಳುವ ಸೂರ್ಯನಿಗೆ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಸಫಲತೆ ದೊರೆಯಿತೇ? ಇದನ್ನು ಅರಿಯಲು ಈ ಕಾದಂಬರಿಯನ್ನು ಓದಲೇಬೇಕು.

೨೨೨ ಪುಟಗಳ ಈ ಕಾದಂಬರಿಯ ಬರವಣಿಗೆ ಬಹಳ ಸರಳವಾಗಿದ್ದು ಸಾಮಾನ್ಯರೂ ಓದಿ ಅರ್ಥೈಸುವಂತಿದೆ. ಲೇಖಕರು ಕ್ಲಿಷ್ಟಕರವಾದ ಪದಗಳನ್ನು ಬಳಸದೇ ಕಾದಂಬರಿಯ ಕಥಾವಸ್ತುವನ್ನು ಗೋಜಲಾಗಿಸದೇ ಉತ್ತಮ ಕೃತಿಯನ್ನು ನೀಡಿದ್ದಾರೆ. ಲೇಖಕರು ಈ ಕೃತಿಯನ್ನು ತಮ್ಮ ಪರಿವಾರದ ಸದಸ್ಯರಾದ ಪತ್ನಿ-ಮಕ್ಕಳಿಗೆ, ತಂದೆ-ತಾಯಿಯವರಿಗೆ, ಮೊದಲ ಆವೃತ್ತಿಯನ್ನು ಓದಿ ಪ್ರೋತ್ಸಾಹಿಸಿದ ತಮ್ಮ ಬಂಧು ಮಿತ್ರರಿಗೆ ಅರ್ಪಿಸಿದ್ದಾರೆ.